Advertisement
ಜಾರ್ಜ್ ಫ್ಲಾಯ್ಡ ಸಾವಿನ ಬಳಿಕ ಮೇ 25ರಿಂದ ಅಮೆರಿಕದಲ್ಲಿ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಯ ಪರಿಣಾಮವಿದು. ಪ್ರತಿಭಟನೆಯನ್ನು ನಿಯಂತ್ರಣಕ್ಕೆ ತರುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ಕೊಟ್ಟ ಬೆನ್ನಲ್ಲೇ ಮಿನ್ನಿಯಾಪೊಲೀಸ್, ಲಾಸ್ ಎಂಜಲೀಸ್ ಮತ್ತಿತರ ನಗರಗಳಲ್ಲಿ ನ್ಯಾಷನಲ್ ಗಾರ್ಡ್ ಸಿಬ್ಬಂದಿ ಮೂಲಕ ವಿಶೇಷ ಭದ್ರತೆ ಒದಗಿಸಲಾಗಿದೆ. ಈ ನಡುವೆ ನ್ಯೂಯಾರ್ಕ್ ನಗರದಲ್ಲಿ ಪ್ರತಿಭಟನಾ ಕಾರರು ಮತ್ತು ಪೊಲೀಸರ ನಡುವಿನ ಸಂಘರ್ಷ ಮುಂದುವರಿದಿದೆ. ಮಂಗಳವಾರ ಸಂಜೆ ಕೂಡ ಸಾವಿರಾರು ಪ್ರತಿಭಟನಾಕಾರರು ಫ್ಲಾಯ್ಡ ಹತ್ಯೆ ಖಂಡಿಸಿ ಬೀದಿಗಿಳಿದರು. ವಿಶೇಷ ಭದ್ರತೆ ನಡುವೆಯೂ ಲಾಸ್ ಎಂಜಲೀಸ್, ಫಿಲಡೆಲ್ಫಿಯಾ, ಅಟ್ಲಾಂಟ ಮತ್ತು ಸೀಟೆಲ್ ನಗರಗಳಲ್ಲಿ ದೊಡ್ಡ ಮಟ್ಟದ ಜಾಥಾ ಮತ್ತು ಪ್ರತಿಭಟನಾ ರ್ಯಾಲಿಗಳು ನಡೆದವು. ಯುಎಸ್ ಕ್ಯಾಪಿಟಲ್ ಕಟ್ಟಡದ ಎದುರು ಸೇರಿದ ಪ್ರತಿಭಟನಾಕಾರರು, ರಾತ್ರಿಯಾದರೂ ಅಲ್ಲಿಂದ ಕದಲಲಿಲ್ಲ. ನ್ಯಾಷನಲ್ ಗಾರ್ಡ್ ಮಾತ್ರವಲ್ಲ ಟ್ರಂಪ್ ಹೇಳಿದಂತೆ ಅಮೆರಿಕದ ಸೇನೆಯನ್ನೇ ಕರೆತಂದರೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಆಡಳಿತಕ್ಕೆ ಸಂದೇಶ ರವಾನಿಸಿದರು.
ಫ್ಲಾಯ್ಡ ಹತ್ಯೆ ಖಂಡಿಸಿ ಪ್ರತಿಭಟಿಸುತ್ತಿದ್ದ 70ಕ್ಕೂ ಅಧಿಕ ಪ್ರತಿಭಟನಾಕಾರರಿಗೆ ತನ್ನ ಮನೆಯಲ್ಲಿ ಆಶ್ರಯ ನೀಡುವ ಮೂಲಕ ಭಾರತ ಮೂಲದ ಅಮೆರಿಕ ಪ್ರಜೆಯೊಬ್ಬರು ಪ್ರತಿಭಟನಕಾರರ ಪಾಲಿಗೆ ಹೀರೋ ಆಗಿ ಹೊರಹೊಮ್ಮಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಂಡು ಬಂದ ಪ್ರತಿಭಟನಾಕಾರರಿಗೆ ರಾಹುಲ್ ದುಬೆ ಎಂಬವರು ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.