Advertisement

Waqf Property: ಬೊಮ್ಮಾಯಿ ಕಾಲದಲ್ಲೂ ವಕ್ಫ್ ಆಸ್ತಿ ತೆರವಿಗೆ ಹೇಳಿದ್ರು: ಸಚಿವ ಜಮೀರ್‌

01:32 AM Nov 04, 2024 | Esha Prasanna |

ವಿಜಯಪುರ: ಮುಜರಾಯಿ ಆಸ್ತಿ ಇರಲಿ, ವಕ್ಫ್ ಆಸ್ತಿ ಇರಲಿ, ಅದನ್ನು ನಾವು ಉಳಿಸಿಕೊಳ್ಳಬೇಕು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಒತ್ತುವರಿಯಾದ ವಕ್ಫ್ ಆಸ್ತಿ ತೆರವು ಮಾಡಲು ತಿಳಿಸಿದ್ದರು. ಅದು ಅಲ್ಲಾನ ಆಸ್ತಿ, ನಾವು ಅಲ್ಲಾನಿಗೆ ಉತ್ತರ ಹೇಳಬೇಕಾಗುತ್ತದೆ ಎಂದಿದ್ದರು ಎಂದು ಬೊಮ್ಮಾಯಿ ಹೇಳಿಕೆಯ ಹಳೇ ವೀಡಿಯೋ ತುಣುಕನ್ನು ವಕ್ಫ್ ಮತ್ತು ವಸತಿ ಇಲಾಖೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಪ್ರದರ್ಶಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಆಸ್ತಿಯನ್ನು ದೇವರ ಆಸ್ತಿ, ವಕ್ಫ್ ವ್ಯಾಪ್ತಿಯಲ್ಲಿರುವ ಆಸ್ತಿಯನ್ನು ಅಲ್ಲಾನ ಆಸ್ತಿ ಎನ್ನುತ್ತೇವೆ. ಮುಜರಾಯಿ ಇಲಾಖೆಯ 36,000 ಎಕರೆ ಪೈಕಿ 800 ಎಕರೆ ಒತ್ತುವರಿಯಾಗಿದೆ. ವಕ್ಫ್ನಲ್ಲಿ 1.12 ಲಕ್ಷ ಎಕರೆ ದಾನಿಗಳು ನೀಡಿದ ಆಸ್ತಿ ಇದೆ. ಇದರಲ್ಲಿ 84 ಸಾವಿರ ಎಕರೆ ಒತ್ತುವರಿಯಾಗಿದ್ದು, ಈಗ ಬರೀ 23 ಸಾವಿರ ಎಕರೆ ಮಾತ್ರ ಉಳಿದಿದೆ. ಇದನ್ನಾದರೂ ನಾವು ಉಳಿಸಿಕೊಳ್ಳಬೇಕಿದೆ ಎಂದರು.

ವಕ್ಫ್ ನೋಟಿಸ್‌ ಕೊಡುವ ಪದ್ಧತಿ ಮೊದಲಿನಿಂದಲೂ ಇದೆ. 2008ರಿಂದ 2013 ಮತ್ತು 2019ರಿಂದ 2023ರ ಬಿಜೆಪಿ ಸರ್ಕಾರದಲ್ಲೂ ನೋಟಿಸ್‌ ಕೊಡಲಾಗಿದೆ. ಬಿಜೆಪಿಯವರ ಕಾಲದಲ್ಲಿ ನೂರಾರಲ್ಲ, ಸಾವಿರಾರು ನೋಟಿಸ್‌ಗಳು ಜಾರಿಯಾಗಿವೆ. ವಿಜಯಪುರ ಜಿಲ್ಲೆಯಲ್ಲಿ 14 ಸಾವಿರಕ್ಕೂ ಅಧಿಕ ಎಕರೆ ವಕ್ಫ್ ಜಾಗದಲ್ಲಿ ಈಗ 700 ಎಕರೆ ಮಾತ್ರ ಉಳಿದಿದೆ. ನಾನು ಎಲ್ಲ ಕಡೆ ವಕ್ಫ್ ಅದಾಲತ್‌ ಮಾಡಿ ಅದನ್ನು ಸರಿಪಡಿಸಲು ಹೊರಟಿದ್ದೇನೆ ಅಷ್ಟೇ ಎಂದರು.

