Advertisement
ಬೆಳಗಾವಿ: ನವರಾತ್ರಿ ಹಬ್ಬದ ಸಂಭ್ರಮಕ್ಕೆ ಸಜ್ಜಾಗುತ್ತಿದ್ದ ಇಡೀ ಕುಟುಂಬವೇ ಅಳಿದು ಹೋಗಿದೆ. ಮನೆಯಲ್ಲಿದ್ದ ಹೆಣ್ಣು ಕುಲವೇ ಮಣ್ಣು ಪಾಲಾಗಿದೆ. ಮಹಾಲಯ ಅಮಾವಾಸ್ಯೆಯ ಕರಾಳ ಛಾಯೆ ಬರೆ ಎಳೆದು ಇಡೀ ಕುಟುಂಬವನ್ನೇ ನುಂಗಿ ಹಾಕಿದೆ.
Related Articles
Advertisement
ಕನಸಿನ ಸೂರು ಸಾವಿನ ಮನೆಯಾಯ್ತು
ಖನಗಾಂವಿ ಕುಟುಂಬಕ್ಕೆ ಇರುವುದೊಂದೇ ಎಕರೆ ಜಮೀನು. ಇದರಲ್ಲಿಯೇ ಬದುಕು ಸಾಗಿಸುತ್ತಿದೆ. ತಲೆ ತಲಾಂತರದಿಂದ ಊರಿನ ಸಾಹುಕಾರ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ ಅವರ ಮನೆಯಲ್ಲಿ ಖನಗಾಂವಿ ಕುಟುಂಬ ಕೂಲಿ ಮಾಡಿ ಜೀವನ ಸಾಗಿಸುತ್ತಿದೆ. ಮನೆ ಕಟ್ಟಿಕೊಳ್ಳಬೇಕೆಂದು ಬಹು ವರ್ಷಗಳಿಂದ ಯಜಮಾನ ಭೀಮಪ್ಪ ಖನಗಾಂವಿ ಕನಸು ಕಂಡಿದ್ದ. ಈ ಕನಸಿಗೆ ಪುಷ್ಟಿ ಎಂಬಂತೆ ರಾಜೇಂದ್ರ ಅಂಕಲಗಿ ಸಾಥ್ ನೀಡಿದ್ದರು. ಆದರೆ ನಿರ್ಮಾಣವಾಗಬೇಕಿದ್ದ ಕನಸಿನ ಮನೆ ಈ ಕುಟುಂಬಕ್ಕೆ ಸಾವಿನ ಮನೆ ಆಗಿದೆ.
ಘಟನೆ ನಡೆದಿದ್ದು ಹೇಗೆ?
ಕಳೆದ ಒಂದು ವಾರದ ಹಿಂದೆಯೇ ತನ್ನ ಮಣ್ಣಿನ ಮನೆಯ ಮೇಲ್ಛಾವಣಿ ತೆರವುಗೊಳಿಸಿ ಹೊಸ ಮನೆ ಕಟ್ಟಲು ಸಹೋದರರಾದ ಭೀಮಪ್ಪ ಹಾಗೂ ಅರ್ಜುನ ಸಿದ್ಧತೆ ಮಾಡಿಕೊಂಡಿದ್ದರು. ಪಕ್ಕದಲ್ಲಿಯೇ ತಗಡಿನ ಶೆಡ್‌ನಲ್ಲಿ ವಾಸಿಸುತ್ತಿದ್ದರು. ಮನೆ ಛಾವಣಿ ಬಿಚ್ಚಿದ್ದರಿಂದ ಮಳೆಯಲ್ಲಿ ಗೋಡೆಗಳೆಲ್ಲವೂ ಹಸಿಯಾಗಿದ್ದವು. ಬುಧವಾರ ರಾತ್ರಿ 7 ಗಂಟೆ ಸುಮಾರಿಗೆ ವಿದ್ಯುತ್ ಕಡಿತಗೊಂಡಿತ್ತು. ಮಣ್ಣಿನ ಗೋಡೆಗಳು ಬೀಳುತ್ತಿರುವುದನ್ನು ನೋಡಲು ಶೆಡ್‌ನಲ್ಲಿದ್ದ ಮಹಿಳೆಯರು ಹಾಗೂ ಇಬ್ಬರು ಬಾಲಕಿಯರು ಟಾರ್ಚ್ ಹಿಡಿದುಕೊಂಡು ಹೋಗಿದ್ದಾರೆ.
