Advertisement

ಮಧ್ಯ ಕರ್ನಾಟಕದಲ್ಲಿ ಕಸದಿಂದ ವಿದ್ಯುತ್‌ ಉತ್ಪಾದನೆ

05:02 PM Jun 22, 2022 | Team Udayavani |

ಬೆಂಗಳೂರು: ಬಿಡದಿ ಮಾದರಿಯಲ್ಲೇ ಮಧ್ಯ ಕರ್ನಾಟಕದಲ್ಲೂ ಕಸದಿಂದ ವಿದ್ಯುತ್‌ ಉತ್ಪಾದಿಸುವ ಅತ್ಯಾಧುನಿಕ ಘಟಕ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಆ ಮೂಲಕ ಅಲ್ಲಿನ ಸುತ್ತಲಿನ ಮೂರ್‍ನಾಲ್ಕು ನಗರಗಳ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ.

Advertisement

ದಾವಣಗೆರೆ ಮತ್ತು ಶಿವಮೊಗ್ಗ ಮಧ್ಯೆ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ನಿರ್ಮಿಸಲು ಚಿಂತನೆ ನಡೆದಿದೆ. ಈ ಸಂಬಂಧದ ಸಾಧಕ-ಬಾಧಕಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದ್ದು, ಸ್ಥಳೀಯ ಮಹಾನಗರ ಪಾಲಿಕೆಗಳ ಸಹಯೋಗದಲ್ಲಿ ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿಎಲ್‌) ಮೂಲಕ ವಿದ್ಯುತ್‌ ಘಟಕವನ್ನು ನಿರ್ಮಿಸುವ ಆಲೋಚನೆಯಿದೆ. ಈ ಕುರಿತ ಪ್ರಸ್ತಾವನೆ ಸಿದ್ಧಗೊಳ್ಳುತ್ತಿದೆ.

