Advertisement
ಸಭೆಯಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, “ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡ ವಾರ್ಡ್‌ಗಳಾದ ಸಿದ್ದಾಪುರ, ವಿಶ್ವೇಶ್ವರಪುರ, ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್, ಚಿಕ್ಕಪೇಟೆ ವಾರ್ಡ್‌ಗಳ ನಿರ್ದಿಷ್ಟ ಪ್ರದೇಶಗಳನ್ನು ಸೀಲ್‌ಡೌನ್ ಮಾಡಬೇಕು. ಅಲ್ಲದೆ, ಪ್ರತಿ ವಾರ್ಡ್‌ಗೆ ಫೀವರ್ ಕ್ಲಿನಿಕ್ ಆರಂಭಿಸಬೇಕು (ಸದ್ಯ 31 ಕೇಂದ್ರಗಳಿವೆ). ಸಾಂಸ್ಥಿಕ ಕ್ವಾರೆಂಟೈನ್‌ಗೆ ಒಳಗಾಗಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳು ಇತರೆ ಸರ್ಕಾರಿ ಸಂಸ್ಥೆಗಳಲ್ಲಿ ಇರುವವರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
Related Articles
Advertisement
ವಿಕ್ಟೋರಿಯಾದಲ್ಲಿ ಸೋಂಕಿತರ ಪ್ರತಿಭಟನೆ: ಕೋವಿಡ್ 19 ಸೋಂಕಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಹಸಿವಾದರೂ ಊಟ ನೀಡುತ್ತಿಲ್ಲ. ಸರಿಯಾದ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ ಎಂದು ಆರೋಪಿಸಿ ಚಿಕಿತ್ಸೆ ಪಡೆಯುತ್ತಿರುವವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೂ ಮೊದಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕರ್ಮಕಾಂಡದ ವಿಡಿಯೋವನ್ನು ಕೋವಿಡ್ 19 ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ಸಿಬ್ಬಂದಿ ಅಲ್ಲಿನ ಇತರೆ ರೋಗಿಗಳು ತೋಡಿಕೊಂಡ ನೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಕೆ.ಆರ್.ಮಾರ್ಕೆಟ್ ಲಾಕ್‌ಡೌನ್ ಮಾಡಿ: ನಗರದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್. ಮಾರ್ಕೆಟ್ ಅನ್ನು ಇಲ್ಲಿನ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಲಾಕ್‌ಡೌನ್ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ನಗರದಲ್ಲಿ ಕೋವಿಡ್ 19 ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರದಲ್ಲಿ ಹೆಚ್ಚು ಸೋಂಕಿತರು ಕಾಣಿಸಿಕೊಳ್ಳುತ್ತಿರುವ ವಾರ್ಡ್ ಗಳು ಹಾಗೂ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲು ಪಾಲಿಕೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಈ ಮಧ್ಯೆ ಕೃಷ್ಣರಾಜೇಂದ್ರ ಮಾರುಕಟ್ಟೆ ಮರ್ಚೆಂಟ್ಸ್ ವೆಲ್‌ಫೇರ್ ಅಸೋಸಿಯೇ ಷನ್ ಸ್ವಯಂ ಪ್ರೇರಿತವಾಗಿ ಕೆ.ಆರ್. ಮಾರುಕಟ್ಟೆ ಲಾಕ್‌ಡೌನ್ ಮಾಡಲು ನಿರ್ಧರಿಸಿದ್ದು, ಈ ಸಂಬಂಧ ಅನುಮತಿ ನೀಡುವಂತೆ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಕೋವಿಡ್ 19 ಸೋಂಕಿಗೆ ಕಡಿವಾಣ ಹಾಕುವ ಉದ್ದೇಶದಿಂದ ಜುಲೈ 1ರ ವರೆಗೆ ಕೆ.ಆರ್. ಮಾರುಕಟ್ಟೆಯನ್ನು ಲಾಕ್‌ಡೌನ್ ಮಾಡಲು ಅವಕಾಶ ನೀಡಿ ಸಹಕರಿಸಬೇಕು ಎಂದು ಕೋರಲಾಗಿದೆ.
