Advertisement

Waqf Property: ಭೂಗಳ್ಳರಿಗೆ ರಕ್ಷಣೆ ಕೊಟ್ಟರೆ ಬೆಲೆ ತೆರಬೇಕಾದೀತು: ಎಚ್‌.ಡಿ.ಕುಮಾರಸ್ವಾಮಿ

02:12 AM Oct 30, 2024 | Team Udayavani |

ಬೆಂಗಳೂರು: ಯಾರನ್ನೋ ಓಲೈಸಲು ಸರಕಾರದ ಆಸ್ತಿ ಲೂಟಿ ಹೊಡೆಯುವವರಿಗೆ ರಕ್ಷಣೆ ಕೊಟ್ಟರೆ ಮುಂದೆ ದೊಡ್ಡ ಬೆಲೆ ತೆರಬೇಕಾದೀತು ಎಂದು ರಾಜ್ಯ ಸರಕಾರಕ್ಕೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

Advertisement

ವಿಜಯಪುರ, ಧಾರವಾಡದ ರೈತರ ಜಮೀನಿಗೆ ವಕ್ಫ್ ಬೋರ್ಡ್‌ ನೀಡಿರುವ ನೋಟಿಸ್‌ಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರಕಾರ ಕ್ಯಾಬಿನೆಟ್‌ನಲ್ಲಿ ವಕ್ಫ್  ಸಂಬಂಧಿಸಿದಂತೆ ಚರ್ಚೆ ಆಗಿದೆ. ವಕ್ಫ್ ಬಗ್ಗೆ ಚರ್ಚೆ ಆಗಬೇಕೆಂದು ಕೇಂದ್ರದಲ್ಲಿ ತೀರ್ಮಾನವಾಗಿದೆ. ರಾಜ್ಯದ ರೈತರು ಭಯಭೀತರಾಗಿದ್ದಾರೆ. ಮೊನ್ನೆ ವಿಜಯಪುರ ಆಯ್ತು, ನಿನ್ನೆ ಧಾರವಾಡದಲ್ಲಿ ಇದೇ ಸಮಸ್ಯೆ ಆಗಿದೆ ಎಂದರು.

ಕಾಂಗ್ರೆಸ್‌ ನಾಯಕರ ಎಲ್ಲ ಹೇಳಿಕೆಗಳ ನೋಟ್‌ ಮಾಡಿ ಇಟ್ಟುಕೊಂಡಿದ್ದೇನೆ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ದೇವೇಗೌಡರು ಮತ್ತು ನನ್ನ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಟೀಕೆ ಮಾಡುತ್ತಿರುವ “ಕೈ’ ಮುಖಂಡರಿಗೆ ಚುನಾವಣೆ ಫ‌ಲಿತಾಂಶ ಬಂದ ನಂತರ ಉತ್ತರ ನೀಡುತ್ತೇನೆ. ಅವರ ಹೇಳಿಕೆಗಳನೆಲ್ಲ ನೋಟ್‌ ಮಾಡಿ ಇಟ್ಟುಕೊಂಡಿದ್ದೇನೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಮ್ಮ ಕುಟುಂಬದ ಬಗ್ಗೆ ಕೆಲವು ಕಾಂಗ್ರೆಸ್‌ ನಾಯಕರು ಅತ್ಯಂತ ತುತ್ಛವಾಗಿ ಮಾತನಾಡುತ್ತಿದ್ದಾರೆ. ಈ ದೇಶಕ್ಕೆ ಪ್ರಧಾನಿ ಆಗಿದ್ದ ದೇವೇಗೌಡರು ವ್ಹೀಲ್‌ ಚೇರ್‌ನಲ್ಲಿ, ಆ್ಯಂಬುಲೆನ್ಸ್‌ನಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂದು ಹೀನಾಯವಾಗಿ ಟೀಕೆ ಮಾಡುತ್ತಿದ್ದಾರೆ. ಅವರ ಸಾವನ್ನು ಕಾಂಗ್ರೆಸ್‌ ನಾಯಕರು ಬಯಸುತ್ತಿದ್ದಾರೆ. ನಾನು ಈಗ ಏನನ್ನೂ ಮಾತನಾಡುವುದಿಲ್ಲ ಎಂದು ತಿಳಿಸಿದರು.

ಅವರೊಬ್ಬರೇ ಒಕ್ಕಲಿಗರಾ:
ನನ್ನ ಮೇಲೆಯೂ ಹಲವಾರು ಆಪಾದನೆಗಳನ್ನು ವೈಯಕ್ತಿಕ ನೆಲೆಗಟ್ಟಿನಲ್ಲಿ ಮಾಡಿದ್ದಾರೆ. ಅವರು ಒಬ್ಬರೇ ಒಕ್ಕಲಿಗರಾ?. ನಾವೂ ಒಕ್ಕಲಿಗರೇ ಎಂದು ಚರ್ಚೆ ಮಾಡುತ್ತಿದ್ದಾರೆ. ಎಲ್ಲವನ್ನೂ ನೋಟ್‌ ಮಾಡಿಕೊಂಡಿದ್ದೇನೆ. ಫಲಿತಾಂಶದ ನಂತರ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುತ್ತೇನೆ. ನ.13ರಂದು ಚುನಾವಣೆ ನಡೆಯಲಿದೆ. ನ 23 ರಂದು ಫಲಿತಾಂಶ ಹೊರಬರಲಿದೆ. ಆ ನಂತರ ಆ ಎಲ್ಲಾ ಹೇಳಿಕೆಗಳಿಗೆ ಉತ್ತರ ಕೊಡುತ್ತೇನೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next