Advertisement

Waqf Report: 150 ಕೋ.ರೂ.ಆಮಿಷ; ಸದನದಲ್ಲಿ ಪ್ರಸ್ತಾವ ಸಾಧ್ಯತೆ: ಗೃಹ ಸಚಿವ ಪರಮೇಶ್ವರ್‌

03:01 AM Dec 16, 2024 | Team Udayavani |

ಬೆಂಗಳೂರು: ವಕ್ಫ್ ಆಸ್ತಿ ಕಬಳಿಕೆಗೆ ಬಗ್ಗೆ ಮೌನ ವಹಿಸಲು ಬಿ.ವೈ. ವಿಜಯೇಂದ್ರ 150 ಕೋಟಿ ರೂ. ಆಮಿಷವೊಡ್ಡಿದ್ದರು ಎಂಬ ವಿಚಾರ ಸದನದಲ್ಲಿ ಪ್ರಸ್ತಾವ ಆಗುವ ಸಾಧ್ಯತೆ ಯಿದೆ ಎಂದು ಗೃಹಸಚಿವ ಡಾ| ಜಿ. ಪರಮೇಶ್ವರ್‌ ಸುದ್ದಿಗಾರರ ಜತೆ ಹೇಳಿದರು.

Advertisement

ಅಲ್ಪಸಂಖ್ಯಾಕರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಆರಂಭದಲ್ಲಿ ಯಾವ ರೀತಿ ಹೇಳಿಕೆ ನೀಡಿದ್ದರು ಎಂಬುದು ಕಣ್ಣೆದುರಿಗಿದೆ. ಆದರೀಗ ಮಾತು ತಿರುಚಿರುವುದು ಸ್ಪಷ್ಟವಾಗುತ್ತಿದೆ. ಬಿ.ವೈ. ವಿಜಯೇಂದ್ರ ನನಗೆ 150 ಕೋ. ರೂ. ನೀಡಲು ಬಂದಿದ್ದರು ಎಂದು ಅನ್ವರ್‌ ಹೇಳಿರುವ ವೀಡಿಯೋ
ಗಳಿವೆ. ಈಗ ಮಾತು ಬದಲಾಯಿಸುತ್ತಿದ್ದಾರೆ ಎಂದರು.

ಕೋವಿಡ್‌ ಅವಧಿಯ ಅವ್ಯವಹಾರ ನಿಜ
ಕೋವಿಡ್‌-19 ಕಾಲಘಟದಲ್ಲಿ ಅವ್ಯವಹಾರ ಆಗಿರುವುದು ನಿಜ. ನಾವು ಅದನ್ನು ಹೇಳಿಲ್ಲ. ಅವ್ಯವಹಾರವಾಗಿರುವುದರಿಂದ ನ್ಯಾಯಮೂರ್ತಿ ಮೈಕಲ್‌ ಡಿ’ಕುನ್ಹಾ ಸಮಿತಿಯು ಪ್ರತಿಯೊಂದನ್ನು ಬಹಳ ಆಳವಾಗಿ ಬಿಚ್ಚಿಟ್ಟಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಸುದ್ದಿಗಾರರ ಜತೆ ಹೇಳಿದ್ದಾರೆ.

ಮಾಸ್ಕ್, ಪಿಪಿಇ ಕಿಟ್‌, ಔಷಧ ಖರೀದಿ ಸೇರಿದಂತೆ ಎಲ್ಲವನ್ನೂ ಪ್ರತ್ಯೇಕವಾಗಿ ಅಧ್ಯಯನ ಮಾಡಿ ಹಗರಣವನ್ನು ಪತ್ತೆ ಹಚ್ಚಿದೆ. ಸಂಬಂಧಪಟ್ಟ ಇಲಾಖೆಯವರು ಎಫ್ಐಆರ್‌ ಹಾಕಿದ್ದಾರೆ ಎಂದರು. ತನಿಖೆ ಮಾಡಿ ಸರಕಾರ ಏನು ತೀರ್ಮಾನ ತೆಗೆದುಕೊಳ್ಳಬೇಕು ಅದನ್ನು ಮಾಡುತ್ತದೆ. ಸಾವಿರಾರು ಕೋಟಿ ರೂ. ಹಗರಣವಾಗಿದೆ. ಅಧಿಕಾರಿಗಳ ಹೆಸರು ಆರಂಭದಲ್ಲಿದೆ. ತನಿಖೆಯಲ್ಲಿ ರಾಜಕಾರಣಿಗಳ ಹೆಸರು ಬಂದರೆ, ಖರೀದಿ ವ್ಯವಹಾರಕ್ಕೆ ಸೂಚನೆ ನೀಡಿದ್ದರೆ ಅಥವಾ ನೇರವಾಗಿ ಭಾಗಿಯಾಗಿದ್ದರೆ ಅವರ ವಿರುದ್ಧವೂ ಕ್ರಮ ಜರಗಿಸಲಾಗುವುದು ಎಂದು ಪರಮೇಶ್ವರ್‌ ಹೇಳಿದರು.

