Advertisement

5 ಜಿ  ಸೂಪರ್‌ ಕಾತರ ಫಾಸ್ಟ್‌ಗೆ

07:04 AM Jan 11, 2019 | |

ಎಲ್ಲವೂ ಕ್ಷಣಾರ್ಥದಲ್ಲೇ ಆಗಬೇಕೆಂಬ ಕಾತರ. ಇಂದು ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅದು ಅನಿವಾರ್ಯ ಕೂಡ ಹೌದು. ಅದಕ್ಕೆಂದೇ ಜನರು ವಿಭಿನ್ನ, ವಿಶೇಷವಾದುವುಗಳನ್ನು ನಿರೀಕ್ಷಿಸುತ್ತಾರೆ. 4ಜಿ ಹೊಯ್ತು 5 ಜಿ ಯಾವಾಗ ಅನ್ನುವ ಕಾತುರ ಜನರಲ್ಲಿದೆ.

Advertisement

ಅಂತರ್ಜಾಲ ಯುಗ ಆರಂಭವಾದಾಗಿನ ಹೊತ್ತದು. 2ಜಿ ಸಂಪರ್ಕಕ್ಕಾಗಿ ನೆಟ್ವರ್ಕ್‌ ಹುಡುಕಿ ಸುಸ್ತಾಗುವ ಕಾಲ. ಆಗೆಲ್ಲ 2ಜಿಯದ್ದೇ ಮಾತು. ಅನಂತರ 2ಜಿ ಜಾಗಕ್ಕೆ 3ಜಿ, 4ಜಿ ಕಾಲಿಟ್ಟು ಇಂಟರ್ನೆಟ್ ಪ್ರಿಯರನ್ನು ನಿದ್ದೆಗೆಡಿಸಿತ್ತು. 4ಜಿಯಂತೂ ದೂರ ಸಂಪರ್ಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಶಖೆಯನ್ನೇ ಉಂಟು ಮಾಡಿತು. ಈಗ 4ಜಿ ಯುಗವೂ ಅಂತ್ಯವಾಗುವ ಕಾಲ ಸನಿಹದಲ್ಲಿದೆ. ಏಕೆಂದರೆ ಜಾಗತಿಕ ಮಟ್ಟದಲ್ಲಿ 5ಜಿಯನ್ನು ಜನ ಎದುರು ನೋಡುತ್ತಿದ್ದಾರೆ.

ಜಾಗತಿಕ ರಂಗದಲ್ಲಿ ಹೊಸ ಕ್ರಾಂತಿಗೆ 5ಜಿ ದೂರ ಸಂಪರ್ಕ ಮುನ್ನುಡಿ ಬರೆಯಲಿದೆ. ವಿಶ್ವದಲ್ಲೇ ಅತೀ ವೇಗದ ವೈರ್‌ಲೆಸ್‌ ಇಂಟರ್ನೆಟ್ ಸೇವೆ ಒದಗಿಸುವ ನಿಟ್ಟಿನಲ್ಲಿ 5ಜಿಗೆ ಕಾತರವೂ ಹೆಚ್ಚಿದೆ. ಈಗಾಗಲೇ ದಕ್ಷಿಣ ಕೊರಿಯಾ, ಅಮೆರಿಕ, ಚೀನಾ, ಜಪಾನ್‌, ಬ್ರಿಟನ್‌ ಸೇರಿದಂತೆ ಕೆಲವೇ ಕೆಲವು ರಾಷ್ಟ್ರಗಳಲ್ಲಿ 5ಜಿ ದೂರ ಸಂಪರ್ಕ ಪರೀಕ್ಷಾ ಸಿಗ್ನಲ್‌ಗ‌ಳನ್ನು ನೀಡಲಾಗಿದೆ. ಭಾರತದಲ್ಲಿ 5ಜಿಗೆ ಕಾತರವಿದ್ದರೂ ಈ ಸೇವೆ ಲಭ್ಯವಾಗಲು ಕೆಲ ಸಮಯ ಬೇಕಾಗುತ್ತದೆ. ಕಳೆದ ಸೆಪ್ಟಂಬರ್‌ನಲ್ಲಿ ಈ ಸೇವೆಗಾಗಿ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ದೊರೆತಿದ್ದು, ಭಾರತೀಯ ನೆಟ್ ಪ್ರಿಯರ ಚಿತ್ತ 5ಜಿ ಸೇವೆಯ ಆಗಮನದತ್ತ ತಿರುಗಿದೆ. ಮಾಹಿತಿಗಳ ಪ್ರಕಾರ 2020ಕ್ಕೆ ದೇಶದಲ್ಲಿ 5ಜಿ ಸೇವೆ ಲಭ್ಯವಾಗುವುದು ನಿಶ್ಚಿತ.

