Advertisement

ಸೋಂಕಿತ 9 ಜನ ಊರೊಳಗೆ-ಸೋಂಕಿಲ್ಲದವ ಆಸ್ಪತ್ರೆಗೆ!

12:19 PM May 31, 2020 | Naveen |

ವಾಡಿ: ಕ್ವಾರಂಟೈನ್‌ ಕೇಂದ್ರದಿಂದ ಬಿಡುಗಡೆಯಾದ ಬಳಿಕ ಮಹಾಷ್ಟ್ರದಿಂದ ಆಗಮಿಸಿದ ಗುಳೆ ಕಾರ್ಮಿಕರ ಕೋವಿಡ್ ವರದಿ ಪ್ರಕಟಗೊಂಡಿದ್ದು, ಎರಡು ದಿನ ಊರೊಳಗೆ ಅಡ್ಡಾಡಿದ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಕೋವಿಡ್ ಪಾಜಿಟಿವ್‌ ಬಂದವನನ್ನು ಊರೊಳಗೆ ಬಿಟ್ಟು, ನೆಗೆಟಿವ್‌ ಬಂದಾತನನ್ನು ಅಧಿಕಾರಿಗಳು ಚಿಕಿತ್ಸೆಗೆ ದಾಖಲಿಸಿದ್ದಾರೆ ಎನ್ನುವ ಇನ್ನೊಂದು ಎಡವಟ್ಟು ನಡೆದಿರುವುದು ಬೆಳಕಿಗೆ ಬಂದಿದ್ದು, ತೀವ್ರ ಆತಂಕ ಮೂಡಿಸಿದೆ. ಚಿತ್ತಾಪುರ ತಾಲೂಕಿನ ಕರದಾಳ ಕಸ್ತೂರಿಬಾ ವಸತಿ ಶಾಲೆ ಕ್ವಾರಂಟೈನ್‌ ಕೇಂದ್ರದಲ್ಲಿ 14 ದಿನ ಕಳೆದ ಬಳಿಕ ವಿವಿಧ ಗ್ರಾಮ ಮತ್ತು ತಾಂಡಾಗಳಿಗೆ ಸೇರಿದ ಮಹಾರಾಷ್ಟ್ರದ ವಲಸಿಗರನ್ನು ಗಂಟಲು ದ್ರಾವಣದ ವರದಿ ಬರುವ ಮುಂಚೆಯೇ ಬಿಡುಗಡೆಗೊಳಿಸಲಾಗಿತ್ತು. ಇವರೆಲ್ಲ ದೇವಾಪುರ ತಾಂಡಾಕ್ಕೆ ಸೇರಿದ 10 ಜನರಾಗಿದ್ದಾರೆ.

ಈ ಹತ್ತು ವಲಸಿಗರು ಕ್ವಾರಂಟೈನ್‌ ಕೇಂದ್ರದಿಂದ ಬಿಡುಗಡೆಯಾಗಿ ಊರೊಳಗೆ ಪ್ರವೇಶಿಸಿದ ಎರಡು ದಿನದ ಬಳಿಕ ಒಂಭತ್ತು ಜನರಿಗೆ ಸೋಂಕು ಇರುವುದು ಪತ್ತೆಯಾಗಿತ್ತು. ಒಬ್ಬನಿಗೆ ನೆಗೆಟಿವ್‌ ಬಂದಿತ್ತು. ಸೋಂಕು ಖಚಿತವಾದ ವ್ಯಕ್ತಿ ತಾಂಡಾದೊಳಗೆ ಉಳಿದುಕೊಂಡಿದ್ದಾನೆ. ಈತ ತನ್ನ ಕುಟುಂಬ ಸದಸ್ಯರೊಂದಿಗೆ ಬೆರೆತಿದ್ದಾನೆ.