ಸಡಿಲಿಕೆ; ಕೋವಿಡ್ 19 ಹೆಚ್ಚಳಕ್ಕೆ ಕಾರಣ: ಕೋವಿಡ್ 19 ನಿಯಂತ್ರಣದಲ್ಲಿ ಸರ್ಕಾರದ ಯೋಜನೆಗಳೆಲ್ಲ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ. ಕೆಪಿಸಿಸಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕ್ವಾರಂಟೇನ್ ಬೀದಿಗಳಲ್ಲಿ ಬಿಗಿಬಂದೋಬಸ್ತ್ ಮಾಡಬೇಕು.ಕೋವಿಡ್ 19 ಸೋಂಕಿತ ವಾರ್ಡ್, ಬೀದಿಗಳೆಲ್ಲೆಲ್ಲ ಕಠಿಣ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ಸಚಿವರು ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದು ಬರೀ ಬಾಯಿಮಾತಿನಲ್ಲಿ ಹೇಳುವುದನ್ನು ಬಿಟ್ಟು ಹೇಳಿದ್ದನ್ನು ಕಾರ್ಯಗತ ಮಾಡಿ ತೋರಿಸಲಿ. ಲಾಕ್ ಡೌನ್ ಸಡಿಲಗೊಳಿಸಿದ್ದು, ಸೋಂಕು ಹೆಚ್ಚಳಕ್ಕೆ ಕಾರಣ ಎಂದು ಹೇಳಿದರು.
1,398ಕ್ಕೇರಿಕೆ: ನಗರದಲ್ಲಿ ಸೋಮವಾರ ಮತ್ತೆ 126 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿತರು 1,398 ಹಾಗೂ ಮೃತರ ಸಂಖ್ಯೆ 67ಕ್ಕೆ ಏರಿಕೆಯಾಗಿದ್ದು, ಇಡೀ ದಿನ ಗುಣಮುಖರಾದವರ ಸಂಖ್ಯೆ ಶೂನ್ಯ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿ ಗಳು ತಿಳಿಸಿದ್ದಾರೆ. ಸೋಮವಾರ ತೀವ್ರ ಉಸಿರಾಟ ತೊಂದರೆಯಿಂದ 7, ಸಂಪರ್ಕ ಪತ್ತೆ ಹಚ್ಚಲಾಗುತ್ತಿರುವ ಸೋಂಕಿತರು 51, ವಿಷಮ ಶೀತ ಜ್ವರ 35, ಸೋಂಕಿತರ ಸಂಪರ್ಕ 27 ಸೇರಿ 126 ಸೋಂಕಿತರು ದೃಢ ಪಡುವ ಮೂಲಕ ಸಮುದಾಯಕ್ಕೆ ಹರಡುವ ಭೀತಿ ಎದುರಾಗಿದೆ.
ಹಿಂದಿನ ರಸ್ತೆಗಳನ್ನೂ ಸೀಲ್‌ಡೌನ್ ಮಾಡಲಾಗುತ್ತದೆ. ಸೀಲ್‌ಡೌನ್ ಆದ ಪ್ರದೇಶದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿದ್ದರೆ ಆ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಬೆಂಗಳೂರು ಮಾತ್ರವಲ್ಲದೆ, ಯಾದಗಿರಿ, ಬಳ್ಳಾರಿ, ಕಲಬುರಗಿಯಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಬೆಂಗಳೂರಿನಲ್ಲಿ ಕೈಗೊಳ್ಳುತ್ತಿರುವ ರೀತಿಯ ಕ್ರಮಗಳನ್ನೇ ಇತರೆಡೆಯೂ ಕೈಗೊಳ್ಳಲಾಗುವುದು. -ಆರ್.ಅಶೋಕ್, ಕಂದಾಯ ಸಚಿವ