ಮಂಗಳೂರಿನಲ್ಲಿ 5ಜಿ ಕಾತರ
ಮೊಬೈಲ್‌ ಯುಗದಲ್ಲಿರುವ ನಮಗೆ ಅಲ್ಲಿ ದೊರಕುವ ಸೇವೆಗಳ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. 5ಜಿ ಬಗ್ಗೆ ಸುದ್ದಿಗಳು ಹರಡುತ್ತಿದ್ದಂತೆ ಮಂಗಳೂರಿನಲ್ಲಿಯೂ ಈ ಬಗ್ಗೆ ಕುತೂಹಲ ಹೆಚ್ಚಿದೆ. ಈ ಕುತೂಹಲಗಳಿಗೆ ಕಾರಣವೂ ಇದೆ. ಎಲ್ಲ ರಂಗಗಳಲ್ಲಿಯೂ ವೇಗವಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಆ ವೇಗಕ್ಕೆ ತಕ್ಕಂತೆ ಸೂಪರ್‌ ಫಾಸ್ಟ್‌ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದು ಅಷ್ಟೇ ಮುಖ್ಯ. ಯುವ ಸಮೂಹದ ಕುತೂಹಲದ ನಡುವೆ, ಸಾರ್ವಜನಿಕ ರಂಗದ ನಿರೀಕ್ಷೆಗಳೂ ಈ 5ಜಿ ಮೇಲೆ ಸಾಕಷ್ಟಿದೆ.

ಮಂಗಳೂರಿನ ವಿವಿಧ ಸಿಮ್‌ ಕಂಪೆನಿಗಳ ಶೋರೂಂಗಳಲ್ಲಿಯೂ 5ಜಿಗಾಗಿ ಸಾಕಷ್ಟು ಕುತೂಹಲವಿದೆ. ಕೆಲ ಶೋರೂಂಗಳಲ್ಲಿ ಗ್ರಾಹಕರು ಸೇವೆ ಪಡೆಯಲು ಬಂದಾಗ 5ಜಿ ಬಗ್ಗೆ ವಿಚಾರಣೆಯನ್ನೂ ನಡೆಸುತ್ತಾರೆ. ಆದರೆ ಇನ್ನೂ ಕೂಡ ಈ ಬಗ್ಗೆ ಶೋರೂಂ ಸಿಬಂದಿಗಳಿಗೆ ಮಾಹಿತಿ ಇಲ್ಲವಾದ್ದರಿಂದ ಗ್ರಾಹಕರಿಗೆ ತಿಳಿಸುವುದು ಸಾಧ್ಯವಾಗುತ್ತಿಲ್ಲ. ಜಿಯೋ ಶೋರೂಂನ ಸಿಬಂದಿ ವಸಂತ್‌ ಹೇಳುವ ಪ್ರಕಾರ, 5ಜಿ ಬಗ್ಗೆ ಪ್ರತಿಯೊಬ್ಬರಿಗೂ ಕುತೂಹಲವಿದೆ. ಆದರೆ ಇನ್ನೂ 5ಜಿ ಸೇವೆ ಲಭ್ಯವಾಗದಿರುವುದರಿಂದ ಈ ಬಗ್ಗೆ ಹೆಚ್ಚೇನು ತಿಳಿದಿಲ್ಲ. ಮುಂದಿನ 2020ರ ವೇಳೆಗೆ ಸೇವೆ ಸಿಗಬಹುದು. 4ಜಿಯಂತೆ 5ಜಿಗೂ ಹೊಂದಿಕೆಯಾಗುವ ಮೊಬೈಲ್‌ಗ‌ಳು ಮಾರುಕಟ್ಟೆಗೆ ಬರಲಿವೆ ಎನ್ನುತ್ತಾರೆ.

