Advertisement

ಸ್ವಚ್ಛ ಪುತ್ತೂರಿನ ಕನಸು: ತಿಂಗಳಾದರೂ ತ್ಯಾಜ್ಯ ತೆರವಿಲ್ಲ

08:34 AM Sep 16, 2020 | mahesh |

ಪುತ್ತೂರು: ಮುಕ್ವೆ ಬಳಿಯ ನಗರಸಭೆ ಪ್ರವೇಶ ಫಲಕದ ಸನಿಹ ತ್ಯಾಜ್ಯ ರಾಶಿ ಬಿದ್ದು ತಿಂಗಳು ಕಳೆದರೂ ತೆರವು ಕಾರ್ಯ ಆಗಿಲ್ಲ. ಹೀಗಾಗಿ ಸ್ವತ್ಛ ಪುತ್ತೂರಿನ ಕನಸಿಗೆ ಬೀದಿ ಬದಿಗಳಲ್ಲಿ ಎಸೆಯುವ ತ್ಯಾಜ್ಯ ಸವಾಲಾಗಿ ಪರಿಣಮಿಸಿದೆ. ಕಾಣಿಯೂರು-ಮಂಜೇಶ್ವರ ಅಂತಾ ರಾಜ್ಯ ಹೆದ್ದಾರಿ ಬಳಿಯ ಮುಕ್ವೆ ಸನಿಹದಲ್ಲಿ ತ್ಯಾಜ್ಯ ರಾಶಿ ಇದೆ. ಪಾದಚಾರಿ ಸ್ಥಳವನ್ನು ತ್ಯಾಜ್ಯ ರಾಶಿ ಆಕ್ರಮಿಸಿಕೊಂಡಿದೆ. ದಿನಂ ಪ್ರತಿ ನೂರಾರು ವಾಹನಗಳು ಇದೇ ರಸ್ತೆಯಲ್ಲಿ ಸಾಗುತ್ತಿದ್ದು, ತ್ಯಾಜ್ಯ ರಾಶಿ ದರ್ಶನ ಮಾಡಿಯೇ ಸಾಗಬೇಕಾದ ದುಃಸ್ಥಿತಿ ಇದೆ.

Advertisement

ತ್ಯಾಜ್ಯ ಸಂಕಟ
ತ್ಯಾಜ್ಯ ಬಿದ್ದಿರುವ ಪ್ರದೇಶ ವಿಸ್ತರಿತ ನಗರಸಭೆಯ ವ್ಯಾಪ್ತಿಯೊಳಗೆ ಸೇರಿರುವ ಸಾಧ್ಯತೆ ಇದೆ. ಅದಿನ್ನೂ ಖಚಿತಪಟ್ಟಿಲ್ಲ. ನಗರಸಭೆಗೆ ಸೇರದಿದ್ದರೂ ಫಲಕದ ಪಕ್ಕದಲ್ಲೇ ತ್ಯಾಜ್ಯ ರಾಶಿ ಬಿದ್ದಿದೆ. ನಗರ ಸಭೆಯ ಸರಹದ್ದಿನ ವರೆಗೆ ನರಿಮೊಗರು ಗ್ರಾ.ಪಂ.ಗೆ ಸೇರಿದ್ದು, ಈ ಎರಡು ಆಡಳಿತ ವ್ಯವಸ್ಥೆಗಳು ಸ್ವಚ್ಛತೆಗೆ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ದಂಡದ ಎಚ್ಚರಿಕೆ
ಈಗಾಗಲೇ ನಗರಸಭೆಯ ಅಧಿಕಾರಿಗಳು ತ್ಯಾಜ್ಯ ಎಸೆಯುವವರನ್ನು ಹಿಡಿದು ದಂಡ ವಿಧಿಸಿದ್ದಾರೆ. 5,000 ರೂ. ವರೆಗೆ ದಂಡ ವಿಧಿಸಿದ್ದೂ ಇದೆ. ಅದಾಗ್ಯೂ ತ್ಯಾಜ್ಯ ಎಸೆಯುತ್ತಲೇ ಇದ್ದಾರೆ. ನಗರದಿಂದ ಹೊರವಲಯದಲ್ಲಿರುವ ಪ್ರದೇಶ ಇದಾಗಿದ್ದು, ಹೀಗಾಗಿ ರಾತ್ರಿ ವೇಳೆ ತ್ಯಾಜ್ಯ ಎಸೆದು ಪರಾರಿ ಆಗುತ್ತಿರುವ ಬಗ್ಗೆ ಶಂಕೆ ಇದೆ. ಅಂತಾರಾಜ್ಯ ರಸ್ತೆ ಇದಾಗಿರುವ ಕಾರಣ ಸಿಸಿ ಕೆಮರ ಅಳವಡಿಸಿ ಕಿಡಿಗೇಡಿಗಳ ಕೃತ್ಯವನ್ನು ಪತ್ತೆ ಹಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಪರಿಶೀಲಿಸಿ ಕ್ರಮ
ತ್ಯಾಜ್ಯ ಬಿದ್ದಿರುವ ಸ್ಥಳದ ವ್ಯಾಪ್ತಿ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ವಿಸ್ತರಿತ ನಗರಸಭೆಗೆ ಸೇರಿದ ಪ್ರದೇಶವಾಗಿದ್ದರೆ ತತ್‌ಕ್ಷಣ ತೆರವಿಗೆ ಕ್ರಮ ಕೈಗೊಳ್ಳಲಾಗುವುದು.
-ಗುರುಪ್ರಸಾದ್‌ ಶೆಟ್ಟಿ, ಪರಿಸರ ಅಭಿಯಂತ, ನಗರಸಭೆ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next