Advertisement

ಕಾದಿದೆ ಜಾತ್ಯತೀತ ಜನತಾ ದಳ: ಗೆಲುವು ಬರುವುದೆಂದು!

01:52 PM Apr 15, 2018 | |

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನತಾ ಸಂಬಂಧಿತ ಪಕ್ಷಗಳು ಚುನಾವಣೆಯಿಂದ ಚುನಾವಣೆಗೆ ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಲೇ ಇವೆ. ಜನತಾ ಪಕ್ಷ ಸ್ಥಾಪನೆಯಾದ (ತುರ್ತು ಪರಿಸ್ಥಿತಿಯ ವೇಳೆ) ಆರಂಭದಲ್ಲಿ ದೇಶಾದ್ಯಂತ ಸಂಚಲನವನ್ನು ಮೂಡಿಸಿತ್ತು. ಇದು ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಹೊರತಾದ ಬಹುತೇಕ ಸರ್ವ ಪಕ್ಷಗಳ ಸಂಘಟನೆಯಾಗಿತ್ತು. ಕೇಂದ್ರ ಸರಕಾರದಲ್ಲಿ ಅಧಿಕಾರವನ್ನು ಪಡೆದಿತ್ತು. ಅಷ್ಟೇ ಬೇಗ ಪಕ್ಷ ಒಡೆಯಿತು; ಸರಕಾರವೂ ಪತನವಾಯಿತು.

Advertisement

ಈ ವೇಳೆ ಪ್ರತ್ಯೇಕವಾದ ಜನತಾ ಪಕ್ಷ 1983ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೃಹತ್‌ ಪಕ್ಷವಾಗಿ ಮೂಡಿಬಂತು. ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಈ ವೇಳೆ, 1978ರ ಮತ್ತು 1983ರ ವಿಧಾನಸಭಾ ಚುನಾವಣೆಗಳಲ್ಲಿ ಅವಿಭಜಿತ ದ.ಕನ್ನಡ ಜಿಲ್ಲೆಯಲ್ಲಿ ಎರಡು ಬಾರಿಯೂ ಜನತಾ ಪಕ್ಷ ತಲಾ 3 ಸ್ಥಾನಗಳನ್ನು ಜಯಿಸಿತ್ತು.

1985ರ ಚುನಾವಣೆಯಲ್ಲಿ ದ.ಕ.- ಉಡುಪಿ ಜಿಲ್ಲೆಗಳ ಒಟ್ಟು 15 ಸ್ಥಾನಗಳಲ್ಲಿ ಜನತಾ ಪಕ್ಷಕ್ಕೆ ಒಂದು ಸ್ಥಾನ ಮಾತ್ರ (ಮೂಡಬಿದಿರೆಯಲ್ಲಿ ಕೆ. ಅಮರನಾಥ ಶೆಟ್ಟಿ ಅವರ ಸತತ 2ನೇ ಗೆಲುವು) ಲಭಿಸಿತು.

ಮುಂದಿನ ಚುನಾವಣೆಯ ಸಂದರ್ಭದಲ್ಲಿ ಜನತಾ ಪಕ್ಷ ಮತ್ತೆ ವಿಭಜನೆಯಾಯಿತು. ಜನತಾದಳ ಪ್ರಮುಖ ಘಟಕವಾಗಿ ಅಸ್ತಿತ್ವಕ್ಕೆ ಬಂತು. 1994ರಲ್ಲಿ ದಳಕ್ಕೆ 3 ಸ್ಥಾನ (ಮೂಡಬಿದಿರೆ- ಅಮರನಾಥ ಶೆಟ್ಟಿ, ಬೆಳ್ತಂಗಡಿ- ವಸಂತ ಬಂಗೇರ, ಬ್ರಹ್ಮಾವರ- ಜಯಪ್ರಕಾಶ್‌ ಹೆಗ್ಡೆ) ಲಭಿಸಿತು. ಮುಂದಿನ ಚುನಾವಣೆಯ ಸಂದರ್ಭದಲ್ಲಿ ಜನತಾದಳವೂ ವಿಭಜನೆಯಾಗಿ ಜಾತ್ಯತೀತ ಜನತಾದಳ ಮತ್ತು ಸಂಯುಕ್ತ ಜನತಾದಳ ಪಕ್ಷಗಳು ಅಸ್ತಿತ್ವಕ್ಕೆ ಬಂದವು! ಅಂದಿನಿಂದ, ಯಾವುದೇ ‘ಜನತಾ’ ಪಕ್ಷಕ್ಕೆ ಜಿಲ್ಲೆಯಲ್ಲಿ ಸ್ಥಾನ ದೊರೆತಿಲ್ಲ; ಅಂದರೆ ಜಯವಿಲ್ಲದೆ 25ನೇ ವರ್ಷಕ್ಕೆ!

