Advertisement

ವಿದ್ಯಾಸೌಧ ಹೆಬ್ಟಾಗಿಲಿಗೆ ತಾಜ್ಯ ರಂಗೋಲಿ

12:08 PM Mar 13, 2020 | Suhan S |

ಧಾರವಾಡ: ರಾಜ್ಯದ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಇದೀಗ ಕಸ ನಿರ್ವಹಣೆ ದೊಡ್ಡ ಸವಾಲಾಗಿ ನಿಂತಿದ್ದು, ಕಟ್ಟಡ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗುವ ಪದ್ಧತಿ ಎಗ್ಗಿಲ್ಲದೇ ಸಾಗಿದೆ.

Advertisement

ಇಂತಿಪ್ಪ ಅವಳಿ ನಗರದಲ್ಲಿ ಪ್ರತಿದಿನ 450 ಟನ್‌ ಕಸ ಉತ್ಪಾದನೆಯಾಗುತ್ತಿದ್ದು, ಪರಿಸರಕ್ಕೆ ಮಾರಕವಾಗದಂತೆ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಅದನ್ನು ವಿಲೇವಾರಿ ಮಾಡುವಲ್ಲಿ ಪಾಲಿಕೆ ವಿಫಲವಾಗುತ್ತಿದೆ. ಎಲ್ಲೆಂದರಲ್ಲಿ ಕಸ, ಕಟ್ಟಡ ತಾಜ್ಯ ತಂದು ಸುರಿದು ಹೋಗುವವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳದೇ ಹೋಗಿದ್ದರಿಂದ ಇಂದು ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗೂ ಕಟ್ಟಡ ತಾಜ್ಯದ ಬಿಸಿ ತಟ್ಟುತ್ತಿದ್ದು, ವಿದ್ಯಾಸೌಧಗಳ ಹೆಬ್ಟಾಗಿಲಿಗೆ ತ್ಯಾಜ್ಯದ ರಂಗೋಲಿ ಬೀಳುತ್ತಿದೆ.

ಹೌದು. ರಾಜ್ಯ ಸರ್ಕಾರ ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಆವರಣದ (ಹಳಿಯಾಳ ಗೇಟ್‌, ಹು-ಧಾ ಬೈಪಾಸ್‌ ರಸ್ತೆ ಬಳಿ) 27 ಎಕರೆ ಜಾಗದಲ್ಲಿ ಇಡೀ ರಾಜ್ಯಕ್ಕೆ ಮಾದರಿ ಎನ್ನುವಂತೆ 90 ಕೋಟಿ ರೂ.ಗಳ ವೆಚ್ಚದಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ದೈತ್ಯ ಕ್ಯಾಂಪಸ್‌ ನಿರ್ಮಿಸುತ್ತಿದೆ. ವಿದ್ಯಾನಗರಿಗೆ ಮುಕುಟು ಪ್ರಾಯವಾಗಿರುವ ಈ ಉನ್ನತ ಶಿಕ್ಷಣ ಅಕಾಡೆಮಿಯ ದ್ವಾರಬಾಗಿಲು ಸೇರಿದಂತೆ ಇನ್ನೂರು ಮೀಟರ್‌ ಪ್ರದೇಶ ಇದೀಗ ಕಟ್ಟಡ ತ್ಯಾಜ್ಯ ಮತ್ತು ವೈದ್ಯಕೀಯ ತಾಜ್ಯದಿಂದ ಆವೃತವಾಗಿದ್ದು, ಅಕಾಡೆಮಿ ಆರಂಭಕ್ಕೂ ಮುನ್ನ ಹೊಸ ಕಟ್ಟಡದ ಹೆಬ್ಟಾಗಿಲಿಗೆ ಕಸದ ರಾಶಿ ಎದೆ ಸೆಟೆಸಿ ನಿಂತಿದೆ. ರಾತ್ರೋರಾತ್ರಿ ಡಂಪ್‌: ಹಳಿಯಾಳ ರಸ್ತೆಯ ಹೊಯ್ಸಳ ನಗರದಿಂದ ಬೈಪಾಸ್‌ವರೆಗಿನ 400 ಮೀಟರ್‌ ದೂರದ ರಸ್ತೆ ಜನದಟ್ಟಣೆ ಇಲ್ಲದ ಪ್ರದೇಶ. ರಾತ್ರಿಯಾದರೆ ಸಾಕು ಎಲ್ಲವೂ ಇಲ್ಲಿ ಬಿಕೋ ಎನ್ನುತ್ತಿರುತ್ತದೆ.

