Advertisement

ವಿ.ವಿ.ಉಪಾಯ: ಚಿನ್ನದ ಪದಕದ ಬದಲಿಗೆ “ಪೇಪರ್‌ ಗೋಲ್ಡ್‌’ 

09:55 AM Feb 14, 2018 | Harsha Rao |

ಹೆಚ್ಚಿನ ವಿ.ವಿ.ಗಳಲ್ಲಿ ಈಗ ವಿದ್ಯಾರ್ಥಿಗಳ ಸೇರ್ಪಡೆ ಪ್ರಕ್ರಿಯೆಯೆಂಬುದು ಕೇವಲ ರ್‍ಯಾಂಕ್‌ ವಿದ್ಯಾರ್ಥಿಗಳಿಗಷ್ಟೇ ಸೀಮಿತ ಎಂಬಂತಾಗಿದೆ. ಪೇಪರ್‌ ಮೆಡಲ್‌ಗ‌ಳನ್ನು ಹಾಗೂ ಜುಜುಬಿ ಮೊತ್ತದ ಬಹುಮಾನಗಳನ್ನು ನೀಡುವ ಮೂಲಕ ಇಂಥ ರ್‍ಯಾಂಕ್‌ ವಿಜೇತ ವಿದ್ಯಾರ್ಥಿಗಳನ್ನು ಕೂಡ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ.

Advertisement

ರಾಜ್ಯದ ಕೆಲವು ವಿಶ್ವವಿದ್ಯಾಲಯಗಳು ತಮ್ಮ ವಾರ್ಷಿಕ ಪದವೀದಾನ ಸಮಾರಂಭದಲ್ಲಿ ವಿಶೇಷ ಸಾಧನೆಗೈದಿರುವ ವಿದ್ಯಾರ್ಥಿ ಗಳಿಗೆ ನಿಜವಾದ ಬಂಗಾರದ ಪದಕಗಳ ಬದಲಿಗೆ “ಕಾಗದದ ಬಂಗಾರದ ಪದಕ’ಗಳನ್ನು ವಿತರಿಸುವ ಮೂಲಕ ತಮ್ಮ ದಿವಾಳಿತನವನ್ನು ತಾವೇ ಬಹಿರಂಗಪಡಿಸಿಕೊಂಡಿವೆ.

ಬೆಂಗಳೂರು ವಿ.ವಿ. ಈ ಕ್ರಮವನ್ನು ಇತ್ತೀಚೆಗೆ ನಡೆದಿರುವ ತನ್ನ 53ನೆಯ ಘಟಿಕೋತ್ಸವದಲ್ಲೂ ಅನುಸರಿಸಿದೆ. ಮಾಧ್ಯಮಗಳಲ್ಲಿ ಕೆಲವೆಡೆ ಈ ವಿದ್ಯಮಾನ ಉದ್ರೇಕಕಾರಿ ಸುದ್ದಿಯನ್ನು ಪ್ರಸಾರಿಸಿವೆ ಯಾದರೂ, ಇದರಲ್ಲಿ ಹೊಸ ಸಂಗತಿಯೇನೂ ಇಲ್ಲ. ಹಾಗೆ ನೋಡಿ ದರೆ ಈ ವಿದ್ಯಾಲಯ 1916ರಲ್ಲಿ ಸ್ಥಾಪನೆಗೊಂಡ ಮೈಸೂರು ವಿ.ವಿ.ಯಷ್ಟಾಗಲಿ, 1948ರಲ್ಲಿ ಸ್ಥಾಪನೆಯಾದ ಕರ್ನಾಟಕ ವಿಶ್ವ ವಿದ್ಯಾಲಯದಷ್ಟಾಗಲಿ ಹಳೆಯದೇನಲ್ಲ. ಬೆಂಗಳೂರಿಗಾಗಿಯೇ ಪ್ರತ್ಯೇಕ ವಿ.ವಿ. ಅಸ್ತಿತ್ವಕ್ಕೆ ಬಂದುದು 1964ರಲ್ಲಿ.

ಇಂಥ “ಪೇಪರ್‌ಗೊàಲ್ಡ್‌ ಮೆಡಲ್‌’ಗಳನ್ನು ಬೆಂಗಳೂರು ವಿ.ವಿ. ವಿತರಿಸತೊಡಗಿದ್ದು ಕೆಲವು ದಶಕಗಳ ಹಿಂದೆ ಡಾ| ಡಿ.ಎಂ. ನಂಜುಂಡಪ್ಪ ಅವರು ಕುಲಪತಿಗಳಾಗಿದ್ದ ಕಾಲದಲ್ಲಿ. ಈ ರೀತಿಯ “ಚಿನ್ನದ ಕಾಗದದ ಪದಕ’ಗಳನ್ನು ನೀಡಲು ಏನು ಕಾರಣವೆಂದು ಆಗ ಮಾತ್ರವಲ್ಲ, ಈಗಲೂ ಸ್ಪಷ್ಟಪಡಿಸಲಾಗಿದೆ. ಅದೆಂದರೆ, ಕೆಲವ್ಯಕ್ತಿಗಳು ಮತ್ತು ಸಂಸ್ಥೆಗಳು ಅಂದು ಈ ವಿವಿಯಲ್ಲಿ ಬಂಗಾರದ ಪದಕಗಳಿಗಾಗಿ ಸ್ಥಾಪಿಸಿದ್ದ (ಬ್ಯಾಂಕ್‌ ಠೇವಣಿ ರೂಪದ) ದತ್ತಿಗಳಿಂದ ನಿರೀಕ್ಷಿತ ಪ್ರಮಾಣದ ಬಡ್ಡಿ ದೊರಕುತ್ತಿಲ್ಲವೆಂಬುದೇ ಈ ಕಾರಣ. ಇಂದಿನವರಿಗೆ ಅದರಲ್ಲೂ ವಿಶೇಷವಾಗಿ ಮಾಧ್ಯಮ ಕ್ಷೇತ್ರಗಳಲ್ಲಿ ರುವ ಮಂದಿಗೆ ಇದಕ್ಕೆ ಸಂಬಂಧಿಸಿದ ನೆನಪೆಂಬುದು ಅಷ್ಟೇನೂ ಗಾಢವಾಗಿ ಇಲ್ಲ. ಬಡ್ಡಿ ಕಡಿಮೆ ಎಂಬ ವಿ.ವಿ.ಯ ಮಾತಿನಲ್ಲಿ ಹುರುಳಿಲ್ಲದೆ ಇಲ್ಲ. ರೂಪಾಯಿಯ ಖರೀದಿ ಶಕ್ತಿ ಕುಂದಿದೆ. ಒಬ್ಬ ವಿದ್ಯಾರ್ಥಿಗೆ 10 ಗ್ರಾಮ್‌ ತೂಕದ ಚಿನ್ನದ ಪದಕವನ್ನು ವಿತರಿಸಲು ಸುಮಾರು 29,000 ರೂ. ಬೇಕಾಗುತ್ತದೆ. ಎಲ್ಲ ಅರ್ಹ ವಿದ್ಯಾರ್ಥಿ ಗಳಿಗೆ ನೀಡಬೇಕೆಂದರೆ 4.3 ಲಕ್ಷ ರೂ.ಗಳ ದತ್ತಿ ಅಗತ್ಯವಿದೆ.

ಈ ಮಟ್ಟಿಗೆ ಮೈಸೂರು ವಿ.ವಿ.ಯ “ಪಾಡು’ ದೇವರಿಗೇ ಪ್ರೀತಿ. ಈ ವಿ.ವಿ.ಯ ಹೆಚ್ಚಿನ ದತ್ತಿಗಳನ್ನು ಕಳೆದ ಶತಮಾನದ ಪ್ರಥಮ ನಾಲ್ಕು ದಶಕಗಳಲ್ಲಿ- ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನಕ್ಕೆ “ಚಿನ್ನದ ಮಾನದಂಡ’ವಿದ್ದ ಕಾಲದಲ್ಲಿ ಸ್ಥಾಪಿಸಲಾಗಿದೆ. ಎರಡು ಯುದ್ಧಗಳ ನಡುವಣ ಅವಧಿಯಲ್ಲಿ, ಅಂದರೆ 1918ರಿಂದ 1939ರ ವರೆಗಿನ ವರ್ಷಗಳ ಪೈಕಿ ಬಹಳಷ್ಟು ಸಂದರ್ಭಗಳಲ್ಲಿ ಚಿನ್ನಾಭರಣಗಳ ಬೆಲೆ ಒಂದು ಸವರನ್‌ಗೆ 13 ರೂ.ಗಳಷ್ಟಿತ್ತು. ಆದರೂ ಅಂದಿನ ದಿನಗಳಲ್ಲಿ, ಇಂದಿನ ಲೆಕ್ಕಾಚಾರಕ್ಕೆ ಹೋಲಿಸಿದರೆ ಜನರ ಆದಾಯದ ಪ್ರಮಾಣ ತೀರಾ ಚಿಕ್ಕದಾಗಿತ್ತು.

