Advertisement

ಹತಾಶ ಬಿಜೆಪಿಯಿಂದ ಪಾದಯಾತ್ರೆ

12:26 PM Mar 03, 2018 | |

ಬೆಂಗಳೂರು: ಬಿಜೆಪಿ ಅವಧಿಯಲ್ಲೇ ಬೆಂಗಳೂರು ಗಾರ್ಬೆಜ್‌ ಸಿಟಿಯಾಗಿ ನಿರ್ಮಾಣವಾಗಿತ್ತು. ಬಿಬಿಎಂಪಿ ಆಸ್ತಿ ಅಡ ಇಟ್ಟು ಸಾಲ ಮಾಡಿದ್ದರು. ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಬಗರ್‌ ಹುಕುಂ ಸಾಗುವಳಿ ಭೂಮಿ ಕಬಳಿಸಿರುವ ಪ್ರಕರಣ ನ್ಯಾಯಾಲಯದಲ್ಲಿದೆ.

Advertisement

ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಲು ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ಬಿಜೆಪಿಯವರು ಹತಾಶರಾಗಿ ಯಾತ್ರೆ ಮಾಡುತ್ತಿದ್ದಾರೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕಾರ್ಯಕ್ರಮಗಳಿಗೆ ಜನ ಸ್ಪಂದಿಸುತ್ತಿಲ್ಲ. ರಾಜ್ಯದ ಜನತೆಗೆ ಸತ್ಯ ಏನು ಎಂದು ಗೊತ್ತಾಗಿದೆ. ರಾಜ್ಯದಲ್ಲಿ ಪರ್ಸೆಂಟೇಜ್‌ ಸರ್ಕಾರ ಇದೆ ಎಂದು ಹೇಳುವ ಮೂಲಕ ಪ್ರಧಾನಿ ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ. ಸ್ಟೀಲ್‌ ಬ್ರಿಡ್ಜ್ ವಿಚಾರದಲ್ಲಿ ಕಿಕ್‌ ಬ್ಯಾಕ್‌ ಪಡೆಯಲಾಗಿದೆ ಎಂದು ಆರೋಪ ಮಾಡುವ ಬಿಜೆಪಿ ಅಧಿಕಾರದ ಅವಧಿಯಲ್ಲಿಯೇ ಈ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು.

ಬಿಜೆಪಿಯವರು ಕಿಕ್‌ ಬ್ಯಾಕ್‌ಗೊಸ್ಕರ ಯೋಜನೆ ಆರಂಭಿಸಿದ್ದರಾ ಎಂದು ಪ್ರಶ್ನಿಸಿದರು. ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಆರ್‌. ಅಶೋಕ್‌ ವಿರುದ್ಧದ ಪ್ರಕರಣಗಳ ತನಿಖೆ ನಡೆಯುತ್ತಿದೆ. ಅದನ್ನು ಮರೆ ಮಾಚಲು ಬಿಜೆಪಿಯವರು ಸುಳ್ಳು ಹೇಳುವ ಚಾಳಿಯನ್ನು ಮುಂದುವರೆಸಿದ್ದಾರೆ.

ಬೆಳ್ಳಂದೂರು ಕೆರೆ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ 800 ಕೋಟಿ ರೂ. ನೀಡುವುದಾಗಿ ಕೇಂದ್ರ ಸಚಿವ ಪ್ರಕಾಶ್‌ ಜಾವಡೆಕರ್‌ ಹೇಳಿದ್ದಾರೆ. ಮಿಡ್‌ನೈಟ್‌ನಲ್ಲಿ ಟೆಂಡರ್‌ ಕರೆದವರು, ಕಡತಗಳಿಗೆ ಬೆಂಕಿ ಇಟ್ಟವರು. ಬಿಬಿಎಂಪಿ ಆಸ್ತಿ ಅಡ ಇಟ್ಟು ಸಾಲ ಮಾಡಿದವರು ಬಿಜೆಪಿಯವರು ಎಂದು ಇಬ್ಬರೂ ನಾಯ ಕ ರು ವಾಗ್ಧಾಳಿ ನಡೆಸಿದರು. 

