ಮನುಷ್ಯ ಸಂಘಜೀವಿ. ಆತ ತಾನೊಬ್ಬನೇ ಬದುಕುತ್ತೇನೆ ಎಂದರೆ ಅದು ಸಾಧ್ಯವಿಲ್ಲ. ಇನ್ನೊಬ್ಬರ ಜೊತೆ ಪ್ರತಿಯೊಂದು ಹೆಜ್ಜೆಯಲ್ಲೂ, ಪ್ರತಿಕ್ಷಣದಲ್ಲೂ ವ್ಯವಹರಿಸಬೇಕು. ಇದು ಮನುಷ್ಯನಿಗೆ ಅನಿವಾರ್ಯ. ಪ್ರಕೃತಿಯ ನಿಯಮವೂ ಹೌದು. ಬದುಕಿನಲ್ಲಿ ಸುಖವೊದಗಲಿ, ಕಷ್ಟ ಬರಲಿ- ಎಲ್ಲವನ್ನೂ ಇನ್ನೊಬ್ಬರ ಜೊತೆ ಹಂಚಲೇಬೇಕು. ಸಂತೋಷವಾದರೆ ಅಧಿಕವಾಗುತ್ತದೆ, ಕಷ್ಟವಾದರೆ ಕಡಿಮೆಯಾಗುತ್ತದೆ.
ಇನ್ನೊಂದು ಸೂಕ್ಷ್ಮ ಅಂಶವೆಂದರೆ, ಒಬ್ಬ ಗೆಲ್ಲಬೇಕಾದರೆ ಇನ್ನೊಬ್ಬ ಸೋಲಲೇಬೇಕು. ಸ್ಪರ್ಧೆ ಎಂಬುದು ಮನುಷ್ಯ ಸಹಜವಾದ ಒಂದು ಗುಣ. ಇನ್ನೊಬ್ಬನಿಗಿಂತ ಅಧಿಕವಾದದ್ದನ್ನು ಸಾಧಿಸಬೇಕು ಎಂಬ ಛಲ ಎಲ್ಲರಲ್ಲೂ ಇರುತ್ತದೆ. ಮನುಷ್ಯರ ನಡುವೆ ಮಾತ್ರವಲ್ಲ, ದೇಶ-ದೇಶಗಳ ನಡುವೆಯೂ ಈ ಸ್ಪರ್ಧೆ ಇದೆ. ಪುರಾಣಗಳಲ್ಲೂ ಇಂಥ ಕತೆಗಳನ್ನು ಓದಿದ್ದೇವಲ್ಲ, ಕೌರವ-ಪಾಂಡವರ ನಡುವಿನ ಆಡಳಿತದ ಸ್ಪರ್ಧೆಯೇ ಮಹಾಯುದ್ಧಕ್ಕೆ ಕಾರಣವಾಯಿತು.
ಜಾಗತಿಕವಾದ ಎರಡು ಮಹಾ ಯುದ್ಧಗಳ ಕತೆ ನಮಗೆ ಗೊತ್ತೇ ಇದೆಯಲ್ಲ. ಓಮಾನ್ ಮೇಲೆ ಬಾಂಬು ಎಸೆದ ಕಾರಣದಿಂದ ಎಷ್ಟೊಂದು ಸಾವು-ನೋವುಗಳು ಸಂಭವಿಸಿದವು. ಪ್ರಸ್ತುತ ಅಮೆರಿಕ ಮತ್ತು ಉತ್ತರ ಕೊರಿಯಾಗಳ ನಡುವೆ ಬದ್ಧದ್ವೇಷವಿದೆ. ಕೊರಿಯಾದಂಥ ಸಣ್ಣ ರಾಷ್ಟ್ರವೂ ಅಮೆರಿಕವನ್ನು ಮಣಿಸಲು ಹವಣಿಸುತ್ತಿದೆ. ಇದು ಒಂದು ರೀತಿಯ ಸ್ವಾಭಿಮಾನ. ಮನುಷ್ಯರಲ್ಲೂ ಇದೇ ರೀತಿಯ ಸ್ವಾಭಿಮಾನವಿರುತ್ತದೆ. ಹಾಗಾಗಿ, ಇನ್ನೊಬ್ಬನ ಸ್ವಾಭಿಮಾನವನ್ನು ತಿರಸ್ಕರಿಸುವ ಗೆಲುವು ಗೆಲುವಲ್ಲ, ಅದು ಸೋಲು ಎಂದೇ ಅರ್ಥ.
ಇವತ್ತು ಯುದ್ಧಗಳು ನಡೆದರೆ ಏಷ್ಯಾ ಖಂಡದ ದೇಶಗಳು ಸಂಕಷ್ಟವನ್ನು ಎದುರಿಸಲಿವೆ. ಒಂದು ವೇಳೆ ಯುದ್ಧ ನಡೆದರೆ ಭಾರತವು ಕೂಡಾ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಭಾಗವಹಿಸಬೇಕು. ಹೀಗಾದರೆ ಈ ದೇಶದ ಆರ್ಥಿಕ-ಸಾಮಾಜಿಕ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಭಾರತದ ಅನಿವಾರ್ಯತೆ ಪ್ರತಿಯೊಬ್ಬ ಮನುಷ್ಯನ ಅನಿವಾರ್ಯತೆಯೂ ಹೌದು. ಯಾವುದಾದರೂ ಪಕ್ಷದ ಪರ ವಹಿಸಲೇಬೇಕು, ಯಾರದಾದರೂ ವ್ಯಕ್ತಿಯ ಸಂಗಡ ಇರಲೇಬೇಕು. ಇದನ್ನು ನಿಭಾಯಿಸುವುದು ಪ್ರತಿಯೊಬ್ಬನ ಜೀವನದ ಕೌಶಲಕ್ಕೆ ಸಂಬಂಧಪಟ್ಟದ್ದು.
ಪರೀಕ್ಷೆಯನ್ನು ಎದುರಿಸುವಾಗಲೂ ಈ ಸಮಚಿತ್ತ ಬೇಕು. ನಮಗೆ ನಾವು ಗೆಲ್ಲುವ ಹಠ ಇರಬೇಕು. ಇನ್ನೊಬ್ಬರನ್ನು ಸೋಲಿಸುವ ಮನವಿರಬೇಕು. “ನಾವು ಬದುಕುತ್ತೇವೆ, ನೀವೂ ಬದುಕಿ’ ಎಂಬ ರೀತಿಯಲ್ಲಿ ಉತ್ತಮ ಸ್ನೇಹದೊಂದಿಗೆ ಬದುಕಿದರೆ ವಿಶ್ವವು ವಿನಾಶದಿಂದ ಪಾರಾಗುತ್ತದೆ.
ಅನಿತಾ ಕೆ. ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಪುತ್ತೂರು