Advertisement

ಕೇರಳ ಗಡಿಭಾಗಕ್ಕೆ ಬೇಕು ನೂತನ ಪೊಲೀಸ್‌ ಠಾಣೆ 

10:35 AM Dec 22, 2018 | |

ಈಶ್ವರಮಂಗಲ: ಕೇರಳ ಕರ್ನಾಟಕದ ಗಡಿಭಾಗದಲ್ಲಿರುವ ಅಭಿವೃದ್ಧಿಗೊಳ್ಳುತ್ತಿರುವ ಅತೀ ಸೂಕ್ಷ್ಮ ಪ್ರದೇಶ ಈಶ್ವರಮಂಗಲ. ಇಲ್ಲಿ ಶಾಶ್ವತವಾದ ಪೊಲೀಸ್‌ ಠಾಣೆ ಮತ್ತು ಅದಕ್ಕೊಂದು ಸುಸಜ್ಜಿತ ಕಟ್ಟಡವಿಲ್ಲ.

Advertisement

ಕಳೆದ ಬಾರಿ ಕಾಂಗ್ರೆಸ್‌ ಸರಕಾರ ಇದ್ದಾಗ ಆಗಿನ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ನೂತನ ಈಶ್ವರಮಂಗಲ ಪೊಲೀಸ್‌ ಠಾಣೆ ಕಟ್ಟಡಕ್ಕೆ ಪ್ರಸ್ತಾವ ಸಲ್ಲಿಸಿದರು. ಅಂದಿನ ಗೃಹ ಸಚಿವ ಕೆ.ಜೆ. ಜಾರ್ಜ್‌ ಪುತ್ತೂರಿನ ಸಂಚಾರ ಪೊಲೀಸ್‌ ಠಾಣೆಯನ್ನು ಉದ್ಘಾಟನೆ ಮಾಡುವ ಸಂದರ್ಭ ಪೊಲೀಸ್‌ ಗೃಹ ಮಂಡಳಿಯ ಅಧಿಕಾರಿ ಸೀಮಂತ್‌ ಕುಮಾರ್‌ ಅವರಿಗೆ ಈಶ್ವರಮಂಗಲ ಠಾಣೆಯ ಕುರಿತಾಗಿ ನಿರ್ದೇಶನ ನೀಡಿದ್ದರು. ಆದರೆ ಸಚಿವರ ಮಾತು ಭರವಸೆಯಾಗಿಯೇ ಉಳಿದಿದೆ. ಈಗಿನ ಸರಕಾರ ಈ ಬಗ್ಗೆ ಗಮನಹರಿಸಿ ನೂತನ ಕಟ್ಟಡದ ಜೊತೆ ಹೊರಠಾಣೆಯನ್ನು ಮೇಲ್ದರ್ಜೆಗೇರಿಸುವ ಕೆಲಸ ಆಗಬೇಕಿದೆ.

ಹೊರಠಾಣೆಗೆ ಸ್ವಂತ ನಿವೇಶನ
ಪ್ರಸ್ತುತ ಇರುವ ಹೊರಠಾಣೆಯ ಸಮೀಪವೇ ಸುಮಾರು 50 ಸೆಂಟ್ಸ್‌ ಜಾಗ ಠಾಣೆಯ ಹೆಸರಲ್ಲಿ ಇದೆ. ಸಮತಟ್ಟು ಕಾರ್ಯ ನಡೆದಿದ್ದು, ಸುತ್ತಲೂ ತಂತಿ ಬೇಲಿಯನ್ನು ಆಳವಡಿಸಿ ಬೋರ್ಡನ್ನು ಆಳವಡಿಸಲಾಗಿದೆ. ಸ್ವಂತ ಸ್ಥಳ ಇದ್ದರೂ, ನೂತನ ಕಟ್ಟಡ ನಿರ್ಮಾಣ ಮಾಡಲು ಜನಪ್ರತಿನಿಧಿಗಳು,ಅಧಿಕಾರಿಗಳಲ್ಲಿ ಇಚ್ಛಾ ಶಕ್ತಿಯ ಕೊರತೆ ಕಾಣುತ್ತಿದೆ.