Advertisement

ಅಷ್ಟೊಂದು ಜುಜುಬಿ ಬೆಲೆ ಇದ್ದರೂ ಅದನ್ನು ಕೊಳ್ಳಲಾಗದಂಥ ಪರಿಸ್ಥಿತಿ ಅಂದಿನ ಜನರದಾ ಗಿತ್ತು. ವಿನೋದದ ದಾಟಿಯಲ್ಲಿ ಹೇಳುವುದಾದರೆ ಬೆಂಗಳೂರು ವಿವಿ ಕೂಡ ಕಾಲದೊಂದಿಗೆ ತಾನೂ ಬದಲಾಗಿದೆ; ಅದು ಕೂಡ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಸ್ತಿತ್ವಕ್ಕೆ ತಂದಿ ರುವ ನೀತಿ ಅನುಸರಿಸುತ್ತಿದೆ. “ಪೇಪರ್‌ ಗೋಲ್ಡ್‌’ ಅಥವಾ ವಿಶೇಷ “ಹಣ ಪಡೆದುಕೊಳ್ಳುವ ಹಕ್ಕು’ ಚಲಾವಣೆಯ ಕ್ರಮವನ್ನು ಜಾಣ್ಮೆಯಿಂದ ಅಳವಡಿಸಿಕೊಂಡಿದೆ ಎನ್ನಬಹುದೆ?

ಹಳೆ ವಿ.ವಿ.ದತ್ತಿಗಳ ಹಿಂದಿತ್ತು ತ್ಯಾಗ ಬುದ್ಧಿ

ವಿ.ವಿ.ಯ ಪಾಲಿಗೆ ಈಗ ಉಳಿದಿರುವುದು ಒಂದೇ ಉಪಾಯ. ಅದೆಂದರೆ, ಹಳೆಯ ದತ್ತಿಗಳನ್ನು ಸ್ತಂಭನಗೊಳಿಸಿ ಚಿನ್ನದ ಪದಕಗಳ ವಿತರಣೆಗೆ ಬೇಕಾಗುವಷ್ಟು ಮೊತ್ತ ಹುಟ್ಟುವಷ್ಟೇ ಪ್ರಮಾಣದ ಹೊಸ ದತ್ತಿಗಳನ್ನು ಸ್ಥಾಪಿಸುವಂತೆ ಸಮಾಜದ ದಾನಿಗಳನ್ನು ಆಹ್ವಾನಿಸುವುದು. ಹೀಗೆ ಸಾರ್ವಜನಿಕರಿಂದ ಬರುವ ಮೊತ್ತಗಳನ್ನು “ದೇಣಿಗೆ’ಯೆಂದು ಪರಿಗಣಿಸಬೇಕು. ಇವುಗಳಿಗೆ ಆದಾಯ ತೆರಿಗೆ ವಿನಾಯತಿ ಇರಬೇಕು. ಇಲ್ಲದಿದ್ದರೆ ವಿಶ್ವವಿದ್ಯಾ ಲಯ ತನ್ನಲ್ಲಿರುವ ಮೊತ್ತವನ್ನೇ ಬಳಸಿಕೊಂಡು ತಾನೇ ಚಿನ್ನದ ಪದಕಗಳನ್ನು ಟಂಕಿಸುವುದಕ್ಕೆ ಮುಂದಾಗಬೇಕು. ಇಂಥ ಉದ್ದೇಶ ಗಳಿಗೆ ಬಳಸಲು ಬೇಕಾದ ಹಣ ನಮ್ಮ ವಿ.ವಿ.ಗಳಲ್ಲಿ ಇಲ್ಲ ಎನ್ನು ವಂತಿಲ್ಲ. ಅಂಕಪಟ್ಟಿಗಳ ಹಾಗೂ ಡಿಗ್ರಿ ಸರ್ಟಿಫಿಕೇಟ್‌ಗಳ ಮುದ್ರ ಣದ ವೆಚ್ಚ ಎಂಬ ಹೆಸರಿನಲ್ಲಿ ಎಲ್ಲೆಯಿಲ್ಲದೆ ಮಾಡಲಾಗುತ್ತಿರುವ ವೆಚ್ಚದ ಬಗ್ಗೆ ನಾವು ಕೇಳಿಯೇ ಇದ್ದೇವೆ.

