Advertisement

ವಾರ್ಡ್‌ ಪುನರ್‌ವಿಂಗಡಣೆ, ಮೀಸಲಾತಿಗೆ ವಿರೋಧ

02:22 PM Jun 26, 2018 | Team Udayavani |

ಮೈಸೂರು: ನಗರ ಪಾಲಿಕೆ ವಾರ್ಡ್‌ಗಳನ್ನು ಮನಸೋ ಇಚ್ಛೆ ಪುನರ್‌ ವಿಂಗಡಣೆ ಮಾಡಿದ್ದು, ವಾರ್ಡ್‌ಗಳ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ಪ್ರಕಟಣೆ ಹಿಂದೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಷಡ್ಯಂತ್ರವಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ಶಾಸಕ ಎಸ್‌.ಎ. ರಾಮದಾಸ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 17 ವರ್ಷಗಳಿಂದ ನಗರ ಪಾಲಿಕೆ ವಾರ್ಡ್‌ಗಳನ್ನು ಪುನರ್‌ ವಿಂಗಡಿಸಿರಲಿಲ್ಲ. ಆದರೆ ಇದೀಗ ಏಕಾಏಕಿ ವಾರ್ಡ್‌ಗಳನ್ನು ಪುನರ್‌ ವಿಂಗಡಿಸಿದ್ದು, ಜತೆಗೆ ಮೀಸಲಾತಿಯನ್ನೂ ನಿಗದಿಪಡಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

ಈ ರಾಜ್ಯಪತ್ರಕ್ಕೆ ಕೇವಲ ಸಂಖ್ಯೆ ನಮೂದಿಸಲಾಗಿದ್ದು, ಇದರಲ್ಲಿ ಯಾರ ಸಹಿಯೂ ಇಲ್ಲ. ಅಲ್ಲದೆ ಈ ಪ್ರತಿಯನ್ನು ಸ್ಥಳೀಯ ಶಾಸಕರು ಅಥವಾ ಜಿಲ್ಲಾಧಿಕಾರಿಗೆ ಕಳುಹಿಸಿಲ್ಲವಾದರೂ, ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಇಂದಿನವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಕಾನೂನು ಬಾಹಿರ: ಅಲ್ಲದೆ ಮತ್ತೂಂದೆಡೆ ರಾಜ್ಯ ಸರ್ಕಾರ ಹೈಕೋರ್ಟಿಗೆ ಅಫಿಡವಿಟ್‌ ಸಲ್ಲಿಸಿದ್ದು, ಜುಲೈ 4ಕ್ಕೆ ಅಂತಿಮ ಮೀಸಲಾತಿ ಪಟ್ಟಿ ಸಲ್ಲಿಸುವುದಾಗಿ ಹೇಳಿದೆ. ಹಾಗಾದರೆ ಸರ್ಕಾರ ಹೊಸ ಮೀಸಲಾತಿ ಪಟ್ಟಿ ಪ್ರಕಟಿಸುವುದು ಯಾವಾಗ? ಮತ್ತು ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪಣೆ ಸ್ವೀಕರಿಸುವುದು ಯಾವಾಗ?

ಎಂದು ಪ್ರಶ್ನಿಸಿದ ಶಾಸಕರು, ಈಗಾಗಲೇ ಪ್ರಕಟಿಸಿರುವ ಮೀಸಲಾತಿ ಪಟ್ಟಿಯು ಬಿಜೆಪಿ ಪ್ರಾಬಲ್ಯವಿರುವ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಮೀಸಲಾತಿ ಪ್ರಕಟಿಸಲಾಗಿದೆ. ಚುನಾವಣೆಯ ಕಾರಣಕ್ಕೆ ಗ್ರಾಮ ಪಂಚಾಯಿತಿ ಆಡಳಿತ ನಡೆಸುವ ಪ್ರದೇಶವನ್ನು ಪಾಲಿಕೆಯ ವಾರ್ಡ್‌ಗಳಾಗಿ ಮಾಡಿರುವುದು ಕಾನೂನು ಬಾಹಿರ ಎಂದು ಟೀಕಿಸಿದರು. 