ಕಾರ್ಯವ್ಯಾಪ್ತಿ
ಮೊದಲು ಇದ್ದ ಕೊಳ್ತಿಗೆ ಗ್ರಾಮ ಈಗ ಬೆಳ್ಳಾರೆ ಪೊಲೀಸ್‌ ಠಾಣೆಗೆ ವ್ಯಾಪ್ತಿಗೆ ಒಳಪಟ್ಟಿದೆ. ಉಳಿದಂತೆ ಗಡಿ ಪ್ರದೇಶದ ಗ್ರಾಮಗಳಾದ ನೆಟ್ಟಣಿಗೆಮುಟ್ನೂರು, ಪಡುವನ್ನೂರು, ಬಡಗನ್ನೂರು, ಮಟ್ನೂರು ಗ್ರಾಮಗಳು ಹೊರಠಾಣೆ ವ್ಯಾಪ್ತಿಗೆ ಬರುತ್ತವೆ. ನೆರೆಯ ಕೇರಳದ ಆದೂರು, ಬದಿಯಡ್ಕ ಪೊಲೀಸ್‌ ಠಾಣೆ, ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆ ಮತ್ತು ಬೆಳ್ಳಾರೆ ಪೊಲೀಸ್‌ ಠಾಣೆಗಳ ಮಧ್ಯೆ ಈ ಹೊರಠಾಣೆ ಇದೆ. ಅಪರಾಧಗಳ ಸಂಖ್ಯೆ ಕಡಿಮೆ ಇದ್ದರೂ, ಇಲ್ಲಿ ಪೊಲೀಸ್‌ ಸಿಬಂದಿಗಳಿಗೆ ಕಾರ್ಯದೊತ್ತಡ ಹೆಚ್ಚಿದೆ.

ಬಾಡಿಗೆ ಕಟ್ಟಡದಲ್ಲಿದೆ ಹೊರಠಾಣೆ
ಏಳು ವರ್ಷಗಳ ಹಿಂದೆ ಕಾವು ಸೊಸೈಟಿ ಕಟ್ಟಡದಲ್ಲಿ ಬಾಡಿಗೆ ಗೊತ್ತು ಮಾಡಿ ಹೊರಠಾಣೆಗೆ ಚಾಲನೆ ನೀಡಲಾಗಿತ್ತು. 2011ರಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಹೊರಠಾಣೆಯನ್ನು ಲೋಕಾರ್ಪಣೆಗೊಳಿಸಿದ್ದರು. ಈಶ್ವರಮಂಗಲ ಮತ್ತು ಈ ಪ್ರದೇಶ ಸಾಕಷ್ಟು ಅಭಿವೃದ್ಧಿಗೊಂಡರೂ ಹೊರಠಾಣೆ ಮಾತ್ರ ಅಭಿವೃದ್ಧಿಯಾಗದೆ ಬಾಡಿಗೆ ಕಟ್ಟಡದಲ್ಲೇ ಕಾರ್ಯಾಚರಿಸುತ್ತಿದ್ದು, ಇದ್ದ ಹಾಗೆಯೇ ಇದೆ. 

Advertisement

ಸಿಬಂದಿ ಹೆಚ್ಚಳ
ಠಾಣೆ ಪ್ರಾರಂಭದ ಸಮಯದಲ್ಲಿ ಒಬ್ಬರು ಎಎಸ್‌ಐ, ಇಬ್ಬರು ಹೆಡ್‌ ಕಾನ್ಸ್‌ಟೆಬಲ್‌, ಐವರು ಕಾನ್ಸ್‌ಟೆಬಲ್‌ ಇದ್ದರು. ಪ್ರಸ್ತುತ ಇಬ್ಬರು ಎಎಸ್‌ಐ, ಒಬ್ಬರು ಹೆಡ್‌ಕಾನ್ಸ್‌ಟೆಬಲ್‌, 6 ಮಂದಿ ಕಾನ್ಸ್‌ಟೆಬಲ್‌, ಐವರು ಹೋಮ್‌ ಗಾರ್ಡ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಪರಾಧಗಳು ನಡೆದರೆ ಪ್ರಥಮ ತನಿಖಾ ವರದಿ ತಯಾರಿಸಲು ಪುತ್ತೂರು ಗ್ರಾಮಾಂತರ ಠಾಣೆಗೆ (ಸಂಪ್ಯ) ತೆರಳಬೇಕು. ಇದರಿಂದ ಕರ್ತವ್ಯ ನಿರ್ವಹಿಸುವವರಿಗೆ ತೊಂದರೆಯಾಗುತ್ತಿದೆ.

