Advertisement

Waqf Property: ಶಾಸಕ ಯತ್ನಾಳ್‌ ಆಕ್ರೋಶ ಬೆನ್ನಲ್ಲೇ ಬಿಜೆಪಿ ‘ವಕ್ಫ್ ತಂಡ’ ಪುನಾರಚನೆ

09:33 PM Oct 28, 2024 | Esha Prasanna |

ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಮಂಡಳಿಯು ಆಸ್ತಿ ವಶಕ್ಕಾಗಿ ರೈತರಿಗೆ ನೋಟಿಸ್‌ ನೀಡಿರುವ ಸಂಬಂಧ ಅಲ್ಲಿಗೆ ಭೇಟಿ ನೀಡಿ ನೊಂದ ರೈತರ ಅಹವಾಲು ಆಲಿಸುವ ಬಿಜೆಪಿ ತಂಡದ ಬಗ್ಗೆ ಅದೇ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ರೋಶ ಹೊರಹಾಕಿದ ಬೆನ್ನಲ್ಲೇ, ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ರಚಿಸಿದ್ದ ತಂಡವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ  ಪುನಾರಚನೆ ಮಾಡಿದ್ದಾರೆ.

Advertisement

ಈಗಾಗಲೇ ಇರುವ ಸದಸ್ಯರ ಜೊತೆಗೆ ಸಂಸದ ರಮೇಶ್‌ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಜಿಲ್ಲೆಯ ಮಾಜಿ ಅಧ್ಯಕ್ಷ ಎಂ.ಬಿ. ಜಿರಲಿ ಅವರನ್ನು ಸೇರ್ಪಡೆ ಮಾಡಲಾಗಿದೆ. ಇದು ವಿಜಯೇಂದ್ರ ಟೀಂ. ನಾನು ಹಾಗೂ ಸಂಸದರು ಬಿಜೆಪಿ ತಂಡಕ್ಕೆ ಬಹಿಷ್ಕಾರ ಹಾಕಿದ್ದೇವೆ. ವಿಜಯೇಂದ್ರ ಕಾರ್ಯಕ್ರಮವೇ ನಮ್ಮನ್ನು ತುಳಿಯುವುದು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅಸಮಾಧಾನವನ್ನು ಹೊರಹಾಕಿದ್ದರು. ಇದರ ಬೆನ್ನಲ್ಲೇ ಪಟ್ಟಿ ಪರಿಷ್ಕರಣೆ ಮಾಡಲಾಗಿದೆ.

ಶಾಸಕರಾದ ಹರೀಶ್‌ ಪೂಂಜಾ, ಮಹೇಶ್‌ ಟೆಂಗಿನಕಾಯಿ, ಮೇಲ್ಮನೆ ಮಾಜಿ ಸದಸ್ಯ ಅರುಣ್‌ ಶಹಾಪುರ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಅವರೂ ತಂಡದಲ್ಲಿದ್ದು, ಸಮಿತಿಯ ಎಲ್ಲ ಸದಸ್ಯರೂ ಮಂಗಳವಾರ (ಅ.29) ವಿಜಯಪುರಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸಲಿದ್ದಾರೆ.

ವಿಜಯಪುರ ಜಿಲ್ಲೆಗೆ ಇಂದು ಬಿಜೆಪಿ ತಂಡ
ವಕ್ಫ್ ಆಸ್ತಿ ವಿವಾದ ಕುರಿತು ರೈತರ ಅಹವಾಲು ಆಲಿಸಲು ನೇಮಕ ಮಾಡಿರುವ ಬಿಜೆಪಿ ತಂಡ ಮಂಗಳವಾರ ಜಿಲ್ಲೆಗೆ ಭೇಟಿ ನೀಡಲಿದೆ. ಬೆಳಗ್ಗೆ 9 ಗಂಟೆಗೆ ಸಿಂದಗಿಯ ವಿರಕ್ತಮಠ, 9.40ಕ್ಕೆ ಪಡಗಾನೂರ, ಹಡಗಲಿ ಗ್ರಾಮಗಳಿಗೆ ಭೇಟಿ ನೀಡಲಿದೆ. ಬಳಿಕ ಅಥಣಿ ರಸ್ತೆಯಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಮಧ್ಯಾಹ್ನ 1 ಗಂಟೆಗೆ ಸಭೆ ನಡೆಸಿ ರೈತರ ಅಹವಾಲು ಸ್ವೀಕರಿಸಲಿದೆ.

Advertisement

ಅಲ್ಲಿಂದ 3.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ನಿಯೋಗದೊಂದಿಗೆ ತೆರಳಿ ಜಿಲ್ಲಾಧಿಕಾರಿ ಭೇಟಿಯಾಗಲಿದೆ. ಜಿಲ್ಲಾಧಿಕಾರಿ, ಕಂದಾಯ, ಭೂಮಿ ಕೇಂದ್ರ, ವಕ್ಫ್ ಹಾಗೂ ವಿವಿಧ ರೈತ ಪ್ರತಿನಿಧಿಗಳೊಂದಿಗೆ ಜಂಟಿ ಸಭೆ ನಡೆಸುವ ನಿಟ್ಟಿನಲ್ಲಿ ಸಮಾಲೋಚನಾ ಸಭೆ ಮಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next