ಹೀಗಾಗಿ ಕಸ ಸುರಿಯುವವರಿಗೆ ಇದು ಉತ್ತಮ ಸ್ಥಳವಾಗಿ ಮಾರ್ಪಟ್ಟಿದೆ. ರಾತ್ರಿ ವೇಳೆ ಟ್ರಾಕ್ಟರ್‌-ಟೆಂಪೋಗಳಲ್ಲಿ ತಂದ ಕಸವನ್ನು ಬರೀ ಐದೇ ನಿಮಿಷದಲ್ಲಿ ಇಲ್ಲಿ ಸುರಿದು ಪರಾರಿಯಾಗುತ್ತಾರೆ. ಕಟ್ಟಡ ತಾಜ್ಯ ಹೊರಕ್ಕೆ ಹಾಕುವುದಕ್ಕೆ ಕಟ್ಟಡ ಮಾಲೀಕರಿಂದ ಹಣ ಪಡೆದು ಈ ಕೆಲಸ ಮಾಡಲಾಗುತ್ತಿದೆ. ಪ್ರತಿ ಟಿಪ್‌ಗೆ 1000-1200 ರೂ.ನಂತೆ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಹಣ ಪಡೆಯುವವರು ಈ ತಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಸುರಿಯುತ್ತಿದ್ದಾರೆ.

ಇನ್ನೂ ಸಮಿತಿ ಆಗಿಲ್ಲ: ಮಹಾನಗರ ಪಾಲಿಕೆ ಕಟ್ಟಡ ತಾಜ್ಯ ವರ್ಗೀಕರಿಸಿ ಅವುಗಳನ್ನು ವಿಲೇವಾರಿ ಮಾಡಿಸುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಹೊಂದಬೇಕು. ಈ ಕುರಿತು ಪರಿಸರ ತಜ್ಞರು ಅನೇಕ ಬಾರಿ ಪಾಲಿಕೆ ಸಭೆಯಲ್ಲೇ ಗಮನ ಸೆಳೆದಿದ್ದಾರೆ. ಕಟ್ಟಡ ತಾಜ್ಯ, ವೈದ್ಯಕೀಯ ತಾಜ್ಯ, ಹಸಿ ತ್ಯಾಜ್ಯ, ಘನ ತಾಜ್ಯ ಮತ್ತು ಪರಿಸರಕ್ಕೆ ಮಾರಕವಾಗುವ ಗಾಜು, ಪ್ಲಾಸ್ಟಿಕ್‌ಗಳನ್ನು ಪ್ರತ್ಯೇಕಗೊಳಿಸಿ ಅವುಗಳನ್ನು ವಿಲೇವಾರಿ ಮಾಡಬೇಕು. ಅದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಿ ಕ್ರಮ ವಹಿಸಬೇಕಿತ್ತು. ಆದರೆ ಎಲ್ಲೆಂದರಲ್ಲಿ ಚೆಲ್ಲಿ, ಅವುಗಳಿಗೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ.