ಈ ವಿಷಯದಲ್ಲಿ ರ್‍ಯಾಂಕ್‌ ವಿಜೇತ ವಿದ್ಯಾರ್ಥಿ-ವಿದ್ಯಾರ್ಥಿ ನಿಯರ ನೋವು ಸಂಕಟ ಯಾರಿಗೂ ಅರ್ಥವಾಗುವಂಥದ್ದೇ. ತಾವು ಪಟ್ಟ ಕಷ್ಟಕ್ಕೆ ಅಥವಾ ನಡೆಸಿದ ಕ್ಲಿಷ್ಟಕರ ಅಧ್ಯಯನಕ್ಕೆ ಅನುಗುಣವಾಗಿ ಪ್ರತಿಫ‌ಲ ದೊರೆಯಬೇಕೆಂದು ನಿರೀಕ್ಷಿಸುವುದು ಸಹಜವೇ ಆಗಿದೆ. ಬಹುಕಾಲ ಕಾಯ್ದಿರಿಸಿಕೊಳ್ಳಲು ಸಾಧ್ಯವಿರುವ ಚಿನ್ನದ ಅಥವಾ ಬೆಳ್ಳಿ ಪದಕವಾದರೂ ಸರಿ, ಅಂಥ ಬಹುಮಾನ ವೊಂದನ್ನು ಅವರು ಬಯಸಿಯೇ ಬಯಸುತ್ತಾರೆ.

ಕಾಗದದಿಂದ ನಿರ್ಮಿತವಾದ ಚಿನ್ನದ ಪದಕ ಕೇವಲ ಕಾಗದದ ತುಂಡಷ್ಟೆ. ಕಾಲ ಸರಿದಂತೆ ಅದು ಹಳದಿಗಟ್ಟಿ ಹೋಗುತ್ತದೆ. ಇದರ ಬದಲಿಗೆ ಬಂಗಾರದ ಪದಕ ದೊರೆತರೆ, ಅದು ನಿಜವಾದ ಹಳದಿ ಲೋಹ; ಕಾಲ ಸರಿದಂತೆ ಹಳೆಯದಾಗದ ಅಮೂಲ್ಯ ಆಸ್ತಿ ಎಂಬ ನಿಜವಾದ ಹೆಗ್ಗಳಿಕೆ ಅದರದಾಗಿರುತ್ತದೆ.

ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲ್ಪಟ್ಟಿರುವ ದತ್ತಿಗಳಲ್ಲಿ ಹೆಚ್ಚಿನ ವುಗಳಿಗೆ, ಅದರಲ್ಲೂ ವಿಶೇಷವಾಗಿ ತುಂಬಾ ಹಿಂದಿನ ಕಾಲದ ವುಗಳಿಗೆ ತಮ್ಮದೇ ಆದ ಅತ್ಯಾಕರ್ಷಕ ಚರಿತ್ರೆಯಿದೆ. ಮೈಸೂರು ವಿ.ವಿ.ಯಲ್ಲಿ 1920ರ ಅಥವಾ 1930ರ ದಶಕಗಳಲ್ಲಿ ಸ್ಥಾಪಿಸಲ್ಪಟ್ಟ ದತ್ತಿಗಳು ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವ, ಅದರಲ್ಲೂ ವಿಶೇಷವಾಗಿ ಸ್ತ್ರೀ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಹೊಂದಿದ್ದವು. ಮೈಸೂರು ವಿ.ವಿ.ಯಲ್ಲಿ ಓದಿದ ಹೆಣ್ಣು ಮಕ್ಕಳ ಪೈಕಿ ಪ್ರಥಮ ಪದವೀಧರೆ ಹೊರಬಿದ್ದುದು 1924ರಲ್ಲಷ್ಟೆ. ಈ ವಿವಿಯಲ್ಲಿ 1930ರ ದಶಕದಲ್ಲಿ ಶ್ರೋತ್ರಿ ಸಾವಿತ್ರಮ್ಮ ಎಂಬವರು ಪದವಿ ತರಗತಿಯಲ್ಲಿ ಗರಿಷ್ಠ ಅಂಕ ಗಳಿಸಿದ ಹೆಣ್ಣು ಮಗಳಿಗೆ ಚಿನ್ನದ ಪದಕ ನೀಡಬೇಕೆಂದು ಬಯಸಿ ದತ್ತಿಯೊಂದನ್ನು ಸ್ಥಾಪಿಸಿ ದ್ದುಂಟು; ಅದು ಈಗಲೂ ಚಾಲ್ತಿಯಲ್ಲಿರಬಹುದು. ಈ ಸಾವಿತ್ರಮ್ಮ ಸಂಸ್ಕೃತ ವಿದ್ವಾಂಸರ ಮನೆತನದವರು;  ದತ್ತಿ ಸ್ಥಾಪನೆಯ ಕಾಲದಲ್ಲೇ ನಿಧನರಾಗಿದ್ದ ಅಮಲ್ದಾರರೊಬ್ಬರ ಪತ್ನಿ. ತಮ್ಮಲ್ಲಿದ್ದ ಒಡವೆಗಳನ್ನು ತಮ್ಮ ಮೂವರು ಹೆಣ್ಣು ಮಕ್ಕಳಿಗೆ ವಿತರಿಸುವ ಬದಲಿಗೆ ವಿ.ವಿ.ಯಲ್ಲಿ ದತ್ತಿನಿಧಿ ಸ್ಥಾಪನೆಗೆಂದು ಕೊಟ್ಟ ಮಹಿಳೆ ಈಕೆ. ಹೀಗೆ ವಿ.ವಿ.ಗಳಿಗೆ ನೀಡಲಾಗಿರುವ ದೇಣಿಗೆಗಳಿಗೊಂದು ತ್ಯಾಗದ ಚರಿತ್ರೆಯಿದೆ, ಇದರ ಹಿಂದೆ ವಿ.ವಿ. ಶಿಕ್ಷಣಕ್ಕೆ ಉತ್ತೇಜನ ನೀಡುವ ಬಗೆಗಿನ ಕಳಕಳಿ, ಕಾಳಜಿಗಳಿವೆ.

ವರ್ಷಗಳು ಸರಿದಂತೆಲ್ಲ ಶಿಕ್ಷಣವೆಂಬುದು ಮಾರಾಟದ ಸರಕಾಗತೊಡಗಿದೆ; ಉದ್ಯೋಗದ ಮಾರುಕಟ್ಟೆಗೆ ಹೆಚ್ಚು ಒತ್ತು ಸಿಕ್ಕಿದೆ. ಹೀಗಾಗಿ ಇಂದು ಸಂಸ್ಕೃತ, ತಣ್ತೀಶಾಸ್ತ್ರ, ಭಾರತೀಯ ಶಾಸ್ತ್ರ (ಇಂಡಾಲಜಿ), ಜೈನ ಶಾಸ್ತ್ರ ಮುಂತಾದ ವಿಷಯಗಳನ್ನು ಆಯ್ದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ. ಇಂಥ ಅಧ್ಯಯನ ವಿಭಾಗಗಳಲ್ಲಿ ಕೆಲವೊಂದನ್ನು ಮುಚ್ಚಲೇಬೇಕಾದ ದಿನಗಳೂ ಬಂದಿವೆ. ಬೆಂಗಳೂರು ಹಾಗೂ ಇತರ ನಗರಗಳಲ್ಲಿರುವ ಅನೇಕ ವಾಣಿಜ್ಯ ಅಧ್ಯಯನದ ಒಲವಿರುವ ಕಾಲೇಜುಗಳ ಪದವಿ ಕೋರ್ಸುಗಳನ್ನು ಕೂಡ ಕೈಬಿಟ್ಟು, ಇದರ ಬದಲಿಗೆ ಧನ ಸಂಪಾದನೆಯ ಆಕರ್ಷಣೆಯಿರುವ ಬಿ.ಕಾಮ್‌., ಅಥವಾ ಮ್ಯಾನೇ ಜ್‌ಮೆಂಟ್‌ ಕೋರ್ಸ್‌ಗಳನ್ನು ನಡೆಸುತ್ತಿವೆ. ವಿದ್ಯಾರ್ಥಿ ಗಳಿಂದ ಹಾಗೂ ಹೆತ್ತವರಿಂದ ಹೇರಳ ಡೊನೇಶನ್‌ಗಳನ್ನು ಕಕ್ಕಿಸಿಕೊಳ್ಳುತ್ತವೆ. ಭಾರತ ರತ್ನ ಸಿ.ಎನ್‌.ಆರ್‌. ರಾವ್‌ ಅವರಿಗೆ ಇಂಥ ಪ್ರವೃತ್ತಿಯ ಬಗ್ಗೆ ಅರಿವಿರುವಂತಿದೆ.

ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿ ಮೂಲ ಅಥವಾ ಪ್ರಾಥಮಿಕ ವಿಜ್ಞಾನ ವಿಷಯಗಳನ್ನು ನಿರ್ಲಕ್ಷಿಸಲಾಗುತ್ತಿರುವ ಬಗೆಗಿನ ನೋವನ್ನು ಅವರು ಆಗಾಗ ವ್ಯಕ್ತಪಡಿಸುವುದುಂಟು. ಇತ್ತೀಚೆಗಷ್ಟೆ ಐಎಎಸ್‌ ಅಧಿಕಾರಿಣಿ ಯೊಬ್ಬರು ಕೆಲ ಕಲಾ ಸಂಬಂಧಿ ವಿಷಯಗಳನ್ನು ಓಬೀರಾಯನ ಕಾಲದ ವಿಷಯಗಳೆಂದು ಬಣ್ಣಿಸಿದ್ದಾರೆ. ತಾನು ಸಿವಿಲ್‌ ಸರ್ವಿಸ್‌ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಇಂಥ ವಿಷಯಗಳನ್ನೇ ಆಯ್ದು ಕೊಂಡಿದ್ದೆವೆಂಬುದನ್ನು ಆಕೆ ಮರೆತೇ ಬಿಟ್ಟಂತಿದೆ. ಇಂಗ್ಲಿಷ್‌ ದೈನಿಕ ವೊಂದರಲ್ಲಿ ಇತ್ತೀಚೆಗೆ ಪ್ರಕಟವಾಗಿದ್ದ ಕೆಲವೊಂದು ಲೇಖನಗಳಲ್ಲಿ ಪ್ರಾಣಿ ಶಾಸ್ತ್ರದಂಥ ಜೀವ ವಿಜ್ಞಾನಗಳ ಅಧ್ಯಯನದ ಪ್ರಯೋಜ ನವೇನೆಂದು ಪ್ರಶ್ನಿಸುವಂಥ ಒಕ್ಕಣೆಗಳಿದ್ದವು.

