Advertisement

ಕೈಗಾರಿಕೆಗಳ ತ್ಯಾಜ್ಯ ಅವೈಜ್ಷಾನಿಕ ವಿಲೇವಾರಿ

03:12 PM Oct 19, 2021 | Team Udayavani |

ಹುಮನಾಬಾದ: ಪಟ್ಟಣ ಹೊರವಲಯದ ಅನೇಕ ಕೈಗಾರಿಕೆಗಳು ಕಾನೂನು ಮೀರಿ ವಿಷಯುಕ್ತ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಪರಿಸರ ಹಾನಿ ಉಂಟು ಮಾಡುತ್ತಿದ್ದರೂ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು, ಜಿಲ್ಲಾಡಳಿತ, ತಾಲೂಕಾಡಳಿತ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.

Advertisement

ಕೈಗಾರಿಕಾ ಪ್ರದೇಶದಲ್ಲಿ ಅನೇಕ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚಾಗಿ ವಿವಿಧ ರಾಸಾಯನಿಕ, ಬಹು ಔಷಧಿಗಳ ಕಚ್ಚಾ ವಸ್ತು ಉತ್ಪಾದನೆ ಸೇರಿದಂತೆ ಇತರೆ ಅನೇಕ ಪದಾರ್ಥಗಳ ಉತ್ಪನ್ನಗಳನ್ನು ಇಲ್ಲಿನ ತಯಾರಿಸಲಾಗುತ್ತಿದೆ. ಆದರೆ ಪರಿಸರ ಮಾಲಿನ್ಯದ ನಿಯಮಗಳನ್ನು ಯಾರೂ ಪಾಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಮಳೆಗಾಲದಲ್ಲಿ ನೀರು ಹರಿಯಬೇಕಿದ್ದ ಹಳ್ಳಗಳಲ್ಲಿ ವಿಷಪೂರಿತ ರಾಸಾಯನಿಕ ಹರಿದಾಡುತ್ತಿದೆ. ಈ ಕುರಿತು ಈ ಹಿಂದೆ ಅನೇಕ ಹೋರಾಟಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಶಾಸಕ ರಾಜಶೇಖರ ಪಾಟೀಲ ಕಾರ್ಖಾನೆಗಳ ತ್ಯಾಜ್ಯದ ಸಮಸ್ಯೆ ಕುರಿತು ವಿಧಾನಸಭೆ ಕಲಾಪದಲ್ಲಿ ಧ್ವನಿ ಎತ್ತಿದ್ದರೂ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಇಲ್ಲಿನ ಅನೇಕ ಕೈಗಾರಿಕೆಗಳು ತ್ಯಾಜ್ಯವನ್ನು ಧುಮ್ಮನಸೂರ್‌ ಹೊರ ಪ್ರದೇಶದ ಚೀನಕೇರಾ ಕ್ರಾಸ್‌ ಹತ್ತಿರದ ಆಳದ ಪ್ರದೇಶ, ಆನೆಕೊಳ್ಳ ನೀರು ಹರಿಯುವ ಪ್ರದೇಶ ಹಾಗೂ ಲಾಲಧರಿ ಪ್ರದೇಶವೊಂದರಲ್ಲಿ ಸುರಿಯುತ್ತಿದ್ದು, ಅದರ ಮೇಲೆ ಮಣ್ಣು ಮುಚ್ಚಿರುವುದು ಕಂಡು ಬಂದಿದೆ. ಮಳೆ ಸುರಿದಂತೆ ಮಣ್ಣು ಜಾರಿ ಚೀಲಗಳಲ್ಲಿ ತುಂಬಿದ ತ್ಯಾಜ್ಯ ಎದ್ದು ಕಾಣುತ್ತಿದೆ. ಸಮೀಪದ ತಾಂಡಾ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕೈಗಾರಿಕಾ ಪ್ರದೇಶದ ಸುತ್ತಲಿನ ಗಡವಂತಿ, ಮಾಣಿಕನಗರ ಗ್ರಾಮಗಳಲ್ಲಿನ ಜನರ ಅನಾರೋಗ್ಯ ಉಂಟಾದ ಸಂದರ್ಭದಲ್ಲಿ “ಉದಯವಾಣಿ’ ಸತತ ಸರಣಿ ವರದಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ 2017ರಲ್ಲಿ ಗ್ರಾಮಗಳಲ್ಲಿನ ಬಾವಿಗಳ, ಕೊಳವೆಬಾವಿಗಳ, ಹಳ್ಳಗಳ ನೀರಿನಲ್ಲಿ ಪರೀಕ್ಷೆ ನಡೆದಿತ್ತು. ರಾಸಾಯನಿಕ ಗಣನೀಯ ಪ್ರಮಾಣದಲ್ಲಿರುವುದು ಪತ್ತೆಯಾಗಿತ್ತು. ಬಹುತೇಕ ನೀರಿನ ಮಾದರಿಗಳು ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿ ಬಂದಿತ್ತು. ಅಲ್ಲದೆ ಅಂದಿನ ಜಿಲ್ಲಾಧಿಕಾರಿ ಎಚ್‌.ಆರ್‌. ಮಹಾದೇವ ನೇತೃತ್ವದಲ್ಲಿ 8 ಅಧಿಕಾರಿಗಳ ತಂಡ ರಚಿಸಿ ಕಾರ್ಖಾನೆಗಳ ಪರಿಶೀಲನೆ ನಡೆಸಿದ್ದರು. ಕೆಲ ಕಾರ್ಖಾನೆಗಳು ಮುಚ್ಚುವಂತೆ ವರದಿ ಕೂಡ ನೀಡಲಾಗಿತ್ತು. ಆದರೆ ಯಾವ ಆದೇಶಗಳು ಜಾರಿಯಾಗದೆ ಕಾರ್ಖಾನೆಗಳ ವಿರುದ್ಧ ಕ್ರಮವಾಗಿಲ್ಲ ಎಂಬುವುದೇ ವಿಶೇಷ. ಹುಮನಾಬಾದ ಪಟ್ಟಣ ಸೇರಿದಂತೆ ಬಹುತೇಕ ಕಡೆಗಳಲ್ಲಿ ಸಂಜೆ ಸಮಯದಲ್ಲಿ ದುರ್ವಾಸನೆ ಹಬ್ಬುತ್ತಿದೆ. ಬೀದರ- ಕಲಬುರಗಿ ರಸ್ತೆ ಮಧ್ಯದಲ್ಲಿ ಸಂಚರಿಸುವ ಜನರು ಮೂಗು ಮುಚ್ಚಿಕೊಂಡೇ ಸಂಚರಿಸುವ ಸ್ಥಿತಿ ಇದೆ. ಅವ್ಯವಸ್ಥೆ ಕುರಿತು ಜನರು ಜನಪ್ರತಿನಿಧಿಗಳಿಗೆ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಪರಿಸರ ಹಾನಿ ಉಂಟು ಮಾಡಲು ಯಾರಿಗೂ ಅಧಿಕಾರ ಇಲ್ಲ. ಆದರೂ ವಿವಿಧಡೆ ಕೈಗಾರಿಕೆಗಳ ತ್ಯಾಜ್ಯ ಸುರಿಯುತ್ತಿರುವ ಕುರಿತು ಮಾಹಿತಿ ದೊರೆಯುತ್ತಿದ್ದು, ಕಾನೂನು ಗಾಳಿಗೆ ತೂರಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಕಾರ್ಖಾನೆಗಳ ಕುರಿರು ಪರಿಶೀಲನೆ ನಡೆಸಿ ಸೂಕ್ತ ವಿವರಣೆಯೊಂದಿಗೆ ತಪ್ಪಿಸ್ಥ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ವಿವಿಧೆಡೆ ಎಸೆದಿರುವ ತ್ಯಾಜ್ಯ ಯಾವ ಕಾರ್ಖಾನೆಗೆ ಸಂಬಂಧಿಸಿರುವುದು ಎಂದು ಸಂಬಂಧಿಸಿದ ಇಲಾಖೆಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು. -ನಾಗಯ್ನಾ ಹಿರೇಮಠ, ತಹಶೀಲ್ದಾರ್‌

Advertisement

-ದುರ್ಯೋಧನ ಹೂಗಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next