Advertisement

ತ್ಯಾಜ್ಯ ಮುಕ್ತ ಗ್ರಾಮ ನಿರ್ಮಾಣಕ್ಕೆ ಪಣ

04:49 PM Jun 29, 2022 | Team Udayavani |

ಹಾವೇರಿ: ಸ್ವಚ್ಛ ಭಾರತ ಮಿಷನ್‌ನಡಿ ಜಿಲ್ಲೆಯ 223 ಗ್ರಾಪಂಗಳಿಗೆ ತಲಾ ಒಂದರಂತೆ ಸ್ವಚ್ಛ ಸಂಕೀರ್ಣ ಘಟಕಗಳನ್ನು ನಿರ್ಮಿಸುವ ಮೂಲಕ ಜಿಲ್ಲಾ ಪಂಚಾಯಿತಿ ತ್ಯಾಜ್ಯ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಮುಂದಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ 93 ಸ್ವಚ್ಛ ಸಂಕೀರ್ಣ ಘಟಕಗಳನ್ನು ನಿರ್ಮಿಸಲಾಗಿದೆ.

Advertisement

ನಗರ, ಪಟ್ಟಣ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದ ಕಸ ಸಂಗ್ರಹಣೆ ಹಾಗೂ ಸಂಸ್ಕರಣೆ ಕಾರ್ಯ ಸ್ವಚ್ಛ ಭಾರತ್‌ ಮಿಷನ್‌ ಯೋಜನೆ ಫಲವಾಗಿ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದೆ. ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಂಡು ಜಿಲ್ಲೆಯಲ್ಲಿ ಈಗಾಗಲೇ 93 ಸ್ವಚ್ಛ ಸಂಕೀರ್ಣ ಘಟಕಗಳನ್ನು ನಿರ್ಮಿಸಲಾಗಿದ್ದು, 100ಕ್ಕೂ ಅಧಿಕ ಘಟಕಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಡಿಸೆಂಬರ್‌ ಅಂತ್ಯದೊಳಗೆ ಜಿಲ್ಲೆಯ ಪ್ರತಿ ಗ್ರಾಪಂಗೆ ಒಂದರಂತೆ ಸ್ವಚ್ಛ ಸಂಕೀರ್ಣ ಘಟಕಗಳು ತಲೆ ಎತ್ತಲಿದ್ದು, ಈ ಘಟಕಗಳ ಮೂಲಕ ತ್ಯಾಜ್ಯ ಸಂಸ್ಕರಣೆಗೊಳಿಸಿ ಗ್ರಾಮೀಣ ಪ್ರದೇಶಗಳನ್ನು ತ್ಯಾಜ್ಯ ಮುಕ್ತಗೊಳಿಸುವ ಸಂಕಲ್ಪ ಹೊಂದಲಾಗಿದೆ.

ಒಣ ಕಸ ಸಂಗ್ರಹ: ಜಿಲ್ಲೆಯ ವಿವಿಧೆಡೆ ಈಗಾಗಲೇ ಸ್ವಚ್ಛ ಸಂಕೀರ್ಣ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಒಣ ಕಸ ಸಂಗ್ರಹ ಹಾಗೂ ಸಂಸ್ಕರಣೆಗೆ ಆದ್ಯತೆ ನೀಡಲಾಗಿದೆ. ಗ್ರಾಮದಲ್ಲಿನ ಪ್ಲಾಸ್ಟಿಕ್‌, ಗಾಜಿನ ಬಾಟಲ್‌, ಗುಟುಕಾ ಚೀಟ್‌ ಸೇರಿದಂತೆ ಒಣ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡುತ್ತಿರುವುದರಿಂದ ಗ್ರಾಮದಲ್ಲಿನ ವಾತಾವರಣ ಸ್ವಚ್ಛಗೊಳ್ಳುತ್ತಿದೆ. ಜನರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಸಲಾಗುತ್ತಿದ್ದು, ಸ್ವಚ್ಛತೆಯತ್ತ ಗ್ರಾಮೀಣ ಪ್ರದೇಶಗಳು ಹೆಜ್ಜೆ ಇಟ್ಟಿವೆ.

ಏಕರೂಪ ಘಟಕ ನಿರ್ಮಾಣ: ಜಿಲ್ಲೆಯಲ್ಲಿ ಪ್ರತಿ ಘಟಕವನ್ನು ಒಂದೇ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸ್ವಚ್ಛ ಸಂಕೀರ್ಣ ಬ್ರ್ಯಾಂಡಿಂಗ್‌ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಉಪಕರಣ, ಕಟ್ಟಡದ ಮಾದರಿ ಪ್ರತಿಯೊಂದು ಒಂದೇ ರೂಪದಲ್ಲಿ ನಿರ್ಮಿಸಲಾಗುತ್ತಿದೆ. ಸ್ವಚ್ಛ ಸಂಕೀರ್ಣ ಘಟಕದ ಕಟ್ಟಡ, ಅಟೋ ಟಿಪ್ಪರ್‌, ಕಸದ ಡಬ್ಬ ಸೇರಿ ಒಂದು ಘಟಕಕ್ಕೆ ಸುಮಾರು 20 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ.

