Advertisement
ಬೆಂಗಳೂರಿನಲ್ಲಿ ತ್ಯಾಜ್ಯ ವಿಂಗಡಣೆ ಕಡ್ಡಾಯಗೊಳಿಸಿದ ಆರು ವರ್ಷಗಳ ನಂತರ ವಿಂಗಡಣೆ ಪ್ರಮಾಣ ಶೇ.40ರಷ್ಟು ತಲುಪಿರುವುದು ಭರವಸೆ ಮೂಡಿಸಿದೆ.ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗಾಗಿ 2012ರಲ್ಲೇ ಬಿಬಿಎಂಪಿ ತ್ಯಾಜ್ಯ ವಿಂಗಡಣೆ ಕಡ್ಡಾಯಗೊಳಿಸಿದರೂ ವಿಂಗಡಣೆ ಪ್ರಮಾಣ ಹೆಚ್ಚಾಗಿರಲಿಲ್ಲ. ನಿರಂತರ ಜಾಗೃತಿಯ ಪರಿಣಾಮ ಇತ್ತೀಚಿಗೆ ತ್ಯಾಜ್ಯ ವಿಂಗಡಣೆ ಪ್ರಮಾಣ ಶೇ.40ರಷ್ಟು ತಲುಪಿದ್ದು, ಒಣತ್ಯಾಜ್ಯ ವಿಂಗಡಣೆ ಹಾಗೂ ನಿರ್ವಹಣೆ ಉದ್ಯಮವಾಗಿ ಮಾರ್ಪಡುವ ಜತೆಗೆ ನೂರಾರು ಜನರಿಗೆ ಉದ್ಯೋಗ ಒದಗಿಸಿದೆ.
Related Articles
Advertisement
ಮುಂಬೈ ನಗರದಂತಾಗಲಿಲ್ಲ: ತ್ಯಾಜ್ಯ ವಿಲೇವಾರಿ ಸಮಸ್ಯೆಯೂ ಮಹಾನಗರಗಳಿಗೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಸೂಕ್ತ ನಿರ್ವಹಣೆ ಹಾಗೂ ತಂತ್ರಜ್ಞಾನ ಬಳಕೆ ಇದಕ್ಕೆ ಸೂಕ್ತ ಮಾರ್ಗವಾಗಿದೆ. ಅದನ್ನು ಈಗಾಗಲೇ ಅಳವಡಿಸಿಕೊಂಡ ಮುಂಬೈ ನಗರವು ಪ್ಲಾಸ್ಟಿಕ್ ಮುಕ್ತ ಮಹಾನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶೇ.50ರಷ್ಟು ತ್ಯಾಜ್ಯ ವಿಂಗಡಣೆ ಮಾಡಿದ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾದರೂ, ನಗರವು ಈವರೆಗೆ ಪ್ಲಾಸ್ಟಿಕ್ ಮುಕ್ತ ನಗರವಾಗಲು ಸಾಧ್ಯವಾಗಲಿಲ್ಲ.
ವಿದೇಶಿ ಆಮದಿನಿಂದ ತೊಂದರೆಯೇನು?: ಈ ಮಧ್ಯೆ, ಬೆಂಗಳೂರಿನಲ್ಲಿರುವ ವಿವಿಧ ಕಂಪನಿಗಳಿಗೆ ಅಮೆರಿಕದಿಂದ ಅತ್ಯಂತ ಅಗ್ಗದ ಬೆಲೆಗೆ ಪುನರ್‌ಬಳಕೆ ತ್ಯಾಜ್ಯ ಪೂರೈಕೆಯಾಗುತ್ತಿದೆ. ಇದರಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿನ ತ್ಯಾಜ್ಯದ ಬೆಲೆ ಅರ್ಧಕ್ಕೆ ಅರ್ಧ ಕುಸಿದಿದೆ. ಶೀಘ್ರ ಪಾಲಿಕೆಯಿಂದ ತ್ಯಾಜ್ಯ ಬೆಲೆ ಕುಸಿತಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ನಗರದಲ್ಲಿ ತ್ಯಾಜ್ಯ ವಿಂಗಡಣೆಯಲ್ಲಿ ತೊಡಗಿರುವವರು ಆ ಕೆಲಸದಿಂದ ವಿಮುಖವಾಗುವ ಆತಂಕ ಎದುರಾಗಲಿದೆ.
