ಇಪ್ಪತ್ತು ವರ್ಷಗಳ ಹಿಂದಿನ ಮಾತು. ಆಗಷ್ಟೇ ನನ್ನ ಎಂಜಿನಿಯರಿಂಗ್ ಮುಗಿದಿತ್ತು. ಅವತ್ತಿನ ಸಂದರ್ಭದಲ್ಲಿ ಈಗಿನಂತೆ ನೂರರ ಸಂಖ್ಯೆಯಲ್ಲಿ ಫ್ಯಾಕ್ಟರಿಗಳು ಇರಲಿಲ್ಲ. ಎಂಜಿನಿಯರಿಂಗ್ ಅಥವಾ ಡಿಪ್ಲೊಮಾ ಮುಗಿಸಿದವರಿಗೆ ತಕ್ಷಣ ಕೆಲಸ ಸಿಗಬೇಕೆಂದರೆ ಯಾವುದಾದರೂ ಫ್ಯಾಕ್ಟರಿಗೆ ಸೇರಬೇಕಾಗಿತ್ತು.
ಈಗಿನಂತೆ ಆಗಲೂ ಫ್ಯಾಕ್ಟರಿಗಳ ತವರು ಮನೆಯಂತೆ ಇದ್ದುದು ಪೀಣ್ಯ ಎರಡನೇ ಹಂತದ ಕೈಗಾರಿಕಾ ಪ್ರದೇಶವೇ, ಅಲ್ಲಿಗೇ ಹೋಗಿದ್ದಾಯಿತು. ಒಂದು ಫ್ಯಾಕ್ಟರಿಯಲ್ಲಿ ಸಂದರ್ಶವನ್ನೂ ಎದುರಿಸಿದ್ದಾಯಿತು. “ತಿಂಗಳಿಗೆ 800 ರೂಪಾಯಿ ಸಂಬಳ ಕೊಡ್ತೇವೆ. 8 ಗಂಟೆಗಳ ಕಾಲ ಕೆಲಸ ಮಾಡಬೇಕು. ಎಂಜಿನಿಯರಿಂಗ್ ಓದಿದವರಿಗೆ ಏನು ಕೊಡಬಹುದೋ ಅದೇ ಕೆಲಸ ಕೊಡ್ತೇವೆ.
ಒಪ್ಪಿಗೆ ಅನ್ನಿಸಿದ್ರೆ ನಾಳೆಯಿಂದ ಕೆಲಸಕ್ಕೆ ಬನ್ನಿ’ ಅಂದರು ಆ ಫ್ಯಾಕ್ಟರಿಯ ಬಾಸ್. ನಾನು ಮರುದಿನವೇ ಕೆಲಸಕ್ಕೆ ಸೇರಿದೆ. ಅವತ್ತೇ ಸಂಜೆ ಅವರು ವಿದೇಶ ಯಾತ್ರೆ ಹೋಗಿಬಿಟ್ಟರು. ಮ್ಯಾನೇಜರ್‌ಗೆ ಫ್ಯಾಕ್ಟರಿಯ ಉಸ್ತುವಾರಿ ವಹಿಸಿದ್ದರು. ಆತನೇ ಕಡೆಗೊಮ್ಮೆ ಕೆಲಸ ಹೇಳಿದ. ಅದು ಫಿಟ್ಟರ್‌ಗಳು ಮಾಡುವಂಥ ಕೆಲಸ. ಎಸ್ಸೆಸ್ಸೆಲ್ಸಿ ಫೇಲಾದವರು, ಪಿಯುಸಿಗೇ ಓದು ನಿಲ್ಲಿಸಿದವರು,
ಬಿ.ಎ. ಮಾಡಿದವರು…ಇಂಥ ಹಿನ್ನೆಲೆಯವರೆಲ್ಲಾ ಅಲ್ಲಿದ್ದರು. “ಏನ್ಸಾರ್ ಹೀಗೆ, ನಾನು ಎಂಜಿನಿಯರಿಂಗ್ ಓದಿರೋದು’ ಅಂದರೆ, “ಬಾಸ್ ಬರೋತನಕ ಇಲ್ಲೇ ಕೆಲಸ ಮಾಡಿ. ಅವರು ಬಂದಮೇಲೆ ಎಲ್ಲಾನೂ ಸರಿ ಮಾಡಿಸೋಣ’ ಅಂದರು. ಆನಂತರ ಮ್ಯಾನೇಜರ್ ಕಿರುಕುಳ, ಜೊತೆಗಿದ್ದವರು ಅವಹೇಳನ, ಸಣ್ಣಪುಟ್ಟ ತಪ್ಪು ಹುಡುಕಿ ಟೀಕಿಸುವುದೆಲ್ಲಾ ಶುರುವಾಯ್ತು.
ಆ ವೇಳೆಗೆ, ಕೆಲಸ ಸಿಕ್ಕಿದೆ ಎಂಬ ಧೈರ್ಯದಲ್ಲಿ ರೂಂ ಕೂಡ ಮಾಡಿದ್ದರಿಂದ ಅದಕ್ಕೆ ಬಾಡಿಗೆ ಕೊಡಲಿಕ್ಕಾದರೂ ಸಂಬಳ ಬೇಕಿತ್ತು. ಮೊದಲ ತಿಂಗಳ ಸಂಬಳ ಪಡೆದು ಕೆಲಸಕ್ಕೆ ಗುಡ್‌ಬೈ ಹೇಳ್ಳೋಣ ಅಂದುಕೊಂಡರೆ, ತಿಂಗಳು ಕಳೆದು ಹತ್ತು ದಿನ ಉರುಳಿದರೂ ಅವರು ಸಂಬಳ ಕೊಡಲೇ ಇಲ್ಲ. ಇದೇ ವೇಳೆಗೆ ಬೇರೊಂದು ಫ್ಯಾಕ್ಟರಿಯಲ್ಲಿ ಕೆಲಸ ಸಿಕ್ಕಿದ್ದರಿಂದ, ಕಾಸಿಲ್ದೇ ಕೈ ಸಾಲ ಎಂದುಕೊಂಡೇ ಅಲ್ಲಿಂದ ಎದ್ದು ಬಂದಿದ್ದಾಯ್ತು…
* ಹರೀಶ್ ಕುಮಾರ್