Advertisement

ವಾಶಿಂಗ್‌ ಮಷಿನ್‌ ದುರಸ್ತಿ; 3 ಲಕ್ಷ ಪರಿಹಾರ ಕೇಳಿದ ವ್ಯಕ್ತಿ

12:05 PM Jun 13, 2022 | Team Udayavani |

ಬೆಂಗಳೂರು: ವಾಶಿಂಗ್‌ ಮಷಿನ್‌ ವಿಸ್ತೃತ (ಎಕ್ಸೈಂಡೆಡ್‌) ಸೇವೆಯನ್ನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ತನ್ನ ಪತ್ನಿ ಒತ್ತಾಯಪೂರ್ವಕವಾಗಿ ಕೈಯಿಂದ ಬಟ್ಟೆಗಳನ್ನು ತೊಳೆಯುವಂತಾಗಿದೆ. ಇದರಿಂದ ಆಕೆಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಇದಕ್ಕೆ ಕಾರಣವಾದ ಎಲೆಕ್ಟ್ರಾನಿಕ್‌ ಕಂಪೆನಿಯಿಂದ 3.7 ಲಕ್ಷ ರೂ. ಪರಿಹಾರ ಕಲ್ಪಿಸುವಂತೆ ಗ್ರಾಹಕರೊಬ್ಬರು ವ್ಯಾಜ್ಯಗಳ ಪರಿಹಾರ ನ್ಯಾಯಾಲಯ (ಕಂಜೂಮರ್‌ ಕೋರ್ಟ್‌) ಮೆಟ್ಟಿಲೇರಿದ ಪ್ರಕರಣ ನಡೆದಿದೆ.

Advertisement

ಬೆಂಗಳೂರು ನಗರ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯವು ಇಲೆಕ್ಟ್ರಾನಿಕ್‌ ತಯಾರಿಕಾ ಕಂಪೆನಿ ದೂರುದಾರನಿಗೆ 20,015 ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದೆ.

ಬಲಗೆರೆಯ ನಿವಾಸಿ 2011ರಲ್ಲಿ ವೈಟ್‌ ಫೀಲ್ಡ್‌ನಲ್ಲಿರುವ ಇಲೆಕ್ಟ್ರಾನಿಕ್‌ ಕಂಪೆನಿಯೊಂದರ ಫ್ರಂಟ್‌ ಲೋಡ್‌ ಫ‌ುಲ್‌ ಆಟೋಮ್ಯಾಟಿಕ್‌ ವಾಶಿಂಗ್‌ ಮಷಿನ್‌ ಖರೀದಿಸಿದ್ದರು. ಈ ವೇಳೆ 5,015ರೂ. ಹೆಚ್ಚುವರಿ ಹಣ ನೀಡಿ 2 ವರ್ಷದ ವಿಸ್ತೃತ ಸೇವೆ ಪಡೆದುಕೊಂಡಿದ್ದರು. ಇದರ ಅವಧಿಯು 2018ರಿಂದ 2020 ವರೆಗೆ ಇತ್ತು. ಷರತ್ತಿನ ಅನ್ವಯ ಎರಡು ವರ್ಷದ ಅವಧಿಯಲ್ಲಿ ಉಚಿತವಾಗಿ ಗ್ರಾಹಕರಿಗೆ ಸೇವೆಯನ್ನು ಸಂಸ್ಥೆಯು ತ್ವರಿತವಾಗಿ ನೀಡಬೇಕಿತ್ತು. ಈ ನಡುವೆ ದೂರುದಾರ ಖರೀದಿಸಿದ ವಾಶಿಂಗ್‌ ಮಷಿನ್‌ ಓವರ್‌ ಹಿಟ್‌ನಿಂದಾಗಿ ಡೋರ್‌ ಹಾಳಾಗಿದ್ದು, ಬಟ್ಟೆಗಳು ಹರಿದು ಹೋಗುತ್ತಿತ್ತು. ಈ ಬಗ್ಗೆ ಎಲೆಕ್ಟ್ರಾನಿಕ್‌ ಸಂಸ್ಥೆಯ ಸರ್ವೀಸ್‌ ಸೆಂಟರ್‌ಗೆ ದೂರು ದಾಖಲಿಸಿದ್ದರು.

