Advertisement

ಉತ್ತೇಜನಕ್ಕೆ ಕಾಯುತ್ತಿದೆ ಕುಂಬಾರಿಕೆ ಉದ್ಯಮ

10:28 PM Sep 16, 2020 | mahesh |

ಕುಂದಾಪುರ: ಕೊರೊನಾದಿಂದಾಗಿ ಜೂನ್‌ವರೆಗೆ ಸಂಪೂರ್ಣ ಲಾಕ್‌ಡೌನ್‌, ಆ ಬಳಿಕ ಹಂತ- ಹಂತವಾಗಿ ತೆರವಾದರೂ ಇನ್ನೂ ಕೂಡ ಕುಂಬಾರಿಕೆಯಂತಹ ಗುಡಿ ಕೈಗಾರಿಕೆಗಳು ಸರಿದಾರಿಗೆ ಬಂದಿಲ್ಲ. ಕುಲಕಸುಬಾದ ಕುಂಬಾರಿಕೆಯನ್ನೇ ಜೀವನೋಪಾಯಕ್ಕಾಗಿ ನೆಚ್ಚಿಕೊಂಡ ನೂರಾರು ಕುಟುಂಬಗಳು ಉತ್ತೇಜನಕ್ಕಾಗಿ ಕಾಯುತ್ತಿವೆ.

Advertisement

ದೇಶದಲ್ಲಿ ಈಗ ನಾಲ್ಕನೇ ಹಂತದ ಲಾಕ್‌ಡೌನ್‌ ತೆರವು ಪ್ರಕ್ರಿಯೆ ಜಾರಿಯಲ್ಲಿದೆ. ಬಹುತೇಕ ಉದ್ಯಮಗಳು, ವಲಯಗಳು ಈಗ ಚೇತರಿಕೆ ಹಾದಿಯಲ್ಲಿದೆ. ಕುಂದಾಪುರ ತಾಲೂಕಿನ ವಕ್ವಾಡಿ, ವಾಲ್ತೂರು, ಆಲೂರು, ಕಾಲ್ತೋಡು, ಆಜ್ರಿ, ಉಡುಪಿಯ ಬ್ರಹ್ಮಾವರ, ಪೆರ್ಡೂರು, ಹೆಬ್ರಿ ಮತ್ತಿತರ ಕಡೆಗಳಲ್ಲಿ ನೂರಾರು ಮಂದಿ ಕುಂಬಾರಿಕೆಯನ್ನು ಮಾಡುತ್ತಿದ್ದಾರೆ.

ಮಾಡಿಟ್ಟ ಸಾಮಗ್ರಿ ರಾಶಿ
ಸಾಮಾನ್ಯವಾಗಿ ಜನವರಿಯಿಂದ ಆರಂಭಗೊಂಡು ಮೇವರೆಗೆ ದೇವಸ್ಥಾನಗಳ ಜಾತ್ರೆ, ದೈವಸ್ಥಾನಗಳ ಕೆಂಡೋತ್ಸವ, ಅನೇಕ ಕಡೆಗಳಲ್ಲಿ ಬೃಹತ್‌ ವಸ್ತು ಪ್ರದರ್ಶನಗಳು ನಡೆಯುವುದರಿಂದ ಇತ್ತೀಚಿನ ದಿನಗಳಲ್ಲಿ ಮಣ್ಣಿನ ಕರಕುಶಲ ವಸ್ತುಗಳಿಗೆ ಭಾರೀ ಬೇಡಿಕೆ ಇರುತ್ತಿತ್ತು. ಅದರಲ್ಲೂ ಐಸ್‌ಕ್ರೀಮ್‌ ಮತ್ತಿತರ ಉದ್ಯಮದವರೂ ಈಗ ಮಣ್ಣಿನ ಸಲಕರಣೆಗಳನ್ನು ಉಪ ಯೋಗಿಸುವ ಕಡೆಗೆ ಹೆಚ್ಚಿನ ಒಲವು ತೋರುವುದರಿಂದ ಬೇಸಗೆಯಲ್ಲಿ ಒಳ್ಳೆಯ ಬೇಡಿಕೆ ಇರುತ್ತಿತ್ತು. ಆ ನಿಟ್ಟಿನಲ್ಲಿಯೇ ಅನೇಕ ಮಂದಿ ಮಾರ್ಚ್‌ಗಿಂತ ಮೊದಲೇ ಅಂದರೆ ಜನವರಿ, ಫೆಬ್ರವರಿಯಲ್ಲಿಯೇ ಮಣ್ಣಿನ ಕರಕುಶಲ ಪರಿಕರಗಳನ್ನು ತಯಾರಿಸಿ ಮನೆಯಲ್ಲಿ ಇಟ್ಟಿದ್ದರು. ಆದರೆ ಅಷ್ಟರಲ್ಲಿ ಕೊರೊನಾದಿಂದ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಆ ಬಳಿಕ ಯಾವುದೇ ಜಾತ್ರೆ, ವಸ್ತು ಪ್ರದರ್ಶನಗಳು ಇರದ ಕಾರಣ ಮಾಡಿಟ್ಟ ಸಾಮಗ್ರಿಗಳು ಮನೆಗಳಲ್ಲಿಯೇ ರಾಶಿ ಬಿದ್ದಿವೆ. ಅವುಗಳು ಖಾಲಿಯಾಗದೆ ಹೊಸದಾಗಿ ಮಾಡಿ ಇಡಲು ಹೆಚ್ಚಿನವರಿಗೆ ಜಾಗದ ಕೊರತೆಯಿದೆ. ಮಾಡಿದರೂ ಬೇಡಿಕೆ ಇರುವುದೋ? ಇಲ್ಲವೋ ಎನ್ನುವ ಅಭದ್ರತೆಯೂ ಹಲವರಲ್ಲಿದೆ.

