Advertisement

ಬಿಸಿಸಿಐ ವ್ಯಾಪ್ತಿ ಕ್ರಿಕೆಟಿಗರನ್ನು ಪರೀಕ್ಷೆಗೊಳಪಡಿಸಲು ವಾಡಾ ಪಟ್ಟು

06:35 AM Nov 19, 2017 | Team Udayavani |

ನವದೆಹಲಿ: ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ ನಾಡಾದಿಂದ ಪರೀಕ್ಷೆಗೊಳಪಡಲು ಸ್ಪಷ್ಟವಾಗಿ ನಿರಾಕರಿಸಿರುವ ಬಿಸಿಸಿಐಯನ್ನು ಅಷ್ಟು ಸುಲಭವಾಗಿ ಬಿಡಲು ವಿಶ್ವ ಉದ್ದೀಪನ ನಿಗ್ರಹ ಸಂಸ್ಥೆ ವಾಡಾ ಸಿದ್ಧವಿದ್ದಂತಿಲ್ಲ. ಬಿಸಿಸಿಐ ವ್ಯಾಪ್ತಿಯ ಕ್ರಿಕೆಟಿಗರನ್ನು ಪರೀಕ್ಷೆಗೊಳಪಡಿಸಲು ನಾಡಾಕ್ಕೆ ಸಂಪೂರ್ಣ ಅಧಿಕಾರವಿದೆ ಎಂದು ವಾಡಾ ಬಲವಾಗಿ ಹೇಳಿದೆ.

Advertisement

ಆಂಗ್ಲ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ವಾಡಾ, ನಿಯಮಗಳ ಪ್ರಕಾರ ಒಂದು ರಾಷ್ಟ್ರದಲ್ಲಿ ವಾಸಿಸುವ, ಪೌರತ್ವ ಹೊಂದಿರುವ, ಪರವಾನಗಿ ಹೊಂದಿರುವ ಅಥವಾ ವಿವಿಧ ಕ್ರೀಡಾಸಂಸ್ಥೆಗಳ ಅಧೀನದಲ್ಲಿರುವ ಕ್ರೀಡಾಪಟುಗಳನ್ನು ನಾಡಾ ಪರೀಕ್ಷೆ ನಡೆಸಬಹುದು ಎಂದು ಹೇಳಿದೆ. ತಾನು ರಾಷ್ಟ್ರೀಯ ಕ್ರೀಡಾಸಂಸ್ಥೆಯಲ್ಲ, ಉದ್ದೀಪನ ಪರೀಕ್ಷೆ ನಡೆಸಲು ನಮ್ಮದೇ ಆದ ವ್ಯವಸ್ಥೆ ಹೊಂದಿದ್ದೇವೆ, ಆದ್ದರಿಂದ ನಾಡಾ ಪರೀಕ್ಷೆ ಅಗತ್ಯವಿಲ್ಲ ಎಂಬ ಬಿಸಿಸಿಐ ಆಕ್ಷೇಪಕ್ಕೂ ವಾಡಾ ಉತ್ತರಿಸಿದೆ. 

ಬಿಸಿಸಿಐ ತಮಿಳುನಾಡು ಸೊಸೈಟೀಸ್‌ ರಿಜಿಸ್ಟ್ರೇಶನ್‌ ಆ್ಯಕ್ಟ್‌ನಡಿ ನೋಂದಣಿಯಾಗಿದೆ. ಆದ್ದರಿಂದ ಅದು ಭಾರತದ ಕಾನೂನಿನ ವ್ಯಾಪ್ತಿಯಲ್ಲಿ ಬರುತ್ತದೆ. ಇದು ನಾಡಾ ಪರೀಕ್ಷೆ ಮಾಡಲು ಅವಕಾಶ ನೀಡುತ್ತದೆ ಎಂದು ಹೇಳಿದೆ.

ಆದರೆ ನಾಡಾ ಪರೀಕ್ಷೆಯ ವಿರುದ್ಧ ಬಿಸಿಸಿಐ ಬಲವಾಗಿ ನಿಂತಿದೆ. ಐಸಿಸಿ ಮಾನ್ಯತೆ ಹೊಂದಿರುವ, ವಾಡಾ ಕೂಡ ಅನುಮೋದಿಸಿರುವ ಸಂಸ್ಥೆಗಳಿಂದಲೇ ಬಿಸಿಸಿಐ ತನ್ನ ಕ್ರಿಕೆಟಿಗರನ್ನು ಪರೀಕ್ಷೆಗೊಳಪಡಿಸುತ್ತಿದೆ. ಆದ್ದರಿಂದ ಪ್ರತ್ಯೇಕವಾಗಿ ವಾಡಾ ಪರೀಕ್ಷೆ ಅಗತ್ಯವಿಲ್ಲ ಎಂದು ಬಿಸಿಸಿಐ ವಾದಿಸಿದೆ. ಇದು ಬಿಕ್ಕಟ್ಟನ್ನು ತೀವ್ರಗೊಳಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next