Advertisement

ಯುವ ಬ್ರಿಗೇಡ್‌ನಿಂದ ತ್ಯಾಜ್ಯ ಸಂಗ್ರಹ

04:52 PM Aug 09, 2018 | Team Udayavani |

ಹೊನ್ನಾವರ: ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ಜಿಲ್ಲೆಯ ನೂರಾರು ಯುವಕರು ಪ್ರತಿವಾರ ಅಲ್ಲಲ್ಲಿ ತ್ಯಾಜ್ಯ ಸಂಗ್ರಹಿಸುತ್ತಲೇ ಇದ್ದಾರೆ. ಇದಕ್ಕೂ ತಮಗೆ ಸಂಬಂಧವೇ ಇಲ್ಲ ಎಂಬಂತೆ ಜನ ತ್ಯಾಜ್ಯ ಸುರಿಯುತ್ತಲೇ ಇದ್ದಾರೆ. ಯುವ ಬ್ರಿಗೇಡ್‌ ಎಲ್ಲ ತಾಲೂಕುಗಳಲ್ಲಿ ಸ್ವಚ್ಛತಾ ಆಂದೋಲನ ನಡೆಸಿದಂತೆ ಹೊನ್ನಾವರದಲ್ಲೂ ನಡೆಸುತ್ತಿದೆ. ಕೆಲವು ಹಳ್ಳಿಗಳಲ್ಲೂ ತ್ಯಾಜ್ಯ ಸಂಗ್ರಹ ಮಾಡಿದೆ. ಯುವ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೊನ್ನಾವರದವರು. ಅವರ ಮಾರ್ಗದರ್ಶನದಲ್ಲಿ ನದಿಗಳ ಸ್ವಚ್ಛತಾ ಕಾರ್ಯವೂ ನಡೆಯಿತು. 

Advertisement

ನಾಡಿನ ಹೆಸರಾಂತ ಲೇಖಕಿ, ವೈದ್ಯೆ ಡಾ| ಅನುಪಮಾ ಕವಲಕ್ಕಿಯಿಂದ ಹೊನ್ನಾವರದವರೆಗೆ ಮಹಿಳೆಯರನ್ನು ಕೂಡಿಕೊಂಡು ಜಾಥಾ ನಡೆಸಿ, ಪ್ಲಾಸ್ಟಿಕ್‌ ಮುಕ್ತ ಆಂದೋಲನ ನಡೆಸಿದ್ದಾರೆ. ಕವಲಕ್ಕಿ ಎಂಬ ಪುಟ್ಟ ಊರಿನಲ್ಲಿ ಈ ಯಜ್ಞ ಯಶಸ್ವಿಯಾಗಿದೆ. ಪೇಟೆ, ಹಳ್ಳಿ ಮತ್ತು 10ಕಿಮೀ ದೂರ ಬೆಟ್ಟದಲ್ಲಿರುವ ಕರಿಕಾನಮ್ಮನ ದೇವಾಲಯದ ಆಸುಪಾಸಿನಲ್ಲಿ ಟನ್‌ ಗಟ್ಟಲೆ ತ್ಯಾಜ್ಯವನ್ನು ಯುವಬ್ರಿಗೇಡ್‌ ಸಂಗ್ರಹಿಸಿದೆ.

ಡಾ| ರಂಗನಾಥ ಪೂಜಾರಿ ನೇತೃತ್ವದಲ್ಲಿ ಪ್ರತಿ ರವಿವಾರ ಅಲ್ಲಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆ. ಕಾರವಾರದಲ್ಲಿ ನ್ಯಾಯವಾದಿ ನಾಗರಾಜ ನಾಯ್ಕ ನೇತೃತ್ವದಲ್ಲಿ ಸ್ವಚ್ಛತಾ ಆಂದೋಲನ ಆರಂಭವಾಗಿ ವರ್ಷ ಕಳೆಯಿತು. ಯುವಬ್ರಿಗೇಡ್‌ ಹುಡುಗರು ಬಿಡಾಡಿ ದನಗಳಿಗೆ ರೇಡಿಯಂ ಪಟ್ಟಿ ಕಟ್ಟಿದರು. ಇದು ಪತ್ರಿಕೆ, ವಾಟ್ಸಾಪ್‌, ಫೇಸ್‌ಬುಕ್‌ಗಳಲ್ಲಿ ಹರಿದಾಡಿ ಮೆಚ್ಚುಗೆ ಗಳಿಸಿತು. ಹೀಗೆ ಇವರು ಕಸ ಹೆಕ್ಕುವುದು, ಅವರು ಕಸ ಮಾಡುವುದು ಇನ್ನೆಷ್ಟು ದಿನ?