ಬಂದು ನೋಡುವಷ್ಟರಲ್ಲಿ ಬಿತ್ತು ಗೋಡೆ
ಕತ್ತಲಾಗಿದ್ದರಿಂದ ಟಾರ್ಚ್ ಹಿಡಿದುಕೊಂಡು ಎಲ್ಲರೂ ಒಳಗೆ ಹೋಗಿ ಗೋಡೆ ಬಿದ್ದಿದ್ದನ್ನುನೋಡುತ್ತಿದ್ದಂತೆ ಇನ್ನುಳಿದ ದೊಡ್ಡ ಗೋಡೆ ಇವರ ಮೇಲೆ ಬಿದ್ದಿದೆ. ಅಲ್ಲಿಯವರೆಗೆ ಶೆಡ್ ನಲ್ಲಿಯೇ ಇದ್ದ ಅರ್ಜುನ ಹೊರ ಬಂದು ಗೋಡೆ ಬಳಿ ಹೋಗುವಷ್ಟರಲ್ಲಿಯೇ ಮತ್ತೂಂದು ಗೋಡೆ ಈತನ ಮೇಲೆಯೂ ಬಿದ್ದಿದೆ. ಎಲ್ಲರೂ ಮಣ್ಣಿನ ಅವಶೇಷಗಳಡಿ ಸಿಲುಕಿ ಪ್ರಾಣ ಬಿಟ್ಟಿದ್ದಾರೆ. ಮನೆಯವರನ್ನು ಕಳೆದುಕೊಂಡಿರುವ 20 ವರ್ಷದ ಯುವಕ ದೇವರಾಜ ಖನಗಾಂವಿ ಅಸ್ವಸ್ಥನಾಗಿದ್ದಾನೆ. ವಿಷಯ ಕೇಳಿ ದೇವರಾಜನಿಗೆ ಜ್ವರ ಬಂದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಭೀಮಪ್ಪ ಏನೂ ತೋಚದೇ ಬಂದವರಿಗೆಲ್ಲ, ಮನೆಯವರ ಮೈ ಮೇಲೆ ಇದೇ ಗೋಡೆ ಬಿತ್ತು. ಇದರ ಕೆಳಗೆಯೇ ಸಿಕ್ಕಿ ಹಾಕಿಕೊಂಡಿದ್ದರು ಎಂದು ಕೈ ಮಾಡಿ ತೋರಿಸುತ್ತಿದ್ದಾರೆ. ಮೃತ ಅರ್ಜುನನಿಗೆ ಮೂವರು ಹೆಣ್ಣು ಮಕ್ಕಳು. ದೊಡ್ಡ ಮಗಳು ದೇವಕ್ಕನನ್ನು ಜೋಡಕುರಳಿಗೆ ಮದುವೆ ಮಾಡಿ ಕೊಡಲಾಗಿದೆ. ಇನ್ನಿಬ್ಬರು ಪೂಜಾ ಮತ್ತು ಲಕ್ಷ್ಮೀ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಘಟನೆ ತಿಳಿದು ತವರಿಗೆ ಬಂದಿರುವ ದೇವಕ್ಕ ಹುಲ್ಯಾಗೋಳ ತಂದೆ-ತಾಯಿ, ಸಹೋದರಿಯರು, ದೊಡ್ಡಪ್ಪ-ದೊಡ್ಡಮ್ಮನನ್ನು ಕಳೆದುಕೊಂಡು ರೋದಿಸುತ್ತಿದ್ದಾಳೆ. ತವರು ಮನೆಯೇ ಇಲ್ಲವಾಯಿತಲ್ಲ ಎಂದು ಅಳುತ್ತಿದ್ದಾಳೆ.
