Advertisement

ಪರ್ಕಳ ರಸ್ತೆಯಲ್ಲೇ ಪೋಲಾಗುತ್ತಿರುವ ಕುಡಿಯುವ ನೀರು

10:19 AM Feb 15, 2020 | sudhir |

ಉಡುಪಿ: ಪರ್ಕಳ ಸಿಂಡಿಕೇಟ್‌ ಬ್ಯಾಂಕ್‌ ಎದುರು ಕುಡಿಯುವ ನೀರಿನ ಪೈಪ್‌ ಲೈನ್‌ ಕಳೆದ ಒಂದು ವಾರದ ಹಿಂದೆ ಒಡೆದು ಸಾವಿರಾರು ಲೀಟರ್‌ಗಳಷ್ಟು ನೀರು ಚರಂಡಿ ಪಾಲಾಗುತ್ತಿದೆ.

Advertisement

ಪರ್ಕಳ ಭಾಗದ ರಾ.ಹೆ. 169ಎ ಬಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಉಡುಪಿ ನಗರವನ್ನು ಸಂಪರ್ಕಿಸುವ ಪ್ರಮುಖ ಕುಡಿಯುವ ನೀರಿನ ಪೈಪ್‌ ಲೈನ್‌ಗೆ ಹಾನಿಯಾಗಿದೆ. ಪರಿಣಾಮ ಕಳೆದ ಒಂದು ವಾರದಿಂದ ಈ ಶುದ್ಧಕುಡಿಯುವ ನೀರು, ರಸ್ತೆ ಸೇರಿದಂತೆ ಪಕ್ಕದ ತಗ್ಗು ಪ್ರದೇಶದಲ್ಲಿ ಸಂಗ್ರಹವಾಗುತ್ತಿದೆ. ಪಾದಚಾರಿ ಹಾದಿಯೂ ಕೆಸರು ಮಯವಾಗಿ ಜನರ ಓಡಾಟಕ್ಕೂ ಅಡ್ಥಿ ಉಂಟುಮಾಡಿದೆ.

ವಾರದಿಂದ ಪೋಲು
ಕಳೆದ ಒಂದು ವಾರದಿಂದ ಧಾರಾಕಾರವಾಗಿ ನೀರು ಪೋಲಾಗುತ್ತಿದ್ದು ಇದರ ಬಗ್ಗೆ ನಗರಸಭೆ ಕಿಂಚಿತ್ತೂ ಗಮನಹರಿಸದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ನೀರಿನ ಅಭಾವ ನಿವಾರಿಸಲು ಹಲವು ಕಾರ್ಯಕ್ರಮ ಆಯೋಜಿಸಬೇಕೆಂದಿರುವ ನಗರಸಭೆಗೆ ಈ ಹಾನಿ ಕಾಣಿಸುವುದಿಲ್ಲವೇ ಎಂಬ ಟೀಕೆ ಸಾರ್ವಜನಿಕ ವಲಯದಿಂದ ಬರುತ್ತಿದೆ.

ಕಳೆದ ವರ್ಷ ನೀರಿನ ಅಭಾವ
ಬಜೆ ಡ್ಯಾಮ್‌ ಮೂಲಕ ಪರ್ಕಳವಾಗಿ ನಗರಕ್ಕೆ ಸಂಪರ್ಕಿಸುವ ಪ್ರಮುಖ ಕುಡಿಯುವ ನೀರಿನ ಪೈಪ್‌ಲೈನ್‌ ಇದಾಗಿದೆ. ಈಗಾಗಲೇ ಬಿಸಿಲ ತಾಪ ನಿಧಾನವಾಗಿ ಹೆಚ್ಚಳವಾಗುತ್ತಿದ್ದು ಕಳೆದ ಬಾರಿ ನಗರದಲ್ಲಿ ಉಂಟಾದ ನೀರಿನ ಸಮಸ್ಯೆ ಮತ್ತೆ ಉದ್ಭವಿಸಬಹುದೇ ಎಂಬ ಆತಂಕ ಜನರಲ್ಲಿ ಮನೆಮಾಡಿದೆ. ಈ ನಡುವೆ ಕಣ್ಣ ಮುಂದೆ ನೀರು ಪೋಲಾಗುತ್ತಿದ್ದರೂ ಸಂರಕ್ಷಿಸುವ ಕೆಲಸ ಮಾತ್ರ ಆಗಿಲ್ಲ. ಕುಡಿಯುವ ನೀರನ್ನು ಶುದ್ಧೀಕರಿಸಲು ನಗರಸಭೆ ಬಹಳಷ್ಟು ಹಣಗಳನ್ನು ಖರ್ಚುಮಾಡಿ ಶ್ರಮವಹಿಸುತ್ತಿದೆ. ಆದರೆ ಈ ತರದ ನೀರಿನ ಪೋಲಿನಿಂದ ಸಂರಕ್ಷಣೆಯ ಉದ್ದೇಶವೆ ವಿಫ‌ಲವಾದಂತಾಗಿದೆ.

