Advertisement

Bengaluru: ನಿಮ್ಮ ಮನೆ ಬಳಿ ಸಸಿ ನೆಡಬೇಕಾ? ಹಸಿರು ತೇರು ಸಂಪರ್ಕಿಸಿ

10:40 AM Jul 02, 2024 | Team Udayavani |

ಬೆಂಗಳೂರು: ಜನ್ಮ ದಿನ, ಶುಭದಿನ, ವಿಶೇಷ ಸಂದರ್ಭ ದಲ್ಲಿ ಒಂದಿಷ್ಟು ಸಸಿ ನೆಟ್ಟು ಪರಿಸರ ಕಾಳಜಿ ತೋರುವು ದನ್ನು ನೋಡಿದ್ದೇವೆ, ಇಲ್ಲವೇ ಕೆಲ ಸಂಘ ಸಂಸ್ಥೆಗಳಿಗೆ ಒಂದಿಷ್ಟು ಹಣ ಕೊಟ್ಟರೆ ಅವರ ಹೆಸರಿನಲ್ಲಿ ಗಿಡಗಳನ್ನು ಬೆಳೆಸುವುದನ್ನೂ ಕಂಡಿದ್ದೇವೆ. ಆದರೆ, ಇಲ್ಲೊಂದು ಟ್ರಸ್ಟ್‌, ಮನೆ ಬಾಗಿಲಿಗೆ ಬಂದು ಜನರಿಗೆ ಇಷ್ಟವಾದ ಸಸಿ ನೆಟ್ಟು, ಅದನ್ನು ಪೋಷಿಸಲು ಟ್ರೀಗಾರ್ಡ್‌ ಅಳವಡಿಸುವ ಮೂಲಕ ಸದ್ದಿಲ್ಲದೇ “ಹಸಿರು ಕ್ರಾಂತಿ”ಯನ್ನು ಸೃಷ್ಟಿಸುತ್ತಿದೆ.

Advertisement

ನಗರದಲ್ಲಿ ಸುಸ್ಥಿರ ಪರಿಸರ ಅಭಿವೃದ್ಧಿ ಟ್ರಸ್ಟ್‌ “ಹಸಿರು ತೇರು’ ಎಂಬ ವಾಹನವನ್ನಿಟ್ಟುಕೊಂಡು ಸಸಿ ನೆಡುವ ಕಾರ್ಯದಲ್ಲಿ ನಿರತವಾಗಿದೆ. ಈ ವಾಹನದಲ್ಲಿ ಹಣ್ಣಿನ ಗಿಡಗಳು, ಹಲವು ವಿಧದ ಸಸಿಗಳ ಜೊತೆಗೆ ಸಸಿ ನೆಡಲು ಬೇಕಾಗುವ ಸಲಕರಣೆಗಳು, ಟ್ರೀಗಾರ್ಡ್‌ಗಳನ್ನು ಇಟ್ಟುಕೊಂಡು ಸಂಚರಿಸಲಿದೆ. ಈ ಸಂಸ್ಥೆಯನ್ನು ಸಂಪರ್ಕಿಸಿದರೆ ಕೂಡಲೇ ಮನೆ ಬಾಗಿಲಿಗೆ ಬಂದು ನಿಮಗಿಷ್ಟವಾದ ಸ್ಥಳದಲ್ಲಿ ಸಸಿ ನೆಟ್ಟು. ಟ್ರೀ ಗಾರ್ಡ್‌ ಅಳವಡಲಿದೆ.

