Advertisement

ನನ್ನ ಪಾಲಿಗೆ, ಕಾಯುವುದೇ ಕೈಲಾಸ

06:58 PM Aug 12, 2019 | mahesh |

ಈಗ ನಿನ್ನ ದೃಷ್ಟಿಯಲ್ಲಿ ನಾನು ಏನೂ ಅಲ್ಲ. ನನಗೆ ಗೊತ್ತು, ಒಂದು ಕಾಲದಲ್ಲಿ ನಾನೇ ನಿನ್ನ ಪ್ರಪಂಚವಾಗಿದ್ದೆ. ಕಾಲ ಎಲ್ಲವನ್ನೂ ಬದಲಾಯಿಸಿ ಬಿಟ್ಟಿತು. ಆದರೂ, ನನ್ನ ಪಾಲಿಗೆ ನೀನೇ ಜಗತ್ತು. ಇವತ್ತಿಗೂ ನನ್ನ ನೆನಪು, ಅಲೆದಾಟ, ವಿಶ್ರಾಂತಿ, ಆಸೆ, ಕನಸು, ಕವನ, ಕಲ್ಪನೆ ಕನವರಿಕೆಗಳಿಗೆಲ್ಲಾ ನಿನ್ನ ಸುತ್ತಲೇ ಸುತ್ತುತ್ತವೆ. ಯಾವತ್ತಾದರೊಮ್ಮೆ ನನ್ನ ಬದುಕು ಶೂನ್ಯವಾಗಿ ಬಿಡಬಹುದು ಅನ್ನೋದನ್ನು ಊಹಿಸದ ಹುಡುಗ ನಾನು.

Advertisement

ನೀನು ಬರೋ ಬದಲು ಬದುಕು ಭಕ್ತಿಗೀತೆಯಂತೆ ತಣ್ಣಗಿತ್ತು. ಎಲ್ಲೋ ದೂರದ ಕತ್ತಲಲ್ಲಿ ಸಂಭ್ರಮಗಳಿದ್ದವಾದರೂ ನನಗದು ಕಾಣುತ್ತಿರಲಿಲ್ಲ. ಕೇಳುತ್ತಿರಲಿಲ್ಲ. ನನ್ನಲ್ಲಿ ಆಸೆ-ಕನಸುಗಳಿದ್ದವಾದರೂ, ಅವುಗಳಿಗೆ ನದಿಯಂತೆ ಹರಿಯುವುದು ಗೊತ್ತಿರಲ್ಲಿಲ್ಲ. ನೀನು ನನಗೆ ಸಿಕ್ಕಾಗ ದೇವರು ಎಲ್ಲವನ್ನೂ ಕರುಣಿಸಿ ಬಿಟ್ಟ ಎಂದು ಗರ್ವದಿಂದ ಬೀಗಿದ್ದೆ. ಕೆಲವೊಮ್ಮೆ ನೀನು ದೂರ ನಿಂತಾಗ ಒಂದೇ ಸಮನೆ ದೇವರನ್ನು ಶಪಿಸಿದ್ದೆ. ಆತ ಮಾತ್ರ ಹಸನ್ಮಖಿಯಾಗಿ ಕುಳಿತಿದ್ದ .