ಬೆಂಗಳೂರು ವಿ.ವಿ.ಯ “ಪ್ರಧಾನ ಘಟಕ’ದಲ್ಲಿ (ಈಗಾಗಲೇ ಇದನ್ನು ಎರಡು ವಿ.ವಿ.ಗಳಾಗಿ ವಿಭಜಿಸಲಾಗಿದೆಯಷ್ಟೆ?) ಇತ್ತೀಚೆಗೆ ನಡೆದಿರುವ ಘಟಿಕೋತ್ಸವ ಸಮಾರಂಭ, ವಾಸ್ತವವಾಗಿ ಅದರ ಕುಲಾಧಿಪತಿಗಳಾದ ರಾಜ್ಯಪಾಲ ವಜೂಭಾçವಾಲಾ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಇವರುಗಳ ಸಾಧನೋ ಪಾಯದ ಕೊರತೆಯ ದ್ಯೋತಕವಷ್ಟೇ. ಈ ಕೊರತೆಗೆ ಕಾರಣ ಬಹುಶಃ ರಾಜ್ಯದಲ್ಲಿ ಸರಕಾರಿ ಹಣದಿಂದ ನಡೆಯುವ ಸುಮಾರು 30ರಷ್ಟು ವಿವಿಗಳಿರುವುದು. ಕೆಲವೊಂದು ವಿವಿಗಳ ಪದವಿದಾನ ಸಮಾರಂಭಗಳಿಗೆ ಇವರುಗಳು ಹಾಜರಾಗದೆ ಹೋಗುವ ಸಾಧ್ಯತೆಯೂ ಇಲ್ಲದಿಲ್ಲ. ವಿ.ವಿ. ಘಟಿಕೋತ್ಸವಗಳು ತಮ್ಮ ಪ್ರಾಮುಖ್ಯವನ್ನು, ಘನತೆಯನ್ನು ಹಾಗೂ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತ ಬಂದಿರುವುದು ಇನ್ನೊಂದು ಕತೆ. ಹೆಚ್ಚಿನ ವಿ.ವಿ.ಗಳಲ್ಲಿ ಈಗ ವಿದ್ಯಾರ್ಥಿಗಳ ಸೇರ್ಪಡೆ ಪ್ರಕ್ರಿಯೆಯೆಂಬುದು ಕೇವಲ ರ್‍ಯಾಂಕ್‌ ವಿದ್ಯಾರ್ಥಿಗಳಿಗಷ್ಟೇ ಸೀಮಿತ ಎಂಬಂತಾಗಿದೆ. ಪೇಪರ್‌ ಮೆಡಲ್‌ಗ‌ಳನ್ನು ಹಾಗೂ ಜುಜುಬಿ ಮೊತ್ತದ ಬಹುಮಾನಗಳನ್ನು ನೀಡುವ ಮೂಲಕ ಇಂಥ ರ್‍ಯಾಂಕ್‌ ವಿಜೇತ ವಿದ್ಯಾರ್ಥಿಗಳನ್ನು ಕೂಡ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಹಿಂದಿನ ತಲೆಮಾರಿನ ಪದವೀಧರರಲ್ಲಿ ಕೆಲವರು ವಿ.ವಿ. ಪದವಿದಾನ ಸಮಾರಂಭಗಳನ್ನು ಪ್ರತಿಭಟನೆಯ ಕಣಗಳನ್ನಾಗಿಸಿಕೊಂಡಿರುವುದು ನಿಜ. ಬೆಂಗಳೂರು ವಿ.ವಿ.ಯ ಮೂರನೆಯ ಘಟಿಕೋತ್ಸವದಲ್ಲಿ (1967) ನಡೆದದ್ದನ್ನು ನೋಡಿ-ಹಿಂದಿ ವಿರೋಧಿ ಘೋಷಣೆಗಳನ್ನು ಕೂಗುವ ಮೂಲಕ ಕೆಲ ವಿದ್ಯಾರ್ಥಿಗಳು ಅಂದಿನ ಕೇಂದ್ರ ಶಿಕ್ಷಣ ಸಚಿವ ಡಾ| ತ್ರಿಗುಣ ಸೇನ್‌ ಅವರ ಭಾಷಣವನ್ನು ಗದ್ದಲ ಗೊಂದಲದೊಳಗೆ ಮುಚ್ಚಿ ಹೋಗುವಂತೆ ಮಾಡಿದ್ದರು. ಇಂಥ ಅಪಚಾರ ತಮ್ಮಿಂದ ನಡೆದುದಕ್ಕಾಗಿ ಅವರೆಲ್ಲ ಆ ಮೇಲೆ ಪಶ್ಚಾತ್ತಾಪ ಪಟ್ಟಿರಲೂಬಹುದು.

ಚಂದ್ರಗುಪ್ತ ಮೌರ್ಯನೂ ಶ್ರವಣಬೆಳಗೊಳವೂ
ಮೊನ್ನೆ ಶ್ರವಣಬೆಳಗೊಳದಲ್ಲಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಬಾಯಿಂದಲೂ ಮಹಾ ಸಮ್ರಾಟ ಚಂದ್ರಗುಪ್ತ ಮೌರ್ಯನ ಹೆಸರು ಹೊರಬಿದ್ದಿದೆ. ಚಂದ್ರಗುಪ್ತ ಮೌರ್ಯ ಜೈನ ಧರ್ಮವನ್ನು ಸ್ವೀಕರಿಸಿ ತನ್ನ ಜೀವಿತದ ಅಂತಿಮ ವರ್ಷಗಳನ್ನು ಶ್ರವಣಬೆಳಗೊಳದಲ್ಲೇ ಕಳೆದನೆಂದು ರಾಷ್ಟ್ರಪತಿ ಹೇಳಿದ್ದಾರೆ. ಇದು ಕ್ರಿಸ್ತ ಪೂರ್ವ 300 ವರ್ಷಗಳ ಜೈನ ಧರ್ಮೀಯ ಗ್ರಂಥಗಳು ಇವೆಯಾದರೂ ಕೆಲ ಇತಿಹಾಸಕಾರರು ಈ ಹೇಳಿಕೆ ಯನ್ನು ಆಕ್ಷೇಪಿಸಿದ್ದಾರೆ. ಹಾಗೆ ಜೈನ ಮತವನ್ನು ಅಪ್ಪಿಕೊಂಡುದು ಚಂದ್ರಗುಪ್ತ ಮೌರ್ಯನಲ್ಲ; ಆತನ ವಂಶೀಯನೇ ಆಗಿದ್ದ ಸಂಪ್ರತಿ ಮೌರ್ಯ ಎನ್ನುವುದು ಆಕ್ಷೇಪಕಾರರ ವಾದ. ಸಮ್ರಾಟ ಅಶೋಕನ ಮೊಮ್ಮಗನೇ ಈ ಸಂಪ್ರತಿ.