ಪಾಲಿಕೆಯ ಪ್ರತಿ ವಾರ್ಡ್‌ನಲ್ಲಿರುವ ಒಣತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ನಿತ್ಯ ಕನಿಷ್ಠ 1.5 ಟನ್‌ನಿಂದ 2.5 ಟನ್‌ವರೆಗೆ ಪ್ಲಾಸ್ಟಿಕ್, ಕಾಗದ, ಪೆಟ್ ಬಾಟೆಲ್ ಸೇರಿದಂತೆ ಹತ್ತಾರು ಬಗೆಯ ಒಣತ್ಯಾಜ್ಯ ಸಂಗ್ರಹವಾಗುತ್ತದೆ. ಅದರಂತೆ ಒಂದೊಂದು ಬಗೆಯ ತ್ಯಾಜ್ಯವನ್ನು ಒಂದು ಬೆಲೆಗೆ ಪ್ಲಾಸ್ಟಿಕ್ ಮರು ಬಳಕೆ ಕಂಪನಿಗಳಿಗೆ ನೀಡಲಾಗುತ್ತಿತ್ತು. ಆದರೆ, ಅಮೆರಿಕ ತ್ಯಾಜ್ಯ ಅಮದಾಗುತ್ತಿರುವುದರಿಂದ ಬೆಲೆ ಸಂಪೂರ್ಣವಾಗಿ ಕುಸಿದಿದೆ. ಉದಾಹರಣೆಗೆ ಈ ಮೊದಲು ರಟ್ ಕಾಗದಕ್ಕೆ ಪ್ರತಿ ಕೆ.ಜಿ.ಗೆ 9-10 ರೂ. ದೊರೆಯುತ್ತಿತ್ತು. ಆದರೆ, ಅಮೆರಿಕ ತ್ಯಾಜ್ಯ ಸ್ಥಳೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಾಗಿನಿಂದ ಕೆ.ಜಿ. ರಟ್ ಕಾಗದ ಬೆಲೆ 3 ರಿಂದ 4 ರೂ. ಆಗಿರುವುದು ಒಣತ್ಯಾಜ್ಯ ಘಟಕಗಳ ಆತಂಕಕ್ಕೆ ಕಾರಣವಾಗಿದೆ.
ಚಿಂದಿ ಆಯುವವರ ಬದುಕು: ಬೆಳ್ಳಂಬೆಳಗ್ಗೆ ಎದ್ದು ಚಳಿ ಮಳೆಯನ್ನದೆ ಹಾದಿ ಬೀದಿ, ಉದ್ಯಾನ, ಕೆರೆಗಳು, ಬಸ್-ರೈಲು ನಿಲ್ದಾಣ ಸೇರಿದಂತೆ ನಗರದ ತುಂಬೆಲ್ಲಾ ಅಲೆದಾಡುವ ಚಿಂದಿ ಆಯುವವರು, ಪ್ಲಾಸ್ಟಿಕ್ ಒಳಗೊಂಡಂತೆ ಒಣ ತ್ಯಾಜ್ಯ ಸಂಗ್ರಹಿಸುತ್ತಾರೆ. ಮಧ್ಯಾಹ್ನ ಹೊತ್ತಿಗೆ ಅವುಗಳನ್ನು ವಿವಿಧ ಗುಂಪುಗಳಾಗಿ ವಿಂಗಡಣೆ ಮಾಡಿ ತ್ಯಾಜ್ಯಸಂಗ್ರಹಣಾ ಘಟಕಗಳಿಗೋ ಅಥವಾ ಪ್ಯಾಕ್ಟರಿಗಳಿಗೂ ಹಾಕಿ ಸಂಜೆ ಅಷ್ಟರೊಳಗೆ 200-300 ರೂ ಹಣ ಗಳಿಸುತ್ತಾರೆ.