ದೇವರು ಕರುಣಾಮಯಿಯಂತೆ! ನನ್ನ ಪಾಲಿಗೆ ಈ ಮಾತೇ ಸುಳ್ಳು. ಯಾಕೆ ಗೊತ್ತ? ದೇವರು, ಸಣ್ಣದೊಂದು ಸುಳಿವನ್ನೂ ಕೊಡೆದೆ ನನ್ನಿಂದ ಎಲ್ಲವನ್ನೂ ಕಿತ್ತುಕೊಂಡ. ಒಂದು ಸತ್ಯ ಗೊತ್ತಾ, ನೀನು ಬೇಡ ಅಂದಾಕ್ಷಣ ಜಗತ್ತು ಕ್ಯಾರೇ ಅನ್ನೋಲ್ಲ, ಸಮಯವೇನು ಕಾಯೋಲ್ಲ, ಈ ಬದುಕು ಕೂಡ ನಿನ್ನ ಗೈರಲ್ಲಿ ಮುಂದಕ್ಕೆ ಓಡಬಹುದು. ಪ್ರೇಮಿಗಳಿಗೆ ಕಾಯುವುದು ಗೊತ್ತು, ಆದರೆ ಈ ಬದುಕು ಪ್ರೇಮಿಗಳಿಗಾಗಿ ಯಾವತ್ತೂ ಕಾಯುವುದಿಲ್ಲ. ಹಗಲು ಸ್ಥಗಿತವಾಗುವುದಿಲ್ಲ, ರಾತ್ರಿ ನಿಲ್ಲುವುದಿಲ್ಲ. ನೀನು ಬೇಡ ಎಂದು ತಿರಸ್ಕರಿಸಿದ ದಿನವೂ ಸೂರ್ಯ ಮುಳುಗುತ್ತಾನೆ. ಚಂದ್ರ ನಗುತ್ತಾನೆ.

ಆದರೆ, “ಬೇಡ’ ಎಂದು ಅನ್ನಿಸಿಕೊಂಡ ಈ ಹೃದಯ ಆಳೆತ್ತರದ ಕನ್ನಡಿಯಂತೆ ಚೂರು ಚೂರಾಗಿ ಒಡೆದು ಬೀಳುತ್ತದೆ. ಅದರ ಸದ್ದು ಯಾರಿಗೂ ಕೇಳಿಸುವುದಿಲ್ಲ. ನಿನ್ನ ಬದುಕು ಅಮೃತ ಶಿಲೆಯ ಹಾದಿಯೇ ಆಗಬಹುದು. ಆದರೆ ನನ್ನ ನೆನಪೊಂದು ಸದಾ ಆ ಹಾದಿಯ ಮುಳ್ಳಾಗಿ ನಿನ್ನನ್ನು ಕಾಡುತ್ತದೆ. ನಿನ್ನ ಮನೆಯಲ್ಲಿ ಸಂಪತ್ತಿನ ಹೊಳೆ ಹರಿಯಬಹುದು, ಆದರೆ ಎದೆಯಲ್ಲೊಂದು ನನ್ನ ನೆನಪಿನ ಬಡತನ ಕಡೇತನಕ ಉಪವಾಸ ಕೂತಿರುತ್ತದೆ.

ಬದುಕಿನಲ್ಲಿ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ, ಉತ್ತರ ಸಿಗುವ ಹೊತ್ತಿಗೆ ಕೆಲವು ಪ್ರಶ್ನೆಗಳೇ ಅರ್ಥ ಕಳೆದುಕೊಂಡಿರುತ್ತವೆ. ಆದರೂ ಕೂಡ ಬಾರದ ರೈಲಿಗೂ ಸಡಗರದಿಂದ ಕಾಯಬಲ್ಲ ಹಠಮಾರಿ ನಾನು. ಒಂದು ಪ್ರೀತಿಯ ಮಾತಿಗಾಗಿ ಸಾವಿರ ಮೌನವನ್ನು ಸಹಿಸಿಕೊಳ್ಳುತ್ತೇನೆ. ಕಷ್ಟವಾದರೂ, ನೆನಪಿಗೆ ಬಂದಷ್ಟು ಮುಗುಳ್ನಗೆಯನ್ನು ತುಟಿಗೆಳೆದುಕೊಂಡು ನಕ್ಕು ಬಿಡು ಸಾಕು. ನನ್ನ ಜನ್ಮ ಸಾರ್ಥಕವಾಯಿತೆಂದು ಅಂದುಕೊಳ್ಳುತ್ತೇನೆ.

Advertisement

ವಿಶ್ವಾಸಗಳೊಂದಿಗೆ,

ಸಾಯಿನಂದಾ ಚಿಟ್ಪಾಡಿ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next