ಅಂದು ಕಾಲೇಜಿನಲ್ಲಿ “ಕಾರ್ಗಿಲ್ ವಿಜಯ್ ದಿವಸ್’ ಕಾರ್ಯಕ್ರಮಕ್ಕೆ ತಯಾರು ಮಾಡಿ ಸಂಜೆ ಹೋಗುವಾಗ ನಮ್ಮ ಎನ್‌ಎಸ್‌ಎಸ್‌ನ ಸರ್ ಕರೆದು, “”ನಾಡಿದ್ದು ರೈನ್ ಮ್ಯಾರಥಾನ್ ಹೋಗ್ತಿದ್ದೀವಿ ಬರ್ತಿಯೇನೋ” ಅಂತ. ಅವರ ಆ ಮಾತು ನನಗೆ ಏನೋ ಉತ್ಸಾಹ ತುಂಬಿತು. ಏಕೆಂದರೆ, ಅಲ್ಲಿಗೆ ಹೋಗಲು ಕೆಲವೊಂದು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿತ್ತು. ಈ ಒಳ್ಳೆಯ ಅವಕಾಶವನ್ನು ಕಳೆದುಕೊಳ್ಳುವುದಿಲ್ಲವೆಂದು “ಹಾ! ಬರುತ್ತೇನೆ ಸರ್’ ಎಂದೆ. ನಂತರ ಒಪ್ಪಿಗೆ ಪತ್ರ ಪಡೆದು ಅಮ್ಮನ ಸಹಿ ಹಾಕಿಸಿ ತಂದುಕೊಟ್ಟೆ. ರೈನ್ ಮ್ಯಾರಥಾನ್‌ಗೆ ಅದಾಗಲೇ ಎರಡು ದಿನ ಬಾಕಿ ಉಳಿದಿತ್ತು. ಮನಸ್ಸಿಗೆ ಏನೋ ಹೊಸ ಅನುಭವವನ್ನು ಪಡೆಯುವ ಹಂಬಲ. ಶಿವಮೊಗ್ಗ-ಉಡುಪಿ ಜನರ ಸಂಪರ್ಕ ಮಾರ್ಗವಾಗಿದ್ದ ಆಗುಂಬೆ ಘಾಟಿಯನ್ನು ಮಳೆಯಲ್ಲಿಯೇ ನಡೆದುಕೊಂಡು ಹೋಗುವುದಾಗಿತ್ತು. ಆ ದಿನ ಬಂದೇಬಿಟ್ಟಿತು. ಕಾಲೇಜಿನಿಂದ ಹದಿನೆಂಟು ವಿದ್ಯಾರ್ಥಿಗಳು ಹಾಗೂ ಹತ್ತು ಜನ ಪ್ರಾಧ್ಯಾಪಕರೊಂದಿಗೆ ಹೊರಟೆವು. ಬ್ಯಾಗಿನಲ್ಲಿ ತಿಂಡಿಯ ಪೊಟ್ಟಣ, ನೀರು ಬಾಟ್ಲಿ , ಬಟ್ಟೆಯನ್ನು ಹಿಡಿದುಕೊಂಡು ಸೋಮೇಶ್ವರದಿಂದ ನಮ್ಮ ಪಯಣ ಆಗುಂಬೆಯತ್ತ ಸಾಗಿತು. ಬರೋಬ್ಬರಿ ಹನ್ನೆರಡು ಕಿ.ಮೀ. ನಡೆಯಬೇಕಿತ್ತು. ಇಲ್ಲಿ ವಿದ್ಯಾರ್ಥಿಗಳಿಗಿಂತ ಪ್ರಾಧ್ಯಾಪಕರಿಗೆ ಹೆಚ್ಚಿನ ಉತ್ಸಾಹ ತುಂಬಿತ್ತು. ನಮ್ಮ ಪಯಣದ ದಾರಿಯಲ್ಲಿ ಹಲವಾರು ಸಂಗತಿಗಳು, ಪ್ರಕೃತಿಯ ವೈಶಿಷ್ಟಗಳು ಕಾಣಸಿಕ್ಕವು. ವಿವಿಧ ಹುಳ-ಜಂತುಗಳ ಮ್ಯೂಸಿಕ್, ಕಲ್ಲುಬಂಡೆಗಳ ನಡುವಿನಲ್ಲಿ ಚಿಮ್ಮುತ್ತಿರುವ ಸಣ್ಣ ಸಣ್ಣ ಝರಿಗಳು, ಕಾಡಿನ ಮಧ್ಯೆ ಹರಿಯುತ್ತಿರುವ ನೀರಿನ ಶಬ್ದ ನಮ್ಮನ್ನು ಸೀಳಿಕೊಂಡು ಹೋಗುತ್ತಿರುವ ಮಂಜಿನ ಹೊಗೆಗಳು, ತುಂತುರು ಮಳೆಯ ಹನಿ, ವಿವಿಧ ಸಸ್ಯ ಪ್ರಭೇದಗಳು, ಗೆಳೆಯರ ಹಾಗೂ ಪ್ರಾಧ್ಯಾಪಕರ ಕವನ, ಹಾಸ್ಯ ಚಟಾಕಿಗಳು, ವಾಹನ ಚಾಲಕರ ರೋಮಾಂಚನ ಚಾಲನೆ, ಕೈಯಲ್ಲಿದ್ದ ತಿಂಡಿ-ವಸ್ತುಗಳನ್ನು ಕಸಿದುಕೊಳ್ಳಲು ಹಂಬಲಿಸುತ್ತಿರುವ ವಾನರ ಸೈನ್ಯ, ಸಿಂಗಳೀಕದ ದರ್ಶನ, ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಬಿಸಾಡದಂತೆ ಪ್ರಾಧ್ಯಾಪಕರ ಕೂಗು, ಅಲ್ಲಲ್ಲಿ ಸೆಲ್ಫಿ, ಫೋಟೋಗಳು, ವಿದ್ಯಾರ್ಥಿಗಳ ಹಾಗೂ ಪ್ರಾಧ್ಯಾಪಕರ ನಡುವಿನ ಸಂಭಾಷಣೆ, ಇಂಬಳ ಹುಳುವಿನ ಆಗಮನ ಇವೆಲ್ಲವೂ ಕಾಣಸಿಗುವುದು ಇಂತಹ ಸಂದರ್ಭಗಳಲ್ಲಿ ಮಾತ್ರ.
ಇಂಬಳ ಹುಳಕ್ಕೆ ಐದಾರು ಮಂದಿ ರಕ್ತದಾನಿಗಳಾದರು. ಪ್ರತಿದಿನ ಒಂದೆರಡು ಕಿ.ಮೀ. ನಡೆಯದ ನಾವು ಅಂದು ಹನ್ನೆರಡು ಕಿ. ಮೀ. ಘಾಟಿಯಲ್ಲಿ ನಡೆದುಕೊಂಡು ಹೋಗಿದ್ದರೂ ಒಬ್ಬರ ಬಾಯಲ್ಲೂ ಸುಸ್ತು ಎಂಬ ಶಬ್ದ ಬಂದಿರಲಿಲ್ಲ. ಇದಕ್ಕೆ ಕಾರಣ ಪ್ರಾಧ್ಯಾಪಕರ ಹುಮ್ಮಸ್ಸು , ವಿದ್ಯಾರ್ಥಿಗಳ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದವು. ಸುಮಾರು ಎರಡೂವರೆ ತಾಸುಗಳಲ್ಲಿ ನಾವು ಆಗುಂಬೆಯನ್ನು ತಲುಪಿದೆವು. ಆದರೆ, ಮನಸ್ಸಿನಲ್ಲಿ ಒಂದು ನಿರಾಶೆ ಕಾಡುತ್ತಿತ್ತು. ನಮ್ಮೆಲ್ಲರ ತಲೆಯಲ್ಲಿ ಜೋರು ಮಳೆ ಬೀಳಬೇಕು ಎಂಬ ಬಯಕೆಯಿತ್ತು. ಆದರೆ ಮಳೆರಾಯ ನಮ್ಮ ಬಯಕೆಗೆ ಅಲ್ಲಲ್ಲ ತುಂತುರು ಮಳೆಯನ್ನು ನೀಡಿ ಸಮಾಧಾನಪಡಿಸಿದ್ದನಷ್ಟೇ. ಕೊನೆಗೆ ಆಗುಂಬೆಯಲ್ಲಿ ಗೆಸ್ಟ್‌ಹೌಸ್‌ಗೆ ತೆರಳಿದೆವು. ಅಲ್ಲಿ ಪ್ರಾಂಶುಪಾಲರು ನಮ್ಮನ್ನು ಕೂಡಿಕೊಂಡು, ತಂದಿದ್ದ ತಿಂಡಿಯನ್ನು ಹಾಗೂ ಬಿಸಿಬಿಸಿ ಬಾದಾಮಿ ಹಾಲನ್ನು ಕುಡಿದು ಒಂದು ಗಂಟೆಗಳ ಕಾಲ ವಿಶ್ರಮಿಸಿದೆವು. ಆಗ ಮಳೆರಾಯನ ಆಗಮನವಾಯಿತು. ಕೆಲವೊಂದು ವಿದ್ಯಾರ್ಥಿಗಳು ಆ ಮಳೆಯಲ್ಲಿ ನೆನೆದು ಸಂಭ್ರಮಿಸಿದರು. ಗೆಸ್ಟ್‌ಹೌಸ್ ಸುತ್ತ ದಟ್ಟವಾದ ಮಂಜಿನ ಹೊಗೆ, ತುಂತುರು ಮಳೆ, ಚುಮುಚುಮು ಚಳಿ ನಮ್ಮ ಮನಸ್ಸಿಗೆ ಅದಾಗಲೇ ಆವರಿಸಿತ್ತು. ಇಂತಹ ಒಳ್ಳೆಯ ವಾತಾವರಣವನ್ನು ಬಿಟ್ಟು ಹೋಗಬೇಕೆಂಬ ದುಃಖ ಮನವನ್ನು ಕಾಡಿತ್ತು. ಕವಿಯೇ ಹೇಳಿದ್ದಾನೆ “ಆಗುಂಬೆಯಾ…. ನೋಡು ಸಂಜೆಯಾ’ ಎಂದು. ಮಳೆಗಾಲದ ಸಮಯ, ಅದಕ್ಕಾಗಿ ಮನಸ್ಸು ಆ ರಮ್ಯಮನೋಹಕರ ದೃಶ್ಯವನ್ನು ಬಿಟ್ಟು ಬರಲು ಒಪ್ಪದೇ ಇರಬಹುದು. ಸಂಜೆ ಐದು ಗಂಟೆಯ ಹೊತ್ತಿಗೆ ಅಲ್ಲಿಂದ ಮನೆಗೆ ಪಯಣ ಬೆಳೆಸಿದೆವು. ಏನೇ ಆಗಲಿ ರೈನ್ ಮ್ಯಾರಥಾನ್ ನಮಗೆ ಅದಾಗಲೇ ಹಲವಾರು ಅನುಭವವನ್ನು ನೀಡಿತ್ತು. ಈ ಪಯಣ ನನ್ನ ಜೀವನದಲ್ಲಿ ಮರೆಯದೆ ಉಳಿಯುವ ನೆನಪಾಗಿದೆ. ಇದಕ್ಕೆ ಅವಕಾಶ ನೀಡಿದ ಸರ್ ಹಾಗೂ ಎಲ್ಲಾ ಪ್ರಾಧ್ಯಾಪಕರಿಗೂ ಮನದಲ್ಲಿಯೇ ಧನ್ಯವಾದ ಸಮರ್ಪಿಸಿದ್ದೇನೆ.
ಅಕ್ಷಯ್ ದ್ವಿತೀಯ ಬಿಕಾಂ,
ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