Advertisement

PG: ವಾರಂಗಲ್‌ ಬಫೆಟ್‌, ಜ್ಞಾನೋದಯ ಹಾಗೂ 1/3

01:19 PM Feb 21, 2024 | Team Udayavani |

ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುವ ಅದೆಷ್ಟೋ ಯುವಕರಿಗೆ ಪಿಜಿ (ಪೇಯಿಂಗ್‌ ಗೆಸ್ಟ್‌)ಯೇ ಆಧಾರ. ನಾನಿದಿದ್ದು ಬಹಳ ಜಾತ್ಯಾತೀತ ಪಿಜಿ. ಮಾಲಕರ ಪತ್ನಿ ಮಾಲಕರು ಬೇರೆ ಬೇರೆ ಧರ್ಮದವರು ಹಾಗಾಗಿ ಗೋಡೆಯಲ್ಲಿ ಎಲ್ಲ ದೇವರುಗಳು ವಿಜೃಂಭಿಸುತ್ತಾರೆ. ಎದುರು ಒಂದು ವಿಶಾಲವಾದ ಕೆರೆ. ಚಿಕನ್‌ ಇಲ್ಲದ ಚಿಕನ್‌ ಸಾರು, ಪನ್ನೀರ್‌ ಇಲ್ಲದ ಪನ್ನೀರ್‌ಸಾರು ನಮ್ಮ ಪಿಜಿಯ ವಿಶೇಷತೆ.

Advertisement

ನನ್ನ ಕೊಠಡಿಯಲ್ಲಿ 3 ಬೆಡ್‌ಗಳು. 3ನೇ ವ್ಯಕ್ತಿ ಯಾವಾಗಲೂ ತೆಲುಗಿನವರು ಆಗಿರುತ್ತಿದ್ದರು. ಒಬ್ಬರು ಬಿಟ್ಟು ಹೋದರು ಹೊಸದಾಗಿ ಬರುವ ವ್ಯಕ್ತಿ ಕೂಡ ಆಂಧ್ರದವರೇ ಆಗಿರುತ್ತಿದ್ದರು. ಬಹುಶಃ ಇದು ಬೆಂಗಳೂರಿನ 1/3ರಷ್ಟು ಜನಸಂಖ್ಯೆ ತೆಲುಗಿನವರೇ ಎನ್ನುವುದರ ಸೂಚಕವೋ? ಗೊತ್ತಿಲ್ಲ. ಅದರಲ್ಲಿ ಒಬ್ಬ ಗೆಳೆಯ ವಾರಂಗಲ್‌ ಕಡೆಯವನು. ಯಾವಾಗಲೂ ಹೂಡಿಕೆ, ವ್ಯವಹಾರ, ಸ್ಟಾರ್ಟ್‌ ಅಪ್‌, ಬಿಸಿನೆಸ್‌ ಮೀಟ್‌ ಮುಂತಾದ ವಿಷಯಗಳನ್ನೇ ಮಾತನಾಡುವವನು. ಹಾಗಾಗಿ ಅವನಿಗೆ “ವಾರಂಗಲ್‌ ಬಫೆಟ್‌’ ಎಂದು ನಾನು ನಾಮಕರಣ ಮಾಡಿದ್ದೇ. ಇನ್ನೊಬ್ಬರು ಸಂಗೀತದಲ್ಲಿ ಆಸಕ್ತಿ ಉಳ್ಳವರು. ಮಧ್ಯರಾತ್ರಿಯವರೆಗೂ ನಡೆಯುವ ನಮ್ಮ ಮಾತುಕತೆಗಳ ಪ್ರಮುಖ ಆರೋಪಿಗಳು “ಐಟಿ ಮ್ಯಾನೇಜರ್‌ಗಳೇ.’ ಬಹುಶಃ ಈ ಐಟಿ ಮ್ಯಾನೇಜರ್‌ಗಳು ಸಮಾನತೆಯ ಹರಿಕಾರರು, ಅಸಮಾನತೆಯ ವಿಷಯದಲ್ಲಿ. ಕಚೇರಿಯಲ್ಲಿ ಗೆಳೆಯನಿಗೆ ನೀಡಿದ ಹಣ ಬರದೇ ಬೇಜಾರಿನಲ್ಲಿದ್ದಾಗ, ಕೇಳಲು ಮುಜುಗರ ಎಂದಾಗ ಗೆಳೆಯ ಸೂಚಿಸಿದ ಪರಿಹಾರ ಭಗವದ್ಗೀತೆ ಓದು ಎನ್ನುವುದು. ನಾನು ಇವನು ಭಗವದ್ಗೀತೆಗಿಂತಲೂ ದೊಡ್ಡ ಜ್ಞಾನೋದಯ ನೀಡಿದ ಎಂದು ಮಧ್ಯರಾತ್ರಿ 2ಕ್ಕೆ ನಕ್ಕಿದ್ದು ಇನ್ನೂ ನೆನಪು.