ನಗರಸಭೆ, ಪಪಂಚಾಯತಗಳು ಕಸ ಹಾಕುವವರ ಫೋಟೊ ವಾಟ್ಸಾಪ್‌ ಮಾಡಿ ಅಂದಿದ್ದಾರೆ. ಆಗೊಮ್ಮೆ ಈಗೊಮ್ಮೆ ದಂಡ ಹಾಕುತ್ತಾರೆ. ಹಣ್ಣಿನ ಅಂಗಡಿ, ತರಕಾರಿ ಅಂಗಡಿ, ಹೋಟೆಲ್‌ಗ‌ಳ ತ್ಯಾಜ್ಯ ರಾತ್ರಿ ಗಟಾರು ಸೇರುತ್ತದೆ. ಮಳೆ ಬಿದ್ದರೆ ಗಟಾರು ಕಟ್ಟಿ ಬೀದಿಯಲ್ಲೆಲ್ಲಾ ತ್ಯಾಜ್ಯ ಹರಿಯುತ್ತದೆ. ಬಹುಪಾಲು ಶಾಲೆ, ಕಾಲೇಜುಗಳ ಆವಾರದ ಹೊರಗೆ ಗುಟಕಾ ಪ್ಯಾಕೆಟ್‌ಗಳು, ಸಿಗರೇಟ್‌ ತುಂಡುಗಳು ಬಿದ್ದಿರುತ್ತದೆ. ಸರ್ಕಾರಿ ಕಾಲೇಜುಗಳ ಆಸುಪಾಸಿನಲ್ಲಿ ಬಿಯರ್‌ ಬಾಟಲಿಗಳು ಬಿದ್ದಿರುತ್ತವೆ. ಶಿಕ್ಷಕರಿಗೂ ಸ್ವಚ್ಛತೆಗೂ ಶಾಲೆ, ಶಾಲಾಭಿವೃದ್ಧಿ ಸಮಿತಿಗೂ ಸಂಬಂಧವಿಲ್ಲವೇ. ತಮ್ಮ ಶಾಲೆ, ಕಾಲೇಜುಗಳ ಪರಿಸರವನ್ನು ಕಡ್ಡಾಯವಾಗಿ ಸ್ವತ್ಛವಾಗಿಡಲು ಯಾಕೆ ಯತ್ನಿಸುವುದಿಲ್ಲ. ಸರ್ಕಾರದ ದುಡ್ಡಿನಲ್ಲಿ ಶಾಲೆ ನಡೆಯುತ್ತದೆ, ದೇಶದ ಪ್ರಧಾನಿ ಹೇಳಿದ ಒಂದು ಮಾತನ್ನು ಇವರು ಪಾಲಿಸಲು ಸಾಧ್ಯವಿಲ್ಲವೇ? ವಿಧಾನಸಭೆ ಚುನಾವಣೆ ಕಾಲದಲ್ಲಿ ಸಾವಿರಾರು ಮೋದಿ ಅಭಿಮಾನಿಗಳು, ಭಕ್ತರು ಕಾಣಿಸಿಕೊಂಡರು. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರೆಲ್ಲಾ ಪ್ರಧಾನಿ ಮೋದಿಯವರ ಒಂದು ಸಣ್ಣ ಆಶಯದಂತೆ ಸ್ವತ್ಛತಾ ಕಾರ್ಯದಲ್ಲಿ ಯಾಕೆ ಪಾಲ್ಗೊಳ್ಳುವುದಿಲ್ಲ. ಕಡ್ಡಾಯವಾಗಿ ಸ್ವತ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳದಿದ್ದವರಿಗೆ ಪಕ್ಷದ ಹುದ್ದೆ ಏಕೆ?