ಧೂಳಿನ ಸಿಂಚನ
ದಿನನಿತ್ಯ ಪರ್ಕಳ ಬಳಿ ನೂರಾರು ವಾಹನಗಳು ಓಡಾಡುತ್ತಿವೆ. ಹೆರ್ಗ ಜಾತ್ರೆಯ ಸಮಯದಲ್ಲೂ ವಾಹನ ದಟ್ಟಣೆ ಅಧಿಕವಿತ್ತು. ಪ್ರತಿನಿತ್ಯ ಪರ್ಕಳ ಭಾಗದಲ್ಲಿ ರಸ್ತೆ ಕಾಮಗಾರಿಯಿಂದ ಧೂಳಿನ ವಾತಾವರಣ ಸಾಮಾನ್ಯವಾಗಿ ಬಿಟ್ಟಿದೆ. ಈ ಮಾರ್ಗಕ್ಕೆ ನೀರು ಹಾಕಿ ಧೂಳಿನ ಪ್ರಮಾಣ ಕಡಿಮೆ ಮಾಡುವಂತೆ ಸ್ಥಳೀಯರು ಅಧಿಕಾರಿಗಳಿಗೆ ತಿಳಿಸಿದರೂ ಇಲಾಖೆಗಳಿಂದ ಸ್ಪಂದನೆ ಇಲ್ಲವಾಗಿದೆ. ದಿನನಿತ್ಯಅಕ್ಕಪಕ್ಕದ ಅಂಗಡಿ ವ್ಯಾಪಾರಸ್ಥರು ಸೇರಿದಂತೆ ಜನರಿಗೆ ಧೂಳಿನ ಸಿಂಚನ ರೂಢಿಯಾಗಿಬಿಟ್ಟಿದೆ.

Advertisement

ತತ್‌ಕ್ಷಣ ರಿಪೇರಿ ಕೆಲಸ ಆಗಬೇಕಿದೆ
ಬಹಳ ಹಣ ಖರ್ಚು ಮಾಡಿ ಶುದ್ಧೀಕರಿಸಿದ ಈ ಶುದ್ಧ ನೀರು ಪೋಲಾಗುತ್ತಿರುವುದು ಖಂಡನೀಯ. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೆತ್ತಿಕೊಳ್ಳದಿದ್ದರೆ ಮುಂದೆ ಮತ್ತಷ್ಟು ನೀರು ಪೋಲಾಗುವುದು. ತತ್‌ಕ್ಷಣ ಪೈಪ್‌ ಲೈನ್‌ ಅನ್ನು ಸರಿಪಡಿಸಿ ನೀರಿನ ಪೋಲು ತಡೆಯಬೇಕು.
-ಮೋಹನ್‌ ದಾಸ್‌ ನಾಯಕ್‌, ಸ್ಥಳೀಯರು

ತಿಳಿಸಲಾಗಿದೆ
ಕುಡಿಯುವ ನೀರಿನ ಪೈಪ್‌ ಲೈನ್‌ ಹಾನಿಯ ಬಗ್ಗೆ ನಗರ ಸಭೆಗೆ ದೂರು ನೀಡಿದಾಗ ರಾ.ಹೆದ್ದಾರಿ ಪ್ರಾಧಿಕಾರದಿಂದ ಸರಿಪಡಿಸಬೇಕೆಂಬ ಉತ್ತರ ಬಂತು. ನಗರಕ್ಕೆ ಹಾದು ಬರುವ ಕುಡಿಯುವ ನೀರಿನ ಪೈಪ್‌ ಲೈನ್‌ ಆಗಿರುವುದರಿಂದ ನಗರ ಸಭೆಯೆ ಗಮನ ಕೊಡುವಂತೆ ತಿಳಿಸಲಾಗಿದೆ.
-ಸುಮಿತ್ರಾ ಆರ್‌. ನಾಯಕ್‌,
16ನೇ ಪರ್ಕಳ ವಾರ್ಡ್‌ನ ನಗರಸಭೆ ಸದಸ್ಯೆ.

Advertisement

Udayavani is now on Telegram. Click here to join our channel and stay updated with the latest news.

Next