ವಾಡಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಎಸಿಸಿ ಸಿಮೆಂಟ್ ಕಾರ್ಖಾನೆಯಲ್ಲಿ ಟಿಪ್ಪರ್ ವಾಹನದ ಡೀಸೆಲ್ ಟ್ಯಾಂಕ್ ಸ್ಪೋಟಗೊಂಡು ಮೆಕ್ಯಾನಿಕ್ ವೃತ್ತಿಯಲ್ಲಿದ್ದ ಗುತ್ತಿಗೆ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಸಂಭವಿಸಿದೆ.
ಪಟ್ಟಣದ ಕಮಲಿವಾಲೆ ಬಾಬಾ ದರ್ಗಾ ಬಡಾವಣೆಯ ನಿವಾಸಿ ಮಹ್ಮದ್ ನವಾಬ್ ಜಮಾದಾರ (31) ಮೃತಪಟ್ಟ ಕಾರ್ಮಿಕ. ಮೃತ ಕಾರ್ಮಿಕನಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಈತ ಎಸಿಸಿ ಕಂಪನಿಯಲ್ಲಿನ ಕಲ್ಲು ಕ್ವಾರಿ ವಿಭಾಗದ ಟಿಪ್ಪರ್ ವಾಹನಗಳ ರಿಪೇರಿ ಕೆಲಸದಲ್ಲಿ ತೊಡಗಿದ್ದಾಗ ಏಕಾಏಕಿ ವಾಹನದ ಡೀಸೆಲ್ ಟ್ಯಾಂಕ್ ಸ್ಪೋಟಗೊಂಡಿದೆ ಎನ್ನಲಾಗಿದ್ದು, ತೀವ್ರ ಗಾಯಗೊಂಡಿದ್ದ ಕಾರ್ಮಿಕನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮಿಕ ಚಿಕಿತ್ಸೆ ಕೊಡಿಸುವ ಮೂಲಕ ಹೈದರಾಬಾದ್‌ನ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸಿ ಕಳೆದ ಹದಿನೈದು ದಿನಗಳಿಂದ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಕಾರ್ಮಿಕ ಮಹ್ಮದ್ ನವಾಬ್ ಶುಕ್ರವಾರ ಮೃತಪಟ್ಟಿದ್ದಾನೆ ಎಂದು ಕಾರ್ಮಿಕ ಸಂಘದ ಮೂಲಗಳು ತಿಳಿಸಿವೆ. ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಕಾರ್ಮಿಕ ಮುಖಂಡರು ಹಾಗೂ ಮುಸ್ಲಿಂ ಸಮಾಜದ ಮುಖಂಡರು ಎಸಿಸಿ ಆಡಳಿತದೊಂದಿಗೆ ಸಂಧಾನ ಮಾತುಕತೆಗೆ ಮುಂದಾಗಿದ್ದಾರೆ. ಈ ಕುರಿತು ನಮಗೆ ಯಾರೂ ದೂರು ಸಲ್ಲಿಸಿಲ್ಲ ಎಂದು ವಾಡಿ ಠಾಣೆಯ ಪೊಲೀಸರು ಪ್ರತಿಕ್ರೀಯಿಸಿದ್ದಾರೆ.