ಮೂಲಸೌಕರ್ಯದ ಸಮಸ್ಯೆ
ಠಾಣೆಯಲ್ಲಿ ಪೊಲೀಸ್‌ ಅಧಿಕಾರಿಗಳು, ಸಿಬಂದಿಗಳು ಇಕ್ಕಾಟದ ಕೊಠಡಿಯಲ್ಲಿ ಇದ್ದಾರೆ. ತುಂಬಾ ಹಳೆಯ ಕಟ್ಟಡವಾಗಿರುವುದರಿಂದ ಮೂಲಸೌಕರ್ಯ ಸರಿಯಾಗಿಲ್ಲ. ಸಾಕಷ್ಟು ಸ್ಥಳದ ಕೊರತೆ ಕಾಡುತ್ತಿದೆ. ನೂತನ ಠಾಣೆಯಾಗುವಾಗ ವಸತಿಗೃಹ ಮತ್ತು ಪೆರೇಡ್‌ ಮೈದಾನವೂ ಅತೀ ಅಗತ್ಯವಾಗಿದೆ. ಇಡೀ ಸಮಾಜದ ರಕ್ಷಣೆಯಲ್ಲಿರುವ ಆರಕ್ಷಕರಿಗೇ ಸರಿಯಾದ ಕಚೇರಿ ಇಲ್ಲ ಎನ್ನುವ ಕೊರಗು ಶೀಘ್ರವೇ ದೂರವಾಗಬೇಕು ಎನ್ನುವುದು ಸಾರ್ವಜನಿಕರ ಆಶಯವಾಗಿದೆ.

ಐಜಿಪಿ ಭೇಟಿ: ಆಶಾಭಾವನೆ
ಪಶ್ಚಿಮ ವಲಯ ಐಜಿಪಿ ಜೆ. ಅರುಣ ಚಕ್ರವರ್ತಿ ಅವರು ಗಡಿಪ್ರದೇಶಕ್ಕೆ ಸೆಪ್ಟಂಬರ್‌ ತಿಂಗಳಲ್ಲಿ ಭೇಟಿ ನೀಡಿದ್ದರು. ಈ ಸಂದರ್ಭ ಈಶ್ವರಮಂಗಲ ಹೊರಠಾಣೆಗೆ ಅವರು ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶೀಘ್ರ ಶಾಶ್ವತ ಠಾಣೆ ನಿರ್ಮಾಣವಾಗಬಹುದು ಎನ್ನುವ ಆಶಾಭಾವನೆಯನ್ನು ಈಶ್ವರಮಂಗಲದ ಜನತೆ ಹೊಂದಿದ್ದಾರೆ. ಹೊರಠಾಣೆ ಮೇಲ್ದರ್ಜೆಗೆ ಏರಲು ಅರ್ಹವಾಗಿದೆ ಎಂದವರು ಹೇಳಿದ್ದರೆಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ಮೇಲಧಿಕಾರಿಗಳಲ್ಲಿ ಚರ್ಚಿಸುವೆ
ಪಕ್ಷದ ಕಾರ್ಯಕರ್ತರು ಹೊರಠಾಣೆಯ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ಗಮನ ಹರಿಸುತ್ತೇನೆ. ಗಡಿಪ್ರದೇಶವಾಗಿರುವುದರಿಂದ ನೂತನ ಠಾಣೆಯ ಬಗ್ಗೆ ಪೊಲೀಸ್‌ ಮೇಲಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
– ಸಂಜೀವ ಮಠಂದೂರು,
ಪುತ್ತೂರು ಶಾಸಕರು 

ಬೇಡಿಕೆ ಸಲ್ಲಿಸಿದ್ದೇವೆ
ಗಡಿಪ್ರದೇಶವಾಗಿರುವುದರಿಂದ ಭದ್ರತೆ ದೃಷ್ಟಿಯಿಂದ ನೂತನ ಠಾಣೆ ರಚನೆಯಾಗಬೇಕು. ಪೊಲೀಸ್‌ ಜನಸಂಪರ್ಕ ಸಭೆಯಲ್ಲಿ ಬೇಡಿಕೆ ಸಲ್ಲಿಸಲಾಗಿದೆ. ಶಾಸಕರಿಗೆ ಮನವಿಯನ್ನು ಕೂಡ ಸಲ್ಲಿಸಲಾಗಿದೆ. ಅಕ್ರಮ ಚಟುವಟಿಕೆಯನ್ನು ನಿಯಂತ್ರಿಸಲು ನೂತನ ಠಾಣೆ ಅನಿವಾರ್ಯವಾಗಿದೆ.
– ರಾಜೇಂದ್ರ ಪ್ರಸಾದ ರೈ ಮೇನಾಲ,
ನೆಟ್ಟಣಿಗೆಮುಟ್ನೂರು

ಮಾಧವ ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next