ಎರಡನೇ ಹಂತದ ನಗರಗಳಾದ ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಉತ್ಪಾದನೆಯಾಗುವ ಒಣತ್ಯಾಜ್ಯವು ದೂರದ ಕಲಬುರಗಿಯಲ್ಲಿರುವ ಸಿಮೆಂಟ್‌ ಕಾರ್ಖಾನೆಗಳಿಗೆ ಸಾಗಿಸಬೇಕು. ಇದರಿಂದ ಸಾಗಾಣಿಕೆ ದುಬಾರಿಯಾಗಿ ಪರಿಣಮಿಸುತ್ತಿದೆ. ಅಲ್ಲದೆ, ಪರಿಸರ ಮಾಲಿನ್ಯ ಕೂಡ ಉಂಟಾಗುತ್ತದೆ. ಇಲ್ಲವಾದರೆ ಸ್ಥಳೀಯವಾಗಿಯೇ ಭೂಭರ್ತಿ ಮಾಡಬೇಕಾಗುತ್ತದೆ. ಇದು ಶಾಶ್ವತ ಪರಿಹಾರ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ 6 ಮೆ. ವಾ. ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಘಟಕ ಸ್ಥಾಪಿಸುವ ಲೆಕ್ಕಾಚಾರ ನಡೆದಿದೆ. ಆದರೆ, ಇದು ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಆಗಬೇಕಿದೆ ಎಂದು ಕೆಪಿಸಿಎಲ್‌ ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಬೇರೆ ಕಡೆಗೂ ನಿರ್ಮಾಣ?: ದಾವಣಗೆರೆಯಿಂದ ಶಿವಮೊಗ್ಗ ಅಂದಾಜು ನೂರು ಕಿ.ಮೀ. ಆಗುತ್ತದೆ. ಸ್ಥಳ ನಿಗದಿ ಇನ್ನೂ ಅಂತಿಮಗೊಂಡಿಲ್ಲ. ಇವೆರಡರ ನಡುವೆ ಅಥವಾ ಯಾವ ಮಹಾನಗರ ಪಾಲಿಕೆ ಮುಂದೆ ಬರುತ್ತದೆಯೋ ಅಲ್ಲಿ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ, ಸ್ಥಾಪನೆ ಮಾಡಲಾಗುವುದು. ಆ ಭಾಗದಲ್ಲಿ ನಿರ್ಮಾಣ ಮಾಡುವುದರಿಂದ ನೆರೆಯ ಹರಿಹರ, ಭದ್ರಾವತಿ, ಹೊನ್ನಾಳಿ ಸೇರಿದಂತೆ ಮೂರ್‍ನಾಲ್ಕು ನಗರ-ಪಟ್ಟಣಗಳಲ್ಲಿ ಉತ್ಪಾದನೆಯಾ ಗುವ ಒಣತ್ಯಾಜ್ಯ ವಿಲೇವಾರಿ ಕೂಡ ಆಗಲಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಮುಂಬರುವ ದಿನಗಳಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಇದರಿಂದ ಸುಮಾರು 300 ಟನ್‌ ಒಣತ್ಯಾಜ್ಯ ಸಮಸ್ಯೆಗೆ ಪರಿಹಾರ ಸಿಗಲಿದೆ. ಕೇವಲ ಮಧ್ಯ ಕರ್ನಾಟಕ ಅಲ್ಲ; ರಾಜ್ಯದ ಬೇರೆ ನಗರಗಳಲ್ಲೂ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪನೆಗೆ ಸ್ಥಳೀಯ ಸಂಸ್ಥೆಗಳು ಆಸಕ್ತಿ ತೋರಿಸಿದರೂ, ಪೂರಕವಾಗಿ ಸ್ಪಂದಿಸಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನಾ ಘಟಕದ ವೆಚ್ಚ ವು ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ಸುಮಾರು 300ರಿಂದ 400 ಟನ್‌ ಸಾಮ ರ್ಥ್ಯದ್ದಾದರೆ 150 ಕೋಟಿ ರೂ. ಆಗಬಹುದು. ಇದನ್ನು ಬಿಡದಿ ಘಟಕದ ಮಾದರಿಯಲ್ಲಿ 50:50ರ ಅನುಪಾತದಲ್ಲಿ ಹೂಡಿಕೆ ಮಾಡಬಹುದು. ಹೀಗೆ ಉತ್ಪಾದಿಸಿದ ವಿದ್ಯುತ್‌ನಿಂದ ಸ್ಥಳೀಯವಾಗಿ ಸಾವಿರಾರು ಮನೆಗಳು ಬೆಳಗಲಿವೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಅವಕಾಶ ಇದೆ. ಆದರೆ, ಅಲ್ಲಿನ ಸ್ಥಳೀಯ ಸಂಸ್ಥೆಯು ಕಸದಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಕೆಗೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

Advertisement

35 ಸಾವಿರ ಮನೆಗಳಿಗೆ ವಿದ್ಯುತ್‌ ಪೂರೈಕೆ: ಬೆಂಗಳೂರಿನ ಬಿಡದಿಯಲ್ಲಿ ಸುಮಾರು 260 ಕೋಟಿ ರೂ. ವೆಚ್ಚದಲ್ಲಿ 11.5 ಮೆ.ವಾ. ಸಾಮರ್ಥ್ಯದ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನಾ ಘಟಕ ನಿರ್ಮಿಸಲಾಗುತ್ತಿದೆ. ಯೋಜನೆ ಅಡಿ ಪುನರ್‌ಬಳಕೆ ಸಾಧ್ಯವಿಲ್ಲದ ಕಸ (ಆರ್‌ಡಿಎಫ್)ವನ್ನು ಸುಟ್ಟು ಅದರಿಂದ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಸುಮಾರು 600 ಟನ್‌ ನಗರದ ತ್ಯಾಜ್ಯವು ಇದಕ್ಕೆ ಪೂರೈಸಲಾಗುತ್ತದೆ. 2023ರ ಮಾರ್ಚ್‌ ವೇಳೆಗೆ ಇದನ್ನು ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದೆ. ಪ್ರಸ್ತುತ ಶೇ. 35ರಿಂದ 40ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈ ಯೋಜನೆಯಿಂದ 35 ಸಾವಿರ ಮನೆಗಳಿಗೆ  ಪೂರೈಸಬಹುದು ಎಂದು ಅಂದಾಜಿಸಲಾಗಿದೆ.

ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next