Advertisement

ಕಸ ಕೊಟ್ಟು ಓಣಿ ಹಸನಿಟ್ಟ ವಾಡಿ ಜನತೆ

05:59 PM Aug 10, 2021 | Team Udayavani |

ವಾಡಿ: ಮನೆಯ ಕಸವನ್ನು ಅಂಗಳಕ್ಕೆ ಹರಡಿ ಅಂಗಳದ ಕಸವನ್ನು ಬೀದಿಗೆ ಬೀಸಾಡುತ್ತಿದ್ದ ಬಡಾವಣೆಯ ಜನರಲ್ಲಿ ಇದ್ದಕಿದ್ದಂತೆ ಬದಲಾವಣೆ ಬಂದಿದೆ! ಐದಾರು ದಿನಕ್ಕೊಮ್ಮೆ ಬೀದಿ ಕಸ ವಿಲೇವಾರಿ ಮಾಡುತ್ತಿದ್ದ ಪೌರಕಾರ್ಮಿಕರು, ಪ್ರತಿದಿನ ಜನರ ಮನೆಬಾಗಿಲಿಗೆ ಬಂದು ನಿಲ್ಲುತ್ತಿದ್ದಾರೆ!! ರೋಗರುಜಿನುಗಳ ತಾಣವಾಗಿರುತ್ತಿದ್ದ ಬೀದಿಗಳಲ್ಲಿ ಈಗ ಕಸ ಕಣ್ಮರೆಯಾಗಿದ್ದು, ಓಣಿಯ ಜನರೇ ಅಲ್ಲಿ ರಂಗೋಲಿ ಬಿಡಿಸಿ ಬಡಾವಣೆಗಳ ರಂಗು ಬದಲಿಸಿದ್ದಾರೆ!!!

Advertisement

ಹೌದು. ಸುಮಾರು ಐವತ್ತು ಸಾವಿರ ಜನಸಂಖ್ಯೆ ಹೊಂದಿರುವ ಚಿತ್ತಾಪುರ ತಾಲೂಕಿನ ಸಿಮೆಂಟ್‌ ನಗರಿ ವಾಡಿ ಪಟ್ಟಣದ ಪುರಸಭೆ ಆಡಳಿತ ಸ್ವಚ್ಛತಾ ಅಭಿಯಾನದ ತನ್ನ ನಿರೀಕ್ಷಿತ ಗುರಿ ಮುಟ್ಟಲು ದೃಢ ಹೆಜ್ಜೆಯಿಟ್ಟಿದೆ. ಘನತ್ಯಾಜ್ಯ ವಿಲೇವಾರಿಗೆ ವಿಶೇಷ ಆದ್ಯತೆ ನೀಡಿದೆ. ಪ್ರತಿದಿನ ಬೆಳಗ್ಗೆ ಬಡಾವಣೆಗೆ ಬರುವ ಪುರಸಭೆ ಕಸ ವಿಲೇವಾರಿ ವಾಹನಗಳು ಹತ್ತಾರು ಟನ್‌ ಕಸವನ್ನು ನಗರದ ಹೊರ ವಲಯದ ಕಸ ಸಂಸ್ಕರಣ ಘಟಕಕ್ಕೆ ಸಾಗಿಸುತ್ತಿವೆ. ಪೌರಕಾರ್ಮಿಕರು
ಜನರಿಂದ ನೇರವಾಗಿ ಹಸಿ ಕಸ-ಒಣ ಕಸವನ್ನು ಪ್ರತ್ಯೇಕವಾಗಿ ಸ್ವೀಕರಿಸಿ ಗೊಬ್ಬರ ತಯಾರಿಕೆ ಯಂತ್ರಕ್ಕೆ ಕೊಡುತ್ತಿದ್ದಾರೆ. ನಗರದ ವಿವಿಧ ಬಡಾವಣೆಗಳಿಗೆ ಸಿಸಿ ರಸ್ತೆಗಳ ಭಾಗ್ಯ ದೊರೆತಿದೆ. ಸಿಸಿ ಚರಂಡಿಗಳು ನಿರ್ಮಾಣಗೊಂಡಿವೆ.