150 ಕೋಟಿ ರೂ. ಆಮಿಷ ಬಗ್ಗೆ ಸಿಬಿಐ, ಇ.ಡಿ. ತನಿಖೆ ಏಕಿಲ್ಲ: ಕೃಷ್ಣ ಭೈರೇಗೌಡ
ಕೋಲಾರ: ವಕ್ಫ್ ವಿಚಾರ ಮಾತನಾಡದಂತೆ ಒತ್ತಡ ಹೇರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 150 ಕೋಟಿ ರೂ. ಆಮಿಷವೊಡ್ಡಿದ್ದರು ಎಂದು ಅನ್ವರ್‌ ಮಾಣಿಪ್ಪಾಡಿ ಆರೋಪಿಸಿದ್ದು, ಸಿಬಿಐ, ಇ.ಡಿ. ಏನು ಮಾಡುತ್ತಿವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಪ್ರಶ್ನಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಶಾಸಕ ಬಸನಗೌಡ ಯತ್ನಾಳ ಅವರೂ ಇದೇ ವಿಚಾರವನ್ನು ಬೇರೆ ರೀತಿ ಹೇಳಿದ್ದಾರೆ. ಹೀಗಾಗಿ ಸಿಬಿಐ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.ಸುಳ್ಳು ಆರೋಪಗಳಿಗೆಲ್ಲ ಇ.ಡಿ., ಸಿಬಿಐ ಕಾಂಗ್ರೆಸ್‌ ಮುಖಂಡರಿಗೆ ನೋಟಿಸ್‌ ನೀಡುತ್ತಿವೆ. ಬಿಜೆಪಿ ಮುಖಂಡರ ಮೇಲೆ ಇಷ್ಟೆಲ್ಲ ಆರೋಪವಿರುವಾಗ ಏಕೆ ಸುಮ್ಮನೆ ಕುಳಿತಿವೆ? ಇ.ಡಿ., ಸಿಬಿಐ ಇರುವುದು ಕಾಂಗ್ರೆಸ್‌ ವಿರುದ್ಧ ತನಿಖೆ ಮಾತ್ರವೇ? ಎಂದು ಪ್ರಶ್ನಿಸಿದರು.

ಮಾಣಿಪ್ಪಾಡಿ ದ್ವಿಪಾತ್ರಾಭಿನಯ ಮಾಡುತ್ತಿದ್ದಾರೆಯೇ?: ಸಚಿವ ಪ್ರಿಯಾಂಕ ಖರ್ಗೆ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೇಲಿನ ಆರೋಪ ಸುಳ್ಳು ಎನ್ನುತ್ತಿರುವ ಅಲ್ಪಸಂಖ್ಯಾಕರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ದ್ವಿಪಾತ್ರಭಿನಯ ಮಾಡುತ್ತಿದ್ದಾರೆಯೇ? ಎಂದು ಸಚಿವ ಪ್ರಿಯಾಂಕ ಖರ್ಗೆ ಟೀಕಿಸಿದ್ದಾರೆ.

ಈ ಕುರಿತು ಎಕ್ಸ್‌’ ಸಾಮಾಜಿಕ ಜಾಲದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಸಚಿವರು, ವಕ್ಫ್ ವರದಿಯನ್ನು ಮುಚ್ಚಿಹಾಕಲು ಬಿವೈವಿ ಕೋಟಿ ಆಮಿಷ ಒಡ್ಡಿದ್ದಾರೆ ಎಂದು ಘಂಟಾಘೋಷವಾಗಿ ಹೇಳಿದ್ದ  ಮಾಣಿಪ್ಪಾಡಿ ಈಗ ಅಧ್ಯಕ್ಷ ವಿಜಯೇಂದ್ರರ ರಕ್ಷಣೆಗಾಗಿ ಮಾತು ಬದಲಿಸಲು ಎಷ್ಟು ಆಮಿಷ ಬಂದಿದೆ? ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ ನಾಯಕರ ಹೆಸರನ್ನು ಬಹಿರಂಗಪಡಿಸುವ ಬದಲು ವಿಜಯೇಂದ್ರ ಹೆಸರನ್ನು ಮಾತ್ರ ಏಕೆ ಹೇಳಿದರು? ಈ ಕುರಿತು ಪ್ರಧಾನಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ ಎಂದಿ ದ್ದರು. ಆ ಪತ್ರವನ್ನು ಈಗ ಬಹಿರಂಗಪಡಿಸಲಿ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರ ಮೇಲಿನ ಆರೋಪ ಪೂರ್ಣ ಸುಳ್ಳು
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಮೇಲೆ ಮಾಡಿರುವ ಆರೋಪಗಳು ಪೂರ್ಣ ಸುಳ್ಳು ಮತ್ತು ನಿರಾಧಾರವಾಗಿವೆ. ಅಲ್ಪಸಂಖ್ಯಾಕ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಹೇಳಿಕೆ ಪ್ರಕಾರ, ವಿಜಯೇಂದ್ರ ಅವರು ಯಾವುದೇ ಹಣದ ಬೇಡಿಕೆ ಇಟ್ಟಿಲ್ಲ ಎಂದು ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅವರು, ಹಿಂದಿನ ನಿಮ್ಮ ಸರಕಾರದ ಕಾಲದಲ್ಲೇ ಈ ಪ್ರಕರಣವನ್ನು ಸಮರ್ಥವಾಗಿ ಮುಚ್ಚಿಹಾಕಲು ಕಾಂಗ್ರೆಸ್‌ನ ಕೆಲವರು ಕೋಟಿಗಟ್ಟಲೆ ಲಂಚ ನೀಡಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪಗಳು ಬಂದಿವೆ. ನೀವು ಯಾವ ರೀತಿ ಸತ್ಯವನ್ನು ವಕ್ರ ಮಾಡಿ, ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಯತ್ನಿಸುತ್ತೀರೋ ಅದು ಎಲ್ಲರಿಗೂ ಚೆನ್ನಾಗಿ ಗೊತ್ತಾಗಿದೆ. ನೀವು ಹಿಟ್‌ ಆ್ಯಂಡ್‌ ರನ್‌ ರಾಜಕಾರಣವನ್ನು ಬಿಡಿ. ಇದು ನಿಮಗೆ ಶೋಭೆ ತರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ತಾಕೀತು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next