Advertisement

ಖಾತ್ರಿ ಯೋಜನೆಯಡಿ ಕೆರೆಗೆ ಬಂತು ಮರು ಜೀವ!

12:24 PM Mar 07, 2020 | Naveen |

ವಾಡಿ: ಐದು ವರ್ಷಗಳ ಕಾಲ ದುಡಿಯುವ ಕೈಗಳಿಗೆ ಕೆಲಸ ಒದಗಿಸಿಕೊಟ್ಟ ನಿರ್ಜೀವ ಕೆರೆಯೊಂದು ಮರುಜೀವ ಪಡೆದುಕೊಂಡಿದ್ದು, ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗಾಗಿ ಜಾರಿಗೊಳಿಸಲಾದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಾಕಾರವಾಗಿದೆ.

Advertisement

ಚಿತ್ತಾಪುರ ತಾಲೂಕು ವ್ಯಾಪ್ತಿಯ ರಾವೂರ ಗ್ರಾ.ಪಂ ಆಡಳಿತವು ಕಳೆದ ಐದು ವರ್ಷಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನಿರೀಕ್ಷಿತ ಮಟ್ಟದ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದು, ತಾಲೂಕಿನಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಗ್ರಾಮದ ಸರ್ವೇ ನಂ.117ರಲ್ಲಿರುವ 10 ಎಕರೆ ಸರ್ಕಾರಿ ಜಮೀನಿನಲ್ಲಿ ಆಳೆತ್ತರ ಹೂಳೆತ್ತುವ ಮೂಲಕ ಜೀವಜಲ ಸಂಗ್ರಹಿಸುವ ಸುಂದರ ಕೆರೆ ನಿರ್ಮಾಣವಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದ 170 ಕೂಲಿ ಕಾರ್ಮಿಕರು ಕಳೆದ ಐದು ವರ್ಷಗಳಿಂದ ಹೂಳೆತ್ತುವ ಕಾಯಕದಲ್ಲಿ ತೊಡಗಿದ್ದು, ಬೆಟ್ಟದಷ್ಟು ಹೂಳು ಹೊರ ಚೆಲ್ಲಿದ್ದಾರೆ.

ಉದ್ಯೋಗದ ಸ್ಥಳದಲ್ಲಿ ನೆರಳಿನ ಸೌಲಭ್ಯ ವಂಚಿತರಾದ ಕಾರ್ಮಿಕರು, ಮುಳ್ಳುಕಂಟಿ ನೆರಳಲ್ಲಿ ವಿಶ್ರಾಂತಿ ಪಡೆದು ತೊಂದರೆ ಅನುಭವಿಸಿದ್ದು ಹೊರತುಪಡಿಸಿದರೆ, ಸಕಾಲದಲ್ಲಿ ಕೂಲಿ ಪಡೆದು ನಿರಂತರ ಶ್ರಮಿಸುವ ಮೂಲಕ ನಿರುಪಯುಕ್ತ ನಿರ್ಜನ ಭೂಮಿಯನ್ನು ಅಂತರ್ಜಲ ಪೋಷಿಸುವ ಆಕರ್ಷಕ ಕೆರೆಯಾಗಿ ಬದಲಾಯಿಸಿರುವುದು ಪ್ರಗತಿಗೆ ಮುನ್ನುಡಿ ಬರೆದಂತಾಗಿದೆ ಎನ್ನಬಹುದು.

ಕಳೆದ ಐದು ವರ್ಷಗಳಿಂದ ರಾವೂರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯಾಗಿ ಸರ್ಕಾರದ ಯೋಜನೆಗಳನ್ನು ಸಾಕಾರಗೊಳಿಸುತ್ತಿರುವ ಕಾವೇರಿ ರಾಠೊಡ, ಗ್ರಾ.ಪಂ ಅಧ್ಯಕ್ಷ ವೆಂಕಟೇಶ ಕಟ್ಟಿಮನಿ ಅವರು ಕೇವಲ 26 ಕಾರ್ಮಿಕರಿಂದ ಶುರು ಮಾಡಿದ ಉದ್ಯೋಗ ಖಾತ್ರಿ ಕಾಯಕದಲ್ಲಿ ಒಟ್ಟು 170 ಜನರ ಸಹಭಾಗಿತ್ವ ಪಡೆದು ಕ್ರಾಂತಿ ಮಾಡಿದ್ದಾರೆ.

