ಮಹಾನಗರ: ಮಂಗಳೂರಿನ ನಾಗರಿಕರ ಬಹುಬೇಡಿಕೆಯಾದ ವಾರ್ಡ್ ಕಮಿಟಿ ಪ್ರಕ್ರಿಯೆಗೆ ಮಹಾನಗರ ಪಾಲಿಕೆ ವೇಗ ನೀಡುತ್ತಿದ್ದು, ಫೆಬ್ರವರಿ ತಿಂಗಳಾಂತ್ಯಕ್ಕೆ ನಗರದಲ್ಲಿ ವಾರ್ಡ್ ಕಮಿಟಿ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ.
ವಾರ್ಡ್ ಕಮಿಟಿ ರಚನೆಗೆ ಈಗಾಗಲೇ 1,500ಕ್ಕೂ ಮಿಕ್ಕಿ ಅರ್ಜಿಗಳು ಬಂದಿದ್ದು, ಅವುಗಳ ವಾರ್ಡ್‌ವಾರು ವಿಲೇವಾರಿ ಪ್ರಕ್ರಿಯೆ ಸದ್ಯ ನಡೆಯುತ್ತಿದೆ. ಬಳಿಕ ಆಯ್ಕೆ ಸಮಿತಿ ರಚನೆ ಪೂರ್ತಿಗೊಂಡು ಪ್ರತೀ ವಾರ್ಡ್‌ಗೆ 10 ಮಂದಿಯಂತೆ 600 ಮಂದಿ ವಾರ್ಡ್ ಕಮಿಟಿ ಸದಸ್ಯರ ನೇಮಕ ನಡೆಯಬೇಕು. ಫೆಬ್ರವರಿ ತಿಂಗಳಾಂತ್ಯಕ್ಕೆ ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಮನಪಾ ಸಿದ್ಧತೆ ಮಾಡಿಕೊಳ್ಳುತ್ತಿದೆ.
ವಾರ್ಡ್ ಕಮಿಟಿ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಆಗ್ರಹಿಸಿ ಸಾರ್ವಜನಿಕರಿಂದ ಎಂಸಿಸಿ ಸಿವಿಕ್ ಗ್ರೂಫ್ ಆನ್‌ಲೈನ್ ಅಭಿಯಾನವನ್ನು ಈಗಾಗಲೇ ಆರಂಭಿಸಿದೆ. ನಗರದ 60 ವಾರ್ಡ್‌ಗಳಲ್ಲಿ ವಾರ್ಡ್ ಸಮಿತಿ ರಚನೆಗೆ ತತ್‌ಕ್ಷಣ ವೇಗ ನೀಡಬೇಕು ಎಂದು ಈಗಾಗಲೇ 513 ಮಂದಿ ಸಹಿ ಮಾಡಿದ್ದಾರೆ. 106 ಮಂದಿ ಈ ಕುರಿತು ಕಮೆಂಟ್ ಕೂಡ ಮಾಡಿದ್ದು, ಈ ಎಲ್ಲ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಇ-ಮೇಲ್ ಮೂಲಕ ರವಾನೆಯಾಗಲಿದೆ.