Advertisement

ನಕ್ಷೆ ಅವೈಜ್ಞಾನಿಕ: ಇಂತಹ ವಾರ್ಡ್‌ ವ್ಯಾಪ್ತಿಯಲ್ಲಿ ಗ್ರಾಪಂ ಸದಸ್ಯರೂ ಆಡಳಿತ ಮಾಡುತ್ತಿದ್ದು, ಈ ವಾರ್ಡ್‌ಗಳ ವಿಂಗಡಣೆ ವೇಳೆ ನೀಡಲಾಗಿರುವ ನಕ್ಷೆ ಅವೈಜ್ಞಾನಿಕವಾಗಿದೆ. ಅಲ್ಲದೆ ಕಾನೂನಿನ ಪ್ರಕಾರ ಒಂದು ಬಾರಿ ಪುನರ್‌ ವಿಂಗಡಣೆ ಮಾಡಿದ ಬಳಿಕ ಹಿಂದೆ ಹೊರಡಿಸಲಾದ ಮೀಸಲಾತಿ ಲೆಕ್ಕಕ್ಕೆ ಬರುವುದಿಲ್ಲ.

ಉದಾಹರಣೆಗೆ ಪುನರ್‌ ವಿಂಗಡಣೆ ವೇಳೆ ಹಿಂದೆ ಇದ್ದ 1ನೇ ವಾರ್ಡಿನ ಬೌಂಡರಿ ಕಳೆದುಕೊಳ್ಳುವ ಜತೆಗೆ ತನ್ನ ವಿನ್ಯಾಸ ಬದಲಿಸಿಕೊಂಡು ಹಿಂದಿನ 4ನೇ ವಾರ್ಡ್‌ಗೆ ಸೇರಿದ ಪ್ರದೇಶವನ್ನು ಸೇರಿ ದೊಡ್ಡ ವಾರ್ಡ್‌ ಆಗುತ್ತದೆ. ಆದರೆ ಹಿಂದೆ ಇದ್ದ ಮೀಸಲಾತಿಯನ್ನು ಈ ಸಂದರ್ಭದಲ್ಲಿ ಪರಿಗಣಿಸಲು ಆಗುವುದಿಲ್ಲ ಎಂದು ಹೇಳಿದರು. 

ತುಳಿಯುವ ಪ್ರಯತ್ನ: ಹೊಸ ಮೀಸಲಾತಿ ಪಟ್ಟಿಯನ್ನು ಜನಸಂಖ್ಯೆ ಆಧಾರದ ಮೇಲೆ ನಿಗದಿಪಡಿಸಿದ್ದರೆ, ಪರಿಶಿಷ್ಟ ಜಾತಿಯವರು ಹೆಚ್ಚು ಮಂದಿ ವಾಸಿಸುವ ಅಶೋಕಪುರಂ ಪ್ರದೇಶವನ್ನು ಸಾಮಾನ್ಯ ವರ್ಗಕ್ಕೆ ನಿಗದಿಪಡಿಸುತ್ತಿರಲಿಲ್ಲ. ಪರಿಶಿಷ್ಟ ಪಂಗಡದವರು ವಾಸಿಸುವ ಕ್ಯಾತಮಾರನಹಳ್ಳಿಯನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು, ಬ್ರಾಹ್ಮಣ, ಒಕ್ಕಲಿಗರು ಇರುವ ಪ್ರದೇಶಕ್ಕೆ ಪರಿಶಿಷ್ಟ ಪಂಗಡ ಮಹಿಳೆಗೆ ನಿಗದಿಪಡಿಸಲಾಗಿದೆ.

ಆ ಮೂಲಕ ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗ ಸಮುದಾಯವನ್ನು ತುಳಿಯುವ ಪ್ರಯತ್ನವಾಗಿದೆ. ಇನ್ನು ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೀಗಿದ್ದರೂ ಕೆ.ಆರ್‌. ಕ್ಷೇತ್ರದ 19 ವಾರ್ಡ್‌ನಲ್ಲಿ 13 ಕ್ಷೇತ್ರವನ್ನು ಮಹಿಳೆಯರಿಗೆ ನೀಡುವ ಮೂಲಕ ತಾರತಮ್ಯ ಮಾಡಲಾಗಿದೆ.

ಶೇ.50 ರಂತೆ 9 ಸ್ಥಾನವನ್ನು ಮಹಿಳೆಯರಿಗೆ ನೀಡಬೇಕಿತ್ತು. ಈ ಎಲ್ಲಾ ನ್ಯೂನತೆಯ ವಿರುದ್ಧ ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಮಂಜುನಾಥ್‌, ರಾಜ್ಯ ಹೊಟೇಲ್‌ ಮಾಲಿಕರ ಸಂಘದ ಅಧ್ಯಕ್ಷ$ರಾಜೇಂದ್ರ, ಬಿಜೆಪಿ ವಕ್ತಾರ ಪ್ರಭಾಕರ್‌ ಸಿಂಧೆ ಇತರರು ಹಾಜರಿದ್ದರು. 