 ಏನಿದು “ಹಸಿರು ತೇರು’?: ಸುಮಾರು 25 ವರ್ಷ ಗಳಿಂದ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಗಿಡಗಳನ್ನು ನೆಟ್ಟು ಮತ್ತು ಅವುಗಳೊಂದಿಗೆ ಈಗಿರುವ ಮರಗಳನ್ನು ಸಂರಕ್ಷಿಸುವ ಕಾರ್ಯನಿರ್ವಹಿಸುತ್ತಿರುವ “ಸುಸ್ಥಿರ ಪರಿಸರ ಅಭಿವೃದ್ಧಿ ಟ್ರಸ್ಟ್‌’ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿದ್ದು, ಸುಮಾರು 5 ವರ್ಷಗಳ ಹಿಂದೆ “ಹಸಿರು ತೇರು’ ಎಂಬ ವಾಹನವನ್ನು ಸಿದ್ಧಗೊಳಿಸಿತು. ಈ ವಾಹನದಲ್ಲಿ ಹೊಂಗೆ, ಬಾದಾಮಿ, ಸಂಪಿಗೆ, ವಿವಿಧ ಹಣ್ಣಿನ ಗಿಡಗಳು ಸೇರಿದಂತೆ 150 ವಿವಿಧ ಗಿಡಗಳು ಮತ್ತು ಗಿಡ ನೆಡಲು ಬೇಕಾಗಿರುವ ಗುದ್ದಲಿ, ಹಾರೆಕೋಲು, ಪಿಕಾಸಿ, ಚಲಿಕೆ ಒಳಗೊಂಡಂತೆ ಹಲವು ಉಪಕರಣಗಳನ್ನು ಹೊಂದಿರುತ್ತದೆ.

16 ಲಕ್ಷ ಗಿಡ ನೆಟ್ಟು ಮತ್ತು ಮರಗಳ ಸಂರಕ್ಷಣೆ: ಜಯನಗರದ ಅಶೋಕ ಪಿಲ್ಲರ್‌ ವಾಸಿಯಾಗಿರುವ ಪ್ರಸನ್ನ ಅವರು ನಗರದಲ್ಲಿ ಗಿಡಗಳನ್ನು ನೆಟ್ಟು ಸಂರಕ್ಷಿಸುವುದನ್ನು ಸುಮಾರು 1990ರಿಂದ ಪ್ರಾರಂಭಿಸಿದರು.

ಬಿಬಿಎಂಪಿ ವತಿಯಿಂದ ಗಿಡ ನೆಟ್ಟು ಅದಕ್ಕೆ ಗಾರ್ಡ್‌ ಗಳನ್ನು ಹಾಕುತ್ತಿದ್ದರು. ಆ ಗಿಡ ಒಂದು ಹಂತಕ್ಕೆ ಬೆಳೆದ ನಂತರ ಆ ಗಾರ್ಡ್‌ ಅನ್ನು ತೆರವುಗೊಳಿಸುತ್ತಿರಲಿಲ್ಲ. ಹೀಗಾಗಿ ಆ ಗಿಡಗಳ ಕಾಂಡ ಬೆಳೆಯಲು ಸಾಧ್ಯವಾಗುತ್ತಿ ರಲಿಲ್ಲ. ಇದನ್ನು ಗಮನಿಸಿದ ನಾನು, ಮೊದಲು ಮರಗಳಿಗಿದ್ದ ಟ್ರೀಗಾರ್ಡ್‌ ಹಾಗೂ ಕಬ್ಬಿಣದ ರಾಡ್‌ ಗಳನ್ನು ತೆರವುಗೊಳಿಸುತ್ತಾ ಬಂದೆ. ಈ ವೇಳೆ ಅದೆಷ್ಟೋ ಮನೆ ಮಾಲೀಕರು ಹಲ್ಲೆ ನಡೆಸಿರುವ ನಿದರ್ಶನಗಳೂ ಇವೆ. ಅವುಗಳನ್ನು ಲೆಕ್ಕಿಸದೆ, ಸರ್ಕಾರಿ ಕಚೇರಿಗಳಲ್ಲಿ ಗಿಡ ನೆಟ್ಟು ಅಭಿಯಾನವನ್ನು ಶುರುಮಾಡಿದೆ. ಪರಪ್ಪನ ಅಗ್ರಹಾರ ಜೈಲಿನ ಆವರಣದಲ್ಲಿ ಹಲಸು, ತೆಂಗಿನ ಗಿಡ ಬೆಳೆಸಲಾಗಿದೆ. ಬರುಬರುತ್ತಾ ನನ್ನೊಂದಿಗೆ ಸ್ನೇಹಿತರು ಸೇರಿದರು. ಸುಸ್ಥಿರ ಪರಿಸರ ಅಭಿವೃದ್ಧಿ ಟ್ರಸ್ಟ್‌ ಪ್ರಾರಂಭಿಸಿದೆವು. ಒಟ್ಟು 42 ಜನರ ಈ ತಂಡದಿಂದ ವಿದ್ಯಾರಣ್ಯಪುರ, ಥಣಿಸಂದ್ರ, ಹೆಬ್ಟಾಳ, ಚನ್ನಪಟ್ಟಣ, ರಾಯಚೂರು, ಐಮಂಗಲ ಸೇರಿದಂತೆ ಹಲವೆಡೆ ಸಾವಿರಾರು ಗಿಡಗಳನ್ನು ನೆಟ್ಟು, ಪೋಷಿಸಲಾಗುತ್ತಿದೆ. ಜತೆಗೆ ಮೊದಲೇ ನೆಟ್ಟಿರುವ ಗಿಡ-ಮರಗಳನ್ನೂ ಸಂರಕ್ಷಿಸಿ, ಪೋಷಿಸಲಾಗುತ್ತಿದೆ. ಹೀಗೆ ಒಟ್ಟಾರೆ 16 ಲಕ್ಷ ಗಿಡ-ಮರಗಳನ್ನು ನೆಟ್ಟು, ಪೋಷಿಸಲಾಗುತ್ತಿದೆ ಎಂದು ಪ್ರಕೃತಿ ಪ್ರಸನ್ನ ಅವರು ತಿಳಿಸುತ್ತಾರೆ.

