Advertisement

ಅಪಾರ್ಟ್‌ಮೆಂಟ್‌ನಲ್ಲೇ “ತ್ಯಾಜ್ಯ ಸಂಸ್ಕರಣೆ’; ಇಲ್ಲವಾದರೆ ದಂಡ!

02:50 PM Jan 11, 2023 | Team Udayavani |

ಲಾಲ್‌ಬಾಗ್‌: ಮಂಗಳೂರಿನಲ್ಲಿ 30ಕ್ಕಿಂತ ಹೆಚ್ಚು ಫ್ಲ್ಯಾಟ್‌, ಮನೆಗಳನ್ನು ಹೊಂದಿರುವ ಸಮುಚ್ಛಯ ಹಾಗೂ ಅತಿ ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುವ ಪ್ರದೇಶಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಇನ್ನು ಮುಂದೆ ಕಡ್ಡಾಯ. ಇಲ್ಲವಾದರೆ ದಂಡ ಪ್ರಯೋಗ ಮಾಡಲು ಮಂಗಳೂರು ಪಾಲಿಕೆ ಮತ್ತೊಮ್ಮೆ ತೀರ್ಮಾನಿಸಿದೆ.

Advertisement

ಘನ ತ್ಯಾಜ್ಯ ವಸ್ತು ನಿರ್ವಹಣೆ ನಿಯಮ 2016ರ ಮತ್ತು ಮಂಗಳೂರು ಮಹಾನಗರ ಪಾಲಿಕೆ ಘನ ತ್ಯಾಜ್ಯ ವಸ್ತು ನಿರ್ವಹಣೆಯ ಬೈಲಾ ಪ್ರಕಾರ ಪಾಲಿಕೆಯು 30ಕ್ಕಿಂತ ಹೆಚ್ಚು ಮನೆ, ಫ್ಲ್ಯಾಟ್‌ ಹೊಂದಿರುವ ಸಮುತ್ಛಯಗಳಲ್ಲಿ ಮತ್ತು ಇತರ ಅತಿ ಹೆಚ್ಚು ತ್ಯಾಜ್ಯ ಉತ್ಪತ್ತಿ ಆಗುವ ಹೊಟೇಲ್‌, ಆಸ್ಪತ್ರೆ, ಲಾಡ್ಜ್, ಕಲ್ಯಾಣ ಮಂಟಪ, ಕ್ಯಾಟರಿಂಗ್‌ ಮುಂತಾದವುಗಳಲ್ಲಿ ಸ್ವಂತ ತ್ಯಾಜ್ಯ ಸಂಸ್ಕರಣ ಕಾಂಪೋಸ್ಟಿಂಗ್‌ ಘಟಕವನ್ನು ಕಡ್ಡಾಯವಾಗಿ ನಿರ್ಮಿಸಿ ಅಲ್ಲೇ ಸಂಸ್ಕರಣೆ ಮಾಡುವಂತೆ
ಮಂಗಳೂರು ಪಾಲಿಕೆ ಹಲವು ಬಾರಿ ಸೂಚನೆ ನೀಡಿದೆ. ಆದರೆ, ಅದರ ಅನುಷ್ಠಾನ ಮಾತ್ರ ಪೂರ್ಣವಾಗಿ ಜಾರಿಯಾಗಿರಲಿಲ್ಲ.

ಈಗಾಗಲೇ ಪಾಲಿಕೆ ಸೂಚನೆ ಮೇರೆಗೆ 111 ಅಪಾರ್ಟ್‌ ಮೆಂಟ್‌, ಮನೆ, ಮಳಿಗೆಯಲ್ಲಿ ತ್ಯಾಜ್ಯ ಸಂಸ್ಕರಣೆ ನಡೆಯುತ್ತಿದ್ದು, ಘನತ್ಯಾಜ್ಯ ಕರ ಶೇ.50ರ ರಿಯಾಯಿತಿಯನ್ನು ಪಡೆಯುತ್ತಿದ್ದಾರೆ. ಜತೆಗೆ ಶ್ರೀ ರಾಮಕೃಷ್ಣ ಮಠದ ನೇತೃತ್ವದಲ್ಲಿ ನಗರದ ವಿವಿಧ ಅಪಾರ್ಟ್‌ ಮೆಂಟ್‌, ಮನೆ, ಮಳಿಗೆಯಲ್ಲಿ ತ್ಯಾಜ್ಯ

ಸಂಸ್ಕರಣೆಯನ್ನು ಮಾದರಿ ಸ್ವರೂಪದಲ್ಲಿ ನಡೆಸಲಾಗುತ್ತಿದೆ. ಆದರೆ, ಉಳಿದಂತೆ ಬಹುತೇಕ ಅಪಾರ್ಟ್‌ಮೆಂಟ್‌ ಸಹಿತ ಬೃಹತ್‌ ಪ್ರಮಾಣದಲ್ಲಿ ತ್ಯಾಜ್ಯ ಸೃಷ್ಟಿಯಾಗುವ ಪ್ರದೇಶದಲ್ಲಿ ಪ್ರತ್ಯೇಕವಾಗಿ ತ್ಯಾಜ್ಯ ಸಂಸ್ಕರಣೆ ನಡೆಯುತ್ತಿಲ್ಲ. ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಪಚ್ಚನಾಡಿಗೆ ಕೊಂಡೊಯ್ದು ಅಲ್ಲಿ ಸಂಸ್ಕರಣೆ ನಡೆಸಲಾಗುತ್ತಿದೆ. ಭೂ ಭರ್ತಿ ಮಾಡುವ ತ್ಯಾಜ್ಯದ ಪ್ರಮಾಣ ಅಧಿಕವಾಗುತ್ತಿದೆ. ಇತ್ತೀಚೆಗೆ ತ್ಯಾಜ್ಯದ ರಾಶಿಗೆ ಬೆಂಕಿ ಬಿದ್ದು ಬಹುದೊಡ್ಡ ಸಮಸ್ಯೆಗೂ
ಕಾರಣವಾಗಿತ್ತು. ಹೀಗಾಗಿ ಪಚ್ಚನಾಡಿಗೆ ತ್ಯಾಜ್ಯ ಕೊಂಡೊಯ್ಯುವ ಪರಿಪಾಠಕ್ಕೆ ಮುಕ್ತಿ ನೀಡುವ ನೆಲೆಯಿಂದ ಅಪಾರ್ಟ್‌ ಮೆಂಟ್‌ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಣೆಗೆ ಆದ್ಯತೆ ನೀಡುವ ಉದ್ದೇ ಶದಿಂದ ಕಡ್ಡಾಯ ಸೂತ್ರ ಜಾರಿಗೆ ಪಾಲಿಕೆ ಮುಂದಾಗಿದೆ.

ಹಸಿ ಕಸ ನಿರ್ವಹಣೆಯೇ ಸವಾಲು!
ಮಂಗಳೂರು ನಗರದಲ್ಲಿ ದಿನಂಪ್ರತಿ ಸರಾಸರಿ 330 ಟನ್‌ ಕಸ ಸಂಗ್ರಹವಾಗುತ್ತದೆ. ಇದರಲ್ಲಿ 300 ಟನ್‌ನಷ್ಟು ಹಸಿಕಸ. ಹೊಟೇಲ್‌, ಮನೆ ಸೇರಿದಂತೆ ಒಟ್ಟಾರೆ ಸುಮಾರು 99,000 ಕಟ್ಟಡಗಳಿವೆ. 1,180 ಕಿ.ಮೀ. ರಸ್ತೆಗಳಿವೆ. 800ಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಿದ್ದಾರೆ. ಮನೆಮನೆಗಳಿಂದ ಸಂಗ್ರಹಿಸಿದ ಕಸವನ್ನು ಪಚ್ಚನಾಡಿಗೆ ಸಾಗಿಸಲಾಗುತ್ತದೆ. ಪಚ್ಚನಾಡಿಯಲ್ಲಿ ಹಸಿಕಸದಿಂದ ಕಾಂಪೋಸ್ಟ್‌ ತಯಾರಿಸುವ ಘಟಕವಿದೆ.

Advertisement

ಉರ್ವದಲ್ಲಿ ಹಸಿಕಸದಿಂದ ಬಯೋಗ್ಯಾಸ್‌ ತಯಾರಿಸುವ ಘಟಕವಿದೆ. ಆದರೆ ಇವುಗಳಿಂದ ಹೇಳಿಕೊಳ್ಳುವ ಯಶಸ್ಸು ಸಾಧ್ಯವಾಗಿಲ್ಲ. ಮಂಗಳೂರು ನಗರ ಬೆಳೆಯುತ್ತಿದೆ. ಜತೆಗೆ ತ್ಯಾಜ್ಯ ನಿರ್ವಹಣೆ ಕೂಡ ಸವಾಲಾಗಿ ಪರಿಣಮಿಸುತ್ತಿದೆ. ಬೆಂಗಳೂರು ನಗರ ಈಗಾಗಲೇ ಈ ಸಮಸ್ಯೆಗೆ ಸಿಲುಕಿ ನಲುಗುತ್ತಿದೆ. ಮಂಗಳೂರು ನಗರದಲ್ಲಿ ಪ್ರಸ್ತುತ ಹಾಗೂ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ತ್ಯಾಜ್ಯ ನಿರ್ವಹಣೆಗೆ ವಿಭಿನ್ನ ಯೋಜನೆಗಳನ್ನು ರೂಪಿಸುವುದು
ಅತೀ ಅವಶ್ಯ.

ಅನುಷ್ಠಾನಕ್ಕೆ ಕ್ರಮ
ಅಪಾರ್ಟ್‌ಮೆಂಟ್‌, ಮನೆ ಹಾಗೂ ಅತಿ ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುವ ಪ್ರದೇಶಗಳಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪನೆಗೆ ಈಗಾಗಲೇ ಪಾಲಿಕೆಯಿಂದ ಸೂಚನೆ ನೀಡಲಾಗಿತ್ತು. ಆದರೆ ಕೆಲವರು ಕಾಲಾವಕಾಶ ಕೇಳಿದ್ದರು ಹಾಗೂ ಕೊರೊನಾ ಕಾರಣದಿಂದ ಅನುಷ್ಠಾನ ಕೊಂಚ ವಿಳಂಬವಾಗಿತ್ತು. ಶೀಘ್ರದಲ್ಲಿ ಇದರ ಅನುಷ್ಠಾನಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಅನುಷ್ಠಾನಗೊಳಿಸದವರ ಮೇಲೆ ದಂಡ ವಿಧಿಸಲಾಗುವುದು.
-ಅಕ್ಷಯ್‌ ಶ್ರೀಧರ್‌,
ಆಯುಕ್ತರು, ಮಂಗಳೂರು ಪಾಲಿಕೆ

ತ್ಯಾಜ್ಯ ಸಂಸ್ಕರಣೆನಡೆಸುವವರ ಸಂಖ್ಯೆ
ಅಪಾರ್ಟ್‌ಮೆಂಟ್‌ಗಳು 71
ಪ್ರತ್ಯೇಕ ಮನೆಗಳು 32
ಮಾಲ್‌, ಮಳಿಗೆಗಳು 8
ಒಟ್ಟು 111

*ದಿನೇಶ್‌ ಇರಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next