Advertisement

ಸೂಪರ್‌ ಫಾಸ್ಟ್‌ ಇಂಟರ್ನೆಟ್
4ಜಿ ದೂರ ಸಂಪರ್ಕ ಸೇವೆಯಲ್ಲಿ ಅತಿ ವೇಗದ ಡೌನ್‌ಲೋಡ್‌, ಅಂತರ್ಜಾಲ ಹುಡುಕಾಟಗಳಿಂದಾಗಿ ಜನರು ಖುಷಿಯಾಗಿದ್ದರು. ಆದರೆ ಅದಕ್ಕಿಂತಲೂ ವೇಗದ ಸೇವೆ 5ಜಿಯಲ್ಲಿ ಸಿಗಲಿದೆ ಎಂದರೆ ಸಹಜವಾಗಿಯೇ ಕಾತರ ಇದ್ದೇ ಇರುತ್ತದೆ. 4ಜಿಗಿಂತ ದುಪ್ಪಟ್ಟು ವೇಗದ ಸಾಮರ್ಥ್ಯವನ್ನು 5ಜಿ ವ್ಯವಸ್ಥೆ ಹೊಂದಿದೆ. ಎರಡು ಜಿಬಿಯ ಸಿನಿಮಾ ಡೌನ್‌ಲೋಡ್‌ ಮಾಡಲು 3ಜಿ, 4ಜಿ ವ್ಯವಸ್ಥೆಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಬೇಕಾದರೆ 5ಜಿಯಲ್ಲಿ ಕೇವಲ ಕೆಲ ನಿಮಿಷಗಳು ಸಾಕು.

5ಜಿ ಸೇವೆಗೆ ಕಂಪೆನಿಗಳ ಸಿದ್ಧತೆ
ಪ್ರಸಿದ್ಧ ದೂರ ಸಂಪರ್ಕ ಕ್ಷೇತ್ರದ ಕಂಪೆನಿ ಏರ್‌ಟೆಲ್‌ ಕಳೆದ ವರ್ಷವೇ 5ಜಿ ಸೇವೆ ನೀಡುವ ಬಗ್ಗೆ ಘೋಷಿಸಿಕೊಂಡಿದೆ. ವೋಡಾಫೋನ್‌, ಐಡಿಯಾ, ರಿಲಯನ್ಸ್‌, ಬಿಎಸ್‌ಎನ್ನೆಲ್‌ ಮುಂತಾದ ಕಂಪೆನಿಗಳು ಗ್ರಾಹಕರಿಗೆ 5ಜಿ ಸೇವೆ ನೀಡುವುದಾಗಿ ಘೋಷಿಸಿಕೊಂಡಿವೆ.

ಈಗಿರುವ ಮೊಬೈಲ್‌ನಲ್ಲಿ 5ಜಿ ಸಂಪರ್ಕ ಪಡೆಯಲು ಸಾಧ್ಯವಾಗದು. ಅದಕ್ಕಾಗಿ ಬೇರೆಯದೇ ಮೊಬೈಲ್‌ ಫೋನ್‌ ಹೊಸತಾಗಿ ಖರೀದಿಸಬೇಕಾಗುತ್ತದೆ. ಝಡ್‌ಟಿಇ ಗಿಗಾಬೈಟ್ ಫೋನ್‌ ಜಗತ್ತಿನ ಮೊದಲ 5ಜಿ ಆಧಾರಿತ ಫೋನ್‌ ಎಂದು ಘೋಷಿಸಲಾಗಿದೆ. ಆದರೆ ಇದು ಇನ್ನಷ್ಟೆ ಮಾರುಕಟ್ಟೆಗೆ ಬರಬೇಕಿದೆ. ಇಷ್ಟೇ ಅಲ್ಲದೆ, ಸ್ಯಾಮ್‌ಸಂಗ್‌ ನೋಟ್8, ಆ್ಯಪಲ್‌ 8, ನೋಕಿಯಾ 5ಜಿ ಮೊಬೈಲ್‌ ಫೋನ್‌ಗಳೂ ಮಾರುಕಟ್ಟೆಗೆ ಆಗಮಿಸಲಿವೆ ಎಂಬುದು ಲಭ್ಯ ಮಾಹಿತಿ. ಹುವಾಯಿ, ಎರಿಕ್ಸನ್‌ ಮುಂತಾದ ಕಂಪೆನಿಗಳು ಈಗಾಗಲೇ 5ಜಿ ತಂತ್ರಜ್ಞಾನಕ್ಕೆ ಸಿದ್ಧತೆ ನಡೆಸುತ್ತಿವೆ.