ಸಪ್ಪಳ ಕೇಳಿ ಗ್ವಾಡಿ ಬೀಳಾಕತ್ತೈತಿ ಎಂದು ಚೀರಿದ
ಹೊಲದ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾಗಿದ್ದ ಭೀಮಪ್ಪ ದುರಂತ ನಡೆಯುವ ಕೆಲ ಹೊತ್ತಿನ ಮುಂಚೆ ಹೊರಗಡೆ ಹೋಗಿದ್ದಾನೆ.ಮನೆಗೆ ಮರಳಿ ಬಂದು ಹೊರಭಾಗದಲ್ಲಿ ನಿಂತು ನೋಡುವಷ್ಟರಲ್ಲಿಯೇ ಗೋಡೆ ಬೀಳುವ ಸಪ್ಪಳ ಕೇಳಿ ಬಂದಿದೆ. ಗ್ವಾಡಿ ಬೀಳಾಕತೆ„ತಿ ಅಂತ ಜೋರಾಗಿ ಕೂಗುವಷ್ಟರಲ್ಲಿ ಶೆಡ್‌ನಲ್ಲಿಯೇ ಇದ್ದ ಅರ್ಜುನ ಹೊರ ಬಂದಿದ್ದಾನೆ. ಮಹಿಳೆಯರಿದ್ದ ಕಡೆಗೆ ಹೋದಾಗ ಮತ್ತೂಂದು ಗೋಡೆ ಅರ್ಜುನನ ಮೇಲೆ ಬಿದ್ದಿದೆ.
ಟ್ಯೂಷನ್ಗೆ ಹೋಗಿದ್ರೆ ಬದುಕುತ್ತಿತ್ತು ಜೀವ
ಖನಗಾಂವಿ ಅವರ ಮನೆ ಎದುರಿನ ಕಾಶವ್ವ ಕೊಳೆಪ್ಪಗೋಳ(9) ಹಾಗೂ ಪೂಜಾ ಅರ್ಜುನ ಖನಗಾಂವಿ ಸ್ನೇಹಿತೆಯರು. ಇಬ್ಬರೂ ನಾಲ್ಕನೇ ತರಗತಿ ಓದುತ್ತಿದ್ದರು. ಕಾಶವ್ವ ನಿತ್ಯ ನಾಗೇರಹಾಳ ಎಂಬ ಹಳ್ಳಿಗೆ ಟ್ಯೂಷನ್‌ಗೆ ಹೋಗುತ್ತಿದ್ದಳು. ಸಂಜೆ 5ರಿಂದ 7 ಗಂಟೆವರೆಗೆ ಟ್ಯೂಷನ್ ಇರುತ್ತಿತ್ತು. ಬುಧವಾರ ಭಾರೀ ಮಳೆ ಇದ್ದಿದ್ದರಿಂದ ಪಾಲಕರು ಟ್ಯೂಷನ್‌ಗೆ ಕಳುಹಿಸಿರಲಿಲ್ಲ. ವಿಧಿ ಬಾಲಕಿ ಕಾಶವ್ವನನ್ನು ಕೈ ಬೀಸಿ ಕರೆಯುತ್ತಿತ್ತು. ಕಾಶವ್ವ-ಪೂಜಾ ಸ್ನೇಹಿತೆಯರು ಸಾವಿನಲ್ಲೂ ಒಂದಾಗಿದ್ದಾರೆ.
ಮಗಳು ಸತ್ತಿದ್ದು ಗೊತ್ತೇ ಇಲ್ಲ
ಮನೆ ಎದುರಿನ ಕಾಶವ್ವ ಎಂಬ ಬಾಲಕಿ ಗೋಡೆ ಬೀಳುವಾಗ ಹೋಗಿದ್ದು ಪಾಲಕರಿಗೆ ಗೊತ್ತೇ ಇಲ್ಲ. ಖನಗಾಂವಿ ಕುಟುಂಬದವರು ಕತ್ತಲಲ್ಲಿ ಟಾರ್ಚ್ ಹಿಡಿದಿದ್ದನ್ನು ನೋಡಲು ಕಾಶವ್ವ ಓಡಿ ಹೋಗಿದ್ದಳು. ಗೋಡೆ ಬಿದ್ದಾಗ ಕಾಶವ್ವನ ತಂದೆ ವಿಠuಲ ಅಲ್ಲಿದ್ದವರನ್ನು ರಕ್ಷಿಸಲು ಹೋಗಿದ್ದರು. ಮೃತದೇಹಗಳನ್ನು ಹೊರ ತೆಗೆಯಲು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಆದರೆ ಆ ಮಣ್ಣಿನ ಕೆಳಗೆ ತನ್ನ ಮಗಳು ಕಾಶವ್ವ ಬಿದ್ದಿದ್ದು ಅವರಿಗೆ ಗೊತ್ತೇ ಇರಲಿಲ್ಲ. ಮಗಳನ್ನು ಕಂಡು ಹೌಹಾರಿದ್ದಾನೆ. ಮಗಳ ಮೃತದೇಹ ಎತ್ತಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.