ಹೆಚ್ಚಿನ ವಲಯಗಳಿಗೆ ಸರಕಾರ ಆರ್ಥಿಕ ಪ್ಯಾಕೇಜ್‌ ಮೂಲಕ ಪರಿಹಾರ ಧನವನ್ನು ನೀಡಿದರೂ ಕುಂಬಾರಿಕೆ ಮಾಡುತ್ತಿರುವವರಿಗೆ ಈ ಪರಿಹಾರ ಧನದ ವ್ಯಾಪ್ತಿಗೆ ಪರಿಗಣಿಸಿಯೇ ಇಲ್ಲ. ಹಂತ ಹಂತವಾಗಿ ಕೆಲ ವಲಯಗಳ ತೆರವಿಗೆ ವಿನಾಯಿತಿ ನೀಡುತ್ತಿದ್ದಂತೆ ಎಲ್ಲ ವಲಯ ಗಳು ನಿಧಾನವಾಗಿ ಹಳಿಯೇರುತ್ತಿದೆ. ಇದೇ ರೀತಿ ಕುಂಬಾರಿಕೆ ಉದ್ಯಮವೂ ಉತ್ತೇಜನಕ್ಕಾಗಿ ಕಾಯುತ್ತಿದೆ.

ಲಕ್ಷಾಂತರ ರೂ. ನಷ್ಟ
ಹಲವು ವರ್ಷಗಳಿಂದ ಕುಂಬಾರಿಕೆಯಲ್ಲೇ ಕರಕುಶಲ ಪರಿಕರಗಳನ್ನು ತಯಾರಿಸುತ್ತ, ಪ್ರತಿ ವರ್ಷ ಉತ್ತಮ ವಹಿವಾಟು ನಡೆಸುತ್ತಿದ್ದ ಆಲೂರಿನ ರಘುರಾಮ್‌ ಕುಲಾಲ್‌ ಅವರು ಹೇಳುವಂತೆ, ನಮಗೆ ಬೇಸಗೆಯಲ್ಲಿ ಉತ್ತಮ ಬೇಡಿಕೆ ಇರುತ್ತಿತ್ತು. ನಮ್ಮಿಂದ ಮಂಗಳೂರಿನ ಐಸ್‌ಕ್ರೀಂ ಸಂಸ್ಥೆಯವರು ಸಾಕಷ್ಟು ಮಣ್ಣಿನ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ಆದರೆ ಈ ಬಾರಿ ಮಾಡಿದ್ದು ಹಾಗೇ ಇದೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ. 5ರಿಂದ 7 ಮಂದಿ ವರ್ಷವಿಡೀ ಕೆಲಸಕ್ಕಿದ್ದರು. ಆದರೆ ಈಗ ಕೆಲವು ಮಂದಿ ಮಾತ್ರ ಇದ್ದು ಪಾಳಿಯಲ್ಲಿ ಕೆಲಸ ಮಾಡಿಸುವಂತಾಗಿದೆ ಎನ್ನುತ್ತಾರವರು.

Advertisement

ಪರಿಹಾರಧನವೂ ಇಲ್ಲ
ಲಾಕ್‌ಡೌನ್‌ನಿಂದಾಗಿ ಕುಲಕಸುಬಾಗಿರುವ ಕುಂಬಾರಿಕೆಯನ್ನೇ ಆಶ್ರಯಿಸಿಕೊಂಡಿರುವ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಅನೇಕ ವಲಯಗಳಿಗೆ ಸರಕಾರ ಆರ್ಥಿಕ ಪ್ಯಾಕೇಜ್‌ ಘೋಷಿಸಿ, ಪರಿಹಾರಧನವನ್ನು ನೀಡಿದೆ. ಆದರೆ ನಮ್ಮ ಕುಂಬಾರಿಕೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಮಾತ್ರ ಪ್ಯಾಕೇಜ್‌ ಘೋಷಿಸಿಲ್ಲ. ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಿದ್ದೆವು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ದೀಪಾವಳಿ ಬಳಿಕ ಕುಂಬಾರಿಕೆ ಉದ್ಯಮ ಸ್ವಲ್ಪ ಮಟ್ಟಿಗೆ ಸುಧಾರಿಸುವ ನಿರೀಕ್ಷೆಯಿದೆ.
– ಸಂತೋಷ್‌ ಕುಲಾಲ್‌, ಅಧ್ಯಕ್ಷರು, ಕುಂಬಾರರ ಗುಡಿ ಕೈಗಾರಿಕೆ ಸಹಕಾರಿ ಸಂಘ ಉಡುಪಿ

ಸೀಸನ್‌ ಇಡೀ ವಹಿವಾಟಿಲ್ಲ
ಕೊರೊನಾ ಲಾಕ್‌ಡೌನ್‌ನಿಂದಾಗಿ ಕಳೆದ ಒಂದು ಸೀಸನ್‌ ಸಂಪೂರ್ಣ ಯಾವುದೇ ವಹಿವಾಟು ಆಗಿಲ್ಲ. ಅದರ ಹೊಡೆತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೆಚ್ಚಿನ ಸಾಮಗ್ರಿಗಳನ್ನು ಮಾಡಿ ಇಡಲು ಕೂಡ ಧೈರ್ಯ ಬರುತ್ತಿಲ್ಲ. ಇನ್ನಾದರೂ ಉತ್ತಮ ದಿನಗಳು ಬರಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.
– ರಘುರಾಮ ಕುಲಾಲ್‌, ಆಲೂರು, ಕುಂಬಾರಿಕೆ ವೃತ್ತಿನಿರತ

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next