Advertisement

ದಾಖಲೆ ಒದಗಿಸಲು ಜಾರ್ಜ್‌ ಸವಾಲು: “ನನ್ನ ವಿರುದ್ಧ ಭೂ ಕಬಳಿಕೆ ಆರೋಪ ಮಾಡುತ್ತಿರುವ ಬಿಜೆಪುಯವರ ಬಳಿ ಯಾವುದಾದರೂ ದಾಖಲೆ ಇದ್ದರೆ ಕೊಡಲಿ ನೋಡೋಣ,’ ಎಂದು ಸಚಿವ ಜಾರ್ಜ್‌ ಸವಾಲು ಹಾಕಿದ್ದಾರೆ. “ನಾನು ಜನ ಸೇವಕ. ರಿಯಲ್‌ ಎಸ್ಟೇಟ್‌ ಡಾನ್‌ ಅಲ್ಲ. ವೈಟ್‌ ಟ್ಯಾಪಿಂಗ್‌ ಕಂಡು ಬಿಜೆಪಿಯವರಿಗೆ ಹೊಟ್ಟೆಕಿಚ್ಚು ಶುರುವಾಗಿದೆ. ಹೀಗಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ ಹಗರಣ ಮಾಡಿರುವ ನಾಯಕರು ಬೇಲ್‌ ಮೇಲೆ ತಿರುಗಾಡುತ್ತಿದ್ದು, ಈಗ ರಾಜ್ಯ ಸರ್ಕಾರದ ಲೆಕ್ಕ ಕೇಳುವ ನೈತಿಕತೆ ಅವರಿಗೆ ಇಲ್ಲ,’ ಎಂದು ಹೇಳಿದರು. 

ಬಿಜೆಪಿ-ಕಾಂಗ್ರೆಸ್‌ ಮುಖಾಮುಖೀ: ಬೆಂಗಳೂರಿನಲ್ಲಿ ಬಿಜೆಪಿ ಶುಕ್ರವಾರ ಆರಂಭಿಸಿದ “ಬೆಂಗಳೂರು ರಕ್ಷಿಸಿ’ ಪಾದಯಾತ್ರೆಗೆ ಕಾಂಗ್ರೆಸ್‌ ಕಡೆಯಿಂದ ವಿರೋಧ ವ್ಯಕ್ತವಾಗಿದೆ. ಗವೀಪುರದ ಗವಿ ಗಂಗಾಧರೇಶ್ವರ ದೇವಸ್ಥಾನದಿಂದ ಹೊರಟ ಬಿಜೆಪಿ ಪಾದಯಾತ್ರೆ ಸ್ವಲ್ಪ ದೂರ ಸಾಗುತ್ತಿದ್ದಂತೆ ಅಲ್ಲಿ ಜಮಾಯಿಸಿದ ಕಾಂಗ್ರೆಸ್‌ ಕಾರ್ಯಕರ್ತರು, ಬಿಜೆಪಿ, ಪ್ರಧಾನಿ ವಿರುದ್ಧ ಘೋಷಣೆ ಕೂಗಿ, ಕಪ್ಪುಪಟ್ಟಿ ಪ್ರದರ್ಶಿಸಿದರು.

ಇದಕ್ಕೆ ಪ್ರತಿಯಾಗಿ ನೂರಾರು ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಕಾಂಗ್ರೆಸ್‌ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದ ಜಾಗಕ್ಕೆ ನುಗ್ಗಲು ಮುಂದಾದರು. ಹೀಗಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಬೆರಳೆಣಿಕೆಯಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನು ಅಲ್ಲಿಂದ ಕಳುಹಿಸಿ ಪರಿಸ್ಥಿತಿ ನಿಯಂತ್ರಿಸಿದರು.

ಬಿಜೆಪಿಯವರು ಬಿಬಿಎಂಪಿಯಲ್ಲಿ ಆಡಳಿತ ನಡೆಸುತ್ತಿದ್ದಾಗ ಕೆಲವು ಪ್ರಮುಖ ಕಡತಗಳನ್ನು ಸುಟ್ಟು ಹಾಕಿದ್ದವರು ಯಾರು? “ನೈಟ್‌ ಟೆಂಡರ್‌’ ಕರೆದಿರುವವರು ಯಾರು? ಪಾಲಿಕೆ ಆಸ್ತಿಗಳನ್ನು ಅಡ ಇಟ್ಟವರು ಯಾರು? ಬಿಬಿಎಂಪಿಗೆ 110 ಹಳ್ಳಿಗಳನ್ನು ಸೇರಿಸಿ ನೀರು, ರಸ್ತೆ ಅವರು ಮಾಡಿಸಿಕೊಟ್ಟಿದ್ದಾರಾ? ಇದನ್ನೆಲ್ಲಾ ಬಿಜೆಪಿಯವರು ಬೆಂಗಳೂರಿನ ಜನತೆಗೆ ತಿಳಿಸಬೇಕು. ಪಾದಯಾತ್ರೆ ಮಾಡುವವರು ಜನರಿಗೆ ಸತ್ಯ ಹೇಳಬೇಕು.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next