ಗ್ರಾಮೀಣ ಭಾಗದಲ್ಲೂ ಸೇವೆ ಸಿಗಲಿ
ಇನ್ನೇನು ಕೆಲ ದಿನಗಳಲ್ಲಿ 5ಜಿ ದೂರ ಸಂಪರ್ಕ ಸೇವೆ ಭಾರತಕ್ಕೆ ಕಾಲಿಡಲಿದ್ದು, ಈ ಬಗ್ಗೆ ತುಂಬಾ ನಿರೀಕ್ಷೆಗಳಿವೆ. ಕೇವಲ ನಗರ ಪ್ರದೇಶಗಳಲ್ಲದೆ, ಗ್ರಾಮೀಣ ಭಾಗಗಳಲ್ಲಿಯೂ 5ಜಿ ಸೇವೆ ಸಿಗುವಂತಾದರೆ ಉತ್ತಮ ಎಂಬುದು ಬಂಟ್ಸ್‌ ಹಾಸ್ಟೆಲ್‌ನ ಪ್ರಕಾಶ್‌ ಎ. ಅವರ ಮಾತು.

ದುಬಾರಿ ತಂತ್ರಜ್ಞಾನ
ಒಂದು ಅಂದಾಜಿನ ಪ್ರಕಾರ 2026ಕ್ಕೆ ಅಂದಾಜು 123 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯನ್ನು 5ಜಿ ಹೊಂದಿರಲಿದೆ. ಅಷ್ಟಕ್ಕೂ 5ಜಿ ದೂರ ಸಂಪರ್ಕ ತಂತ್ರಜ್ಞಾನ ಕೇವಲ ವೇಗದ ಇಂಟರ್ನೆಟ್ ಒದಗಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. 5ಜಿ ತಂತ್ರಜ್ಞಾನದಡಿಯಲ್ಲಿ ಒಂದೇ ಡಿವೈಸ್‌ನಿಂದ ನೂರಾರು ಸಂಪರ್ಕಗಳನ್ನು ಪಡೆಯಬಹುದಾಗಿದೆ. ಆದರೆ ಇದು ದುಬಾರಿ ತಂತ್ರಜ್ಞಾನವಾಗಿದ್ದು, ಇಂಟರ್ನೆಟ್‌ಗೆ ಹೆಚ್ಚಿನ ಹಣ ವ್ಯಯಿಸಬೇಕಾಗಿ ಬರುವುದಂತೂ ಪಕ್ಕ.

ಕುತೂಹಲ
ಈಗಾಗಲೇ 4ಜಿ ಯುವ ಜನತೆ ಯನ್ನು ಹುಚ್ಚೆಬ್ಬಿಸಿದೆ. ಮುಂಬರುವ 5ಜಿ ಬಗ್ಗೆ ಸಾಕಷ್ಟು ಕುತೂಹಲವಿದೆ. 4ಜಿಗಿಂತಲೂ ಹೆಚ್ಚಿನ ವೇಗ ಹೊಂದಿರುವ 5ಜಿಯ ಬಗ್ಗೆ ನಿರೀಕ್ಷೆ ತುಂಬಾ ಇದೆ.
– ಪುಷ್ಪರಾಜ್‌ ಯೆಯ್ನಾಡಿ

•ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next