ನವದೆಹಲಿ: ಪುಲ್ವಾಮಾ ದಾಳಿ ಒಂದು ಆಕಸ್ಮಿಕ ಘಟನೆ ಎಂದು ಹೇಳಿರುವ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ವಿಕೆ ಸಿಂಗ್, ಒಂದು ವೇಳೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣ ಆಕಸ್ಮಿಕವೋ ಅಥವಾ ಭಯೋತ್ಪಾದನಾ ಘಟನೆಯೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ತಿರುಗೇಟು ನೀಡಿದ್ದಾರೆ.
ನಿಮಗೆ ಗೌರವ ಕೊಟ್ಟೇ ಮಾತನಾಡುತ್ತೇನೆ..ದಿಗ್ವಿಜಯ್ ಸಿಂಗ್ ಜೀ ನಾನೊಂದು ಪ್ರಶ್ನೆ ಕೇಳುತ್ತೇನೆ ನಿಮಗೆ..ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕ ಘಟನೆಯೋ ಅಥವಾ ಭಯೋತ್ಪಾದನಾ ಘಟನೆಯೋ ಎಂದು ರಾಂಚಿಯಲ್ಲಿ ಪ್ರಶ್ನಿಸಿದ್ದಾರೆ.
ಭಾರತೀಯ ವಾಯುಪಡೆ ಪಾಕ್ ನೆಲದಲ್ಲಿ ಅಡಗಿದ್ದ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಅಂಕಿಅಂಶ ಕೊಡಬೇಕೆಂದು ದಿಗ್ವಿಜಯ್ ಸಿಂಗ್ ಮೊದಲು ಪ್ರಶ್ನಿಸಿದ್ದರು. ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಸುಮಾರು 250 ಉಗ್ರರು ಸಾವನ್ನಪ್ಪಿರುವುದಾಗಿ ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲ ನಾಗರಿಕರಿಗೆ ತೊಂದರೆಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜನವಸತಿ ಪ್ರದೇಶಕ್ಕಿಂತ ದೂರವಿರುವ ಬಾಲಕೋಟ್ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು ಎಂದು ಸಿಂಗ್ ವಿವರಿಸಿದ್ದಾರೆ.