Advertisement

ಮತದಾನ ಜಾಗೃತಿಗೆ ಬೈಕ್‌ನಲ್ಲಿ ರಾಜ್ಯ ಸುತ್ತಾಟ

01:07 PM Mar 29, 2019 | Lakshmi GovindaRaju |

ಹುಣಸೂರು: ಯುವಕನೋರ್ವ ವಿಶಿಷ್ಟವಾಗಿ ವಿನ್ಯಾಸಗೊಳಿಸಿರುವ ಬೈಕ್‌ ಮೂಲಕ ರಾಜ್ಯಾದ್ಯಂತ ಪ್ರವಾಸ ಮಾಡಿ ಮತದಾನದ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ.

Advertisement

ಮೂಲತಃ ಬೆಂಗಳೂರಿನ ಸಮರ್ಥ ಕನ್ನಡಿಗರು ಸಂಘದ ಪ್ರಧಾನ ಸಂಚಾಲಕರಾಗಿರುವ ಬಸವರಾಜು ಎಸ್‌.ಕಲ್ಲುಸಕ್ಕರೆ ಅವರು ಬೈಕ್‌ನಲ್ಲಿ ರಾಜ್ಯಾದ್ಯಂತ ಪ್ರವಾಸ ನಡೆಸುತ್ತಾ ಮತದಾನ ಜಾಗೃತಿಯಲ್ಲಿ ನಿರತರಾಗಿದ್ದಾರೆ.

ಈಗಾಗಲೇ 27 ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯ ನಡೆಸಿದ್ದು, ಬುಧವಾರ ಸಂಜೆ ಹುಣಸೂರಿಗೆ ಆಗಮಿಸಿ, ಬಸ್‌ ನಿಲ್ದಾಣ, ಕಲ್ಪತರು ವೃತ್ತ ಮತ್ತಿತರೆಡೆ ತೆರಳಿ ಸಾರ್ವಜನಿಕರಿಗೆ ಕಾಲೇಜು ವಿದ್ಯಾರ್ಥಿಗಳಿಗೆ “ನಮ್ಮ ಮತ ನಮ್ಮ ಹೆಮ್ಮೆ, ಎಲ್ಲರೂ ಮತ ಚಲಾಯಿಸಿ,

ಪ್ರಜಾಪ್ರಭುತ್ವ ಗೆಲ್ಲಿಸೋಣ, ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಮತದಾನದಲ್ಲಿ ಪಾಲ್ಗೊಳ್ಳಿ, ಮತದಾನ ನಮ್ಮ ಜನ್ಮ ಸಿದ್ಧ ಹಕ್ಕು, ಇದನ್ನು ಮಾರಿಕೊಳ್ಳುವುದು ಬೇಡ. ಎಲ್ಲರೂ ಸೇರಿ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸೋಣ’ ಎಂಬ ಘೋಷಣೆಯುಳ್ಳ ಕರಪತ್ರವನ್ನು ವಿತರಿಸಿ, ಮತದಾನ ಮಾಡುವಂತೆ ಮನವಿ ಮಾಡಿಕೊಂಡರು.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್‌ ಟೆಕ್ನಿಷಿಯನ್‌ ಆಗಿರುವ ಇವರು ಮತದಾನ ಜಾಗೃತಿಗಾಗಿಯೇ ಕೆಲಸ ಬಿಟ್ಟು, ತಮ್ಮ ಬಜಾಜ್‌ ಆವೆಂಜರ್‌ ಬೈಕನ್ನು ಮತದಾನದ ಬಗ್ಗೆ ಅರಿವು ಮೂಡಿಸುವ ಘೋಷಣೆಯೊಂದಿಗೆ, ನೆರಳು ನೀಡುವಂತೆ ಕಮಾನು ಮಾದರಿಯಲ್ಲಿ ವಿನ್ಯಾಸಗೊಳಿಸಿಕೊಂಡಿದ್ದಾರೆ. ಇವರು ಹೋದೆಡೆ ಜನರು ಕುತೂಹಲದಿಂದ ವೀಕ್ಷಿಸುತ್ತಾರೆ. ಈ ವೇಳೆ ನೆರೆದಿದ್ದವರಿಗೆ ಕರಪತ್ರ ನೀಡಿ ತಪ್ಪದೇ ಮತದಾನ ಮಾಡಿರೆಂದು ಮನವಿ ಮಾಡುತ್ತಾರೆ.

Advertisement

ಶಾಲಾ ಕಾಲೇಜಿನಲ್ಲೂ ಅರಿವು: ಇದೇ ವೇಳೆ ಮಾರ್ಗಮಧ್ಯದಲ್ಲಿ ಸಿಗುವ ಶಾಲಾ-ಕಾಲೇಜುಗಳಿಗೆ ತೆರಳಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತಾರೆ. ಜೊತೆಗೆ ಮತಚಲಾಯಿಸುತ್ತೇವೆಂಬ ಪ್ರತಿಜ್ಞೆಯನ್ನು ಮಾಡಿಸುತ್ತಾರೆ. ಹೀಗೆ ಇವರ ಬೈಕ್‌ ಜಾಗೃತಿ ಜಾಥಾ ಚುನಾವಣೆ ಪೂರ್ಣಗೊಳ್ಳುವವರೆಗೂ ಮುಂದುವರಿಯುತ್ತಲೇ ಇರುತ್ತದೆ.

ಚುನಾವಣಾ ಆಯೋಗದಿಂದ ಅನುಮತಿ: ತಾವು ಸಾಮಾಜಿಕ ಜಾಗೃತಿಗಾಗಿ ಅಖಂಡ ಕರ್ನಾಟಕವನ್ನು ದ್ವಿಚಕ್ರವಾಹನದ ಮೂಲಕ ಸುತ್ತಾಡುತ್ತಾ ಮತದಾನ ಕುರಿತ ಜಾಗೃತಿ ಅಭಿಯಾನ ನಡೆಸುತ್ತಿದ್ದೇನೆ. ಇದಕ್ಕಾಗಿ ಚುನಾವಣಾ ಆಯೋಗದಿಂದ ಅನುಮತಿ ದೊರೆತಿದೆ.

ಈಗಾಗಲೇ 23 ಜಿಲ್ಲೆಗಳಲ್ಲಿ ಸಂಚರಿಸಿದ್ದು, ಇನ್ನುಳಿದ ಜಿಲ್ಲೆಗಳಿಗೆ ತೆರಳಿ ಜಾಗೃತಿ ಮೂಡಿಸುವೆ. ಹೋದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಮತದಾನ ಜಾಗೃತಿಯೊಟ್ಟಿಗೆ ಕನ್ನಡದ ಬಗ್ಗೆ, ರಕ್ತದಾನ ಹಾಗೂ ಪರಿಸರ ಉಳಿವಿಗಾಗಿಯೂ ಮನವಿ ಮಾಡುತ್ತಿರುವುದಾಗಿ ಬಸವರಾಜು ಎಸ್‌.ಕಲ್ಲುಸಕ್ಕರೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next