ಚಿಂದಿ ಆಯುವವರಿಗೆ ಪ್ರಾತಿನಿಧ್ಯ ದೊರೆಯಬೇಕಿದೆ: ಕೇಂದ್ರ ಸರ್ಕಾರವು 2016ರಲ್ಲಿ ನಗರ ಪ್ರದೇಶದ ಘನತ್ಯಾಜ್ಯ ನಿರ್ವಹಣೆಗೆ ಕೆಲ ನಿಯಮಾವಳಿಗಳನ್ನು ರೂಪಿಸಿದ್ದು, ಚಿಂದಿ ಆಯುವವರಿಗೆ ಪ್ರಾತಿನಿಧ್ಯ ನೀಡಬೇಕೆಂದು ಸೂಚಿಸಿದೆ. ಅದರಂತೆ ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸ್ಥಳೀಯ ಮಟ್ಟದಲ್ಲಿ ರೂಪಿಸಲಾದ ಘನತ್ಯಾಜ್ಯ ಸಂಗ್ರಹಣಾ ನಿಯಮಾವಳಿಯಲ್ಲಿ ಸೂಕ್ತ ಸ್ಥಾನಮಾನ ನೀಡಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಮುಖ್ಯವಾಗಿ ಪಾಲಿಕೆಯಲ್ಲಿ ಇಂತಹ ನಿಯಮಾವಳಿ ಜಾರಿಗೊಳಿಸಿದರೆ, ಪಾಲಿಕೆಯಲ್ಲಿರುವ ಸಾವಿರಾರು ಚಿಂದಿ ಆಯುವವರಿಗೂ ಅನುಕೂಲವಾಗುತ್ತದೆ ಎಂಬುದು ಪರಿಸರ ತಜ್ಞರ ಅಭಿಪ್ರಾಯ.
ಒಣತ್ಯಾಜ್ಯ ವಿಂಗಡಣೆಗೆ ಮತ್ತೂಂದು ಹೆಸರು ಹಸಿರು ದಳ ಹಸಿರು ದಳ ಸಂಸ್ಥೆಯು ನಗರದ ತ್ಯಾಜ್ಯ ವಿಂಗಡಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಪಾಲಿಕೆಯೊಂದಿಗೆ ತ್ಯಾಜ್ಯ ಸಮಸ್ಯೆ ನಿವಾರಣೆಗೆ ದುಡಿಯುತ್ತಿದೆ. ಕಳೆದ 7 ವರ್ಷಗಳಿಂದ ತ್ಯಾಜ್ಯ ವಿಂಗಡಣೆಯಲ್ಲಿ ತೊಡಗಿಕೊಂಡಿರುವ ಸಂಸ್ಥೆಯು ಪಾಲಿಕೆಯ 44 ವಾರ್ಡ್‌ಗಳಲ್ಲಿನ ಒಣತ್ಯಾಜ್ಯ ಸಂಗ್ರಹ ಘಟಕಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ. ಜತೆಗೆ ಹಾದಿ ಬೀದಿ ಅಲೆದಾಡಿ ಕಸ ಸಂಗ್ರಹಿಸುವರಿಗೆ ಸಾಮಾಜಿಕ ಭದ್ರತೆಯನ್ನು ಕೊಡಿಸಿದ್ದು, ಅನಕ್ಷರಸ್ಥರಾದ ಚಿಂದಿ ಆಯುವವರಿಗೆ ಹಾಗೂ ಅವರ ಕುಟುಂಬಗಳಿಗೆ ಆರೋಗ್ಯ ತಪಾಸಣೆ, ಮಕ್ಕಳಿಗೆ ಶಿಕ್ಷಣ, ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ವಿಲೇವಾರಿ ಆಗುವ ತ್ಯಾಜ್ಯ ವಿಧಗಳು
-ಹಸಿ ತ್ಯಾಜ್ಯ
-ಒಣ ತ್ಯಾಜ್ಯ
-ಸ್ಯಾನಿಟೆರಿ ವೇಸ್ಟ್