ಸತತ ಅನೇಕ ಬಾರಿ ದೂರು ನೀಡಿದ ಬಳಿಕ ಸರ್ವೀಸ್‌ ಸೆಂಟರ್‌ ಸಿಬ್ಬಂದಿ ಭೇಟಿ ಮಾಡಿ ವಾಶಿಂಗ್‌ ಮಷಿನ್‌ ಫೋಟೋ ತೆಗೆದುಕೊಂಡು ಹೋಗಿದ್ದಾರೆ. ಅಂದಿನಿಂದ 2020ರ ಜನವರಿ ತನಕ ಸರ್ವೀಸ್‌ ಸೆಂಟರ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಬಗ್ಗೆ ಸರ್ವೀಸ್‌ ಸೆಂಟರ್‌ಗೆ ಮೇಲ್‌ ಮೂಲಕ ದೂರು ಸಹ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಗ್ರಾಹಕರ ಕೋರ್ಟ್‌ ಮೊರೆ ಹೋಗಿದ್ದಾರೆ.

ಕೋರಿದ್ದು 3 ಲಕ್ಷ: ದೂರುದಾರರು ಕಂಪೆನಿಯಿಂದ ಒಟ್ಟು 3.7 ಲಕ್ಷ ರೂ. ಪರಿಹಾರ ಕೋರಿ ಪ್ರಕರಣವನ್ನು ದಾಖಲಿಸಿದ್ದಾರೆ. ದೂರಿನಲ್ಲಿ 5015 ರೂ. ಸರ್ವಿàಸ್‌ ವಾರೆಂಟಿ ವಿಸ್ತರಿಸಿದ ಮೊತ್ತಕ್ಕೆ ಶೇ.12 ಬಡ್ಡಿ, ಡೋರ್‌ ಗ್ಲಾಸ್‌ 562 ರೂ., ವಾಶಿಂಗ್‌ ಮಷಿನ್‌ ಹಾಳಾದ ಸಮಯದಲ್ಲಿ ಬಟ್ಟೆಗಳನ್ನು ಕೈನಲ್ಲಿ ತೊಳೆದಿರುವುದರಿಂದ ಹೆಂಡತಿಗೆ ಬೆನ್ನು ನೋವು ಉಂಟಾಗಿರುವುದರ ಪರಿಹಾರ 2 ಲಕ್ಷ, ವ್ಯಾಜ್ಯ ಸಂಬಂಧಿಸಿದಂತೆ 1 ಲಕ್ಷ ರೂ. ಪರಿಹಾರ ಕೋರಿದ್ದಾರೆ.

Advertisement

ಸಿಕ್ಕಿದ್ದು 20,015 ರೂ. ಪರಿಹಾರ: ನ್ಯಾಯಾಲಯ ಎರಡು ಕಡೆ ವಾದ ಪರಿಶೀಲನೆ ನಡೆಸಿ, ದೂರುದಾರರು ಖರೀದಿಸಿದ 2 ವರ್ಷದ ಸರ್ವೀಸ್‌ ವಾರೆಂಟಿ ಮೊತ್ತ 5,019ರೂ.ಗೆ ದೂರು ದಾಖಲಾದ ದಿನದಿಂದ ಪರಿಹಾರ ಪಾವತಿಯಾಗುವವರೆಗೆ ಶೇ.9 ಬಡ್ಡಿ ದರದಲ್ಲಿ ಹಣ ಹಿಂದಕ್ಕೆ, ಜತೆಗೆ ಪರಿಹಾರವಾಗಿ 10,000 ರೂ. ಮತ್ತು 5,000 ರೂ. ವ್ಯಾಜ್ಯಕ್ಕೆ ಸಂಬಂಧಿಸಿದ ಖರ್ಚು ಸೇರಿದಂತೆ ಒಟ್ಟು 20,015 ರೂ ನೀಡುವಂತೆ ತೀರ್ಪು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next