Advertisement

ಕರೆ ಮಾಡಿದರೆ ಸಸಿ, ಸಲಕರಣೆ ಹೊತ್ತು ಬರಲಿದೆ ಹಸಿರು ತೇರು : ನಗರವಾಸಿಗಳು ತಮ್ಮ ಮನೆಯ ಮುಂದೆ ಗಿಡ ನೆಡಬೇಕು ಎಂದುಕೊಂಡವರು ಅಥವಾ ಕುಟುಂಬಸ್ಥರ ಜನ್ಮದಿನ, ತಂದೆ-ತಾಯಿ ನೆನಪಿನಾರ್ಥವಾಗಿ ಗಿಡ ನೆಟ್ಟು ಪೋಷಿಸಬೇಕು ಎಂದುಕೊಂಡವರು, ಸುಸ್ಥಿರ ಪರಿಸರ ಅಭಿವೃದ್ಧಿ ಟ್ರಸ್ಟ್‌ ಅನ್ನು ಸಂಪರ್ಕಿಸಿದರೆ, ಹಸಿರು ತೇರಿನ ವಾಹನವು ಅವರ ಮನೆ ಮುಂದೆ ತೆರಳಿ, ಉಚಿತವಾಗಿ ಗಿಡ ನೆಟ್ಟು ಅದರ ಕಾವಲುಗಾಗಿ ಪ್ಲಾಂಟ್‌ ಗಾರ್ಡ್‌ ಅನ್ನು ಹಾಕಿಕೊಡಲಾಗುತ್ತದೆ. ತದನಂತರ, ಆ ಗಿಡವನ್ನು ಮನೆಯವರು ಸಂರಕ್ಷಿಸುತ್ತಾರೆ. ನಿಮ್ಮ ಮನೆ ಬಳಿ ಸಸಸಿ ನೆಡಬೇಕೆಂದರೆ ಮೊಬೈಲ್‌ ನಂಬರ್‌ 9900822922 ಸಂಪರ್ಕಿಸಬಹುದು ಎಂದು ಟ್ರಸ್ಟ್‌ ಸಂಸ್ಥಾಪಕ ಪ್ರಕೃತಿ ಪ್ರಸನ್ನ ತಿಳಿಸುತ್ತಾರೆ.

ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next