-ಕಟ್ಟಡ ತ್ಯಾಜ್ಯ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಘಟಕಗಳು
ಕನ್ನಹಳ್ಳಿ, ಸೀಗೇಹಳ್ಳಿ, ದೊಡ್ಡಬಿದರಕಲ್ಲು, ಸುಬ್ಬರಾಯನಪಾಳ್ಯ, ಚಿಕ್ಕನಾಗಮಂಗಲ, ಕೂಡ್ಲು, ಲಿಂಗಧೀರನಹಳ್ಳಿ. ಕಟ್ಟಡ ತ್ಯಾಜ್ಯ ವಿಲೇವಾರಿ ಘಟಕಗಳು
ಮಲ್ಲಸಂದ್ರ, ಕಾಡು ಅಗ್ರಹಾರ, ಶ್ರೀನಿವಾಸಪುರ, ಗೊಲ್ಲಹಳ್ಳಿ, ಕಣ್ಣೂರು, ಗುಡ್ಡದ ಹಳ್ಳಿ, ಮಿಟ್ಟಗಾನಹಳ್ಳಿ ತ್ಯಾಜ್ಯ ನಿರ್ವಹಣೆಯಲ್ಲಿ ಅಸಂಘಟಿತ ವಲಯದ ಕೊಡುಗೆ ಹೆಚ್ಚಿದೆ. ಅದರಲ್ಲೂ ಚಿಂದಿ ಆಯುವವರು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಆದರೆ, ಪೌರಾಡಳಿತ ಇಲಾಖೆಯು ಜಾರಿಗೆ ತರಲು ಹೊರಟಿರುವ ಹೊಸ ನಿಯಮಾವಳಿಯಲ್ಲಿ ಅಸಂಘಟಿತ ವಲಯವನ್ನು ಕಡೆಗಣಿಸಿರುವುದು ಸರಿಯಲ್ಲ.
-ನಳಿನಿ ಶೇಖರ್, ಹಸಿರುದಳ ಎನ್‌ಜಿಒ ಮುಖ್ಯಸ್ಥೆ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುತ್ತಿರುವ ಒಣತ್ಯಾಜ್ಯ ಸಂಗ್ರಹ ಘಟಕಗಳ ತ್ಯಾಜ್ಯ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿರುವ ಕುರಿತಂತೆ ಸೋಮವಾರ ಘನತ್ಯಾಜ್ಯ ವಿಭಾಗದ ಅಧಿಕಾರಿಗಳ ಸಭೆ ಕರೆದಿದ್ದು, ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
-ಆರ್.ಸಂಪತ್‌ರಾಜ್, ಮೇಯರ್ ಅಮೆರಿಕದಿಂದ ತ್ಯಾಜ್ಯ ಆಮದು ಮಾಡಿಕೊಳ್ಳಲು ವಿವಿಧ ಕಂಪನಿಗಳು ಮುಂದಾಗಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಒಣ ತ್ಯಾಜ್ಯದ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಇದರಿಂದಾಗುವ ನಷ್ಟ ತಡೆಯಲು ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು.
-ಮನ್ಸೂರ್ ಗೌಸ್, ಒಣತ್ಯಾಜ್ಯ ಸಂಗ್ರಹ ಘಟಕದ ನಿರ್ವಾಹಕ * ವೆಂ.ಸುನೀಲ್‌ಕುಮಾರ್/ಜಯಪ್ರಕಾಶ್ ಬಿರಾದಾರ್