ಅಶೋಕನ ಪುತ್ರನಾಗಿದ್ದ ಕುಣಾಲನ ಮಗ ಈತ. ಕುಣಾಲನು ಪಟ್ಟವೇರುವ ಅರ್ಹತೆಯನ್ನು ಕಳೆದು ಕೊಂಡಿದ್ದ ಕಾರಣ, ಅಶೋಕನ ಪತ್ನಿಯರಲ್ಲೊಬ್ಟಾಕೆ ನೀಡಿದ್ದ ಆದೇಶದಂತೆ ಆತನ ಕಣ್ಣುಗಳನ್ನು ಕಿತ್ತು ಹಾಕಲಾಗಿತ್ತು. ಸಂಪ್ರತಿ ಮೌರ್ಯನನ್ನು ಕುರಿತ ಈ ವಾದವನ್ನು ರಾಜ್ಯದ ಪ್ರಸಿದ್ಧ ಇತಿಹಾಸಕಾರ ಡಾ| ಸೂರ್ಯನಾಥ ಕಾಮತ್‌ ಸಮರ್ಥಿಸಿದ್ದಾರೆ.

ಮೌರ್ಯ ವಂಶೀಯರು ಬಹುತೇಕ ನಮ್ಮ ಇಂದಿನ ರಾಜ ಕಾರಣ ದೊಂದಿಗೆ ಸಂಬಂಧವನ್ನು ಹೊಂದಿದ್ದಾರೆ ಎನ್ನುವವರಿದ್ದಾರೆ. ಬಿಹಾರದಲ್ಲಿನ ಬಿಜೆಪಿ ನಾಯಕರು ಹೇಳುವಂತೆ ಮೌರ್ಯರು ಇಂದಿನ ಕುಶವಾಹ ಜಾತಿಗೆ ಸೇರಿದವರು. ಬಿಹಾರದಲ್ಲಿ ಬಹುಸಂಖ್ಯೆಯಲ್ಲಿರುವ “ಇತರ ಹಿಂದುಳಿದ ವರ್ಗ’ (ಓಬಿಸಿ)ದಲ್ಲಿ ಸಂಲಗ್ನಗೊಂಡಿರುವ ಜಾತಿಗಳಲ್ಲಿ ಕುಶವಾಹ ಸಮುದಾಯವೂ ಸೇರಿದೆ. ಮೌರ್ಯರು ಕ್ಷತ್ರಿಯರಾಗಿದ್ದರೆಂದು ಕೆಲವರು ನಂಬಿದ್ದಾರೆ. ಆದರೆ ವಸ್ತುಸ್ಥಿತಿ ಹಾಗಿಲ್ಲ ಎನ್ನುತ್ತಾರೆ ಬಿಹಾರದ ಬಿಜೆಪಿ ನಾಯಕರು. ನೆನಪಿರಲಿ, ಬಿಹಾರದ ಬಿಜೆಪಿ ಘಟಕ ಕುಶವಾಹ ಲೋಕ ಸಮತಾ ಪಾರ್ಟಿಯೊಂದಿಗೆ ಚುನಾವಣಾ ಮೈತ್ರಿ ಏರ್ಪಡಿಸಿಕೊಂಡಿದೆ.

– ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next