ಮುಂಬೈ: ಟಿ20 ವಿಶ್ವಕಪ್ ಕೂಟದಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ. ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದ ರೋಹಿತ್ ಬಳಗ ಮತ್ತೊಮ್ಮೆ ನಿರಾಸೆ ಅನುಭವಿಸಿದೆ. ಸದ್ಯ ತಂಡ ನ್ಯೂಜಿಲ್ಯಾಂಡ್ ಸರಣಿಗೆ ಸಿದ್ದತೆ ನಡೆಸುತ್ತಿದೆ.
ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ವಿರಾಮ ನೀಡಲಾಗಿದೆ. ಹೀಗಾಗಿ ಮುಂಬರುವ ಸೀಮಿತ ಓವರ್‌ಗಳ ನ್ಯೂಜಿಲೆಂಡ್ ಪ್ರವಾಸಕ್ಕಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ತಂಡದ ಕೋಚ್ ಆಗಿ ನೇಮಿಸಲಾಗಿದೆ.
“ಲಕ್ಷ್ಮಣ್ ನೇತೃತ್ವದ ಎನ್ ಸಿಎ ತಂಡದಲ್ಲಿ ಹೃಷಿಕೇಶ್ ಕಾನಿಟ್ಕರ್ (ಬ್ಯಾಟಿಂಗ್) ಮತ್ತು ಸಾಯಿರಾಜ್ ಬಹುತುಲೆ (ಬೌಲಿಂಗ್) ಇದ್ದು, ಅವರು ನ್ಯೂಜಿಲೆಂಡ್ ಪ್ರವಾಸದ ತಂಡವನ್ನು ಸೇರಿಕೊಳ್ಳಲಿದ್ದಾರೆ” ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.
ಭಾರತವು ನವೆಂಬರ್ 18 ರಿಂದ 30 ರವರೆಗೆ ಮೂರು ಟಿ20 ಮತ್ತು ಏಕದಿನ ಪಂದ್ಯಗಳನ್ನು ಆಡಲಿದೆ. ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ, ಆರಂಭಿಕ ಕೆಎಲ್ ರಾಹುಲ್ ಮತ್ತು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಂತಹ ದೊಡ್ಡ ಹೆಸರುಗಳಿಗೆ ಪ್ರವಾಸದಲ್ಲಿ ವಿಶ್ರಾಂತಿ ನೀಡಲಾಗಿದೆ.
Related Articles
ಇದನ್ನೂ ನೋಡಿ:“ನವ ಭಾರತದ ಸಂಕಲ್ಪ” ಕರ್ನಾಟಕವನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ
ಲಕ್ಷ್ಮಣ್ ಭಾರತ ತಂಡದ ಜವಾಬ್ದಾರಿ ವಹಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಜಿಂಬಾಬ್ವೆ ಮತ್ತು ಐರ್ಲೆಂಡ್ ಪ್ರವಾಸಗಳಲ್ಲಿ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಇತ್ತೀಚಿನ ತವರು ಸರಣಿಗಳಲ್ಲಿ ಮುಖ್ಯ ಕೋಚ್ ಆಗಿದ್ದರು.
ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅವರು ತಂಡವನ್ನು ಮುನ್ನಡೆಸಲಿದ್ದು, ಏಕದಿನ ತಂಡಕ್ಕೆ ಶಿಖರ್ ಧವನ್ ನೇತೃತ್ವ ವಹಿಸಲಿದ್ದಾರೆ.
ನಾಯಕ ರೋಹಿತ್ ಶರ್ಮಾ ಅವರು ಡಿಸೆಂಬರ್ 4 ರಿಂದ ಬಾಂಗ್ಲಾದೇಶ ಪ್ರವಾಸಕ್ಕೆ ಭಾರತವನ್ನು ಮುನ್ನಡೆಸಲು ಮರಳಲಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಸಹ ಬಾಂಗ್ಲಾದೇಶ ಪ್ರವಾಸಕ್ಕೆ ತಂಡಕ್ಕೆ ಮರಳಲಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶ ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿವೆ.