ಬೆಂಗಳೂರು: ನೆಹರು ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೊಮ್ಮಾಯಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲುವಾಸ ಅನುಭವಿಸಿದ್ದರಾ? ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಕ್ಕೆ ನೆಹರು ಅವರ ಕೊಡುಗೆಯಿದೆ. ನೆಹರು ಜೈಲು ವಾಸ ಅನುಭವಿಸಿದ್ದರು. ಈಶ್ವರಪ್ಪ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ರಾ? ಬೊಮ್ಮಾಯಿ ಜೈಲುವಾಸ ಅನುಭವಿಸಿದ್ರಾ? ಅವನ್ಯಾವನೋ ರವಿಕುಮಾರ್ ಜೈಲಿಗೆ ಹೋಗಿದ್ನಾ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರ ಈ ಹೇಳಿಕೆ ನೆಹರು ಅಲ್ಲ ಭಾರತೀಯರಿಗೆ ಮಾಡಿದ ಅವಮಾನ. ಸಾರ್ವಕರ್ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಮುಂದೆ ಹೋರಾಟದಲ್ಲಿ ಭಾಗವಹಿಸಲ್ಲವೆಂದು ಹೇಳಿದ್ದರು. ಇಂತವರಿಗೆ ಬಿಜೆಪಿಯವರು ಮರ್ಯಾದೆ ಕೊಡುತ್ತಾರೆ. ಆಧುನಿಕ ಭಾರತ ಕಟ್ಟಲು ಪ್ರಯತ್ನಿಸಿದವರು ನೆಹರು. ಆದರೆ ನೆಹರು ದೇಶ ಇಬ್ಬಾಗಕ್ಕೆ ಕಾರಣರಾದರು ಎಂಬ ಆರೋಪ ಮಾಡುವ ಬಿಜೆಪಿಯವರಿಗೆ ನೆಹರು ಇತಿಹಾಸ ಗೊತ್ತಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಬಿಗಿ ಪೊಲೀಸ್ ಬಂದೋಬಸ್ತ್; ಭಾಗವತ್, ನಾಗ್ಪುರ್ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ
ಜಿನ್ನಾ ಮುಸ್ಲೀಂ ಲೀಗ್ ಮಾಡಿರಲಿಲ್ವೇ? ನೆಹರು ದೇಶ ಒಡೆಯಲು ಹೇಗೆ ಕಾರಣ ಆಗುತ್ತಾರೆ? ಜನರಿಗೆ ತಪ್ಪು ಮಾಹಿತಿ ಕೊಡಬಾರದು. ಇತಿಹಾಸವನ್ನು ತಿಳಿಯುವ ಕೆಲಸ ಮಾಡಬೇಕು. ಆರ್ ಎಸ್ಎಸ್ ಹಿಡನ್ ಅಜೆಂಡಾ ಇದರಲ್ಲಿದೆ ಎಂದು ಆರೋಪಿಸಿದರು.