ಬದಲಾವಣೆಯತ್ತ ಮುಖ ಮಾಡಿರುವ ಮಲ್ಲಿಕಾರ್ಜುನ ದೇವಸ್ಥಾನ ಬಡಾವಣೆ, ಅಂಬೇಡ್ಕರ್‌ ಕಾಲೋನಿ, ಜಾಂಬವೀರ ಕಾಲೋನಿ, ಪಿಲಕಮ್ಮಾದೇವಿ ಬಡಾವಣೆ. ಕಲಕಂ ಏರಿಯಾ, ಚೌಡೇಶ್ವರ ಕಾಲೋನಿ, ಸಿದ್ಧಾರ್ಥ ನಗರ, ಸೇವಾಲಾಲ ನಗರ, ರೆಸ್ಟ್‌ಕ್ಯಾಂಪ್‌ ತಾಂಡಾ, ಮರಾಠಾ ಗಲ್ಲಿ, ಶಿವರಾಯ ಚೌಕಿ, ಭೀಮನಗರ ಓಣಿಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿದೆ.

“ವಾಡಿಯಲ್ಲ ಅದು ರಾಡಿ’ ಎಂದು ಹೊರಗಿನ ಜನರು ಅವಮಾನಕರ ಮಾತುಗಳಿಂದ ಟೀಕಿಸುವ ಕಾಲವೊಂದಿತ್ತು. ಅದೀಗ ನಿಧಾನವಾಗಿ ಬದಲಾಗುತ್ತಿದೆ. ಪ್ರತಿಯೊಂದು ಬಡಾವಣೆಗೆ ಸಿಸಿ ರಸ್ತೆಗಳು ಬಂದಿವೆ. ಬಹುತೇಕ ಕಡೆಗಳಲ್ಲಿ ಚರಂಡಿಗಳು ನಿರ್ಮಾಣವಾಗಿವೆ. ಜನರಲ್ಲಿ ಜಾಗೃತಿ ಮೂಡಿದೆ. ಕಸವನ್ನು ರಸ್ತೆಗೆ ಚೆಲ್ಲುವ ಪದ್ಧತಿ ಕೊನೆಗೊಂಡಿದೆ. ಮನೆಯ ಕಸವನ್ನು ಡಬ್ಬಿಯಲ್ಲಿ ತುಂಬಿಟ್ಟು ಬೆಳಗ್ಗೆ ವಾಹನಕ್ಕೆ ಸುರಿಯುತ್ತಾರೆ. ಪುರಸಭೆ ವಾಹನಗಳು ಬಡಾವಣೆಗೆ
ಬರುತ್ತಿವೆ. ಪೌರಕಾರ್ಮಿಕರು ಮನೆಬಾಗಿಲಿಗೆ ಬಂದು ಕಸ ಸ್ವೀಕರಿಸುತ್ತಾರೆ. ಇದೊಂದು ಉತ್ತಮ ಪರಿವರ್ತನೆ ಎನ್ನುತ್ತಾರೆ ಮಲ್ಲಿಕಾರ್ಜುನ ಗುಡಿ ಬಡಾವಣೆ ನಿವಾಸಿ ಜುಗಲ್‌ಕಿಶೋರ ವರ್ಮಾ.