Advertisement

ಕಟ್ಟಡ ತಾಜ್ಯ ಭೂ ಮಾಲಿನ್ಯವನ್ನುಂಟು ಮಾಡಲಾಗುತ್ತಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿರುವುದರಿಂದ ಭೂ ಮತ್ತು ಜಲ ಮಾಲಿನ್ಯ ಉಂಟಾಗುತ್ತಿದ್ದು, ನಗರದ ಸುತ್ತಲೂ ಇರುವ ಸಣ್ಣ ಕೆರೆ, ತೊರೆ ಮತ್ತು ಹಳ್ಳಗಳಲ್ಲಿ ಪ್ಲಾಸ್ಟಿಕ್‌, ಕಟ್ಟಡದ ಅವಶೇಷಗಳು, ವೈದ್ಯಕೀಯ ತಾಜ್ಯ ಹರಡಿಕೊಳ್ಳುತ್ತಿದೆ. ಅಷ್ಟೇಯಲ್ಲ ಕೋಳಿಕೆರೆ ಈಗಾಗಲೇ ಕೊಳಚೆ ಕೆರೆಯಾಗಿ ಮಾರ್ಪಟ್ಟಿದ್ದು, ಇನ್ನು ಕೆಲಗೇರಿ ಕೆರೆ ಮತ್ತು ನವಲೂರು ಕೆರೆಗಳು ಇದೇ ಸರದಿ ಸಾಲಿನಲ್ಲಿ ನಿಂತಿವೆ. ಹೀಗೆ ಮುಂದುವರಿದರೆ ಇನ್ನೆರಡು ವರ್ಷದಲ್ಲಿ ಈ ಎರಡೂ ಕೆರೆಗಳು ಕೊಳಚೆ ಕೆರೆಗಳಾಗುತ್ತವೆ.

ತಾಜ್ಯ ಸುರಿಯುವ ಇತರೆ ಸ್ಥಳಗಳು :  ತಾಜ್ಯ ಸುರಿಯುವ ಮಾಫಿಯಾ ಬರೀ ಹಳಿಯಾಳ ರಸ್ತೆಯನ್ನಷ್ಟೇ ಅಲ್ಲ ಇತರೆ ಆಯಕಟ್ಟಿನ ಸ್ಥಳಗಳನ್ನು ತನ್ನ ಕೇಂದ್ರ ಮಾಡಿಕೊಂಡಿದೆ. ಧಾರವಾಡದ ಕೋಳಿಕೇರಿ ಅಕ್ಕಪಕ್ಕದ ಇಕ್ಕೆಲಗಳು, ಹೆಬ್ಬಳ್ಳಿ ರಸ್ತೆಯ ಕೃಷಿ ವಿವಿ ಫಾರ್ಮ್ಹೌಸ್‌ ಬಳಿ, ಸವದತ್ತಿ ರಸ್ತೆಯ ಜೆಎಸ್‌ಎಸ್‌ ಕಾಲೇಜು ಪಕ್ಕ, ಯಾದವಾಡ ರಸ್ತೆಯ ಪತ್ರೆಪ್ಪಜ್ಜನ ಮಠದ ಬಳಿ, ಕಲಘಟಗಿ ರಸ್ತೆಯ ನುಗ್ಗಿಕೇರಿ ಇಕ್ಕೆಲಗಳು, ಬೆಳಗಾವಿ ರಸ್ತೆಯ ನರೇಂದ್ರ ಬೈಪಾಸ್‌ ರಸ್ತೆಯ ಇಕ್ಕೆಲಗಳು, ಚಿಕ್ಕಮಲ್ಲಿಗವಾಡ ರಸ್ತೆಯ ಇಕ್ಕೆಲಗಳು ಕಟ್ಟಡ ಮತ್ತು ಇತರ ತ್ಯಾಜ್ಯ ಸುರಿಯುವ ಇತರೆ ಸ್ಥಳಗಳಾಗಿವೆ. ಅಷ್ಟೇಯಲ್ಲ, ಕೃಷಿ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯ ಮತ್ತು ಐಐಟಿ ಕ್ಯಾಂಪಸ್‌ ಸಮೀಪದ ಪಡ ಜಾಗಗಳಲ್ಲಿಯೂ ಕಟ್ಟಡ ತಾಜ್ಯ ನಿಧಾನಕ್ಕೆ ಪ್ರವೇಶ ಪಡೆಯುತ್ತಿದೆ. ಇಲ್ಲಿ ರಾತ್ರಿ ವೇಳೆ ಟ್ರ್ಯಾಕ್ಟರ್‌ ಮತ್ತು ಗೂಡ್ಸ್‌ ಟೆಂಪೋಗಳಲ್ಲಿ ತಂದು ಕಸ ಸುರಿದು ಹೋಗಲಾಗುತ್ತಿದೆ.

