Advertisement

ಹೊಸಂಗಡಿ ಪೇಟೆಯ ಕಸವೆಲ್ಲ ಕೋಟೆ ಕೆರೆಗೆ…!

07:54 PM Sep 24, 2021 | Team Udayavani |

ಹೊಸಂಗಡಿ:  ತ್ಯಾಜ್ಯ ವಿಲೇವಾರಿ ಘಟಕ ಆರಂಭಗೊಂಡು ವರ್ಷ ಕಳೆದರೂ, ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸದ ಕಾರಣ ಹೊಸಂಗಡಿ ಪೇಟೆಯ ಕಸವನ್ನೆಲ್ಲ ಇಲ್ಲಿನ ಕೋಟೆ ಕೆರೆಗೆ ಎಸೆಯುತ್ತಿರುವುದು ಕಂಡು ಬಂದಿದೆ. ಇದು ನೂರಾರು ಎಕರೆ ಕೃಷಿ ಪ್ರದೇಶಕ್ಕೆ ನೀರುಣಿಸುವ ಕೋಟೆ ಕೆರೆಯ ಸೌಂದರ್ಯವನ್ನೇ ಹದಗೆಡುವಂತೆ ಮಾಡಿದೆ.

Advertisement

ಘಟಕ ಆರಂಭಕ್ಕೆ ಅನುದಾನದ ಕೊರತೆ:

ಹೊಸಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕವು ಕಳೆದ ವರ್ಷದಿಂದ ಆರಂಭವಾಗಿದೆ. ಆದರೆ ಅನುದಾನದ ಕೊರತೆ ಸೇರಿದಂತೆ ಮತ್ತಿತರ ಕಾರಣಗಳಿಂದ ಇನ್ನೂ ಕೂಡ ಈ ಘಟಕ ಸಮರ್ಪಕ ರೀತಿಯಲ್ಲಿ ಆರಂಭವೇ ಆಗಿಲ್ಲ.

15-20 ದಿನಗಳಿಗೊಮ್ಮೆ  ತ್ಯಾಜ್ಯ ಸಂಗ್ರಹ:

ಪ್ರತಿನಿತ್ಯ ಇಲ್ಲಿರುವ ಹೊಟೇಲ್‌ಗ‌ಳು, ಅಂಗಡಿಗಳಿಗೆ ಬಂದು ಕಸ ಸಂಗ್ರಹ ಮಾಡುವ ಯೋಜನೆಯನ್ನು ಪಂಚಾಯತ್‌ ಹಾಕಿಕೊಂಡಿದೆ. ಆದ ರೆ  ಇನ್ನೂ ಸುಸಜ್ಜಿತ ತ್ಯಾಜ್ಯ ವಿಲೇವಾರಿ ಘಟಕ ಆಗದಿರುವುದರಿಂದ ಈಗ 15-20 ದಿನಗಳಿಗೊಮ್ಮೆ ಮಾತ್ರ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಪಂಚಾಯತ್‌ನಿಂದ ಕಸ ಹಾಕಿಡಲು ಒಂದು ಗೋಣಿ ಚೀಲ ಕೊಡಲಾಗಿದ್ದು, ಅದರಲ್ಲಿ ತುಂಬಿದ ತತ್‌ಕ್ಷಣ ವರ್ತಕರು ಅದನ್ನು ವಿಲೇವಾರಿ ಮಾಡುವುದು ಆವಶ್ಯಕವಾಗಿದ್ದು, ಅದಕ್ಕೆ ಈ ಕೆರೆಗೆ ಎಸೆಯುತ್ತಿದ್ದಾರೆ.

