ಬೆಂಗಳೂರು: ರಾಜ್ಯ ವಕ್ಫ್ ಮಂಡಳಿಯ ಚುನಾವಣೆಗೆ ಪ್ರಕಟಿಸಲಾಗಿರುವ ಮತದಾರರ ಪಟ್ಟಿಯಿಂದ ರಾಜ್ಯ ಬಾರ್ ಕೌನ್ಸಿಲ್‌ನ ಚುನಾಯಿತ ಮುಸ್ಲಿಂ ಸದಸ್ಯರ ಹೆಸರನ್ನು ತೆಗೆದುಹಾಕಿರುವ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ಮುಂದಿನ ವಿಚಾರಣೆವರೆಗೆ ವೇಳಾಪಟ್ಟಿ ಪ್ರಕಟಿಸುವುದಿಲ್ಲ ಎಂದು ಸರ್ಕಾರ ಸೋಮವಾರ ಹೈಕೋರ್ಟ್‌ಗೆ ಹೇಳಿತು.
ವಕ್ಫ್ ಮಂಡಳಿಯ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕಿರುವ ಬೆಂಗಳೂರು ಪ್ರಾದೇಶಿಕ ಆಯುಕ್ತರ ಆದೇಶವನ್ನು ರದ್ದುಪಡಿಸುವಂತೆ ಕೋರಿ ರಾಜ್ಯ ಬಾರ್ ಕೌನ್ಸಿಲ್‌ನ ಸದಸ್ಯ ಆಸೀಫ್ ಅಲಿ ಶೇಕ್ ಹುಸೇನ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾ. ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿತು.
ವಿಚಾರಣೆ ವೇಳೆ, ಅರ್ಜಿಯ ಮುಂದಿನ ವಿಚಾರಣೆವರೆಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸುವುದಿಲ್ಲ ಎಂದು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಈ ಹೇಳಿಕೆಯನ್ನು ಮಾನ್ಯ ಮಾಡಿದ ನ್ಯಾಯಪೀಠ, ವಿಚಾರಣೆಯನ್ನು ನ.9ಕ್ಕೆ ಮುಂದೂಡಿತು.
ರಾಜ್ಯ ಬಾರ್ ಕೌನ್ಸಿಲ್‌ಗೆ 2018ರ ಮಾ.27ರಂದು ನಡೆದ ಚುನಾವಣೆಯಲ್ಲಿ ಆಸೀಫ್ ಅಲಿ ಏಕೈಕ ಮುಸ್ಲಿಂ ಸದಸ್ಯರಾಗಿ ಚುನಾಯಿತರಾಗಿದ್ದರು. ಸದಸ್ಯರ ಕರಡು ಪಟ್ಟಿಯಲ್ಲಿ ಅವರ ಹೆಸರು ಸೇರಿಸಲಾಗಿತ್ತು. ವಕ್ಫ್ ಕಾಯ್ದೆ-1995ರ ಸೆಕ್ಷನ್ 14(1) (ಬಿ) ಅನ್ವಯ ಬಾರ್ ಕೌನ್ಸಿಲ್‌ನ ಹಾಲಿ ಮುಸ್ಲಿಂ ಸದಸ್ಯರು ವಕ್ಫ್ ಮಂಡಳಿಯ ಸದಸ್ಯರಾಗಲು ಅರ್ಹರಾಗಿರುತ್ತಾರೆ. ಅದರಂತೆ, ವಕ್ಫ್ ಮಂಡಳಿಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಹೆಸರು ಸೇರ್ಪಡೆಗೆ ಆಸೀಫ್ ಅಲಿ ಅರ್ಜಿ ಸಲ್ಲಿಸಿದ್ದರು. ಚುನಾವಣಾಧಿಕಾರಿಯೂ ಆದ ಬೆಂಗಳೂರು ಪ್ರಾದೇಶಿಕ ಆಯುಕ್ತರು ಮತದಾರರ ಪಟ್ಟಿಯಲ್ಲಿ ಆಸೀಫ್ ಅಲಿ ಹೆಸರು ಸೇರ್ಪಡೆಗೊಳಿಸಿದ್ದರು.
ಈ ಮಧ್ಯೆ, ಆಸೀಫ್ ಅಲಿಯ ಹೆಸರು ಬಾರ್ ಕೌನ್ಸಿಲ್‌ನ ಸದಸ್ಯರ ಕರಡುಪಟ್ಟಿಯಲ್ಲಿದೆ. ಸುಪ್ರೀಂಕೋರ್ಟ್ ಗೆಜೆಟ್ ಅಧಿಸೂಚನೆ ಹೊರಡಿಸಿದಾಗ ಮಾತ್ರ ಸದಸ್ಯರ ಪಟ್ಟಿ ಅಂತಿಮ ಮತ್ತು ಅಧೀಕೃತವಾಗುತ್ತದೆ. ಹಾಗಾಗಿ, ಈ ಹಂತದಲ್ಲಿ ಆಸೀಫ್ ಅಲಿಯವರನ್ನು ಬಾರ್ ಕೌನ್ಸಿಲ್‌ನ ಚುನಾಯಿತ ಸದಸ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ ವಕ್ಫ್ ಮಂಡಳಿಯ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರಿಸಿದ್ದಕ್ಕೆ ಅಬ್ದುಲ್ ರಹಮಾನ್ ಖಾನ್ ಉಸ್ಮಾನಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರಂತೆ ಆಸೀಫ್ ಅಲಿಯವರ ಹೆಸರನ್ನು ವಕ್ಫ್ ಮಂಡಳಿಯ ಮತದಾರರ ಪಟ್ಟಿಯಿಂದ ಕೈಬಿಟ್ಟು 2018ರ ಅ.10ರಂದು ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದರು. ಇದೀಗ ಈ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.