Advertisement

ನೀರು ಬಿಡದಿದ್ದರೆ ಜಾನುವಾರುಗಳೊಂದಿಗೆ ರಸ್ತೆ ತಡೆ: ಎಚ್ಚರಿಕೆ

12:43 PM Jul 14, 2019 | Suhan S |

ಮಂಡ್ಯ: ಕೃಷ್ಣರಾಜಸಾಗರ ಹಾಗೂ ಹೇಮಾವತಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಬೆಳೆದು ನಿಂತ ಬೆಳೆಗೆ ತಕ್ಷಣ ನೀರೊದಗಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಜನ-ಜಾನುವಾರುಗಳೊಂದಿಗೆ ರಸ್ತೆ ತಡೆ ನಡೆಸಲು ರೈತ ಸಂಘದ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಜಿಲ್ಲೆಯಲ್ಲಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತಂತೆ ಸುದೀರ್ಘ‌ ಚರ್ಚೆ ನಡೆಸಲಾಯಿತು.

ಹೋರಾಟ: ಒಣಗುತ್ತಿರುವ ಬೆಳೆಗಳಿಗೆ ಕೃಷ್ಣರಾಜಸಾಗರ ಮತ್ತು ಹೇಮಾವತಿ ಜಲಾಶಯಗಳಿಂದ ತಕ್ಷಣ ನೀರು ಬಿಡದಿದ್ದರೆ ಅನಿರ್ದಿಷ್ಟಾವಧಿ ರಸ್ತೆ ಬಂದ್‌ ಮಾಡುವುದರ ಮೂಲಕ ಹೋರಾಟ ನಡೆಸುವುದಾಗಿ ನಿರ್ಧರಿಸಲಾಯಿತು.

ಮೈಷುಗರ್‌ ಹಾಗೂ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯ ಕಬ್ಬನ್ನು ಸಾಗಿಸಲು ಸಂಬಂಧಪಟ್ಟವರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳತಕ್ಕದ್ದು ಎಂದು ಸರ್ಕಾರ ಮತ್ತು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.

ಬೆಳಗಾವಿಗೆ ಆಗಮಿಸಿ: ಬೆಳಗಾವಿಯಲ್ಲಿ ಜು.21ರಂದು ನಡೆಯುವ ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವಂತೆ ತೀರ್ಮಾನಿಸಲಾಯಿತು. ಅಲ್ಲದೇ, ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಕರೆದೊಯ್ಯುವ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಯಿತು.

Advertisement

ಜಿಲ್ಲೆಯಲ್ಲಿ ರೈತ ಸಂಘವನ್ನು ಗಟ್ಟಿಗೊಳಿಸಲು ಯುವಕರನ್ನು ಸಂಘಟನೆಗೆ ಕರೆತಂದು ಅವರಿಗೆ ಸೂಕ್ತ ತಿಳಿವಳಿಕೆ ಮೂಡಿಸಲು ಅಧ್ಯಯನ ಶಿಬಿರ ನಡೆಸುವಂತೆ ತೀರ್ಮಾನಿಸಲಾಯಿತು.

ಯುವಕರಿಗೆ ಆದ್ಯತೆ:ಇತ್ತೀಚಿನಲ್ಲಿ ರೈತ ಸಂಘಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬಾರದಿರುವ ಕುರಿತು ಗಂಭೀರವಾಗಿ ಪರಿಗಣಿಸಿ, ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲು ಕ್ರಮ ವಹಿಸುವುದು.

ಹಿರಿಯರಷ್ಟೇ ರೈತ ಸಂಘವನ್ನು ಮುನ್ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹಿರಿಯರೊಂದಿಗೆ ಯುವಕರು ಸೇರಿದಾಗ ಸಂಘಟನೆಗೆ ಬಲ ಬರುತ್ತದೆ. ಈ ಹಿನ್ನೆಲೆಯಲ್ಲಿ ಯುವಜನರನ್ನು ರೈತ ಸಂಘದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಲಾಯಿತು. ಮುಖಂಡರಾದ ದರ್ಶನ್‌ ಪುಟ್ಟಣ್ಣಯ್ಯ, ಬಿ. ಬೊಮ್ಮೇಗೌಡ, ಜಿ.ಎಸ್‌.ಲಿಂಗಪ್ಪಾಜಿ, ಲತಾ ಶಂಕರ್‌, ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next