Advertisement

ನಿತ್ಯ ಕೆಲಸ-ವಾರಕ್ಕೊಮ್ಮೆ ಸಂಬಳ ಖಾತ್ರಿಯಾಗಿ ಗುಳೆ ಕೈಬಿಟ್ಟ ಗ್ರಾಮದ ಮಹಿಳೆಯರು ಕೆರೆ ಅಭಿವೃದ್ಧಿಗೆ ಕಚ್ಚೆ ಕಟ್ಟಿದ್ದು ಸಾಮಾನ್ಯ ಕಾರ್ಯವಲ್ಲ. ವೈಯಕ್ತಿಕ ಶೌಚಾಲಯಗಳ ನಿರ್ಮಾಣ, ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಕಸ ವಿಲೇವಾರಿ, ಬಡಾವಣೆಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಸಂಪೂರ್ಣ ಯಶಸ್ವಿ ಕಂಡಿಲ್ಲವಾದರೂ ಜನರಿಗೆ ಸಂತೃಪ್ತಿ ತಂದಿವೆ.

ಸ್ವಚ್ಛ ಭಾರತ ಯೋಜನೆ ಸಫಲತೆಗೆ ಅಧಿಕಾರಿಗಳು ಶ್ರಮಿಸುತ್ತಿದ್ದರೂ ಬಯಲು ಶೌಚಾಲಯ ಪದ್ಧತಿಗೆ ಕಡಿವಾಣ ಬಿದ್ದಿಲ್ಲ. ಹಂದಿಗಳ ಉಪಟಳದಿಂದ ಗ್ರಾಮದಲ್ಲಿ ನೈರ್ಮಲ್ಯ ವ್ಯವಸ್ಥೆ ಹದಗೆಟ್ಟಿದೆ. ಚುನಾಯಿತ ಸದಸ್ಯರ ಮಧ್ಯೆ ರಾಜಕೀಯ ಘರ್ಷಣೆ ಏರ್ಪಡದ ಕಾರಣ ಅಧ್ಯಕ್ಷ ಕಾಂಗ್ರೆಸ್‌ನ ವೆಂಕಟೇಶ ಕಟ್ಟಿಮನಿ ಮತ್ತು ಅಭಿವೃದ್ಧಿ ಅಧಿಕಾರಿ ಕಾವೇರಿ ರಾಠೊಡ ಅವರ ಸ್ಥಾನ ಐದು ವರ್ಷಗಳಿಂದ ಭದ್ರವಾಗಿದ್ದು, ರೂಪಿಸಲಾದ ಯೋಜನೆಗಳ ಸಾಕಾರಕ್ಕೆ ಅನುಕೂಲವಾಗಿದೆ ಎನ್ನಬಹುದು.