ಬೆಂಗಳೂರಿನ ಒಂದು ಪಿಜಿ ಎನ್ನುವುದು ವಿವಿಧತೆಯಲ್ಲಿ ಏಕತೆಯಾಗಿರುವ ಭಾರತದ ಪ್ರತಿನಿಧಿ, ಪ್ರತೀಕ. ಇಲ್ಲಿ ಎಲ್ಲ ರಾಜ್ಯದ ಜನರು ಕಾಣ ಸಿಗುತ್ತಾರೆ. ಎಲ್ಲ ಹವ್ಯಾಸದ ಜನರು ಗಿಟಾರ್‌, ಹಾರ್ಮೋನಿಯಂ, ಫಿಟ್ನೆಸ್‌ ಫ್ರೀಕ್‌, ಮದ್ಯದ ಅಮಾಲಿನವರು, ಸಿನೆಮಾ ರಸಿಕರು, ರಾಜಕೀಯ-ಕ್ರೀಡಾ ವಿಶ್ಲೇಷಕರು, ಸ್ಥಳೀಯ ಸುದ್ದಿ ವರದಿಗಾರರು. ಊಟದ ಸಮಯದಲ್ಲಿ ನಡೆಯುವ ನಮ್ಮ ಚರ್ಚೆಗಳು ಯಾವ ಟಿವಿ ಡಿಬೇಟ್‌ಗೂ ಕಮ್ಮಿ ಇಲ್ಲ. ಪಿಜಿ ಎಂದರೆ ಪೆಯಿಂಗ್‌ ಗೆಸ್ಟ್‌ ಮಾತ್ರವಲ್ಲ, ಪ್ಯೂರ್‌ ಗಾಸಿಪ್‌ ಕೂಡ ಹೌದು.

21 ವರ್ಷದ ವಿದ್ಯಾರ್ಥಿ ಜೀವನದಲ್ಲಿ ಕಾಣದಂತಹ ವೈವಿಧ್ಯಮಯ ವ್ಯಕ್ತಿತ್ವಗಳು 6 ತಿಂಗಳ ಪಿಜಿ ಅನುಭವದಲ್ಲಿ ಕಾಣಬಹುದು ಎಂದರೆ ಅತಿಶಯೋಕ್ತಿಯಾಗಲಾರದು. ಹೊಸ ಹೊಸ ಸ್ನೇಹಿತರನ್ನು ನೀಡಿ ಒಂದೇ ಮನೆಯ ನಿವಾಸಿಗಳಂತೆ ಭಾವನೆ ನೀಡಿದ್ದು ಸತ್ಯ, ಪಿಜಿ ನೀ ಧನ್ಯ.

-ಪ್ರಖ್ಯಾತ್‌

Advertisement

ಕೆಂಚನೂರು

Advertisement

Udayavani is now on Telegram. Click here to join our channel and stay updated with the latest news.

Next