ಮಂಗಳೂರು: ವಕ್ಫ್ ಆಸ್ತಿ ಅಕ್ರಮದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಪ್ರಕರಣವನ್ನು ಮುಚ್ಚಿಹಾಕುವ ನಿಟ್ಟಿನಲ್ಲಿ ಬಹಳಷ್ಟು ಮಂದಿ ವಿವಿಧ ರೂಪದಲ್ಲಿ ಕೋಟ್ಯಂತರ ರೂ. ಲಂಚ ಕೊಡಲು ಬಂದಿದ್ದರು. ಇದರಲ್ಲಿ ಕಾಂಗ್ರೆಸ್ ಮುಖಂಡರೇ ಅಧಿಕ ಮಂದಿ ಇದ್ದಾರೆ ಎಂದು ಅಲ್ಪಸಂಖ್ಯಾಕ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಆರೋಪಿಸಿದ್ದಾರೆ.
ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಮೌನ ವಹಿಸಲು ಬಿ.ವೈ. ವಿಜಯೇಂದ್ರ ಅವರು 150 ಕೋಟಿ ರೂ. ಆಮಿಷ ಒಡ್ಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಆರೋಪ ಸುಳ್ಳು. ವಿಜಯೇಂದ್ರ ಯಾವುದೇ ರೀತಿಯ ಹಣದ ಆಮಿಷ ಒಡ್ಡಿಲ್ಲ ಎಂದು ರವಿವಾರ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
2013ರಲ್ಲಿ ವಕ್ಫ್ ಆಸ್ತಿ ಕಬಳಿಕೆ ಕುರಿತಾಗಿ ವರದಿ ತಯಾರಿಸುತ್ತಿದ್ದಾಗ ವಿಜಯೇಂದ್ರ ಅವರು ಎಲ್ಲಿದ್ದರು ಎನ್ನುವುದೇ ಗೊತ್ತಿರಲಿಲ್ಲ. ಅವರನ್ನು ನೋಡಿಯೂ ಇರಲಿಲ್ಲ. ಹೆಸರು ಮಾತ್ರ ಕೇಳಿದ್ದೆ. 2019ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ, ವಿಜಯೇಂದ್ರ ಬಿಜೆಪಿ ಪಕ್ಷದ ಉಪಾಧ್ಯಕ್ಷರಾಗಿದ್ದಾಗ ಈ ವಿಷಯವಾಗಿ ಅವರನ್ನು ಭೇಟಿಯಾಗಿದ್ದೆ. ಸರಕಾರ ತನಿಖೆ ಮಾಡಬೇಕೆಂದು ವಿಜಯೇಂದ್ರ ಅವರನ್ನು ಆಗ್ರಹಿಸಿದ್ದೆ. ಆದರೆ ಅವರು ಯಾವುದೇ ಹಣದ ಆಮಿಷ ಒಡ್ಡಿಲ್ಲ ಎಂದು ಸ್ಪಷ್ಟ ಪಡಿಸಿದರು.
ಭೂಮಿ ಕಬಳಿಕೆ ಆಗದ ರೀತಿಯಲ್ಲಿ ವಕ್ಫ್ ಕಾಯ್ದೆಯಲ್ಲಿ ತಿದ್ದುಪಡಿ ತರಬೇಕು ಎಂದು ನಾನೇ ವರದಿಯಲ್ಲಿ ಕೇಳಿಕೊಂಡಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ ಸಿಬಿಐ ತನಿಖೆಗೆ ವಹಿಸಿದರೆ ಎಲ್ಲವೂ ಹೊರಬರುತ್ತದೆ. ಕೇಂದ್ರ ಸರಕಾರ ಮಾಡುತ್ತಿರುವ ತಿದ್ದುಪಡಿಯಿಂದ ಅಲ್ಪಸಂಖ್ಯಾಕರಿಗೆ ತೊಂದರೆಯಾಗದಿದ್ದರೆ ಅದಕ್ಕೆ ನನ್ನ ಸಹಮತವಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಇದೇ ವೇಳೆ ಉತ್ತರಿಸಿದರು.
‘ಅನ್ವರ್ ಮಾಣಿಪ್ಪಾಡಿ ಆರಂಭದಲ್ಲಿ ಯಾವ ರೀತಿಯ ಹೇಳಿಕೆ ನೀಡಿದ್ದರು ಎಂದು ಕಣ್ಣೆದುರಿಗೇ ಇದೆ. ಆದರೆ ಈಗ ತಿರುಚಿ ಮಾತನಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ವಕ್ಫ್ ಆಸ್ತಿ ಕಬಳಿಕೆಗೆ ಬಗ್ಗೆ ಮೌನ ವಹಿಸಲು ಬಿ.ವೈ. ವಿಜಯೇಂದ್ರ 150 ಕೋಟಿ ರೂ. ಆಮಿಷ ಒಡ್ಡಿದ್ದರು ಎಂಬ ವಿಷಯ ಸದನದಲ್ಲಿ ಪ್ರಸ್ತಾವವಾಗುವ ಸಾಧ್ಯತೆ ಇದೆ.’ -ಡಾ| ಪರಮೇಶ್ವರ್, ಗೃಹಸಚಿವ