182 ಆಟೋ ಟಿಪ್ಪರ್‌ ವ್ಯವಸ್ಥೆ: ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಸ ಸಂಗ್ರಹಕ್ಕೆ ಈಗಾಗಲೇ 182 ಆಟೋ ಟಿಪ್ಪರ್‌ ವ್ಯವಸ್ಥೆ ಮಾಡಲಾಗಿದೆ. ಈ ಆಟೋ ಟಿಪ್ಪರ್‌ಗಳು ಗ್ರಾಮದಲ್ಲಿ ಮನೆ ಮನೆ ಬಳಿಗೆ ತೆರಳಿ ಒಣ ಕಸ ಸಂಗ್ರಹಿಸುತ್ತಿವೆ. ಇದಕ್ಕಾಗಿ ಪಂಚಾಯಿತಿಯಿಂದ ಕಸದ ಡಬ್ಬಗಳನ್ನು ನೀಡಲಾಗಿದೆ. ಗ್ರಾಮದಲ್ಲಿ ಸಂಗ್ರಹಿಸಿದ ತ್ಯಾಜ್ಯವನ್ನು ಸ್ವಚ್ಛ ಸಂಕೀರ್ಣ ಘಟಕಕ್ಕೆ ಸಾಗಿಸಿ ತ್ಯಾಜ್ಯ ಸಂಸ್ಕರಿಸುವ ಕಾರ್ಯ ನಡೆಯುತ್ತದೆ.

Advertisement

ಸ್ವಸಹಾಯ ಗುಂಪುಗಳಿಗೆ ಉದ್ಯೋಗ: ಜಿಲ್ಲೆಯ ಸ್ವಚ್ಛ ಸಂಕೀರ್ಣ ಘಟಕಗಳ ನಿರ್ವಹಣೆ ಜವಾಬ್ದಾರಿಯನ್ನು ಗ್ರಾಮ ಮಟ್ಟದ ಸ್ವಸಹಾಯ ಗುಂಪುಗಳ ಸದಸ್ಯರಿಗೆ ನೀಡಲಾಗಿದೆ. ಈ ಮೂಲಕ ಅವರಿಗೂ ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಘಟಕದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದಲೇ ಆದಾಯ ದೊರಕಿಸಿಕೊಡಲು ಅನುವು ಮಾಡಿಕೊಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಜಿಪಂ ವತಿಯಿಂದ 60 ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಆಟೋ ಟಿಪ್ಪರ್‌ ವಾಹನ ಚಾಲನೆ ಹಾಗೂ ತ್ಯಾಜ್ಯ ಸಂಸ್ಕರಣೆ ಕುರಿತು ತರಬೇತಿ ನೀಡಲಾಗಿದ್ದು, ಜಿಲ್ಲೆಯ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜಿಲ್ಲೆಯಲ್ಲಿ 93 ಘಟಕ ನಿರ್ಮಾಣ ಜಿಲ್ಲೆಯ ಗ್ರಾಮೀಣ ಪ್ರದೇಶಗಳನ್ನು ತ್ಯಾಜ್ಯ ಮುಕ್ತಗೊಳಿಸುವ ಹಿನ್ನೆಲೆಯಲ್ಲಿ ಈಗಾಗಲೇ ಉದ್ಯೋಗ ಖಾತ್ರಿ ಯೋಜನೆಯಡಿ 93 ಸ್ವಚ್ಛ ಸಂಕೀರ್ಣ ಘಟಕಗಳನ್ನು ನಿರ್ಮಿಸಲಾಗಿದೆ. ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ 8, ಹಾನಗಲ್ಲ 28, ಹಾವೇರಿ 16, ಹಿರೇಕೆರೂರು 8, ರಾಣಿಬೆನ್ನೂರ 18, ರಟ್ಟಿಹಳ್ಳಿ 3, ಸವಣೂರ 9 ಹಾಗೂ ಶಿಗ್ಗಾವಿ ತಾಲೂಕಿನಲ್ಲಿ 3 ಘಟಕಗಳನ್ನು ನಿರ್ಮಿಸಲಾಗಿದೆ. ಈ ಘಟಕಗಳ ಮೂಲಕ ತ್ಯಾಜ್ಯ ಸಂಸ್ಕರಣ ಕಾರ್ಯ ನಡೆಯಲಿದೆ. ಈಗಾಗಲೇ ಗ್ರಾಮ ಸಭೆ ಹಾಗೂ ಪಿಡಿಒ ಮೂಲಕ ತ್ಯಾಜ್ಯ ಸಂಸ್ಕರಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ.

ಗ್ರಾಮೀಣ ಪ್ರದೇಶಗಳನ್ನು ತ್ಯಾಜ್ಯ ಮುಕ್ತಗೊಳಿಸುವ ಸದುದ್ದೇಶದಿಂದ ಜಿಲ್ಲೆಯ ಗ್ರಾಪಂಗಳಿಗೆ ತಲಾ ಒಂದರಂತೆ ಸ್ವಚ್ಛ ಸಂಕೀರ್ಣ ಘಕಟಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ 93 ಘಕಟಗಳನ್ನು ನಿರ್ಮಿಸಲಾಗಿದ್ದು, 100ಕ್ಕೂ ಹೆಚ್ಚು ಘಟಕಗಳ ಕಾಮಗಾರಿ ಪ್ರಗತಿಯಲ್ಲಿದೆ. ಡಿಸೆಂಬರ್‌ ಅಂತ್ಯದೊಳಗೆ ಜಿಲ್ಲೆಯ ಪ್ರತಿ ಗ್ರಾಪಂಗೆ ಒಂದರಂತೆ ಸ್ವಚ್ಛ ಸಂಕೀರ್ಣ ಘಟಕಗಳು ನಿರ್ಮಾಣಗೊಳ್ಳಲಿವೆ.  –ಮಹ್ಮದ್‌ ರೋಷನ್‌, ಜಿಪಂ ಸಿಇಒ, ಹಾವೇರಿ

„ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next