ಅರ್ಜಿ ಸಲ್ಲಿಕೆ ಪೂರ್ಣ :
ವಾರ್ಡ್ ಸಮಿತಿಗೆ ಮನಪಾ ಈಗಾಗಲೇ ಅರ್ಜಿ ಆಹ್ವಾನ ಮಾಡಿದ್ದು, ಡಿ. 4ಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸಾರ್ವಜನಿಕರಿಂದ 1,500ಕ್ಕೂ ಮಿಕ್ಕಿ ಅರ್ಜಿಗಳು ಸಲ್ಲಿಕೆಯಾಗಿದೆ. ಇದನ್ನು ಪರಿಶೀಲನೆ ಮಾಡಲು ಮನಪಾ “ಆಯ್ಕೆ ಸಮಿತಿ’ಯನ್ನು ರಚನೆ ಮಾಡಬೇಕಾಗಿತ್ತು. ಈ ಸಮಿತಿಯಲ್ಲಿ ನಗರದ ನಾಗರಿಕರು, ಪಾಲಿಕೆಯ ಹಿರಿಯ ಅಧಿಕಾರಿಗಳೂ ಇರುತ್ತಾರೆ. ಅವರು ಎಲ್ಲ ಅರ್ಜಿ ಪರಿಶೀಲನೆ ಮಾಡಿ ಪ್ರತೀ ವಾರ್ಡ್‌ಗೆ 10 ಮಂದಿಯಂತೆ 600 ವಾರ್ಡ್ ಕಮಿಟಿ ಸದಸ್ಯರನ್ನು ಅಂತಿಮ ಮಾಡು ತ್ತಾರೆ. ಆದರೆ ಪಾಲಿಕೆ ಇನ್ನೂ ಆಯ್ಕೆ ಸಮಿತಿ ಯನ್ನು ರಚನೆ ಮಾಡಿಲ್ಲ. ವಾರ್ಡ್ ಕಮಿಟಿಯ ಮುಂದುವರಿದ ಪ್ರಕ್ರಿಯೆಗಳು ವಿಳಂಬವಾಗುತ್ತಿರುವ ಬಗ್ಗೆ ಎಂಸಿಸಿ ಸಿವಿಕ್ ಗ್ರೂಫ್‌ನ ಸದಸ್ಯರು ಕೆಲವು ದಿನಗಳ ಹಿಂದೆ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಎಂಸಿಸಿ ಸಿವಿಕ್ ಗ್ರೂಫ್‌ನ ಸ್ಥಾಪಕ ನೈಜೆಲ್ ಅಲುºಕರ್ಕ್ ಈ ಬಗ್ಗೆ “ಉದಯವಾಣಿ ಸುದಿನ’ಕ್ಕೆ ಮಾಹಿತಿ ನೀಡಿ, ವಾರ್ಡ್ ಕಮಿಟಿ ಆಯ್ಕೆ ಸಮಿತಿ ಯಲ್ಲಿ 3 ಅಥವಾ 5 ಮಂದಿ ಹಿರಿಯ ಪಾಲಿಕೆ ಅಧಿಕಾರಿಗಳು ಇರುತ್ತಾರೆ. ಅವರು ವಾರ್ಡ್ ಕಮಿಟಿ ಅರ್ಜಿಗಳನ್ನು ಪರಿಶೀಲಿಸಿ, 600 ಅರ್ಜಿಗೆ ಸೀಮಿತಗೊಳಿಸುತ್ತಾರೆ. 600 ವಾರ್ಡ್ ಕಮಿಟಿ ಸದಸ್ಯರನ್ನು ಅಂತಿಮ ಗೊಳಿಸಿ, ಫೆ. 15ರೊಳಗೆ ವಾರ್ಡ್ ಕಮಿಟಿ ಅಸ್ತಿತ್ವಕ್ಕೆ ಬರಲಿದೆ ಎಂದು ಆಯುಕ್ತರು ನಮಗೆ ಭರವಸೆ ನೀಡಿದ್ದಾರೆ ಎನ್ನುತ್ತಾರೆ.
ಮನಪಾ ವ್ಯಾಪ್ತಿಯಲ್ಲಿ ವಾರ್ಡ್ ಕಮಿಟಿ ರಚನೆಗೆ ವೇಗ ನೀಡಲಾಗುವುದು. 1,500ಕ್ಕೂ ಮಿಕ್ಕಿ ಅರ್ಜಿಗಳು ಬಂದಿದ್ದು, ಅವುಗಳ ವಿಲೇವಾರಿ ಪ್ರಕ್ರಿಯೆ ನಡೆಯುತ್ತಿದೆ. ಒಂದು ತಿಂಗಳಿನಲ್ಲಿ ಎಲ್ಲ ರೀತಿಯ ಪ್ರಕ್ರಿಯೆ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ. ಪೆಬ್ರವರಿ ಅಂತ್ಯದೊಳಗೆ ವಾರ್ಡ್ ಕಮಿಟಿ ಕಾರ್ಯ ಆರಂಭವಾಗುವ ನಿರೀಕ್ಷೆ ಇದೆ.
-ಅಕ್ಷಯ್ ಶ್ರೀಧರ್, ಮನಪಾ ಆಯುಕ್ತ