ವಿಜಯಪುರ: ಬಿಜೆಪಿ ನಾಯಕರು ರಾಜ್ಯಾದ್ಯಂತ ಆಯ್ದ ಕೆಲವು ಕೊಳಗೇರಿ ವಾಸ್ತವ್ಯದ ಭಾಗವಾಗಿ ಹಿರಿಯ ಶಾಸಕ ಗೋವಿಂದ ಕಾರಜೋಳ ಅವರು ವಿಜಯಪುರ ನಗರದ ಕೊಳಗೇರಿಯಲ್ಲಿ ವಾಸ್ತವ್ಯ ಹೂಡಿ ಸ್ಲಂ ನಿವಾಸಿಗಳ ಸಮಸ್ಯೆ ಆಲಿಸಿದರು.
ಕಾರಜೋಳ ಅವರು ಆನಿವಾರ ಇಂಡಿ ರಸ್ತೆಯಲ್ಲಿರುವ ಸಮಗಾರ ಓಣಿಯ ಕೊಳಗೇರಿಗೆ ರಾತ್ರಿ 11ಕ್ಕೆ ಆಗಮಿಸಿದರು. ಕಾರಜೋಳ ಆಗಮಿಸುತ್ತಲೇ ಕೊಳಗೇರಿಯಲ್ಲಿರುವ ಹರಳಯ್ಯ ಸಮಾಜದ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ನಿಗದಿಯಂತೆ ಶಂಕರ ಜಮಖಂಡಿ ಅವರ ಮನೆಗೆ ಆಗಮಿದಾದ ಶಂಕರ ಅವರ ಪತ್ನಿ ಶೈಲಶ್ರೀ ಅವರೊಂದಿಗೆ ಕುಟುಂಬ ಸದಸ್ಯರು ಆರತಿ ಎತ್ತಿ ಸಾಂಪ್ರದಾಯಿಕ ಸ್ವಾಗತಿಸಿದರು.
ಬಳಿಕ ಕಾರಜೋಳ ಅವರೊಂದಿಗೆ ಆಗಮಿಸಿದ್ದ ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಪಾಲಿಕೆ ಸದಸ್ಯರಾದ ಪರಶುರಾಮ ರಜಪೂತ, ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜು ಮಗಿಮಠ ಸೇರಿದಂತೆ ಹಲವರೊಂದಿಗೆ ರಾತ್ರಿ 11:30ಕ್ಕೆ ಕಾರಜೋಳ ಊಟ ಸೇವಿಸಿದರು. ತಡವಾಗಿ ಬಂದ ಕಾರಣ ನಿಗದಿತ ಸಮಯಕ್ಕೆ ಬರುತ್ತಾರೆಂದು ಸಿದ್ಧಪಡಿಸಿಕೊಂಡಿದ್ದ ಊಟ ತಣ್ಣಗಾಗಿತ್ತು!
ಕಾರಜೋಳ ಅವರಿಗಾಗಿ ಶಂಕರ ಅವರು ತಮ್ಮ ಮನೆಯ ಮೊದಲ ಮಹಡಿಯಲ್ಲಿ ಸಿದ್ಧಪಡಿಸಿದ್ದ ಮಂಚದ ಮೇಲೆ ಗಾದಿ ಹಾಸಿ ವಾಸ್ತವ್ಯಕ್ಕೆ ಸಿದ್ಧಪಡಿಸಿದ್ದರು. ರಾತ್ರಿ 12ಕ್ಕೆ ಅವರು ನಿದ್ರೆಗೆ ಜಾರಿದರು. ಕಾರಜೋಳ ಅವರೊಂದಿಗೆ ಅದೇ ಕೋಣೆಯ ಮತ್ತೂಂದು ಬದಿಗೆ ಶಂಕರ ಅವರ ತಂದೆ ನಿವೃತ್ತ ಶಿಕ್ಷಕ ಕಲ್ಲಪ್ಪ ಜಮಖಂಡಿ ಅವರೂ ಮಲಗಿಕೊಂಡಿದ್ದರು.
ರವಿವಾರ ಬೆಳಗ್ಗೆ 5:30ಕ್ಕೆ ಎದ್ದು ಶೈಲಶ್ರೀ ಅವರು ಮಾಡಿಕೊಟ್ಟ ಚಹಾ ಸೇವಿಸಿ ವಾಯುವಿಹಾರಕ್ಕೆ ತೆರಳಿದ ಕಾರಜೋಳ ಅವರು, ಒಂದು ಗಂಟೆ ತರುವಾಯ ಶಂಕರ ಮನೆಗೆ ಆಗಮಿಸಿ, ಸ್ನಾನಾದಿಗಳನ್ನು ಪೂರ್ಣಗೊಳಿಸಿದರು. ಬೆಳಗ್ಗೆ 9ಕ್ಕೆ ಶಂಕರ ಅವರ ತಂದೆ ಕಲ್ಲಪ್ಪ, ತಾಯಿ ಯಲ್ಲವ್ವ ಅವರೊಂದಿಗೆ ಶೈಲಶ್ರೀ ಅವರು ತಯಾರಿಸಿದ ಜೋಳದ ಬಿಸಿ ರೊಟ್ಟಿ, ರಾಜಗಿರಿ ಪಲ್ಲೆ, ಬಳ್ಳೊಳ್ಳಿ ಚಟ್ನಿ ಸವಿದರು.
ಬಳಿಕ ಬೆಳಗ್ಗೆ 9:30ರ ಸುಮಾರಿಗೆ ಶಂಕರ ಅವರ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದ ಕಾರಜೋಳ ಅವರು, ಕಲ್ಲಪ್ಪ ಜಮಖಂಡಿ ಅವರು ಶಿಕ್ಷಕಾರಿಗಿ ಸಲ್ಲಿಸಿದ ಸೇವೆ, ಹೋರಾಟ ಮನೋಭಾವದ ಹಲಗೆ ಹಳೆಯ ಕ್ಷಣಗಳನ್ನು ಸ್ಮರಿಸಿ, ಪರಸ್ಪರ ತಮ್ಮ ಅನುಭವ ಹಂಚಿಕೊಂಡರು. ಬಳಿಕ ಕೊಳಗೇರಿ ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಸಮಗ್ರ ಪರಿಹಾರಕ್ಕೆ ತಮ್ಮ ಸರ್ಕಾರ ಅಧಿ ಕಾರಕ್ಕೆ ಬರುತ್ತಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದರು.