Advertisement

ಸಿದ್ದರಾಮಯ್ಯ ವಿರುದ್ಧ ಮೊಕದ್ದಮೆ ಎಚ್ಚರಿಕೆ

11:16 AM Mar 03, 2017 | Team Udayavani |

ಮೈಸೂರು: “ನ್ಯಾಯಾಲಯವೇ ನನ್ನನ್ನು ನಿರ್ದೋಷಿ ಎಂದಿದೆ. ಆದರೂ ಪದೇ ಪದೆ ಭ್ರಷ್ಟ, ಜೈಲಿಗೆ ಹೋಗಿಬಂದವರು ಎಂದು ಟೀಕಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ  ಎಚ್ಚರಿಕೆ ನೀಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, “ನನ್ನ ವಿರುದ್ಧದ ಪ್ರಕರಣಗಳ ಮರು ತನಿಖೆ ಮಾಡಿಸುವ ಸಿದ್ದರಾಮಯ್ಯ  ಬೆದರಿಕೆಗೆ ಜಗ್ಗುವುದಿಲ್ಲ. ರಾಜ್ಯ ಕಾಂಗ್ರೆಸ್‌ ಸರ್ಕಾರ ನಡೆಸಿರುವ ಭ್ರಷ್ಟಾಚಾರದ ವಿರುದ್ಧದ ಹೋರಾಟ ಮುಂದುವರಿಸುತ್ತೇನೆ. ಹೋದಲ್ಲಿ-ಬಂದಲ್ಲಿ ನನ್ನನ್ನು ಭ್ರಷ್ಟ ಎಂದು ಟೀಕಿಸುತ್ತಿರುವ ಸಿದ್ದರಾಮಯ್ಯ, ದೇಶ ಕಂಡ ಮಹಾನ್‌ ಭ್ರಷ್ಟ ಮುಖ್ಯಮಂತ್ರಿ’ ಎಂದು ಟೀಕಿಸಿದರು.

“ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರಿಗಾಗಿ ಅಲ್ಪ ಸ್ವಲ್ಪ ಡಿನೋಟಿಫೀಕೇಷನ್‌ ಮಾಡಿದ್ದ ಆರೋಪಗಳಿಂದ ನ್ಯಾಯಾಲಯವೇ ದೋಷ ಮುಕ್ತಗೊಳಿಸಿದೆ. ಹೀಗಿದ್ದರೂ ಸಿದ್ದರಾಮಯ್ಯ ನನ್ನನ್ನು ಬೆದರಿಸುವ ತಂತ್ರಗಳನ್ನು ಮಾಡುತ್ತಿದ್ದಾರೆ.  ಅವರ ಬೆದರಿಕೆಗಳಿಗೆ ಹೆದರುವುದಿಲ್ಲ’ ಎಂದು ಕಿಡಿಕಾರಿದರು. ಸಿದ್ದರಾಮಯ್ಯಗೆ ಧೈರ್ಯವಿದ್ದರೆ ವಿಧಾನಪರಿಷತ್‌ ಸದಸ್ಯ ಗೋವಿಂದರಾಜು, ಲೆಹರ್‌ ಸಿಂಗ್‌ ಅವರ ಡೈರಿ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಸವಾಲು ಹಾಕಿದರು.

ಭಿನ್ನಾಭಿಪ್ರಾಯ ಶಮನ:
“ನನ್ನ ಮತ್ತು ಮಾಜಿ ಸಚಿವ ಸೋಮಣ್ಣ ನಡುವಿನ ಮನಸ್ತಾಪ ಹೋಗಲಾಡಿಸುವ ಸಲುವಾಗಿಯೇ ಅವರ ಮನೆಗೆ ಹೋಗಿದ್ದೆ. ಅವರೊಂದಿಗೆ ಮಾತನಾಡಿ, ಎಲ್ಲವನ್ನು ಬಗೆಹರಿಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನನ್ನ ಮತ್ತು ಸೋಮಣ್ಣ  ನಡುವೆ ಭಿನ್ನಾಭಿಪ್ರಾಯ ಬರುವುದಿಲ್ಲ’ ಎಂದು ಬಿಎಸ್‌ವೈ ಸ್ಪಷ್ಟಪಡಿಸಿದರು.

16ಕ್ಕೆ ಪರಿಮಳಾ ನಾಗಪ್ಪ ಬಿಜೆಪಿಗೆ:
ಹನೂರು ಕ್ಷೇತ್ರದ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಮಾ.16ರಂದು ಕೊಳ್ಳೇಗಾಲದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಮಲೆ ಮಹದೇಶ್ವರ ಬೆಟ್ಟದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಬಿಜೆಪಿ ಸೇರಲಿದ್ದಾರೆ ಎಂದು ತಿಳಿಸಿದರು.

Advertisement

ಯಾರೇ ಬಂದರು ಸ್ವಾಗತ
ಬಿಜೆಪಿ ತತ್ವ-ಸಿದ್ಧಾಂತಗಳನ್ನು ಒಪ್ಪಿಕೊಂಡು ಯಾರೇ ಪಕ್ಷಕ್ಕೆ ಬಂದರೂ ಅವರಿಗೆ ಮುಕ್ತ ಸ್ವಾಗತವಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಪಕ್ಷದಲ್ಲೇ ಬಲಿಷ್ಠ ಅಭ್ಯರ್ಥಿಗಳಿದ್ದು, ಬಿಜೆಪಿಗೆ ಸೇರ್ಪಡೆಯಾಗುವ ಯಾರಿಗೂ ಟಿಕೆಟ್‌ ನೀಡುವ ಭರವಸೆ ನೀಡಿಲ್ಲ. ಆದರೆ ಇನ್ನೂ 50ರಿಂದ 60 ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳ ಅವಶ್ಯಕತೆ ಇದೆ. ಹೀಗಾಗಿ ಯಾರಿಗೆ ಟಿಕೆಟ್‌ ನೀಡಬೇಕೆಂಬ ಕುರಿತು ಪಕ್ಷದ ವತಿಯಿಂದ ಸಮೀಕ್ಷೆ ನಡೆಸಿ, ನಂತರ ರಾಷ್ಟ್ರೀಯ ಅಧ್ಯಕ್ಷರ ಮುಂದೆ ಟಿಕೆಟ್‌ ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next