ಗಂಡನ ಮನೆ ಬದಲು ಮಸಣ ಸೇರಿದಳು!
ಭೀಮಪ್ಪನ ಮಗಳು ಸವಿತಾಳನ್ನು ಹೊಸಟ್ಟಿ ಎಂಬ ಗ್ರಾಮದ ಪರುಶಾಮಮ ಗೌಡ್ರ ಎಂಬವರಿಗೆ ಮದುವೆ ಕೊಡಲಾಗಿದೆ. ಗಣಪತಿ ಹಬ್ಬಕ್ಕೆ ಬಂದಿದ್ದ ಸವಿತಾ ತವರು ಮನೆಯಲ್ಲಿಯೇ ಇದ್ದಳು. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕಟ್ಟಡ ಕಾರ್ಮಿಕನಾಗಿರುವ ಪರುಶರಾಮ ನವರಾತ್ರಿ ಮುಗಿಸಿ ಹೆಂಡತಿ ಸವಿತಾಳನ್ನು ಕರೆದುಕೊಂಡು ಹೋಗುವವನಿದ್ದ. ಆದರೆ ವಿಧಿ ಸವಿತಾಳನ್ನು ಕರೆದುಕೊಂಡು ಹೋಗಿದೆ. ಗಂಡನ ಮನೆಗೆ ಹೋಗಬೇಕಾಗಿದ್ದ ಸವಿತಾ ಮಸಣ ಸೇರಿದ್ದಾಳೆ.
ದೇವ್ರ ನನ್ನನ್ನೂ ಕರಕೊಂಡ ಹೋಗಿದ್ರ ಛಲೋ ಇತು
ಗ್ವಾಡಿ ಬೀಳ್ಳೋದ ಸಪ್ಪಳಾ ಕೇಳಿ ಏ ಹೊರಗ ಬರ್ರಿ ಅಂತ ಚೀರಿ ಹೇಳ್ಳೋದರೊಳಗ ಧಪ್ಪ ಅಂತ ಗ್ವಾಡಿ ಬಿದ್ದಿತ್ತ… ಕತ್ತಲಾಗ ಗ್ವಾಡಿ ಕೆಳಗ ಎಲ್ಲಾರೂ ಮಲಗಿದ್ರ. ಮಣ್ಣಿನ್ಯಾಗ ಬಿದ್ದಾವ್ರ ಎಲ್ಲಾರೂ ನಮ್ಮ ಮನ್ಯಾವ್ರ… ಹೆಂಡತಿ, ತಮ್ಮ, ತಮ್ಮನ ಹೆಂಡತಿ, ಮಕ್ಕಳಾ ಎಲ್ಲಾರೂ ಮಣ್ಣ ಪಾಲ ಆಗ್ಯಾರ… ಈ ಗ್ವಾಡಿ ಕೆಳಗ ಬಿದ್ದಾವ್ರ ಮಣ್ಣ ಆಗಿ ಹ್ವಾದ್ರು… ದೇವ್ರ ನನ್ನೂ ಕರಕೊಂಡ ಹೋಗಿದ್ರ ಛಲೋ ಇರ್ತಿತ್ತ ಎಂದು ಮನೆ ಯಜಮಾನ ಒಂದೇ ಸಮ ಬಡಬಡಿಸುತ್ತಿರುವ ದೃಶ್ಯ ಕರುಳು ಕಿವುಚುವಂತಿತ್ತು.