ಮುಸ್ಲಿಮರಿಂದಲೇ ಶೇ. 90 ವಕ್ಫ್ ಆಸ್ತಿ ಒತ್ತುವರಿ: ಸಚಿವ ಜಮೀರ್‌
ವಿಜಯಪುರ: ವಕ್ಫ್ ಆಸ್ತಿಯ ಪೈಕಿ ಶೇ. 90ರಷ್ಟು ಮುಸ್ಲಿಮರಿಂದಲೇ ಒತ್ತುವರಿಯಾಗಿದೆ. ದಾನಿಗಳು ಮಜಾ ಮಾಡಿ ಅಂತಾ ದಾನ ಮಾಡಿಲ್ಲ. ಸಮಾಜಕ್ಕೆ ಒಳ್ಳೆದಾಗಲಿ ಎಂದು ಕೊಟ್ಟಿರುವುದು. ಒತ್ತುವರಿ ತೆರವು ಮಾಡಿ ದಾಖಲೆ ಸರಿ ಮಾಡುತ್ತಿದ್ದೇವೆ. ಇದನ್ನೆಲ್ಲ ಮುಂಚೆಯೇ ಮಾಡಬೇಕಿತ್ತು. ಈಗ ನನ್ನ ಕಾಲದಲ್ಲಾದರೂ ಆಗಲಿ ಎಂದು ಮಾಡುತ್ತಿದ್ದೇನೆ ಎಂದು ವಕ್ಫ್ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿ, ಖಾಸಗಿಯವರು ವಕ್ಫ್ ಆಸ್ತಿ ಒತ್ತುವರಿ ಮಾಡಿದ್ದರೆ ಅದನ್ನು ತೆರವು ಮಾಡುತ್ತೇವೆ. ರೈತರಿಗೆ ನೋಟಿಸ್‌ ಕೊಟ್ಟಿದ್ದರೆ ಹಿಂಪಡೆಯುತ್ತೇವೆ. ಸಿಎಂ ಸಿದ್ದರಾಮಯ್ಯ ಸಹ ನೋಟಿಸ್‌ ವಾಪಸ್‌ ಪಡೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅಧಿಕಾರಿಗಳಿಗೂ ಸೂಚಿಸಿ ದ್ದಾರೆ. ಈ ಬಗ್ಗೆ ಯಾವ ರೈತರೂ ಆತಂಕ ಪಡುವ ಅಗತ್ಯವಿಲ್ಲ. ನಾವು ರೈತರಿಗೆ ತೊಂದರೆ ಕೊಡುವುದಿಲ್ಲ. ಅಲ್ಲದೇ, ವಕ್ಫ್ನಲ್ಲಿ ಸರಕಾರದ ಜಾಗವಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ವಕ್ಫ್ ಗೆಜೆಟ್‌ ನೋಟಿಫಿಕೇಶನ್‌; ಬಿಜೆಪಿ ಪಾತ್ರವೂ ಇದೆ: ಎಚ್‌ಕೆಪಿ  
ಹುಬ್ಬಳ್ಳಿ: ವಕ್ಫ್ ಗೆಜೆಟ್‌ ನೋಟಿಫಿಕೇಶನ್‌ ಮಾಡಿರುವವರಲ್ಲಿ ಬಿಜೆಪಿಯ ದೊಡ್ಡ ಪಾತ್ರವಿದೆ. ನೋಟಿಸ್‌ ಕೊಟ್ಟು ನೋಂದಣಿ ಮಾಡಿಸಲು ಹೇಳಿದ್ದರಲ್ಲಿ ಅವರ ಪಾಲಿದೆ. ಈಗ ನಾಟಕ ಮಾಡುತ್ತಿದ್ದಾರೆ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ವಕ್ಫ್  ವಿಚಾರವಾಗಿ ಮೊದಲು ಪತ್ರ ಬರೆದಿದ್ದು ಬಿಜೆಪಿಯವರು. ಇದೀಗ ಚುನಾವಣೆ ಇದೆ ಎಂದು ಕಪಟ ರಾಜಕೀಯ ನಾಟಕ ಮಾಡುತ್ತಿದ್ದಾರೆ. ಜನರ ದಾರಿ ತಪ್ಪಿಸುತ್ತಿದ್ದಾರೆ. ಕೇವಲ ಹಿಂದೂ ರೈತರಿಗೆ ನೋಟಿಸ್‌ ನೀಡಿಲ್ಲ. ಹಾವೇರಿಯಲ್ಲಿ 555 ಪ್ರಕರಣಗಳಲ್ಲಿ 485 ಮುಸ್ಲಿಂ ರೈತರ ಜಮೀನಿಗೂ ನೋಟಿಸ್‌ ಕೊಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next