Advertisement

ಕಸದ ತೊಟ್ಟಿಯೂ ಇಲ್ಲ:

ಹೊಸಂಗಡಿ ಒಂದು ಪ್ರಮುಖ ಪೇಟೆಯಾಗಿದ್ದು, ಕುಂದಾಪುರ ಹಾಗೂ ತೀರ್ಥಹಳ್ಳಿಯನ್ನು ಸಂಪರ್ಕಿ ಸುವ ಪ್ರಮುಖ ಕೊಂಡಿಯೂ ಆಗಿರುವುದಿಂದ ನಿತ್ಯ ಸಾವಿರಾರು ಮಂದಿ ಬೇರೆ ಬೇರೆ ಊರುಗಳಿಂದ ಬರುತ್ತಿರುತ್ತಾರೆ. ಇಲ್ಲಿ ಹೊಟೇಲ್‌, ಅಂಗಡಿಗಳೆಲ್ಲ ಸೇರಿ ಒಟ್ಟಾರೆ 90 ವಾಣಿಜ್ಯ ಕಟ್ಟಡಗಳಿವೆ. ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 1,130 ಮನೆಗಳಿವೆ. ಆದರೂ ಪೇಟೆಯಲ್ಲಿ ಕಸ ಹಾಕಲು ಒಂದು ಕಸದ ತೊಟ್ಟಿಯನ್ನು ಇಟ್ಟಿಲ್ಲ. ಹೀಗಾಗಿ ಕಸವನ್ನು ಎಲ್ಲೆಂದರಲ್ಲಿ ಎಸೆಯುವಂತಾಗಿದೆ.

ಕೆರೆ ನೀರು ಕಲುಷಿತ :

ಈ ಕೋಟೆ ಕೆರೆಯು ಪುರಾತನ ಕಾಲದ್ದಾಗಿದ್ದು, ಅನೇಕ ವರ್ಷಗಳಿಂದ ಈ ಇಲ್ಲಿನ ಎಕರೆಗಟ್ಟಲೆ ಕೃಷಿ ಭೂಮಿಗೆ ವರದಾನವಾಗಿದೆ. ಬಾಳೆಬರೆ ಘಾಟಿಯಿಂದ ಹರಿದು ಬರುವ ಸಣ್ಣ ತೊರೆಯೊಂದು ಈ ಕೆರೆಯ ನೀರಿನ ಮೂಲವಾಗಿದೆ. ಆದರೆ ಈಗ ಈ ಕೆರೆಗೆ ಪ್ಲಾಸ್ಟಿಕ್‌ ಮತ್ತಿತರ ತ್ಯಾಜ್ಯಗಳನ್ನೆಲ್ಲ ಎಸೆಯುತ್ತಿರುವುದರಿಂದ ನೀರು ಸಹ ಕಲುಷಿತಗೊಳ್ಳುತ್ತಿದೆ. ಈ ಬಗ್ಗೆ ಪಂಚಾಯತ್‌ನವರು ಕೂಡಲೇ ಸರಿಯಾದ ಕ್ರಮಕೈಗೊಳ್ಳಬೇಕು ಎನ್ನುವುದಾಗಿ ಸಾರ್ವಜನಿಕರು ಆಗ್ರ ಹಿಸಿದ್ದಾರೆ.

ಪಂಚಾಯತ್‌ನಿಂದ ಕಸ ವಿಲೇವಾರಿಗೆ ಸಾಧ್ಯವಾದಷ್ಟರ ಮಟ್ಟಿಗೆ ಪ್ರಯತ್ನ ಮಾಡ ಲಾಗುತ್ತಿದೆ. ಆದರೆ ಅನುದಾನದ ಕೊರತೆಯಿಂದ ಕೆಲವೊಂದು ಸೌಕರ್ಯಗಳನ್ನು ಒದಗಿಸುವುದು ವಿಳಂಬವಾಗಿದೆ. ಆದಷ್ಟು ಶೀಘ್ರ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿ, ಸುಸಜ್ಜಿತ ರೀತಿಯಲ್ಲಿ ಕಸ ವಿಲೇವಾರಿಗೆ ಕ್ರಮಕೈಗೊಳ್ಳಲಾಗುವುದು. ಯಡಮೊಗೆ ಗ್ರಾ.ಪಂ. ಅನ್ನು ಸಹ ಸೇರಿಸಿಕೊಂಡು, ಉತ್ತಮ ರೀತಿಯಲ್ಲಿ ಕಸ ವಿಲೇವಾರಿ ಘಟಕ ಕಾರ್ಯನಿರ್ವಹಿಸಲು ಯೋಜನೆ ರೂಪಿಸಲಾಗಿದೆ. ಸ್ವರ್ಣಲತಾ, ಹೊಸಂಗಡಿ ಗ್ರಾ.ಪಂ. ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next