ಈಗಾಗಲೇ ಪ್ರಕಟಿಸಿರುವ ಮೀಸಲಾತಿ ಪಟ್ಟಿಯು ಬಿಜೆಪಿ ಪ್ರಾಬಲ್ಯವಿರುವ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಮೀಸಲಾತಿ ಪ್ರಕಟಿಸಲಾಗಿದೆ. ಚುನಾವಣೆಯ ಕಾರಣಕ್ಕೆ ಗ್ರಾಮ ಪಂಚಾಯಿತಿ ಆಡಳಿತ ನಡೆಸುವ ಪ್ರದೇಶವನ್ನು ಪಾಲಿಕೆಯ ವಾರ್ಡ್‌ಗಳಾಗಿ ಮಾಡಿರುವುದು ಕಾನೂನು ಬಾಹಿರ.
-ರಾಮದಾಸ್‌, ಶಾಸಕ

ಮುಖ್ಯಮಂತ್ರಿಗಳಿಗೆ ಪತ್ರ: ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ರಾಜಕೀಯ ದೃಷ್ಟಿಯಿಂದ ನೋಡದೆ, ಬಡವರ ಅನುಕೂಲಕ್ಕಾಗಿ ಈ ಯೋಜನೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವಂತೆ ಕೋರಿ ಶಾಸಕ ಎಸ್‌.ಎ.ರಾಮದಾಸ್‌ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. 

ಆಯುಷ್ಮಾನ್‌ ಭಾರತ್‌ ಯೋಜನೆ (ನಮೋ ಕೇರ್‌ ಅಥವಾ ಮೋದಿ ಕೇರ್‌) ದೇಶದ ಬಡವರಿಗೆ ಅಗತ್ಯ ಆರೋಗ್ಯ ರಕ್ಷಣೆಗಾಗಿ ಘೋಷಿಸಿದ್ದು, ಇದು ವಿಶ್ವದ ಅತಿದೊಡ್ಡ ರಾಜ್ಯ ಹಣಕಾಸು ಆರೋಗ್ಯ ಕಾರ್ಯಕ್ರಮವಾಗಿದೆ. ಸದರಿ ಯೋಜನೆಯಲ್ಲಿ ಬಡ ಕುಟುಂಬಕ್ಕೆ ತಮ್ಮ ಆರೋಗ್ಯ ರಕ್ಷಣೆಗೆ ವರ್ಷಕ್ಕೆ 5 ಲಕ್ಷ ರೂ.ಗಳವರೆಗೆ ನೆರವು ಪಡೆಯುವ ಸೌಲಭ್ಯವಿದ್ದು, ದೇಶದ ಬಹುತೇಕ ರಾಜ್ಯಗಳು ಇದಕ್ಕೆ ಒಪ್ಪಿಗೆ ನೀಡಿವೆ. 

ಆದರೆ ಹಿಂದಿನ ಕಾಂಗ್ರೆಸ್‌ ಸರ್ಕಾರ ಒಡಂಬಡಿಕೆಯಿಂದ ಹಿಂದೆ ಸರಿದಿತ್ತು. ಇದೀಗ ಪ್ರಸ್ತುತ ಸಮ್ಮಿಶ್ರ ಸರ್ಕಾರವು ಸಹ ಇದರಿಂದ ಹಿಂದೆ ಸರಿದಿರುವ ವಿಷಯ ತಿಳಿದಿದ್ದು, ಈ ಯೋಜನೆ ಪ್ರಧಾನಿ ನರೇಂದ್ರಮೋದಿ ಹೆಸರಿನಲ್ಲಿದೆ ಎಂಬ ಕಾರಣಕ್ಕೆ ತಮ್ಮ ಮಿತ್ರ ಪಕ್ಷಗಳು ಒತ್ತಡ ತರುತ್ತಿರುವಂತೆ ಕಾಡುತ್ತಿದೆ. ಹೀಗಾಗಿ ಸದರಿ ಯೋಜನೆಯನ್ನು ರಾಜಕೀಯಗೊಳಿಸದೆ ಬಡವರಿಗಾಗಿ ಒಡಂಬಡಿಕೆ ಮಾಡಿಕೊಳ್ಳಬೇಕು ಎಂದು ಶಾಸಕ ರಾಮದಾಸ್‌ ತಮ್ಮ ಪತ್ರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next