ಪ್ರಧಾನಿ ಮೋದಿಯವರಿಗೂ ಇದು ಗೊತ್ತು. 125ಕೋಟಿ ಜನ ಇದರಲ್ಲಿ ಪಾಲ್ಗೊಳ್ಳದಿದ್ದರೆ ಒಬ್ಬ ಮೋದಿಯಿಂದ ಏನು ಸಾಧ್ಯ ಎಂದು ಕೇಳುತ್ತಾರೆ. ಎಂದೂ ಕಸ, ಕೊಳಕನ್ನು ಮುಟ್ಟದ ಜಿಲ್ಲೆಯ ಯುವಕರು ತ್ಯಾಜ್ಯ ತುಂಬಿ ಹರಿದ ಹೊಂಡಕ್ಕಿಳಿದು ಟನ್‌ಗಟ್ಟಲೆ ಪ್ಲಾಸ್ಟಿಕ್‌ ಗಲೀಜುಗಳನ್ನು ಎತ್ತಿ ಹಾಕುವುದನ್ನು ಎಲ್ಲೆಡೆ ಕಾಣಬಹುದು. ಇವರೊಂದಿಗೆ ಕೈ ಜೋಡಿಸಬೇಕಾದವರು ತಮಾಷೆಯಂತೆ ವರ್ತಿಸುತ್ತಿರುವುದು ಜಿಲ್ಲೆಗೆ ಭೂಷಣವಲ್ಲ. ಎತ್ತರದ ಗುಡ್ಡ, ಮಧ್ಯದ ಬಯಲು, ತಗ್ಗಿನ ಕರಾವಳಿಯನ್ನೊಳಗೊಂಡು ಮೂರು ಹಂತದಲ್ಲಿ ನೆಲೆಗೊಂಡ ಉತ್ತರ ಕನ್ನಡದಲ್ಲಿ ಮಳೆ ಬಿದ್ದೊಡನೆ ಗುಡ್ಡದಿಂದ ಇಳಿಯುವ ನೀರು ಬಹುಪಾಲು ತ್ಯಾಜ್ಯವನ್ನು ಸಮುದ್ರಕ್ಕೆ ಸಾಗಿಸುತ್ತದೆ. ಮಳೆ ಪ್ರವಾಹಕ್ಕೂ ಸಾಗಿಸಲು ಅಸಾಧ್ಯವಾಗುವಷ್ಟು ಕಸ ಜಿಲ್ಲೆಯಲ್ಲಿ ಸಂಗ್ರಹವಾಗುತ್ತಿದೆ. ಅವರವರು ಮಾಡುವ ಕಸ ತ್ಯಾಜ್ಯದ ವಿಲೇವಾರಿ ಅವರ ಜವಬ್ದಾರಿ, ತಪ್ಪಿದವರಿಗೆ ದಂಡ ವಿಧಿಸಬೇಕು. ಜಿಲ್ಲೆ ಉಳಿಯಬೇಕಾದರೆ ತ್ಯಾಜ್ಯ ಮುಕ್ತವಾಗಬೇಕು.

Advertisement

ಕಾಯಂ ಊರಲ್ಲಿ ತಿರುಗಲು ಬಿಟ್ಟು, ಕಿರಾಣಿ ಅಂಗಡಿಕಾರರು ಕೊಡುವ ಹಿಂಡಿ ತಿಂದು, ಬೆಟ್ಟದ ಮೇಲೆ ಮೇಯ್ದು, ರಸ್ತೆಯಲ್ಲಿ ಮಲಗಿ ಕಾಲ ಕಳೆಯುವ ನೂರಾರು ದನಗಳನ್ನು ಕರುಹಾಕಿದ ಮೇಲೆ ಮನೆಗೆ ಕೊಂಡೊಯ್ಯುವ ಗೋ ಪ್ರೇಮಿಗಳಿಗೂ ರೇಡಿಯಂ ಪಟ್ಟಿ ತೊಡಿಸಿ.
 ಅಶೋಕೆ ಹೆಗಡೆ
ಮಾವಿನಗುಂಡಿ. ಸ್ಥಳಿಕ 

ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next