Advertisement

ವಾಡಿ ಪುರಸಭೆ: ತಿಂಗಳಲ್ಲಿ 2.46 ಲ ರೂ. ಸಂಗ್ರಹ

11:34 AM Jan 21, 2022 | Team Udayavani |

ವಾಡಿ: ಪಟ್ಟಣದಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಅಂಗಡಿಗಳ ಲೈಸೆನ್ಸ್‌ ರಿನಿವಲ್‌ ಅಭಿಯಾನಕ್ಕೆ ವ್ಯಾಪಾರಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅಂಗಡಿ ಬಾಗಿಲಿಗೆ ಬಂದು ಪರವಾನಗಿ ನೀಡುತ್ತಿರುವ ಪುರಸಭೆ ಅಧಿಕಾರಿಗಳ ಕಾರ್ಯಕ್ಕೆ ವರ್ತಕರು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಅಂಗಡಿ ಪರವಾನಗಿ ಮರು ನೋಂದಣಿ ಮಾಡಿಕೊಡುವಂತೆ ಪುರಸಭೆ ಕಚೇರಿಗೆ ಅಲೆದರೂ ನೋಂದಣಿಯಾಗದೆ ಬೇಸರಗೊಳ್ಳುತ್ತಿದ್ದ ವ್ಯಾಪಾರಿಗಳು, ಅಧಿಕಾರಿಗಳು ತಾವಿದ್ದಲ್ಲಿಗೆ ಬಂದು ಶುಲ್ಕ ಪಡೆದು, ರಸೀದಿ ನೀಡುತ್ತಿದ್ದಾರೆ. ಹೀಗಾಗಿ ಅಲೆದಾಟ ತಪ್ಪಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಪಟ್ಟಣದ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಲೈಸೆನ್ಸ್‌ ಅಭಿಯಾನದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಪುರಸಭೆ ಹಿರಿಯ ಆರೋಗ್ಯ ನೈರ್ಮಲ್ಯ ನಿರೀಕ್ಷಕಿ ಲತಾಮಣಿ, ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನಗರದ ಯಾವುದೇ ಅಂಗಡಿಗಳ ಪರವಾನಗಿ ಮರು ನೋಂದಣಿ ನಡೆದಿರಲಿಲ್ಲ. ಈಗ ಸರ್ಕಾರದ ಆದೇಶದಂತೆ ಲೈಸೆನ್ಸ್‌ ಅಭಿಯಾನ ಆರಂಭಿಸಿದ್ದೇವೆ. ಹಳೆಯ ಪಟ್ಟಿಯಂತೆ ನಗರದಲ್ಲಿ ಒಟ್ಟು 386 ಅಂಗಡಿಗಳಿವೆ. ಮುಂದಿನ ಸಲ ಮತ್ತೊಮ್ಮೆ ಸರ್ವೇ ಮಾಡುವ ಮೂಲಕ ಹೊಸ ಅಂಗಡಿಗಳನ್ನು ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಪ್ರತಿಯೊಬ್ಬ ವ್ಯಾಪಾರಿಯೂ ಅಂಗಡಿಯ ಪರವಾನಗಿ ಹೊಂದುವುದು ಕಡ್ಡಾಯವಾಗಿದ್ದು, ಅದಕ್ಕಾಗಿ ವಿಶೇಷ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ವ್ಯಾಪಾರಿಗಳು ಪುರಸಭೆ ಕಚೇರಿಗೆ ಬಂದು ತೊಂದರೆ ಅನುಭವಿಸುವುದು ಬೇಡ ಎಂಬ ಕಾರಣಕ್ಕೆ ನಾವೇ ವ್ಯಾಪಾರಿಗಳಿರುವ ಸ್ಥಳಕ್ಕೆ ತೆರಳಿ ಅಂಗಡಿ ಪರವಾನಗಿ ಮರು ನೋಂದಣಿ ಮಾಡುವ ಕಾರ್ಯ ಮಾಡುತ್ತಿದ್ದೇವೆ. ಸದ್ಯ ಬಹುತೇಕ ಎಲ್ಲ ಅಂಗಡಿಗಳ ವರ್ತಕರು ಇದಕ್ಕೆ ಸಹಕರಿಸಿದ್ದರಿಂದ ಒಟ್ಟು 2.46 ಲಕ್ಷ ರೂ. ಶುಲ್ಕ ವಸೂಲಿಯಾಗಿದ್ದು, ಪುರಸಭೆ ಖಜಾನೆಗೆ ಜಮೆ ಮಾಡಿದ್ದೇವೆ. ಇನ್ನೂ ಕೆಲ ಅಂಗಡಿಗಳು ಬಾಕಿ ಉಳಿದಿವೆ. ಈ ವರ್ಷ ಪರವಾನಗಿ ಶುಲ್ಕ 1250ರೂ. ಇದೆ. ಮುಂದಿನ ಪರಿಷ್ಕೃತ ದರದಲ್ಲಿ ತುಸು ಏರಿಕೆಯಾಗಲಿದೆ. ಆದ್ದರಿಂದ ವ್ಯಾಪಾರಿಗಳು ಕಡ್ಡಾಯವಾಗಿ ಲೈಸೆನ್ಸ್‌ ನೋಂದಣಿಗೆ ಮಹತ್ವ ನೀಡಬೇಕು ಎಂದು ಮನವಿ ಮಾಡಿದರು.

ತೆರಿಗೆ ಪಾವತಿ ಎಂಬುದು ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥೆಗೆ ಬಲವಿದ್ದಂತೆ. ಸಾರ್ವಜನಿಕರು ಪಾವತಿಸುವ ವಿವಿಧ ತೆರಿಗೆ ಶುಲ್ಕದಿಂದಲೇ ನಮ್ಮೂರ ಸ್ವತ್ಛತೆಗೆ ಬಳಕೆಯಾಗುತ್ತದೆ. ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಇದು ಸಹಕಾರಿಯಾಗುತ್ತದೆ. ಅಂಗಡಿಗಳ ಮಾಲೀಕರು ಪ್ರತಿ ವರ್ಷವೂ ಸರಿಯಾದ ಸಮಯಕ್ಕೆ ಲೈಸೆನ್ಸ್‌ ಮರು ನೋಂದಣಿ ಮಾಡಿಕೊಳ್ಳಬೇಕು. ಬೇಜವಾಬ್ದಾರಿ ವಹಿಸಿದರೆ ಅಂತಹವರ ಅಂಗಡಿಗಳ ವಿದ್ಯುತ್‌ ಸಂಪರ್ಕವೇ ಕಡಿತಗೊಳಿಸಬೇಕಾಗುತ್ತದೆ. ಅಂತಹ ಕೆಟ್ಟ ನಡೆಗೆ ಅವಕಾಶ ನೀಡದೇ ವ್ಯಾಪಾರದ ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

Advertisement

ಪುರಸಭೆ ಕಿರಿಯ ಅರೋಗ್ಯ ನೈರ್ಮಲ್ಯ ನಿರೀಕ್ಷಕ ಬಸವರಾಜ ಪೂಜಾರಿ, ಸಿಬ್ಬಂದಿಗಳಾದ ನಾಗೇಶ ಎಲ್‌., ಶಿವುಕಾಂತಮ್ಮ, ಪಾಂಡು ರಾಠೊಡ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next