ಕುಕನೂರು: ತಾಲೂಕಿನಲ್ಲಿ ದಿನೇ ದಿನೆ ಬರದ ಭೀಕರತೆ ತೀವ್ರಗೊಳ್ಳುತ್ತಿದ್ದು, ಕುಡಿಯುವ ನೀರಿನ ಹಾಹಾಕಾರ ಶುರುವಾಗಿದೆ. ಪ್ರಾಣಿ-ಪಕ್ಷಿಗಳು ಗುಟುಕು ನೀರಿಗೂ ನರಕಯಾತನೆ ಅನುಭವಿಸುತ್ತಿವೆ.
ಪಟ್ಟಣ ಸೇರಿದಂತೆ ತಾಲೂಕಿನ ಉತ್ತಮುತ್ತಲಿನ ಗ್ರಾಮಗಳಲ್ಲೂ ಕೂಡ ಕುಡಿಯುವ ನೀರಿನ ತಾತ್ಪರ್ಯ ಶುರುವಾಗಿದೆ. ಕೊಡ ನೀರಿಗಾಗಿಯೂ ಅಲೆದಾಡುವ ಸ್ಥಿತಿ ಎದುರಾಗಿದೆ. ಟ್ಯಾಂಕರ್ ಮೂಲಕ ಕೆಲಭಾಗಗಳಲ್ಲಿ ನೀರು ಒದಗಿಸಲಾಗುತ್ತಿದ್ದರೂ ನೀರಿನ ಸಮಸ್ಯೆ ಮಾತ್ರ ತಿಳಿಗೊಳ್ಳದಷ್ಟು ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೆಲವು ಸಂಘ ಸಂಸ್ಥೆಗಳು ಟ್ಯಾಂಕರ್ ಮೂಲಕ ಉಚಿತವಾಗಿ ವಿವಿಧ ಕಾಲೋನಿಗಳಿಗೆ ನೀರು ಕಲ್ಪಿಸಲಾಗುತ್ತಿದ್ದರೆ. ಆ ಟ್ಯಾಂಕರ್ ನೀರಿನ ಹೆಸರಿನಲ್ಲಿ ವಾರ್ಡ್‌ನ ಸದಸ್ಯರು ಪಂಚಾಯಿತಿ ಹಣವನ್ನು ಕಬಳಿಸುವ ಹುನ್ನಾರ ಮಾಡುತ್ತಿದ್ದರೆ.ಇನ್ನೂ ಕೆಲವು ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಸದಸ್ಯರು ತಮ್ಮ ಕಾಲೋನಿಯಲ್ಲಿನ ನೀರಿನ ಸಮಸ್ಯೆಯನ್ನು ತೋರಿಸುವುದರ ಮೂಲಕ ಪಂಚಾಯತ್ ಅಭಿವೃದ್ಧಿ ಅನುದಾನದಲ್ಲಿ ಬೋರ್‌ವೆಲ್ ಕೊರೆಸುವ ಒಪ್ಪಿಗೆ ಪತ್ರ ಪಡೆದು. ಬೋರ್‌ವೆಲ್ ಏಜೆನ್ಸಿಯವರಿಗೆ ಕಮಿಷನ್ ನೀಡಿ 100ರಿಂದ 200 ಅಡಿವರೆಗೆ ಕೊರೆಸಿ 400ರಿಂದ 500 ಅಡಿ ಎಂಬ ಲೆಕ್ಕ ಪಡೆದು ಬೋಗಸ್ ಬಿಲ್ನ್ನು ತೋರಿಸಿ ಪಂಚಾಯಿತಿ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಲವು ಗ್ರಾಪಂ, ಪಪಂ ಸದಸ್ಯರು ಆರೋಪಿಸುತ್ತಾರೆ. ಇದಲ್ಲದೆ ಟ್ಯಾಂಕರ್ ಮೂಲಕ ಕಾಲೋನಿಗಳಿಗೆ ನೀರು ಕಲ್ಪಿಸಲಾಗುತ್ತಿದೆ. ಇದು ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎನ್ನುವಂತಾಗಿದೆ.
ಇತ್ತೀಚಿನ ದಿನಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಜಿಲ್ಲಾಡಳಿತದಿಂದ ಇರುವ ಅನುದಾನ ಬಳಸಿಕೊಂಡು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದರೆ. ಇನ್ನೊಂದೆಡೆ ಕುಡಿಯುವ ನೀರಿನ ಸಮಸ್ಯೆ ತಗ್ಗಿಸಲು ಸರಕಾರದಿಂದ ಬರಬೇಕಾದ ಸಮರ್ಪಕ ಅನುದಾನವೂ ಬಂದಿಲ್ಲ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಸಾರ್ವಜನಿಕರಿಗೆ ಹೇಳುತ್ತಿದ್ದಾರೆ.