ತಾಂಡಾದಲ್ಲೆಲ್ಲ ಅಲೆದಾಡಿದ್ದಾನೆ. ವಾಡಿ ಪಟ್ಟಣಕ್ಕೂ ಹೋಗಿ ಸುತ್ತಾಡಿ ಬಂದಿದ್ದಾನೆ. ಅಧಿಕಾರಿಗಳಿಗೆ ತಪ್ಪಿನ ಅರಿವಾದ ಬಳಿಕ ಶನಿವಾರ ದೇವಾಪುರ ತಾಂಡಾಕ್ಕೆ 108 ವಾಹನ ಕಳಿಸಿ ಸೋಂಕಿತನನ್ನು ವಶಕ್ಕೆ ಪಡೆಯುವ ಮೂಲಕ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಕಮರವಾಡಿ ಗ್ರಾ.ಪಂ ಸದಸ್ಯ ಹೀರಾ ಜಾಧವ ಹಾಗೂ ದೇವಾಪುರ ತಾಂಡಾ ನಿವಾಸಿ ಪ್ರೇಮಕುಮಾರ ರಾಠೊಡ ಆಪಾದಿಸಿದ್ದಾರೆ. ಈ ನಡುವೆ ಮಹಾಮಾರಿ ಕೊರೊನಾ ಕಟ್ಟಿಹಾಕಲು ಮಹಾರಾಷ್ಟ್ರದ ವಲಸಿಗರಿಗೆ 14 ದಿನಗಳ ಕ್ವಾರಂಟೈನ್‌ ಮಾಡಿದರೂ ಅಧಿ ಕಾರಿಗಳ ಎಡವಟ್ಟಿನಿಂದ ಸೋಂಕು ಗ್ರಾಮದೊಳಗೆ ಪ್ರವೇಶ ಪಡೆದಿದೆ. ಹೀಗಾಗಿ ಹಳಕರ್ಟಿ ಗ್ರಾ.ಪಂ ವ್ಯಾಪ್ತಿಯ ದೇವಾಪುರ ತಾಂಡಾದ ಜನರಲ್ಲಿ ಭೀತಿ ಶುರುವಾಗಿದೆ.

ಸ‌ರ್ಕಾರದ ಆದೇಶದಂತೆ ಬಿಡುಗಡೆ
ದೇವಾಪುರ ತಾಂಡಾಕ್ಕೆ ಸೇರಿದ ಮಹಾರಾಷ್ಟ್ರದ ವಲಸಿಗರನ್ನು 14 ದಿನಗಳ ಕ್ವಾರಂಟೈನ್‌ ಪೂರ್ಣಗೊಂಡ ಬಳಿಕ ಬಿಡುಗಡೆ ಮಾಡಬೇಕು ಎನ್ನುವ ಸರಕಾರದ ಆದೇಶದಂತೆ ಬಿಡುಗಡೆ ಮಾಡಿದ್ದೇವೆ. ಇದಕ್ಕೂ ಮೊದಲು ಅವರ ಗಂಟಲು ದ್ರಾವಣ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ತಾಂಡಾದ 10 ಜನರಲ್ಲಿ ಸೋಂಕು ದೃಢಪಟ್ಟ ಬಳಿಕ ಮತ್ತೆ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಅಲ್ಲದೇ ಒಂದೇ ಮನೆಯ ಸಹೋದರರು ನೀಡಿದ ತಪ್ಪು ಮಾಹಿತಿಯಿಂದಾಗಿ ಸೋಂಕಿತ ಮನೆಯಲ್ಲೇ ಉಳಿದು, ಸೋಂಕಿಲ್ಲದ ಯುವಕ ಆಸ್ಪತ್ರೆಗೆ ದಾಖಲಾದ ಅಚಾತುರ್ಯ ಘಟಿಸಿದೆ. ಈಗ ಸೋಂಕಿತ ಆಸ್ಪತ್ರೆಯಲ್ಲಿದ್ದಾನೆ. ಸೋಂಕಿಲ್ಲದಾತ ಹೋಂ ಕ್ವಾರಂಟೈನ್‌ದಲ್ಲಿ ಇದ್ದಾನೆ. ಕ್ವಾರಂಟೈನ್‌ ಪೂರ್ಣಗೊಳಿಸದವರೆಲ್ಲ ನಮ್ಮ ಆದೇಶ ಉಲ್ಲಂಘಸಿದ್ದರಿಂದ ಸೋಂಕು ಪಸರಿಸುವ ಆತಂಕ ಹೆಚ್ಚಾಗಿದೆ.
ಡಾ| ಅಮೃತ,
ಪ್ರಭಾರಿ ತಾಲೂಕು ವೈದ್ಯಾಧಿಕಾರಿ, ಚಿತ್ತಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next