ಕಸದ ಬುಟ್ಟಿಗಳಲ್ಲಿ ಕಸ ತುಂಬಿಕೊಂಡ ಜನರು ಪುರಸಭೆ ವಾಹನ ಬರುವಿಕೆಗಾಗಿ ಕಾಯ್ದು ನಿಂತಿರುತ್ತಾರೆ. ಬಿಯ್ನಾಬಾನಿ ಬಡಾವಣೆ, ಹನುಮಾನ ನಗರ, ವಿಜಯನಗರ, ಇಂದ್ರಾ ನಗರದಂತಹ ಸ್ಲಂ ಬಡಾವಣೆಗಳು ಮೂಲಸೌಕರ್ಯಗಳಿಂದ ವಂಚಿತಗೊಂಡಿವೆ. ಈ ಬಡಾವಣೆಯ ಜನರು ನಗರದಲ್ಲಿದ್ದರೂ ಸಮಸ್ಯೆಗಳ ಮಧ್ಯೆ ಬದುಕು ಸಾಗಿಸುತ್ತಿದ್ದಾರೆ. ಸಮಸ್ಯೆಗಳನ್ನು ಜೀವಂತವಾಗಿಟ್ಟುಕೊಂಡೇ ಪುರಸಭೆ ಆಡಳಿತ ಅಸ್ವಚ್ಛತೆಯ ವಿರುದ್ಧ ಹೋರಾಡುತ್ತಿದೆ. ಏಳು ಬೀಳಿನ ಸಂಕಟದಲ್ಲೂ ವಾಡಿ ನಗರ ಶೇ.90ರಷ್ಟು ಸ್ವತ್ಛತೆಯಿಂದ ಕೂಡಿದೆ.

Advertisement

ಕುಡಿಯಲು ಶುದ್ಧ ನೀರು ಪೂರೈಸುವ ಜತೆಗೆ ನಗರದ ಅಂದ ಹದಗೆಡಿಸುತ್ತಿರುವ ಹಂದಿ ಮತ್ತು ಬೀದಿ ನಾಯಿಗಳನ್ನು ನಿಯಂತ್ರಿಸಿ ಸೊಳ್ಳೆ ಕಾಟದಿಂದ ಜನರನ್ನು ರಕ್ಷಿಸಿದರೆ ಪುರಸಭೆ ಆಡಳಿತ ತನ್ನ ಹಣೆಗೆ ಇನ್ನಷ್ಟು ಪ್ರಗತಿ ಗರಿ ಮುಡಿದುಕೊಳ್ಳಲಿದೆ ಎನ್ನುತ್ತಾರೆ ಪ್ರಜ್ಞಾವಂತರು.

ಕೇವಲ ನಲವತ್ತು ಜನ ಪೌರಕಾರ್ಮಿಕರಿಂದ 23 ವಾರ್ಡ್‌ಗಳ ಸ್ವಚ್ಛತೆ ಮಾಡಿಸಲಾಗುತ್ತಿದೆ. ಹೀಗಾಗಿ ಕೆಲವೇ ಜನ ಪೌರಕಾರ್ಮಿಕರ ಮೇಲೆ ಕೆಲಸದ ಒತ್ತಡ ಹೇರಲಾಗುತ್ತಿದೆ. ಇನ್ನಷ್ಟು ಮಾನವ ಸಂಪನ್ಮೂಲ ಬಳಕೆ ಮಾಡಿಕೊಂಡು ಚರಂಡಿಗಳ ಸ್ವತ್ಛತೆಗೆ ವಿಶೇಷ ಆದ್ಯತೆ ನೀಡಬೇಕು. ವಾರಕ್ಕೊಮ್ಮೆಯಾದರೂ ಮುಖ್ಯಾಧಿಕಾರಿಗಳು ಬಡಾವಣೆಗಳಿಗೆ ಭೇಟಿ ನೀಡಿದರೆ, ಪೋಲಾಗುವ ಕುಡಿಯುವ ನೀರು, ಬೀದಿ ದೀಪಗಳ ಸಮಸ್ಯೆ, ಶುಚಿತ್ವದ ದರ್ಶನವಾಗುತ್ತದೆ.
*ಜುಗಲ್‌ಕಿಶೋರ ವರ್ಮಾ. ನಿವೃತ್ತ ಎಸಿಸಿ ಕಾರ್ಮಿಕ, ಮಲ್ಲಿಕಾರ್ಜುನ ಗುಡಿ ಬಡಾವಣೆ ನಿವಾಸಿ.

*ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next