ಜಿಲ್ಲೆಯ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಜನತಾದಳ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಗಳಿದ್ದವು. ಅಂದರೆ ದಳದ ಅಭ್ಯರ್ಥಿಯು ಪಡೆಯುವ ಮತಗಳು ವಿಜೇತರು ಯಾರು ಎಂಬುದನ್ನು ನಿರ್ಣಯಿಸಲು ಕಾರಣವಾಗುವ ಸಾಧ್ಯತೆ. ಆದರೆ ಸತತ ವಿಭಜನೆ ಇತ್ಯಾದಿಗಳಿಂದ ಜಿಲ್ಲೆಯಲ್ಲಿ ಅದರ ಮತಬ್ಯಾಂಕ್‌ನಲ್ಲಿ ಭಾರೀ ಎಂಬಂತಹ ಇಳಿಕೆ ಉಂಟಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಭಾರೀ ಸೋಲು ಉಂಟಾಯಿತು. ಬೇರೆ ಪಕ್ಷಗಳ ಜತೆ ಹೊಂದಾಣಿಕೆಯೂ ಫಲ ನೀಡಲಿಲ್ಲ.

Advertisement

ಅಪ್ಪನೂ ಬರುತ್ತಾರೆ; ಮಗನೂ ಬರುತ್ತಾರೆ…
ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ – ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಕರಾವಳಿಯ ಈ ಪ್ರದೇಶಕ್ಕೆ ಆಗಾಗ ಬರುತ್ತಿರುತ್ತಾರೆ; ಧಾರ್ಮಿಕ ಉದ್ದೇಶದ ಭೇಟಿಗಳೂ ಇರುತ್ತವೆ. ಪುತ್ರ-ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಬರುತ್ತಿರುತ್ತಾರೆ. ಸಭೆ, ಸಮಾವೇಶ ನಡೆಸುತ್ತಿರುತ್ತಾರೆ. ಆದರೆ…?

ಅಂದ ಹಾಗೆ …
ಜಿಲ್ಲೆಯಲ್ಲಿ ‘ಒಂದು’ ಪಕ್ಷದ ಕೆಲವು ನಾಯಕರು ಪಕ್ಷಾಂತರಗೊಂಡ ಬಗ್ಗೆ ಕಾರ್ಯಕರ್ತರು ಸಿಟ್ಟಾದರು. ಆ ನಾಯಕರ ಹಿಂದಿನ ದೂರುಗಳ ಪಟ್ಟಿಯೊಂದಿಗೆ ಪಕ್ಷಾಧ್ಯಕ್ಷರನ್ನು ಭೇಟಿಯಾಗಲು ಬೆಂಗಳೂರಿಗೆ ಹೊರಟರು. ಕಾರ್ಯಕರ್ತರು ಮರುದಿನ ಬೆಂಗಳೂರು ತಲುಪಿದಾಗ ಆ ಪಕ್ಷಾಧ್ಯಕ್ಷರೇ ಇನ್ನೊಂದು ಪಕ್ಷಕ್ಕೆ ಸೇರಿಕೊಂಡಿದ್ದರು !

 ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next