ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳ ತುರ್ತು ಪರಿಹಾರಕ್ಕಾಗಿ ಆರು ಮೆಟ್ರೊ ನಗರಗಳಾದ ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್, ಕೋಲ್ಕತಾ ಮತ್ತು ಚೆನ್ನೈನ ವಿಮಾನ ನಿಲ್ದಾಣಗಳಲ್ಲಿ “ವಾರ್ ರೂಮ್’ಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದರು.
ಈ ಕುರಿತು ಟ್ವಿಟರ್(ಎಕ್ಸ್)ನಲ್ಲಿ ಮಾಹಿತಿ ಹಂಚಿಕೊಂಡ ಅವರು, “ಈ ನಗರಗಳ ವಿಮಾನ ನಿಲ್ದಾಣಗಳಲ್ಲಿ ದಿನದ 24 ಗಂಟೆಗಳು ಅಗತ್ಯ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಸಿಬ್ಬಂದಿ ಇರುವುದನ್ನು ಖಾತ್ರಿಪಡಿಸಲಾಗುವುದು’ ಎಂದರು.
“ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಗೆ ದಟ್ಟ ಮಂಜು ಸಾಕಷ್ಟು ಅಡ್ಡಿಯಾಗುತ್ತಿದೆ. ಇದು ನೂರಾರು ವಿಮಾನಗಳ ವಿಳಂಬ, ರದ್ದತಿಗೆ ಕಾರಣವಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಆಗುತ್ತಿರುವ ಅನಾನುಕೂಲತೆಯನ್ನು ತಗ್ಗಿಸಲು ಏರ್‌ಲೈನ್ಸ್‌ಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ’ ಎಂದರು.
“ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ರನ್‌ವೇ 29ಎಲ್ ಸಿಎಟಿ 3 ಸ್ಥಾನಮಾನ ಹೊಂದಿದ್ದು, ಇದನ್ನು ಮಂಗಳವಾರ ಕಾರ್ಯಾರಂಭಗೊಳಿಸಲಾಗಿದೆ. ದಟ್ಟವಾದ ಮಂಜಿನ ಸಂದರ್ಭಗಳಲ್ಲು ಸಹ ಟೇಕ್ ಆಫ್ ಮತ್ತು ಲ್ಯಾಂಡಿಂಗ್‌ಗೆ ಇದು ಸಹಕಾರಿಯಾಗಿದೆ’ ಎಂದೂ ಸಿಂಧಿಯಾ ವಿವರಿಸಿದರು.
ಇಂಡಿಗೋ, ಎಂಐಎಎಲ್‌ಗೆ ನೋಟಿಸ್
ವಿಮಾನ ನಿಲ್ದಾಣದ ಡಾಂಬರು ರಸ್ತೆ ಮೇಲೆ(ಟಾಮ್ಯಾಕ್) ಕುಳಿತು ಪ್ರಯಾಣಿಕರು ಭಾನುವಾರ ಆಹಾರ ಸೇವಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇಂಡಿಗೋ ಏರ್‌ಲೈನ್ಸ್ ಮತ್ತು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿ.(ಎಂಐಎಎಲ್)ಗೆ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೊ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಗೋವಾ-ದೆಹಲಿ ನಡುವಿನ ಇಂಡಿಗೋ ವಿಮಾನವು ಭಾನುವಾರ ತೀವ್ರ ವಿಳಂಬದ ನಂತರ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ತೀವ್ರ ಹಸಿವಿನಿಂದ ಕಂಗಾಲಾಗಿದ್ದ ಪ್ರಯಾಣಿಕರು, ವಿಮಾನದ ಹೊರಗೆ ಬರುತ್ತಿದ್ದಂತೆ ಅಲ್ಲೇ ಕುಳಿತು ಆಹಾರ ಸೇವಿಸಿದ್ದರು.