Advertisement

ಕಾಲೇಜುಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಘಟಕ

12:05 PM Sep 01, 2018 | Team Udayavani |

ಬೆಂಗಳೂರು: ‘ರಾಜ್ಯದ ಪದವಿ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ನೀರಿನ ಮರು ಬಳಕೆಗೆ ತ್ಯಾಜ್ಯ ನೀರು ಸಂಸ್ಕರಣೆ ಘಟಕ ಸ್ಥಾಪಿಸುವಂತೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಚಿವ ಜಿ.ಟಿ.ದೇವೇಗೌಡ ಸೂಚನೆ ನೀಡಿದ್ದಾರೆ.

Advertisement

ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಎನ್‌.ನಾಗಾಂಬಿಕ ದೇವಿಯವರು ಅಧಿಕಾರ ವಹಿಸಿಕೊಂಡ ನಂತರ ಶುಕ್ರವಾರ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಪ್ರಧಾನ ಕಾರ್ಯದರ್ಶಿ ಸಹಿತವಾಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸೆಂಟ್ರಲ್‌ ಕಾಲೇಜು ಸಮೀಪವಿರುವ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಸಭೆ ನಡೆಸಿದ್ದಾರೆ.

ಕಾಲೇಜುಗಳಲ್ಲಿ ಶೌಚಾಲಯ ಮತ್ತು ನೀರಿನ ಮರು ಬಳಕೆ ಸಂಬಂಧ ಅಗತ್ಯ ತುರ್ತು ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಸರ್ಕಾರಿ ಪದವಿ ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖಾ ವ್ಯಾಪ್ತಿಯ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಶೌಚಾಲಯ ಮತ್ತು ನೀರಿನ ಕೊರತೆ ಇರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯವಿರುವ ಕಾಲೇಜುಗಳಲ್ಲಿ ಶೌಚಾಲಯ ಮತ್ತು ತ್ಯಾಜ್ಯ ನೀರು ಸಂಸ್ಕರಣ ಘಟಕ(ಎಸ್‌ಟಿಪಿ) ಸ್ಥಾಪಿಸಲು ಕ್ರಮ ತೆಗೆದುಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಕಾಲೇಜುಗಳಲ್ಲಿ ನೀರಿನ ಮರು ಬಳಕೆ ಮಾಡುವ ಉದ್ದೇಶದಿಂದ ತ್ಯಾಜ್ಯ ನೀರು ಸಂಸ್ಕರಣ ಘಟಕ ಪ್ರಾರಂಭಿಸುವುದು ಅಗತ್ಯ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಸ್ವತ್ಛ ಭಾರತ್‌ ಅಭಿಯಾನದಡಿ 600 ಕೋಟಿ ರೂ. ಅನುದಾನಕ್ಕೆ ಮನವಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಇದರ ಜತೆಗೆ ಇಲಾಖೆಯಲ್ಲಿ ತುರ್ತಾಗಿ ವಿಲೇವಾರಿಯಾಗಬೇಕಿರುವ ಕಡತಗಳ ಬಗ್ಗೆಯೂ ಮಾಹಿತಿ ಪಡೆದು, ಆದಷ್ಟು ಬೇಗ ವಿಲೇವಾರಿ ಮಾಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಎನ್‌.ಮಂಜುಳಾ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್‌.ಜಾಫೆಟ್‌ ಮೊದಲಾದರು ಇದ್ದರು. 

ರೇಂಜರ್‌, ರೋವರ್‌ ಕಡ್ಡಾಯ ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ಭಾರತ್‌ ಸ್ಕೌಟ್‌ ಮತ್ತು ಗೈಡ್ಸ್‌ ಕಾರ್ಯಕ್ರಮದಡಿ ರೋವರ್‌ ಮತ್ತು ರೇಂಜರ್‌ ಘಟಕ ಕಡ್ಡಾಯವಾಗಿ ಆರಂಭಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಿಸಿದೆ. ಎನ್‌ಎಸ್‌ಎಸ್‌ ಘಟಕದ ಜತೆಗೆ ರೋವರ್‌ ಮತ್ತು ರೇಂಜರ್‌ ಘಟಕ ತೆರೆಯಬೇಕು. ವರ್ಷಕ್ಕೆ ಪ್ರತಿ
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ 50ರೂ. ಶುಲ್ಕ ಈ ಕಾರ್ಯಕ್ಕಾಗಿ ಪಡೆಯುವುದು.

Advertisement

ಆಯಾ ಕಾಲೇಜಿನಿಂದ ರೇಂಜರ್‌, ರೋವರ್‌ ಕಾರ್ಯಕ್ರಮ ಆಯೋಜನೆಗೆ ಉಪನ್ಯಾಸಕರನ್ನು ನೇಮಿಸಬೇಕು. ವಾರದಲ್ಲಿ ಒಂದು ಅವಧಿಯನ್ನು ನಿಯೋಜಿತ ಉಪನ್ಯಾಸಕರು ಈ ಕಾರ್ಯಕ್ಕಾಗಿಯೇ ಮೀಸಲಿಡಬೇಕು. ಭಾರತ್‌ ಸ್ಕೌಟ್‌ ಮತ್ತು ಗೈಡ್ಸ್‌ನೊಂದಿಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಇಲಾಖೆ ಸೂಚನೆ ನೀಡಿದೆ. 

ವಿದ್ಯಾರ್ಥಿಗಳಿಂದ ಶುಲ್ಕದ ರೂಪದಲ್ಲಿ ಪಡೆಯುವ ಹಣ ಯಾವ ರೀತಿ ವಿನಿಯೋಗ ಮಾಡಬೇಕು ಎಂಬುದಕ್ಕೂ ಸೂಕ್ತ ನಿರ್ದೇಶನ ಇಲಾಖೆಯಿಂದ ನೀಡಲಾಗಿದೆ. ಕಾಲೇಜಿನಲ್ಲಿ ಈ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಇಲಾಖೆಯ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next