ಉದ್ಯೋಗ ಖಾತ್ರಿ ಹಾಗೂ ಸ್ವಚ್ಛ ಭಾರತ ಮಿಷನ್‌ ಯೋಜನೆಯಲ್ಲಿ ನಾವು ಪ್ರಗತಿ ಕಂಡಿದ್ದೇವೆ. ಸರ್ಕಾರದ ಯಾವ ಯೋಜನೆಯಲ್ಲೂ ಶೂನ್ಯ ಸಂಪಾದನೆ ಕಂಡಿಲ್ಲ. ಸಾವಿರಕ್ಕೂ ಹೆಚ್ಚು ವೈಯಕ್ತಿಕ ಶೌಚಾಲಯ ನಿರ್ಮಿಸಿದ್ದೇವೆ. ಪ್ರತಿ ವರ್ಷ ಶೇ.80ರಷ್ಟು ಕರ ವಸೂಲಾತಿ ಗುರಿ ತಲುಪಿದ್ದೇವೆ. ಕಳೆದ ವರ್ಷ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿದ್ದೇವೆ. ಕಸದ ಗಾಡಿಗಳ ಖರೀದಿಯಾಗಿವೆ. ಮನೆ-ಮನೆಗೆ ಹೋಗಿ ಕಸ ಸಂಗ್ರಹ ಮಾಡಲಾಗುತ್ತಿದೆ. 14ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರಿನ ಸೌಕರ್ಯ ಹೆಚ್ಚಿಸಿದ್ದೇವೆ. ಪೌರ ಕಾರ್ಮಿಕರಿಗೆ ಪ್ರತಿವರ್ಷ ಸಮವಸ್ತ್ರ ವಿತರಿಸಲಾಗುತ್ತಿದೆ. ಹಸಿ ಕಸ-ಒಣ ಕಸ ಬೇರ್ಪಡಿಸಿ ಗೊಬ್ಬರ ಮಾರಾಟ ಮಾಡಿದ್ದೇವೆ. ಪಂಚಾಯಿತಿ ಸಭಾಂಗಣ ಸುಧಾರಣೆ, ಶಾಲೆಗಳಿಗೆ ಕಂಪೌಂಡ್‌ ಮತ್ತು ರಸ್ತೆ ಅಭಿವೃದ್ಧಿ, ಬೋರ್‌ವೆಲ್‌ ಕೊರೆಸಲಾಗಿದೆ. ದನಗಳ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ನಾವು ಕೈಗೊಂಡ ಗುರಿ ತಲುಪಿರುವ ಬಗ್ಗೆ ನಮಗೆ ಖುಷಿಯಿದೆ.
ಕಾವೇರಿ ರಾಠೊಡ,
ಅಭಿವೃದ್ಧಿ ಅಧಿಕಾರಿ,
ರಾವೂರ ಗ್ರಾಪಂ

ಕೆಲಸ ಇಲ್ಲದೆ ಮನೆಯಲ್ಲಿ ಕುಳಿತಿದ್ದ ನಮಗೆ ಗ್ರಾ.ಪಂ ವತಿಯಿಂದ ಕೆಲಸ ಕೊಡಲಾಗಿದೆ. ವಾರಕ್ಕೊಮ್ಮೆ ಸರಿಯಾಗಿ ವೇತನ ನೀಡುತ್ತಾರೆ. ಹೀಗಾಗಿ ಹೆಣ್ಣುಮಕ್ಕಳು ಬೆಂಗಳೂರು, ಮುಂಬೈಗೆ ಗುಳೆ ಹೋಗುವುದನ್ನು ಬಿಟ್ಟು ಊರಲ್ಲೇ ದುಡಿಯುತ್ತಿದ್ದಾರೆ. ಮೊದ ಮೊದಲು ಚಪ್ಪರ ಹಾಕಿ ನಮಗೆ ನೆರಳು ಮಾಡಿದ್ದರು. ಈಗ ಬಿಸಿಲು ಕಡಿಮೆ ಇರುವ ಕಾರಣಕ್ಕೆ ಟೆಂಟ್‌ ಹಾಕಿಲ್ಲ.ಅಧಿಕಾರಿಗಳು ಮತ್ತು ಸದಸ್ಯರು ನಮಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಕೆರೆ ಮಣ್ಣು ಹೊರುವ ಕೆಲಸದಿಂದ ನಮ್ಮ ಹೊಟ್ಟಿಗೆ ಗಂಜಿ ಸಿಕ್ಕಂಗಾಗಿದೆ.
ಶಾಂತಮ್ಮ ಹಡಪದ,
ಉದ್ಯೋಗ ಖಾತ್ರಿ ಕಾರ್ಮಿಕ ಮಹಿಳೆ

„ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next