ದುರ್ವಾಸನೆಗೆ ನಿವಾಸಿಗಳು ಹೈರಾಣ :  ಉನ್ನತ ಶಿಕ್ಷಣ ಅಕಾಡೆಮಿ ಎದುರಿಗೆ ಅನಾಮಧೇಯ ವ್ಯಕ್ತಿಗಳು ತಂದು ಎಸೆಯುವ ಸತ್ತ ಹಂದಿ, ಸತ್ತ ನಾಯಿಯ ಕೊಳೆತ ದೇಹಗಳು ಇಲ್ಲಿನ ನಿವಾಸಿಗಳ ನೆಮ್ಮದಿ ಕೆಡಿಸಿವೆ. ಇನ್ನು ಪರಿಸರಕ್ಕೆ ಮಾರಕವಾಗುವ ಟೂಬ್‌ಲೈಟ್‌, ಮದ್ಯದ ಖಾಲಿ ಬಾಟಲ್‌ಗ‌ಳು, ಎಷ್ಟೋ ಸಲ ರಸ್ತೆಗೆ ಬಂದು ಬಿದ್ದಿರುತ್ತವೆ. ದೊಡ್ಡ ಮಳೆ ಸುರದಾಗಲಂತೂ ರಸ್ತೆ ಪಕ್ಕದ ಕಸದ ರಾಶಿ ರಸ್ತೆ ಆವರಿಸಿರುತ್ತದೆ. ಈ ಸಂದರ್ಭದಲ್ಲಿ ಗಾಜುಗಳು ರಸ್ತೆಗೇರುತ್ತವೆ. ವಾಹನ ಸವಾರರು ಪರದಾಡುವುದು ಇಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಸುಟ್ಟ ಕಸದ ವಾಸನೆ ರಾತ್ರಿಯಿಡಿ ಸುತ್ತಲಿನ ನಾಗರಿಕರ ನಿದ್ದೆಗೆಡಿಸುತ್ತಿದೆ.

ಈವರೆಗೂ ತಾಜ್ಯ ಸುರಿಯುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಈಗಷ್ಟೇ ಗೊತ್ತಾಗಿದೆ. ಅದನ್ನು ಪರಿಶೀಲಿಸಲು ನಮ್ಮ ಸಿಬ್ಬಂದಿ ಕಳಿಸುತ್ತೇನೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇನೆ.– ಡಾ| ಶಿವಪ್ರಸಾದ್‌, ನಿರ್ದೇಶಕ, ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ

ಧಾರವಾಡ ತುಂಬಾ ಸುಸಂಸ್ಕೃತರು ಇರುವ ಊರು. ಶಿಕ್ಷಣ ಸಂಸ್ಕೃತಿಗಳ ನಗರದಲ್ಲಿ ಈ ರೀತಿ ಎಲ್ಲೆಂದರಲ್ಲಿ ಕಸದ ಗುಡ್ಡೆ ಹಾಕಲು ಆರಂಭಿಸಿದರೆ ಏನು ಗತಿ. ಇದಕ್ಕೆ ಮಹಾನಗರ ಪಾಲಿಕೆ ಕೂಡಲೇ ಕ್ರಮ ವಹಿಸಬೇಕು. ಹಳಿಯಾಳ ರಸ್ತೆಯಲ್ಲಿ ಕಟ್ಟಡ ತ್ಯಾಜ್ಯ ಡಂಪ್‌ ಮಾಡುವ ಬಗ್ಗೆ ಈಗಾಗಲೇ ನಾನು ನಾಲ್ಕೈದು ಬಾರಿ ಮಹಾನಗರ ಪಾಲಿಕೆ ಗಮನ ಸೆಳೆದಿದ್ದೇನೆ. ಆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರ ತಂದಿದೆ.– ಪ್ರಕಾಶ ಭಟ್‌, ಪರಿಸರವಾದಿ, ಧಾರವಾಡ ನಿವಾಸಿ

 

-ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next